ರೈತರಿಗೆ ನಿಗದಿಪಡಿಸಿರುವ ಹಾಲಿನ ದರದಲ್ಲಿ ಕಡಿತ ಬೇಡ: ಸಿಎಂ ತಾಕೀತು

author img

By

Published : Jun 4, 2023, 3:26 PM IST

Etv no-reduction-in-milk-price-fixed-for-farmers-says-siddaramaiah

ರೈತರಿಂದ ಖರೀದಿಸುವ ಹಾಲಿನ ದರವನ್ನು ಕಡಿತ ಮಾಡದಂತೆ ಕರ್ನಾಟಕ ಹಾಲು ಮಹಾಮಂಡಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.

ಬೆಂಗಳೂರು : ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಾಲು ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಬಮೂಲ್ ದರ ಕಡಿತ ಮಾಡಿದೆ ಎಂಬ ವರದಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಸೂಚನೆ ನೀಡಿದ್ದಾರೆ.

ಕರ್ನಾಟಕ ಹಾಲು ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದ ಸಿಎಂ, ಏಕಾಏಕಿ ದರ ಕಡಿತ ಮಾಡುವಂತಿಲ್ಲ. ಈ ಕುರಿತು ಸರ್ಕಾರದ ಜೊತೆ ಚರ್ಚಿಸಬೇಕು. ದರ ಕಡಿತ ಮಾಡಿದರೆ ರೈತರಿಗೆ ತೊಂದರೆಯಾಗುತ್ತದೆ. ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

1500 ಪ್ರಯಾಣಿಕರಿಗೆ ಅಗತ್ಯ ನೆರವು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ, ಒಡಿಶಾ ರೈಲು ದುರಂತದ ಹಿನ್ನೆಲೆಯಲ್ಲಿ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಸುಮಾರು 1500ಕ್ಕೂ ಅಧಿಕ ಕಾರ್ಮಿಕರಿಗೆ ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಆಹಾರ, ಕುಡಿಯುವ ನೀರು, ಸಂಚಾರಿ ಶೌಚಾಲಯ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಿದ್ದಾರೆ.

ಇದನ್ನೂ ಓದಿ : ರಾಜ್ಯದ ವಾಲಿಬಾಲ್ ಕ್ರೀಡಾಪಟುಗಳನ್ನು ಕೋಲ್ಕತ್ತಾದಿಂದ ವಿಮಾನದಲ್ಲಿ ಕರೆತಂದ ಸರ್ಕಾರ

ಒಡಿಶಾದಲ್ಲಿ ಸಂಭವಿಸಿರುವ ರೈಲು ದುರಂತದ ಹಿನ್ನೆಲೆ ಆ ಮಾರ್ಗದಲ್ಲಿ ಸಂಚರಿಸುವ ಹತ್ತಾರು ರೈಲುಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಈಶಾನ್ಯ ರಾಜ್ಯಗಳಿಗೆ ಕೋಲ್ಕತ್ತಾ ಮುಂತಾದ ರಾಜ್ಯಗಳಿಗೆ ತೆರಳಬೇಕಿದ್ದ ಕಾರ್ಮಿಕರು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲೇ ದಿನ ಕಳೆಯುವಂತಹ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಅಗತ್ಯ ಊಟ, ತಿಂಡಿ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಆಯುಕ್ತರು ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವಲಯ ಆಯುಕ್ತ ಪಿ.ಎನ್. ರವೀಂದ್ರ, ಜಂಟಿ ಆಯುಕ್ತರಾದ ಪಲ್ಲವಿ ಮತ್ತು ತಂಡದವರ ಮಾರ್ಗದರ್ಶನದಲ್ಲಿ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಸುಮಾರು 1500 ವಲಸೆ ಕಾರ್ಮಿಕರಿಗೆ ಊಟ, ತಿಂಡಿ, ನೀರು ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿದ್ದಾರೆ. ಅಲ್ಲದೆ ಬಿಬಿಎಂಪಿ ವತಿಯಿಂದ ಅವರಿಗೆ ವೈದ್ಯಕೀಯ ಸೌಲಭ್ಯ ಹಾಗೂ ಸಂಚಾರಿ ಶೌಚಾಲಯಗಳ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಕಾರ್ಮಿಕ ಇಲಾಖೆ ಆಯುಕ್ತರಾದ ಪಾಟೀಲ್, ಉಪ ಕಾರ್ಮಿಕ ಆಯುಕ್ತರಾದ ಉಮೇಶ್, ಸಹಾಯಕ ಕಾರ್ಮಿಕ ಆಯುಕ್ತರಾದ ಸಂತೋಷ್ ಹಿಪ್ಪರಗಿ, ಇನ್ನಿತರ ಅಧಿಕಾರಿಗಳು ಪರಿಹಾರ ಕಾರ್ಯದ ನೇತೃತ್ವ ವಹಿಸಿದ್ದರು. ಈ ಪರಿಹಾರ ಕಾರ್ಯಕ್ಕೆ ಜೆಎಂಸಿ, ಕೆ2ಕೆ, ಡಿಮಾರ್ಟ್​, ಐಡಿಸಿ, ಕೆಎಂಎಫ್ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳೂ ಬೆಂಬಲ ನೀಡುವ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿದೆ.

ಒಡಿಶಾದ ಬಾಲಸೋರ್​ನಲ್ಲಿ ನಡೆದ ತ್ರಿವಳಿ ರೈಲು ಅಪಘಾತ ದುರಂತದಲ್ಲಿ 288 ಮಂದಿ ಸಾವನ್ನಪ್ಪಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಇದನ್ನೂ ಓದಿ : ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ 1,500 ಪ್ರಯಾಣಿಕರು ಅತಂತ್ರ; ಊಟ, ಅಗತ್ಯ ಸೌಕರ್ಯ ಕಲ್ಪಿಸಿದ ಬಿಬಿಎಂಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.