ETV Bharat / state

ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಚಿವೆ ಹೆಬ್ಬಾಳ್ಕರ್ ಸೂಚನೆ

author img

By ETV Bharat Karnataka Team

Published : Nov 2, 2023, 5:53 PM IST

ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆ ಬಗೆಹರಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು : ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಹಣ ಸಂದಾಯ ಮಾಡಬೇಕು. ತಾಂತ್ರಿಕ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳ ಖಾತೆಗೆ ಶೀಘ್ರ ಹಣ ಸಂದಾಯವಾಗುವಂತೆ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಸೂಚಿಸಿದ್ದಾರೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ತಿಳಿಸಿದರು.

ಇಲಾಖೆಯ ಉಪ ನಿದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇ-ಗವರ್ನೆನ್ಸ್‌ ಇಲಾಖೆಯ ಸಹಕಾರದೊಂದಿಗೆ ಆಗಿರುವ ಕೆಲವೊಂದು ತಾಂತ್ರಿಕ ನೂನ್ಯತೆಗಳನ್ನು ಸರಿಪಡಿಸಬೇಕು. ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ನೋಂದಣಿಯಲ್ಲಿ ಆಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅಧಿಕಾರಿಗಳಿಗೆ ಸೂಚಿಸಿದರು.

ಆಗಸ್ಟ್‌ ತಿಂಗಳಿನಲ್ಲಿ ಶೇಕಡ 88 ರಷ್ಟು ಮಂದಿಗೆ ಹಣ ಸಂದಾಯವಾಗಿದ್ದು, ಸೆಪ್ಟೆಂಬರ್‌ ತಿಂಗಳ ಹಣ ಹಂತ ಹಂತವಾಗಿ ಸಂದಾಯವಾಗುತ್ತಿದೆ. ಅಕ್ಟೋಬರ್‌ ತಿಂಗಳ ಹಣ ಶೇಕಡಾ 100ರಷ್ಟು ಫಲಾನುಭವಿಗಳಿಗೆ ಸಂದಾಯವಾಗುವಂತೆ ಮಾಡಬೇಕು ಎಂದು ಸಚಿವರು ಹೇಳಿದರು. ಗೃಹಲಕ್ಷ್ಮಿ ಯೋಜನೆಯಡಿ ಹಲವು ಫಲಾನುಭವಿಗಳಿಗೆ 2,000 ರೂ‌. ಪಾವತಿಯಾಗುತ್ತಿಲ್ಲ‌‌. ಎರಡನೇ ತಿಂಗಳಲ್ಲಿ ಹಲವರಿಗೆ ಪಾವತಿಯಲ್ಲಿ ವ್ಯತ್ಯಯವಾಗಿದೆ. ಈ ಸಂಬಂಧ ಬಿಜೆಪಿ ಈಗಾಗಾಲೇ ಗೃಹಲಕ್ಷ್ಮಿ ಹಣ ಪಾವತಿಯಾಗದಿರುವ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿದೆ.

ಈ ವೇಳೆ, ಇಲಾಖೆ ಕಾರ್ಯದರ್ಶಿ ಡಾ. ಜಿ. ಸಿ ಪ್ರಕಾಶ್‌, ನಿರ್ದೇಶಕಿ ಎಂ. ಎಸ್ ಅರ್ಚನಾ, ಸಚಿವರ ಆಪ್ತ ಕಾರ್ಯದರ್ಶಿ ಡಾ. ಟಿ. ಎಚ್ ವಿಶ್ವನಾಥ್‌ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಣ ಏಕೆ​ ಬಂದಿಲ್ಲ ಅನ್ನೋದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಕಾರಣ: ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಅಡಿ ಈವರೆಗೆ 9,44,155 ಅರ್ಜಿದಾರರಿಗೆ ಹಣ ಹೋಗಿಲ್ಲ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಅವರು ಸೂಕ್ತ ಕಾರಣಗಳನ್ನು( ಅಕ್ಟೋಬರ್ 9-2023) ನೀಡಿದ್ದರು.

3082 ಅರ್ಜಿದಾರರು ಮರಣ ಹೊಂದಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. 1,59,356 ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. ಫಲಾನುಭವಿಗಳ ಆಧಾರ್ ಹಾಗೂ ಬ್ಯಾಂಕ್ ಖಾತೆ ಹೆಸರಿನಲ್ಲಿ ವ್ಯತ್ಯಾಸವಾಗಿದ್ದು, ಅವುಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. 5,96,268 ಫಲಾನುಭವಿಗಳ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. 2,17,536 ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆಧಾರ್ ನೊಂದಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ವಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸಚಿವರು ತಿಳಿಸಿದ್ದರು.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ.. ಅರ್ಜಿ ಸಲ್ಲಿಸಿದರೂ ಕೆಲವರಿಗೆ ಹಣ ಯಾಕ್​ ಬಂದಿಲ್ಲ ಅನ್ನೋದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಕಾರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.