ಬೆಂಗಳೂರು: ತುಂಡಾಗಿ ಬಿದ್ದ ಕರೆಂಟ್ ತಂತಿ ತುಳಿದು ತಾಯಿ, ಮಗಳು ಸಾವು; ರಕ್ಷಿಸಲಾಗದೇ ಗೋಳಾಡಿದ ಪತಿ
Published: Nov 19, 2023, 11:05 AM


ಬೆಂಗಳೂರು: ತುಂಡಾಗಿ ಬಿದ್ದ ಕರೆಂಟ್ ತಂತಿ ತುಳಿದು ತಾಯಿ, ಮಗಳು ಸಾವು; ರಕ್ಷಿಸಲಾಗದೇ ಗೋಳಾಡಿದ ಪತಿ
Published: Nov 19, 2023, 11:05 AM

Mother and daughter died by electrocution: ಬೆಂಗಳೂರಲ್ಲಿ ವಿದ್ಯುತ್ ತಂತಿ ತುಳಿದು ತಾಯಿ ಮಗಳು ಸಾವು. ಬೆಸ್ಕಾಂ ಅಧಿಕಾರಗಳ ವಿರುದ್ಧ ಆಕ್ರೋಶ.
ಬೆಂಗಳೂರು: ರಸ್ತೆ ಬದಿ ಕಟ್ ಆಗಿ ಬಿದ್ದಿದ್ದ ಕರೆಂಟ್ ತಂತಿ ತುಳಿದು ತಾಯಿ ಮತ್ತು ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ನ ಕಾಡುಗೋಡಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ತಾಯಿ ಸೌಂದರ್ಯ (23) ಹಾಗೂ 9 ತಿಂಗಳ ಹೆಣ್ಣುಮಗು ಮೃತಪಟ್ಟಿದ್ದಾರೆ.
ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ತಂತಿಯನ್ನು ಇಬ್ಬರೂ ತುಳಿದಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಸುಕಿನ ಜಾವ ಘಟನೆ ನಡೆದಿದ್ದರಿಂದ ತಂತಿ ಕಾಣಿಸಿರಲಿಲ್ಲ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.ಕೆ.ಗೋಪಾಲನ್ ಕಾಲೊನಿಯ ನಿವಾಸಿಯಾಗಿದ್ದ ಸೌಂದರ್ಯ ಹಾಗೂ ಸಂತೋಷ್ ದಂಪತಿ ದೀಪಾವಳಿ ಹಬ್ಬಕ್ಕೆಂದು ಚೆನ್ನೈನ ಮನೆಗೆ ಹೋಗಿ ಇಂದು ಬೆಂಗಳೂರಿಗೆ ವಾಪಸ್ ಬರುತ್ತಿದ್ದರು. ಇದೇ ಸಂದರ್ಭದಲ್ಲಿ ಮಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಸೌಂದರ್ಯ ಕತ್ತಲಿನಲ್ಲಿ ಗಮನಿಸದೇ ವಿದ್ಯುತ್ ತಂತಿ ತುಳಿದಿದ್ದಾರೆ. ಕಣ್ಮುಂದೆಯೇ ಒದ್ದಾಡುತ್ತಿದ್ದ ಪತ್ನಿ, ಮಗಳನ್ನು ಬದುಕಿಸಲು ಸಂತೋಷ್ ಪ್ರಯತ್ನಟ್ಟರೂ ಸಾಧ್ಯವಾಗಿಲ್ಲ. ರಕ್ಷಣೆ ವೇಳೆ ವಿದ್ಯುತ್ ಪ್ರವಹಿಸಿ ಸಂತೋಷ್ ಕೈ ಸುಟ್ಟಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಸಂಬಂಧಪಟ್ಟ ಅಸಿಸ್ಟೆಂಟ್ ಇಂಜಿನಿಯರ್ ಚೇತನ್, ಜೂನಿಯರ್ ಇಂಜಿನಿಯರ್ ರಾಜಣ್ಣ ಹಾಗೂ ಸ್ಟೇಷನ್ ಆಪರೇಟರ್ ಮಂಜುನಾಥ್ ಅವರನ್ನು ವಶಕ್ಕೆ ಪಡೆದಿರುವ ಕಾಡುಗೋಡಿ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರೂ ರೂಟ್ ಪರಿಶೀಲನೆ ಮಾಡದ ಸಿಬ್ಬಂದಿ ರೀ ಚಾರ್ಜ್ ಮಾಡಿದ್ದಾರೆ. ಅದೇ ಸಮಯದಲ್ಲಿ ಬಂದಿದ್ದ ಸೌಂದರ್ಯ ತಂತಿ ತುಳಿದಾಗ ವಿದ್ಯುತ್ ಪ್ರವಹಿಸಿದ್ದರಿಂದ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 304A (ನಿರ್ಲಕ್ಷ್ಯತೆಯಿಂದ ಸಾವಿಗೆ ಕಾರಣರಾಗುವುದು) ಅಡಿಯಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
"ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ಸೌಂದರ್ಯ, ಬೆಳಗಿನ ಜಾವ 6 ಗಂಟೆ ಸುಮಾರಿಗೆ ಮಗುವಿನೊಂದಿಗೆ ತಮ್ಮ ಮನೆಗೆ ತೆರಳುತ್ತಿದ್ದರು. ಫುಟ್‌ಪಾತ್ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಕತ್ತಲಿನಲ್ಲಿ ಗಮನಿಸದೇ ತುಳಿದಿದ್ದಾರೆ. ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುತ್ತಿದೆ" ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ.ಶಿವಕುಮಾರ್ ಗುಣಾರೆ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ-ಕಡಬದಲ್ಲಿ ತಪ್ಪಿದ ಅನಾಹುತ: ಕಡಬ-ಪಂಜ ರಸ್ತೆಯ ಕೋಡಿಂಬಾಳದ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೊಲೇರೋ ವಾಹನ ಡಿಕ್ಕಿಯಾಗಿದ್ದು, ವಾಹನದಲ್ಲಿದ್ದವರು ಪವಾಡ ಸದೃಶವಾಗಿ ಪಾರಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸುಳ್ಯ ತಾಲೂಕು ಕಲ್ಲುಗುಂಡಿಯ ಚೇತನ್ ಎಂಬವರ ಕುಟುಂಬಸ್ಥರು ಕಾರ್ಯಕ್ರಮದ ನಿಮಿತ್ತ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಕೋಡಿಂಬಾಳದ ಈ ಅಪಾಯಕಾರಿ ತಿರುವಿನಲ್ಲಿ ವಾಹನ ಅಪಘಾತವಾಗಿದೆ.
ವಾಹನದಲ್ಲಿ ಪುಟ್ಟ ಮಗು ಸಹಿತ ಮೂರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ವಿದ್ಯುತ್ ಕಂಬವು ರಸ್ತೆಗೆ ಮುರಿದು ಬಿದ್ದಿದೆ. ಸ್ಥಳೀಯರು ಕೂಡಲೇ ಆಗಮಿಸಿ ವಾಹನದಲ್ಲಿದ್ದವರನ್ನು ಉಪಚರಿಸಿದ್ದಾರೆ. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
