ETV Bharat / state

'ಬಹಳ ರುಚಿಯಾಗಿದೆ, ಎಲ್ಲರೂ ಉಪಯೋಗಿಸಿ': ನಂದಿನಿ ಕುರಿತ ಡಾ.ರಾಜ್​ ಹಳೆಯ ವಿಡಿಯೋ ವೈರಲ್​

author img

By

Published : Apr 12, 2023, 6:38 PM IST

ಕನ್ನಡದ ಮೇರು ನಟ ಡಾ. ರಾಜ್​ಕುಮಾರ್​ ಅವರು ನಂದಿನಿ ಉತ್ಪನ್ನದ ಬಗ್ಗೆ ಮಾತನಾಡಿದ್ದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

old video of dr rajkumar promoting nandini product goes viral
ನಂದಿನಿ ಕುರಿತ ಡಾ. ರಾಜ್​ ಹಳೆಯ ವಿಡಿಯೋ ವೈರಲ್​

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್​) ನಂದಿನಿ ಉತ್ಪನ್ನಗಳು ಸಾಕಷ್ಟು ಜನಪ್ರಿಯವಾಗಿವೆ. ಸದ್ಯ ಕರ್ನಾಟಕಕ್ಕೆ ಅಮುಲ್​ ಹಾಲು ಮತ್ತು ಮೊಸರು ಪ್ರವೇಶಿಸಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಇದರೊಂದಿಗೆ ನಂದಿನಿ ವಿಷಯ ಚರ್ಚೆಯ ಮುನ್ನಲೆಗೆ ಬಂದಿದೆ. ಅಮುಲ್​ ಹಾಲು ಮತ್ತು ಮೊಸರು ಮಾರಾಟಕ್ಕೆ ಅವಕಾಶ ಸಿಕ್ಕರೆ ನಂದಿನಿ ಉತ್ಪನ್ನಗಳಿಗೆ ಪೆಟ್ಟು ಬೀಳುತ್ತದೆ ಎಂಬ ಆತಂಕವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನಂದಿನಿ ಉಳಿಸಿ ಎಂಬ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ಇದರ ನಡುವೆ ಕನ್ನಡದ ಮೇರು ನಟ, ಪದ್ಮಭೂಷಣ ಪುರಸ್ಕೃತ ಡಾ.ರಾಜ್​ಕುಮಾರ್​ ಅವರು ನಂದಿನಿ ಉತ್ಪನ್ನದ ಬಗ್ಗೆ ಮಾತನಾಡಿದ್ದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಡಾ ರಾಜ್ ಕುಮಾರ್ 17ನೇ ಪುಣ್ಮ ಸ್ಮರಣೆ.. ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

ಅಣ್ಣಾವ್ರು ಪ್ರಚಾರ ಮಾಡಿದ್ದ ಏಕೈಕ ಉತ್ಪನ್ನ: ನಂದಿನಿ ಬ್ರ್ಯಾಂಡ್​ ಕನ್ನಡಿಗರ ಅಸ್ಮಿತೆ. ವರನಟ ಡಾ.ರಾಜ್​ಕುಮಾರ್​ ಯಾವುದೇ ಸಂಭಾವನೆ ಪಡೆಯದೇ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿದ್ದರು. ಅಷ್ಟೇ ಅಲ್ಲ, ಅಣ್ಣಾವ್ರು ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಕಂಪನಿಗೆ ಜಾಹೀರಾತನ್ನೂ ಮಾಡಿರಲಿಲ್ಲ. ಅವರು ಪ್ರಚಾರ ಮಾಡಿದ್ದ ಏಕೈಕ ಬ್ರ್ಯಾಂಡ್​ ಎಂದರೆ ನಂದಿನಿ ಮಾತ್ರ. ರಸಮಂಜರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಡಾ. ರಾಜ್ ಅವರು ವೇದಿಕೆ ಮೇಲೆ ನಂದಿನಿ ಫ್ಲೇವರ್ಡ್ ಹಾಲನ್ನು ಸೇವಿಸಿದ್ದರು. "ವೇದಿಕೆಯಿಂದಲೇ ನಂದಿನಿ ಉತ್ಪನ್ನ ಬಹಳ ರುಚಿಯಾಗಿದೆ. ಎಲ್ಲರೂ ಉಪಯೋಗಿಸಬಹುದು" ಎಂದು ಜನತೆಗೆ ಕರೆ ನೀಡಿದ್ದರು. ಇದೀಗ ಇದರ ವಿಡಿಯೋ ಮುನ್ನೆಲೆಗೆ ಬಂದಿದ್ದು, ಹಲವರು ಅದನ್ನು ಹಂಚಿಕೊಳ್ಳಲುವ ಮೂಲಕ ನಂದಿನಿ ಪರವಾಗಿ ಬೆಂಬಲ ಸೂಚಿಸುತ್ತಿದ್ದಾರೆ.

  • ನಮ್ಮ ಅಣ್ಣಾವ್ರು ಡಾ.ರಾಜ್‌ಕುಮಾರ್, ಪ್ರಚಾರ ಮಾಡಿದ ಏಕೈಕ ಬ್ರಾಂಡ್ ನಮ್ಮ ನಂದಿನಿ#SaveNandinipic.twitter.com/jnYXUcKtOf

    — GC ChandraShekhar (@GCC_MP) April 7, 2023 " class="align-text-top noRightClick twitterSection" data=" ">

ವಿಡಿಯೋದಲ್ಲಿ ಇರುವುದೇನು?: ನಂದಿನಿ ಉತ್ಪನ್ನ ಬಗ್ಗೆ ಅಣ್ಣಾವ್ರು ಮಾತನಾಡಿದ ವೇದಿಕೆಯ ಮೇಲೆ ಪುತ್ರರಾದ ನಟ ಶಿವರಾಜ್ ​ಕುಮಾರ್​ ಮತ್ತು ರಾಘವೇಂದ್ರ ರಾಜ್​ಕುಮಾರ್​ ಕೂಡ ಇರುತ್ತಾರೆ. ಕಾರ್ಯಕ್ರಮದಲ್ಲಿ ಗೀತೆಯೊಂದನ್ನು ಹಾಡಿದ ನಂತರ ಡಾ.ರಾಜ್ ಅವರಿಗೆ ಶಿವರಾಜ್​ ಕುಮಾರ್ ಅವರು ನಂದಿನಿ ಬ್ರ್ಯಾಂಡ್​ನ ಫ್ಲೇವರ್ಡ್ ಹಾಲನ್ನು ಕೊಡುತ್ತಾರೆ. ಆಗ ಅದನ್ನು ಸೇವಿಸಿದ ಖುಷಿಯಲ್ಲಿ ಅಣ್ಣಾವ್ರು ''ಬಹಳ ರುಚಿಯಾಗಿದೆ, ಎಲ್ಲರೂ ಉಪಯೋಗಿಸಬಹುದು'' ಎಂದು ಹೇಳುತ್ತಾರೆ. ನಂತರ ಶಿವರಾಜ್​ ಕುಮಾರ್​ ತಾವೇ ರಾಘವೇಂದ್ರ ರಾಜ್​ಕುಮಾರ್​ ಅವರಿಗೆ ಬಾಟಲಿಯಿಂದ ಹಾಲು ಕುಡಿಸುತ್ತಾರೆ. ಅಲ್ಲದೇ, ಡಾ.ರಾಜ್ ಅವರು ತಮ್ಮ ಎರಡು ನಂದಿನಿ ಬಾಟಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ತೋರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ನಂದಿನಿ ನಮ್ಮವಳಲ್ಲ 'ನನ್ನವಳು': ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಈ ವಿಡಿಯೋವನ್ನು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ''ನಮ್ಮ ಅಣ್ಣಾವ್ರು ಡಾ.ರಾಜ್‌ಕುಮಾರ್, ಪ್ರಚಾರ ಮಾಡಿದ ಏಕೈಕ ಬ್ರ್ಯಾಂಡ್ ನಮ್ಮ ನಂದಿನಿ'' ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ನಟ ಪುನೀತ್​ ರಾಜ್​ಕುಮಾರ್​ ಮತ್ತು ಉಪೇಂದ್ರ ಅವರು ನಂದಿನಿ ಜಾಹೀರಾತಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ''ಅಪ್ಪು ಈಗ ನೆನಪು, ನಂದಿನಿ ಕೂಡ ತೆರೆಮರೆಗೆ ಸರಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಕನ್ನಡಿಗರ ಮೇಲಿದೆ'' ಎಂದು ಟ್ವಿಟರ್​ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

  • ನಂದಿನಿ ನಮ್ಮವಳು ಅಲ್ಲ- ‘ನನ್ನವಳು’.ಆರೋಗ್ಯದಾಯಿನಿ. ನಾನು ಕೆಎಂಎಫ್ ನ ಮೈಸೂರು ಡೈರಿಯಲ್ಲಿ ಆರು ವರ್ಷ ದಿನಗೂಲಿ ಜತೆ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಂಡವನು. ನಾಗತಿಹಳ್ಳಿಯಲ್ಲಿ ಹೆಣ್ಣುಮಕ್ಕಳಿಗಾಗಿ ಮಾಡಿಕೊಟ್ಟ ಅಭಿವ್ಯಕ್ತಿ ಹಾಲು ಉತ್ಪಾದಕರ ಸಂಘ ಯಶಸ್ವಿಯಾಗಿ ನಡೆಯುತ್ತಿದೆ. ನಂದಿನಿ ಇಲ್ಲದ ಗ್ರಾಮ್ಯ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.

    — Nagathihalli Chandrashekhar (@NomadChandru) April 12, 2023 " class="align-text-top noRightClick twitterSection" data=" ">

ನಿರ್ದೇಶಕ ನಾಗತಿಹಳ್ಳಿ ಬೆಂಬಲ: ನಂದಿನಿ ಮತ್ತು ಅಮುಲ್​ ಕುರಿತಾದ ವಿವಾದ ನಡುವೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಟ್ವೀಟ್ ಮಾಡಿದ್ದು, ಗಮನ ಸೆಳೆಯುತ್ತಿದೆ. ''ನಂದಿನಿ ನಮ್ಮವಳು ಅಲ್ಲ- ‘ನನ್ನವಳು’. ಆರೋಗ್ಯದಾಯಿನಿ. ನಾನು ಕೆಎಂಎಫ್​ನ ಮೈಸೂರು ಡೈರಿಯಲ್ಲಿ ಆರು ವರ್ಷ ದಿನಗೂಲಿ ಜತೆ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಂಡವನು. ನಾಗತಿಹಳ್ಳಿಯಲ್ಲಿ ಹೆಣ್ಣುಮಕ್ಕಳಿಗಾಗಿ ಮಾಡಿಕೊಟ್ಟ ಅಭಿವ್ಯಕ್ತಿ ಹಾಲು ಉತ್ಪಾದಕರ ಸಂಘ ಯಶಸ್ವಿಯಾಗಿ ನಡೆಯುತ್ತಿದೆ. ನಂದಿನಿ ಇಲ್ಲದ ಗ್ರಾಮ್ಯ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ'' ಎಂದು ಬರೆದುಕೊಳ್ಳುವ ಮೂಲಕ ನಂದಿನಿ ಉತ್ಪನ್ನಗಳಿಗೆ ನಾಗತಿಹಳ್ಳಿ ಬೆಂಬಲಿಸಿದ್ದಾರೆ.

ಡಾ.ರಾಜ್​ ಅಗಲಿ ಇಂದಿಗೆ 17 ವರ್ಷ: ಕನ್ನಡ ಚಿತ್ರರಂಗದಲ್ಲಿ ನಟ ಸಾರ್ವಭೌಮ ಎಂದೇ ಖ್ಯಾತಿ ಪಡೆದಿದ್ದ ಅಣ್ಣಾವ್ರು ಅಗಲಿ ಇಂದಿಗೆ 17 ವರ್ಷಗಳು ಕಳೆದಿದೆ. 2006ರ ಏಪ್ರಿಲ್ 12ರಂದು ಬೆಂಗಳೂರಿನ ಸದಾಶಿವ ನಗರದಲ್ಲಿ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದ್ದರು. ಇಂದಿಗೂ ಜನತೆಯ ಹೃದಯದಲ್ಲಿ ಡಾ.ರಾಜ್​ ನೆಲೆಸಿದ್ದಾರೆ.

ಇದನ್ನೂ ಓದಿ: ರಾಜಕೀಯದಿಂದ ದೂರ ಉಳಿದು ಅಭಿಮಾನಿಗಳ ಆರಾಧ್ಯ ದೈವವಾದ ಮೇರುನಟ ರಾಜ್​​​ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.