ETV Bharat / state

ಶಾಸಕ ರಾಯರೆಡ್ಡಿಯಿಂದ ಸಿಎಂಗೆ ಮತ್ತೊಂದು ಪತ್ರ: ಸಮಸ್ಯೆ ಆಲಿಸದ ಜೆಸ್ಕಾಂ ಅಧಿಕಾರಿಗಳ ಜೊತೆ ಸಭೆ ಕರೆಯುವಂತೆ ಮನವಿ

author img

By ETV Bharat Karnataka Team

Published : Sep 2, 2023, 2:13 PM IST

ಶಾಸಕ ರಾಯರೆಡ್ಡಿಯಿಂದ ಸಿಎಂಗೆ ಪತ್ರ
ಶಾಸಕ ರಾಯರೆಡ್ಡಿಯಿಂದ ಸಿಎಂಗೆ ಪತ್ರ

MLA Rayareddy written a letter to CM:ಕಾಂಗ್ರೆಸ್​ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಸ್ಕಾಂ ಅಧಿಕಾರಿಗಳ ಜೊತೆ ಸಭೆ ಕರೆಯುವಂತೆ ಕೋರಿ ಪತ್ರ ಬರೆದಿದ್ದಾರೆ.

ಬೆಂಗಳೂರು: ಕಾಂಗ್ರೆಸ್​ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸಿಎಂ ಸಿದ್ಧರಾಮಯ್ಯಗೆ ಮತ್ತೆ ಪತ್ರ ಬರೆದಿದ್ದು, ಜೆಸ್ಕಾಂ ಅಧಿಕಾರಿಗಳ ಜೊತೆ ಸಭೆ ನಡೆಸುವಂತೆ ಮನವಿ ಮಾಡಿದ್ದಾರೆ. ಶಾಸಕರ ಅಹವಾಲು ಕೇಳುವಂತೆ ಕೋರಿ ಕಳೆದ ಬಾರಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಇದೀಗ ಜೆಸ್ಕಾಂ ಅಧಿಕಾರಿಗಳ ಸಭೆ ಕರೆಯಲು ಒತ್ತಾಯಿಸಿ ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದಿದ್ದಾರೆ.‌ ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಜೊತೆ ಸಭೆ ನಡೆಸಲು ಮನವಿ ಮಾಡಿದ್ದಾರೆ.‌

ಕಲಬುರಗಿ ವಿಭಾಗದಲ್ಲಿ ಕೊಪ್ಪಳ, ಕಲಬುರ್ಗಿ, ಬೀದರ್​, ರಾಯಚೂರು, ಬಳ್ಳಾರಿ, ಯಾದಗಿರಿ, ಮತ್ತು ವಿಜಯನಗರ ಜಿಲ್ಲೆಗಳು ಬರುತ್ತಿದ್ದು, ಎಲ್ಲ ಜಿಲ್ಲೆಗಳಿಗೆ ಜೆಸ್ಕಾಂ ವತಿಯಿಂದ ರೈತರ ಜಮೀನುಗಳ ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಗಂಗಾ ಕಲ್ಯಾಣ ಹಾಗೂ ರೈತರ ಪಂಪಸೆಟ್‌ಗಳು ಒಳಗೊಂಡಿರುತ್ತವೆ.

ಕಳೆದ 2 ತಿಂಗಳಿನಿಂದ ಜೆಸ್ಕಾಂ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯುತ್‌ ಸರಬರಾಜು ಉಪಕರಣಗಳಾದ 25KVA, 63KVA, 100KVA ಟ್ರಾನ್ಸ್​ ಫಾರ್ಮಾರುಗಳ ಅಳವಡಿಕೆ ಹಾಗೂ ಬದಲಾವಣೆ ಮಾಡಲು ಆಗಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮಗೆ ಗೊತ್ತಿರುವಂತೆ ಈ ಜಿಲ್ಲೆಗಳಲ್ಲಿ ಈ ವರ್ಷದ ಮಾನ್ಸೂನ್ ಮಳೆ ಸರಿಯಾದ ಪ್ರಮಾಣದಲ್ಲಿ ಆಗದೇ ಇರುವುದರಿಂದ ಹಾಗೂ ಮಳೆಯ ಕೊರತೆಯಿಂದ ಅಲ್ಪ-ಸ್ವಲ್ಪ ಬಿತ್ತಿಂದತಹ ರೈತರ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗುತ್ತಿವೆ. ಸದ್ಯಕ್ಕೆ ಇರುವಂತಹ ಬೆಳೆಗಳನ್ನು ರಕ್ಷಣೆ ಮಾಡುವುದರ ಸಲುವಾಗಿ ರೈತರು ಪಂಪಸೆಟ್‌ಗಳ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.

ಎಲ್ಲ ರೈತರು ಏಕಾಏಕಿ ಒಂದೇ ಸಮಯದಲ್ಲಿ (ಒಟ್ಟಿಗೆ) ಪಂಪಸೆಟ್‌ಗಳನ್ನು ಚಲಾವಣೆ ಮಾಡುತ್ತಿರುವುದರಿಂದ Over Load ಆಗಿ ವಿದ್ಯುತ್ ಒದಗಿಸುವ ವಿವಿಧ ಹಂತದ ಟ್ರಾನ್ಸ್ ಫಾರ್ಮಾರುಗಳು ಸುಟ್ಟು ಹೋಗುತ್ತಿವೆ. ಮತ್ತು ಇದಲ್ಲದೇ ಕೆಲವು ಹೊಸ ಪಂಪಸೆಟ್‌ಗಳು ಗಂಗಾ ಕಲ್ಯಾಣ ಯೋಜನೆಗೆ ವಿದ್ಯುತ್‌ ಸರಬರಾಜು ಮಾಡಲು ಹೆಚ್ಚುವರಿಯಾಗಿ ವಿವಿಧ ಗಂತಗಳ ಟ್ರಾನ್ಸಫಾರ್ಮರುಗಳನ್ನು ಅಳವಡಿಕೆ ಮಾಡಬೇಕಾಗಿದೆ ಎಂದಿದ್ದಾರೆ.

ಅಧಿಕಾರಿಗಳು ಫೋನ್ ಸ್ವೀಕರಿಸುತ್ತಿಲ್ಲ: ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಸುಟ್ಟು ಹೋಗಿರುವಂತಹ ವಿವಿಧ ಹಂತದ ಟ್ರಾನ್ಸ್ ಫಾರ್ಮಾರುಗಳನ್ನು ತ್ವರಿತವಾಗಿ ಬದಲಾವಣೆ ಮಾಡಿರುವುದಿಲ್ಲ ಹಾಗೂ ಅವಶ್ಯಕತೆಯಿರುವಲ್ಲಿ ಹೊಸದಾಗಿ ಟ್ರಾನ್ಸಫಾರ್ಮ‌ರುಗಳನ್ನು ಅಳವಡಿಕೆ ಮಾಡಿರುವುದಿಲ್ಲ. ಈ ಬಗ್ಗೆ ಚರ್ಚಿಸಲು ಕಲಬುರಗಿಯ ಕೇಂದ್ರ ಕಚೇರಿಯಲ್ಲಿರುವ ವ್ಯವಸ್ಥಾಪಕ ನಿರ್ದೇಶಕರು ಶಾಸಕರುಗಳು ಪೋನ್ ಕಾಲ್‌ಗಳನ್ನು ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ದೂರಿದ್ದಾರೆ.

ಆ ಮೂಲಕ ಹಿರಿಯ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ತಮ್ಮ ಅಧೀನ ಕಿರಿಯ ಅಧಿಕಾರಿಗಳ ಮಾತನ್ನೂ ಕೇಳುತ್ತಿಲ್ಲ. ತಮ್ಮ ಸೂಚನೆಗೂ ಮನ್ನಣೆ ನೀಡುತ್ತಿಲ್ಲ‌. ಸಮಸ್ಯೆ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಸಭೆ ಕರೆದಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.‌

ಅವರು ಯಾವುದೇ ವಿಭಾಗಗಳಿಗೆ ಭೇಟಿ ನೀಡಿರುವುದಿಲ್ಲ ಮತ್ತು ಸಮಸ್ಯೆಗಳ ಬಗ್ಗೆ ಸಭೆಗಳನ್ನು ಕರೆದು ವಿಚಾರಣೆ ಮಾಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ವಿದ್ಯುತ್ತಿನ ಹಾಗೂ ಟ್ರಾನ್ಸಫಾರ್ಮರುಗಳ ತೊಂದರೆ ಆಗಿದೆ. ನಾನು ಯಲಬುರ್ಗಾ-ಕುಕನೂರ ತಾಲೂಕಿನ ಕುಂದು-ಕೊರತೆಗಳು, ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಕುಕನೂರಿನ ನಿರೀಕ್ಷಣಾ ಮಂದಿರದಲ್ಲಿ ಕರೆಯಲಾಗಿತ್ತು.

ಸಭೆಗೆ ಹಾಜರಾದಂತಹ ಜೆಸ್ಕಾಂ ಇಲಾಖೆಯ ಕೊಪ್ಪಳ ಜಿಲ್ಲೆಯ ಕಾರ್ಯನಿರ್ವಾಹಕ ಅಭಿಯಂತರರು, ಅಧೀಕ್ಷಕ ಅಭಿಯಂತರರು, ಯಲಬುರ್ಗಾ ಉಪವಿಭಾಗದ ಸಹಾಯಕ ಅಭಿಯಂತರರು ಮತ್ತು ಮುನಿರಾಬಾದ್‌ ಬೃಹತ್‌ ಕಾಮಗಾರಿ ಘಟಕದ ಕಾರ್ಯನಿರ್ವಾಹಕ ಮತ್ತು ಸಹಾಯಕ ಅಭಿಯಂತರರು ಹಾಗೂ ಇನ್ನಿತರ ಅಧಿಕಾರಿಗಳ ಜೊತೆ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ಯಲಬುರ್ಗಾ ವಿಧಾನ ಸಭಾ ಮತ ಕ್ಷೇತ್ರದಲ್ಲಿ (ಯಲಬುರ್ಗಾ-ಕುಕನೂರ ತಾಲೂಕಿನಾದ್ಯಾಂತ) 100 ಕ್ಕಿಂತ ಹೆಚ್ಚು ಟ್ರಾನ್ಸಫಾರ್ಮರುಗಳು ಸುಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ 100 ಕ್ಕಿಂತ ಹೆಚ್ಚು ವಿವಿಧ ಹಂತದ ಟ್ರಾನ್ಸಫಾರ್ಮ‌ಗಳನ್ನು ಅಳವಡಿಕೆ ಮಾಡಬೇಕಾಗಿದೆಯೆಂದು ತಿಳಿಸಿದ್ದಾರೆ. ಒಟ್ಟು 200 ವಿವಿಧ ಹಂತದ ಟ್ರಾನ್ಸಫಾರ್ಮಾರುಗಳು ಬೇಕಾಗಬಹುದು ಎಂದು ತಿಳಿದು ಬಂದಿದೆ. ಹೀಗಾಗಿ ಇಷ್ಟೊಂದು ಅಗಾಧ ಪ್ರಮಾಣದ ಟ್ರಾನ್ಸಫಾರ್ಮರ್​​​​ ಬದಲಾವಣೆ ಮತ್ತು ಅಳವಡಿಕೆ ಮಾಡಲು ಟ್ರಾನ್ಸಫಾರ್ಮರ್​ಗಳನ್ನು ರೈತರಿಗೆ ಕೊಡಲು ಆಗಿಲ್ಲವೆಂದು ಅಧಿಕಾರಿಗಳು ಒಪ್ಪಿಕೊಂಡಿರುತ್ತಾರೆ. ಇದರಿಂದ ನಮ್ಮ ರೈತರಿಗೆ ಸಮಸ್ಯೆಯಾಗಿದೆ. ಈ ಪರಿಸ್ಥಿತಿ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಿಗೂ ಇವೆ ಎಂದು ವಿವರಿಸಿದ್ದಾರೆ.

ಜೆಸ್ಕಾಂ, ಇಂಧನ ಇಲಾಖೆ ಜೊತೆ ಸಭೆ ನಡೆಸಿ: ಈ ಸಮಸ್ಯೆಯನ್ನು ಬಗೆಹರಿಸುವುದರ ಸಲುವಾಗಿ ತಮ್ಮ ಅಧ್ಯಕ್ಷತೆಯಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನು, ಮುಖ್ಯ ಅಧೀಕ್ಷಕ, ಕಾರ್ಯ ನಿರ್ವಾಹಕ ಅಭಿಯಂತರನ್ನು ಕೆಪಿಟಿಸಿಎಲ್‌ನ ಮುಖ್ಯ ಅಧಿಕಾರಿಗಳನ್ನು ಮತ್ತು ಇಂಧನ ಇಲಾಖೆಯ ಸಚಿವರನ್ನು ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗದವರನ್ನು ಕೂಡಲೇ ಸಭೆ ಕರೆದು ವಿಸ್ತಾರವಾಗಿ ಚರ್ಚಿಸಬೇಕೆಂದು ಪತ್ರದಲ್ಲಿ ಕೋರಿದ್ದಾರೆ.

ಇದನ್ನೂ ಓದಿ: ಕೊಪ್ಪಳದ ವಿದ್ಯಾರ್ಥಿನಿಯಿಂದ ಸಿಎಂಗೆ ಅಭಿನಂದನಾ ಪತ್ರ: ಬಾಲಕಿಗೆ ಮರುಪತ್ರ ಬರೆದ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.