ETV Bharat / state

ಬಿಎಸ್​ವೈ ಆರೋಪದಲ್ಲಿ ಸತ್ಯಾಂಶವಿಲ್ಲ.. ಸಬ್‌ ಅರ್ಬನ್‌ ರೈಲು ಯೋಜನೆಗೆ ಸರ್ಕಾರ ನಿರಾಸಕ್ತಿ ತೋರಿಲ್ಲ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Nov 2, 2023, 10:35 PM IST

ಬರುವ ತಿಂಗಳೊಳಗೆ ಶೇ 100 ರಷ್ಟು ಅರ್ಜಿದಾರ ಯಜಮಾನಿಯರ ಖಾತೆಗೆ ಹಣ ವರ್ಗಾವಣೆ ಮಾಡುವ ಮೂಲಕ ದೇಶದಲ್ಲಿ ದೊಡ್ಡ ಮೊತ್ತದ ಮಹಿಳಾ ಸಬಲೀಕರಣ ಯೋಜನೆಯನ್ನು ಪ್ರತಿ ಮನೆಗೆ ತಲುಪಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

CM Siddaramaiah
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದ್ದು. ಗೃಹಲಕ್ಷ್ಮಿ ಯೋಜನೆ ನಾಡಿನ ಅರ್ಧದಷ್ಟು ಮಹಿಳೆಯರಿಗೆ ತಲುಪಿಲ್ಲ ಎಂಬುದು ಮಹಾಸುಳ್ಳು. ಗೃಹಲಕ್ಷ್ಮಿ ಯೋಜನೆಗಾಗಿ ರಾಜ್ಯದ 1.08 ಕೋಟಿ ಮಹಿಳೆಯರು ಅಕ್ಟೋಬರ್‌ ತಿಂಗಳಲ್ಲಿ ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿದ್ದರು.

ಈ ಪೈಕಿ ಫಲಾನುಭವಿಗಳ ಆಧಾರ್‌ ಸಂಖ್ಯೆ ಬ್ಯಾಂಕ್‌ ಖಾತೆಗೆ ಜೋಡಣೆಯಾಗದಿರುವುದು, ಅರ್ಜಿದಾರರು ಹೆಸರು ಮತ್ತು ವಿಳಾಸದಲ್ಲಿನ ವ್ಯತ್ಯಾಸ ಮುಂತಾದ ಕಾರಣಗಳಿಂದಾಗಿ 9.44 ಲಕ್ಷ ಮಹಿಳೆಯರಿಗೆ ಹಣ ಜಮೆಯಾಗಿರುವುದಿಲ್ಲ ಎಂದು ತಿಳಿಸಿದರು.

ಮೊದಲ ತಿಂಗಳ ಕಂತಿನ ಹಣ ಶೇ 88 ರಷ್ಟು ನೋಂದಣಿ ಆಗಿರುವ ಫಲಾನುಭವಿಗಳ ಖಾತೆಗೆ ಜಮೆ ಆಗಿರುತ್ತದೆ. ಈಗಾಗಲೇ ಜಮೆ ಆಗದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ದೋಷ ಸರಿಪಡಿಸುವ ಕಾರ್ಯವನ್ನು ಇಲಾಖೆಯು ಕೈಗೊಂಡಿದೆ. ಬರುವ ತಿಂಗಳು ಶೇ 100 ಅರ್ಜಿದಾರ ಯಜಮಾನಿಯರ ಖಾತೆಗೆ ಹಣ ವರ್ಗಾವಣೆ ಮಾಡುವ ಮೂಲಕ ದೇಶದಲ್ಲೇ ಅತಿ ದೊಡ್ಡ ಮೊತ್ತದ ಮಹಿಳಾ ಸಬಲೀಕರಣ ಯೋಜನೆಯನ್ನು ಯಶಸ್ವಿಯಾಗಿ ಪ್ರತಿ ಮನೆಗೆ ತಲುಪಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಾನು ನಿಮ್ಮೊಂದಿಗೆ ಬರಲು ಸಿದ್ಧ: ರಾಜ್ಯವನ್ನು ತೀವ್ರ ಬರಪರಿಸ್ಥಿತಿ ಆವರಿಸಿರುವ ಹಿನ್ನೆಲೆಯಲ್ಲಿ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರದಿಂದಾಗಿ ಒಟ್ಟು ರೂ 33,710 ಕೋಟಿ ಬೆಳೆಹಾನಿಯಾಗಿದೆ. ಕೇಂದ್ರದಿಂದ ರೂ.17,901 ಕೋಟಿ ಪರಿಹಾರಕ್ಕೆ ಮನವಿ ನೀಡಲಾಗಿದೆ. ರಾಜ್ಯಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಆಗಮಿಸಿದ್ದ ಸಂದರ್ಭದಲ್ಲಿ ಹಸಿರು ಬರವೂ ಸೇರಿದಂತೆ ಬರ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲಾಗಿದೆ.

ನಮ್ಮ ಸರ್ಕಾರದ ಸಚಿವರಾದ ಎನ್.ಚಲುವರಾಯಸ್ವಾಮಿ, ಪ್ರಿಯಾಂಕ್‌ ಖರ್ಗೆ ಮತ್ತು ಕೃಷ್ಣ ಬೈರೇಗೌಡ ಅವರು ಕೇಂದ್ರದ ಕೃಷಿ ಕಾರ್ಯದರ್ಶಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ರಾಜ್ಯದ ಬರಪರಿಸ್ಥಿತಿಯ ಮಾಹಿತಿಯನ್ನು ನೀಡಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯಾಗಲಿ, ಅನುದಾನವಾಗಲೀ ಯಾವುದು ಬಂದಿಲ್ಲ. ಎನ್ ಡಿ ಆರ್​.ಎಫ್‌ ನಿಯಮಾನುಸಾರ ಬರ ಪರಿಹಾರ ಬಿಡುಗಡೆ ಮಾಡಬೇಕಿದ್ದ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ.

ಈ ಸಂಬಂಧ ತಾವೇ ಸರ್ವಪಕ್ಷ ನಿಯೋಗ ಕೊಂಡೊಯ್ಯುವುದಾದರೆ ನಾನು ನಿಮ್ಮ ಜೊತೆ ಬರುವುದಾಗಿ ಹೇಳಿದ್ದೆನು. ಈಗಲೂ ಕಾಲ ಮಿಂಚಿಲ್ಲ ತಾವು ರಾಜ್ಯದಲ್ಲಿ ಬರ ಅಧ್ಯಯನಕ್ಕಾಗಿ ಪ್ರವಾಸ ಹೋಗುವ ಬದಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವುದೇ ಸೂಕ್ತ ಮತ್ತು ಈ ಹೊತ್ತಿನ ಅಗತ್ಯ ನಿರ್ಧಾರವಾಗಿದೆ ಎಂಬುದನ್ನು ಮತ್ತೊಮ್ಮೆ ತಿಳಿಸಬಯಸುತ್ತೇನೆ ಎಂದು ವಿವರಿಸಿದರು.

ವಿದ್ಯುತ್ ದರ ಏರಿಕೆಗೆ ಬಿಜೆಪಿ ಹೊಣೆ:ವಿದ್ಯುತ್‌ ದರ ಹೆಚ್ಚಳವಾಗಿದೆ ಎಂಬ ಯಡಿಯೂರಪ್ಪ ಅವರ ಹೇಳಿಕೆ ಹಿಂದಿನ ಬಿಜೆಪಿ ಸರ್ಕಾರವನ್ನು ಕುರಿತು ಟೀಕೆ ಮಾಡಿದಂತಿದೆ. ಕೆಇಆರ್‌ಸಿ ಮಾರ್ಚ್‌ ತಿಂಗಳಿನಲ್ಲಿ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಮುಂದೆ ಮಂಡಿಸಿತು. ಈ ಪ್ರಸ್ತಾವನೆಗೆ ಬಿಜೆಪಿ ಸರ್ಕಾರ ಅನುಮತಿ ನೀಡಿದ್ದರಿಂದ ಮೇ 12 ಅಂದರೆ ಚುನಾವಣೆಯ ಫಲಿತಾಂಶ ಬರುವ ಹಿಂದಿನ ದಿನವೇ ಹೊಸ ದರವು ಏಪ್ರಿಲ್‌ 1 ರಿಂದ ಪೂರ್ವಾನ್ವಯ ಆಗುವಂತೆ ಕೆಇಆರ್‌ಸಿ ಜಾರಿಗೊಳಿಸಿತು.

ಈ ಸಂಬಂಧ ಇನ್ನೊಂದು ಸ್ಪಷ್ಟನೆಯನ್ನೂ ನಾನು ನೀಡುತ್ತಿದ್ದೇನೆ. ಈ ಹಿಂದೆ ದರ ನಿಗದಿ ಸಂಬಂಧ ನಾಲ್ಕು ಸ್ಲ್ಯಾಬ್‌ ಗಳು ಇದ್ದವು, ಈಗ ಅದನ್ನು 2 ಸ್ಲ್ಯಾಬ್‌ ಗಳಿಗೆ ಇಳಿಕೆ ಮಾಡಲಾಗಿದೆ. 0 ಇಂದ 50 ಯುನಿಟ್‌ ವರೆಗೆ ರೂ.4.15, 50 ರಿಂದ 100 ಯುನಿಟ್‌ ವರೆಗೆ ರೂ.5.60, 100 ರಿಂದ 200 ಯುನಿಟ್‌ ವರೆಗೆ ರೂ.7.15 ಹಾಗೂ 250 ಯುನಿಟ್‌ ಗಳಿಗಿಂತ ಹೆಚ್ಚಿನ ಬಳಕೆಗೆ ಯುನಿಟ್‌ ಗೆ ರೂ.8.20 ವಿಧಿಸಲಾಗುತ್ತಿತ್ತು. ಇದನ್ನು ಪರಿಷ್ಕರಿಸಿ ಈಗ ಶೂನ್ಯದಿಂದ 100 ಯುನಿಟ್​ಗೆ ರೂ.4.75 ಹಾಗೂ 101 ಗಿಂತ ಮೇಲ್ಪಟ್ಟು ಎಷ್ಟೇ ವಿದ್ಯುತ್‌ ಬಳಕೆ ಮಾಡಿದರೂ ಯುನಿಟ್‌ ಗೆ ರೂ.7 ದರ ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಹಿತಾಸಕ್ತಿ ಬಲಿಕೊಟ್ಟಿದ್ದ ಯಡಿಯೂರಪ್ಪ: ಯಡಿಯೂರಪ್ಪ ಅವರು ಬೆಂಗಳೂರು ನಗರದ ಸಬ್‌ ಅರ್ಬನ್‌ ರೈಲು ಯೋಜನೆಗೆ ಕೇಂದ್ರ ಸರ್ಕಾರವು ರೂ. 450 ಕೋಟಿ ಬಿಡುಗಡೆ ಮಾಡಿದೆ ಎಂದಿದ್ದಾರೆ. ಇದು ಅರ್ಧ ಸತ್ಯ ಮಾತ್ರ. ನಾಡಿಗೆ ಆಗುತ್ತಿರುವ ಅನ್ಯಾಯ ಮುಚ್ಚಿಟ್ಟಿರುವುದು ಯಡಿಯೂರಪ್ಪ ಅವರೇ ಹೊರತು ನಾನಲ್ಲ. 2018-19ರ ಕೇಂದ್ರ ಬಜೆಟ್‌ ಭಾಷಣದಲ್ಲಿ ಅಂದಿನ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ರೂ.17,000 ಕೋಟಿ ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕೇಂದ್ರ ಸರ್ಕಾರವು ಯೋಜನೆ ರೂಪಿಸಲಿದೆ ಎಂದು ಹೇಳಿದ್ದರು.

ಕೇಂದ್ರ ಸರ್ಕಾರವು ಯೋಜನೆಗೆ ಅನುದಾನ ಕೊಡಲು ಮನಸ್ಸಿಲ್ಲದೇ ಫೆಬ್ರವರಿ 2020ರಲ್ಲಿ ಮಂಡಿಸಿದ 2020-21ರ ಕೇಂದ್ರ ಬಜೆಟ್‌ ನಲ್ಲಿ ಸಬ್ ಅರ್ಬನ್ ರೈಲು ಯೋಜನೆಗೆ ತಾನು ಕೇವಲ 20% ಅನುದಾನ ನೀಡುವುದಾಗಿ, ಮತ್ತೆ 20% ರಾಜ್ಯ ಸರ್ಕಾರ ಹಾಗೂ ಉಳಿದ 60% ಹಣವನ್ನು ರಾಜ್ಯಕ್ಕೆ ಸಾಲ ಕೊಡಿಸುವುದಾಗಿ ಘೋಷಿಸಿತು.

ಅಂದಿನ ರಾಜ್ಯ ಬಿಜೆಪಿ ಸರ್ಕಾರ ಇದಕ್ಕೆ ಚಕಾರವೆತ್ತದೇ ಸಮ್ಮತಿಸಿತು. ಈ ಹೊಸ ಬದಲಾವಣೆ ನಂತರ 2022-23ರಲ್ಲಿ ಕೇಂದ್ರ ಸರ್ಕಾರ ರೂ.450 ಕೋಟಿ ಅನುದಾನವನ್ನು ನಿಗದಿ ಮಾಡಿತು.ಆದರೆ ಕೊಟ್ಟಿದ್ದು ರೂ.50 ಕೋಟಿ ಮಾತ್ರ. ನಂತರ ಪ್ರಸಕ್ತ ಸಾಲಿನಲ್ಲಿ ರೂ.1350 ಕೋಟಿ ನಿಗದಿ ಮಾಡಿ, ಈ ವರೆಗೆ ಕೇವಲ ರೂ.450 ಕೋಟಿ ಬಿಡುಗಡೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.

ಇದನ್ನೂಓದಿ:ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಚಿವೆ ಹೆಬ್ಬಾಳ್ಕರ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.