ETV Bharat / state

ವಿದ್ಯುತ್‌ ತಂತಿ ತುಳಿದು ತಾಯಿ-ಮಗಳು ಸಾವು ಪ್ರಕರಣ: ಬೆಸ್ಕಾಂನ ಐವರು ಸಿಬ್ಬಂದಿ ಅಮಾನತು

author img

By ETV Bharat Karnataka Team

Published : Nov 20, 2023, 7:13 AM IST

Updated : Nov 20, 2023, 11:22 AM IST

Bescom staff suspended: ಕಾಡುಗೋಡಿ ಬಳಿ ವಿದ್ಯುತ್ ತಂತಿ ತುಳಿದು ತಾಯಿ, ಮಗಳು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಬೆಸ್ಕಾಂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

Etv Bharat
Etv Bharat

ಬೆಂಗಳೂರು: ವೈಟ್‌ ಫೀಲ್ಡ್‌ ವಿಭಾಗ ವ್ಯಾಪ್ತಿಯ ಕಾಡುಗೋಡಿಯ 4ನೇ ಪೂರ್ವ ಉಪ ವಿಭಾಗದ ಕಾಡುಗೋಡಿ ಹೋಪ್‌ ಫಾರ್ಮ್‌ ಸಿಗ್ನಲ್‌ ಸಮೀಪ ಪಾದಚಾರಿ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ 11ಕೆವಿ ವಿದ್ಯುತ್‌ ತಂತಿ ತುಳಿದು ತಾಯಿ ಮತ್ತು ಮಗಳು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಕರ್ತವ್ಯಲೋಪ ಕಂಡ ಬಂದ ಹಿನ್ನೆಲೆಯಲ್ಲಿ ಬೆಸ್ಕಾಂನ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಿ, ಇಬ್ಬರು ಹಿರಿಯ ಅಧಿಕಾರಿಗಳಿಗೆ ಕಾರಣ ಕೇಳಿ ಶೋಕಾಸ್‌ ನೊಟೀಸ್‌ ಜಾರಿಗೊಳಿಸಲಾಗಿದೆ.

ಭಾನುವಾರ ನಸುಕಿನ ಜಾವ ಸೌಂದರ್ಯ (23) ಮತ್ತು ಅವರ ಮಗಳು ಲೀಲಾ ಪಾದಚಾರಿ ಮಾರ್ಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ವೈಟ್‌ ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವಿದ್ಯುತ್‌ ಅಪಘಾತವನ್ನು ಗಂಭೀರವಾಗಿ ಪರಿಗಣಿಸಿರುವ ಇಂಧನ ಸಚಿವ ಕೆ.ಜೆ.ಜಾರ್ಜ್‌ ಕರ್ತವ್ಯಲೋಪಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸಲು ಇಂಧನ ಇಲಾಖೆಗೆ ನಿರ್ದೇಶಿಸಿದ್ದರು.

ಇಂಧನ ಸಚಿವರ ಸೂಚನೆ ಮೇರೆಗೆ 4ನೇ ಪೂರ್ವ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಟಿ.ಸುಬ್ರಮಣ್ಯ, ಸಹಾಯಕ ಇಂಜಿನಿಯರ್‌ ಎಸ್‌.ಚೇತನ್‌, ಕಿರಿಯ ಇಂಜಿನಿಯರ್‌ ರಾಜಣ್ಣ, ಕಿರಿಯ ಪವರ್‌ ಮನ್‌ ಮಂಜುನಾಥ್‌ ರೇವಣ್ಣ ಹಾಗೂ ಲೈನ್‌ ಮನ್‌ ಬಸವರಾಜು ಅವರನ್ನು ಅಮಾನತುಗೊಳಿಸಿ ಬೆಸ್ಕಾಂ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಪೂರ್ವ ವೃತ್ತದ ಅಧೀಕ್ಷಕ ಇಂಜಿನಿಯರ್‌ ಎಂ.ಲೋಕೇಶ್‌ ಬಾಬು ಹಾಗೂ ಬೆಸ್ಕಾಂ ವೈಟ್‌ ಫೀಲ್ಡ್‌ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಶ್ರೀರಾಮು ಅವರಿಗೆ ಕಾರಣ ಕೇಳಿ ಶೋಕಾಸ್‌ ನೊಟೀಸ್‌ ನೀಡಲಾಗಿದೆ.

ಕಾಡುಗೋಡಿಯ ಎಫ್‌ 9 ಬಿಪಿಎಲ್‌ ಫೀಡರ್‌ ಬೆಳಿಗ್ಗೆ 3.50ಕ್ಕೆ ಟ್ರಿಪ್‌ ಆಗಿತ್ತು. ಪುನ: 3.55 ಕ್ಕೆ ಲೈನ್‌ ಚಾರ್ಜ್‌ ಆಗಿರುವುದು ದಾಖಲಾಗಿತ್ತು. ಆಗ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದ್ದು, ಅದರಲ್ಲಿ ವಿದ್ಯುತ್‌ ಪ್ರವಹಿಸುತ್ತಿತ್ತು. ಈ ವೇಳೆ ತುಂಡಾದ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ತಾಯಿ ಮಗಳು ಮೃತಪಟ್ಟಿದ್ದರು.

ದೀಪಾವಳಿಗೆ ಚೆನ್ನೈಗೆ ತೆರಳಿದ್ದ ಕುಟುಂಬ: ಬೆಂಗಳೂರಿನ ಎ.ಕೆ.ಗೋಪಾಲನ್ ಕಾಲೊನಿಯ ನಿವಾಸಿಯಾಗಿದ್ದ ಸೌಂದರ್ಯ ಹಾಗೂ ಸಂತೋಷ್ ದಂಪತಿ ದೀಪಾವಳಿ ಹಬ್ಬಕ್ಕೆಂದು ಚೆನ್ನೈನ ಮನೆಗೆ ಹೋಗಿ ಭಾನುವಾರ ಬೆಂಗಳೂರಿಗೆ ವಾಪಸ್ ಬರುತ್ತಿದ್ದರು. ಇದೇ ಸಂದರ್ಭದಲ್ಲಿ 9 ತಿಂಗಳ ಮಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಸೌಂದರ್ಯ ಕತ್ತಲಿನಲ್ಲಿ ಗಮನಿಸದೇ ವಿದ್ಯುತ್ ತಂತಿ ತುಳಿದ ಪರಿಣಾ ವಿದ್ಯುತ್ ಪ್ರವಹಿಸಿ, ಬೆಂಕಿ ಹೊತ್ತುಕೊಂಡಿತ್ತು. ಕಣ್ಮುಂದೆಯೇ ಹೆಂಡತಿ, ಮಗಳು ಸುಟ್ಟು ಹೋಗುತ್ತಿದ್ದರೂ ರಕ್ಷಿಸಲಾಗದೇ ಸಂತೋಷ್ ಗೋಳಾಡುತ್ತಿದ್ದರು.

ಇದನ್ನೂ ಓದಿ: ಬೆಂಗಳೂರು: ತುಂಡಾಗಿ ಬಿದ್ದ ಕರೆಂಟ್ ತಂತಿ ತುಳಿದು ತಾಯಿ, ಮಗಳು ಸಾವು; ರಕ್ಷಿಸಲಾಗದೇ ಗೋಳಾಡಿದ ಪತಿ

Last Updated : Nov 20, 2023, 11:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.