ETV Bharat / state

ಅಗತ್ಯವಿಲ್ಲದಿದ್ದರೂ ಒತ್ತಡ ಹಾಕಿ ರೋಗಿಗಳು ಐಸಿಯು ಬೆಡ್ ಪಡೆಯುತ್ತಿದ್ದಾರೆ: ಸಚಿವ ಲಿಂಬಾವಳಿ

author img

By

Published : May 5, 2021, 8:06 PM IST

ಬೆಡ್ ಬ್ಲಾಕಿಂಗ್ ದಂಧೆ ವಿಚಾರದಲ್ಲಿ ನೋಡಲ್ ಅಧಿಕಾರಿಗಳು ಪ್ರತಿ ಆಸ್ಪತ್ರೆಯಲ್ಲಿದ್ದು, ಬೆಡ್ ಖಾಲಿ ಇರುವ ಬಗ್ಗೆ ಮಾಹಿತಿ ನೀಡಲು ವಿಫಲರಾಗಿದ್ದಾರೆ. ಮಾಹಿತಿ ಅಪ್ಲೋಡ್ ಮಾಡುತ್ತಿಲ್ಲ, ನೋಡಲ್ ಆಫೀಸರ್ ಆ್ಯಕ್ಟಿವ್​ ಆಗಿಲ್ಲ ಎಂದು ಸಚಿವ ಅರವಿಂದ್​ ಲಿಂಬಾವಳಿ ಗರಂ ಆಗಿದ್ದಾರೆ.

ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ

ಬೆಂಗಳೂರು: ಬಿಬಿಎಂಪಿ ಕೋವಿಡ್ ವಾರ್ ರೂಂ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ, ತುಷಾರ್ ಗಿರಿನಾಥ್, ರಾಜೇಂದ್ರ ಚೋಳನ್, ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆ ಬಳಿಕ ಮಾತನಾಡಿದ ವಾರ್ ರೂಂ ಉಸ್ತುವಾರಿ ಸಚಿವ ಅರವಿಂದ್ ಲಿಂಬಾವಳಿ, ನಾನು ಮತ್ತು ಗೃಹ ಸಚಿವರು, ಕಂದಾಯ ಸಚಿವರು ವಾರ್ ರೂಂ ಸಭೆ ನಡೆಸಿದ್ದೇವೆ. ಈ ಸಭೆ ಬಳಿಕ ಈಗ ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿ ಆಧಾರದ ಮೇಲೆ ಈಗ ಪ್ರಮುಖ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಕೋವಿಡ್ ವಾರ್ ರೂಂ ಸ್ಥಿತಿ ಕುರಿತು ಅರವಿಂದ ಲಿಂಬಾವಳಿ ಮಾಹಿತಿ

ಅಗತ್ಯವಿಲ್ಲದಿದ್ದರೂ ಒತ್ತಡ ಹಾಕಿ ಐಸಿಯು ಬೆಡ್ ಪಡೆಯುತ್ತಿರುವ ಘಟನೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಗರದಲ್ಲಿ 12 ಸ್ಟೆಬ್ಯುಲೈಸೇಷನ್ ಸೆಂಟರ್ (ಸಿಸಿಸಿ) ಮಾಡಲಾಗಿದೆ. ಹಳ್ಳಿಗಳಲ್ಲಿ ಕೋವಿಡ್ ಕೇರ್ ಸೆಂಟರ್​​​ಗಳ ಮೂಲಕ ರೋಗಿಗಳನ್ನು ನೋಡಲಾಗುತ್ತಿದೆ. ಅದೇ ರೀತಿ ನಗರದಲ್ಲಿಯೂ ಈ ಸಿಸಿಸಿ ಸೆಂಟರ್‌ಗೆ ಬಂದ ನಂತರ ರೋಗಿಗೆ ಯಾವ ಮಟ್ಟದ ಚಿಕಿತ್ಸೆ ಬೇಕು, ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿದೆಯೇ ಎಂಬ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.

ನಮಗೆ 3 ಸಾವಿರ ಬೆಡ್ ಸಿಕ್ಕರೆ ಸಾಕು

ಬೆಡ್ ಬ್ಲಾಕಿಂಗ್ ದಂಧೆ ವಿಚಾರದಲ್ಲಿ ನೋಡಲ್ ಅಧಿಕಾರಿಗಳು ಪ್ರತಿ ಆಸ್ಪತ್ರೆಯಲ್ಲಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇರುವ ಬಗ್ಗೆ ಮಾಹಿತಿ ನೀಡಲು ವಿಫಲರಾಗಿದ್ದಾರೆ. ಮಾಹಿತಿ ಅಪ್ಲೋಡ್ ಮಾಡುತ್ತಿಲ್ಲ, ನೋಡಲ್ ಆಫೀಸರ್ ಆ್ಯಕ್ಟಿವ್​ ಇಲ್ಲ ಎಂದರು. ಖಾಸಗಿ ಆಸ್ಪತ್ರೆಗಳು ಇದನ್ನು ಮಾಡುತ್ತಿಲ್ಲ. ಈ ದೃಷ್ಟಿಯಿಂದ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಈ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನೀಡಿದ್ದೇವೆ. ಈ ಆಸ್ಪತ್ರೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡುವ ಅವಕಾಶ ಇದೆ. ನಮಗೆ 3 ಸಾವಿರ ಬೆಡ್​ಗಳು ಸಿಕ್ಕರೆ ಸಾಕು ಎಂದರು.

ಬೆಂಗಳೂರಿನಲ್ಲಿ ಬೆಡ್ ಕೊರತೆ ಇದೆ. ಮುಖ್ಯಮಂತ್ರಿಗಳ ಜೊತೆ ಬೆಡ್ ವ್ಯವಸ್ಥೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸುತ್ತೇವೆ. ಸ್ಟೆಪ್​​​​ಡೌನ್ ಆಸ್ಪತ್ರೆ ಮಾಡೋದಕ್ಕೆ ಸಲಹೆ ನೀಡುತ್ತೇವೆ. ಸ್ಟೆಪ್​​​​ಡೌನ್ ಆಸ್ಪತ್ರೆ ನಿರ್ಮಾಣದಿಂದ ಐಸಿಯು, ವೆಂಟಿಲೇಟರ್​ನಿಂದ ಹೊರಬಂದ ರೋಗಿಗಳ ಆರೈಕೆ ಮಾಡಲು ಸಾಧ್ಯ ಎಂದರು. ಇದರಿಂದ ಐಸಿಯು, ವೆಂಟಿಲೇಟರ್​​ಗಳೂ ಇತರ ಅವಶ್ಯಕ ರೋಗಿಗಳಿಗೆ ಸಿಗಲಿದೆ ಎಂದು ಸಚಿವ ಲಿಂಬಾವಳಿ ಹೇಳಿದ್ರು. ಬೆಡ್ ಬುಕ್ಕಿಂಗ್ ದಂಧೆಯ ಬಯಲು ಮಾಡಿದ ವಿಚಾರದಲ್ಲಿ ಯಾವುದೇ ಕೋಮುವಾದ ಇಲ್ಲ. ತನಿಖೆಯನ್ನು ಸಿಸಿಬಿ ಮಾಡ್ತಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.