ETV Bharat / state

ಮಿಷನ್ 150 ಆಯ್ತು ಈಗ ಟಾರ್ಗೆಟ್ 50: ಕರುನಾಡ ಗೆಲ್ಲಲು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು..?

author img

By

Published : Apr 22, 2023, 8:37 PM IST

ರಾಜ್ಯದಲ್ಲಿ ಬಿಜೆಪಿಗೆ ಈಗ 70 ಸ್ಥಾನದ ಗೆಲುವಿನ ಖಚಿತತೆ ಸಿಕ್ಕಿದ್ದು, ಇನ್ನು 50 ಸ್ಥಾನವನ್ನು ಗೆಲ್ಲುವ ಟಾರ್ಗೆಟ್ ಅನ್ನು ರಾಜ್ಯ ನಾಯಕರಿಗೆ ಅಮಿತ್ ಶಾ ನೀಡಿದ್ದಾರೆ.

mission-150-is-now-target-50-bjp-high-commands-calculation-to-win-election
ಮಿಷನ್ 150 ಆಯ್ತು ಈಗ ಟಾರ್ಗೆಟ್ 50: ಕರುನಾಡ ಗೆಲ್ಲಲು ಬಿಜೆಪಿ ಹೈಕಮಾಂಡ್ ನ ಲೆಕ್ಕಾಚಾರವೇನು..?

ಬೆಂಗಳೂರು: ಈವರೆಗೂ ಟಾರ್ಗೆಟ್ 150 ಎನ್ನುತ್ತಿದ್ದ ಬಿಜೆಪಿ ಹೈಕಮಾಂಡ್ ಇದೀಗ ಹೊಸದಾಗಿ ಟಾರ್ಗೆಟ್ 50 ಎನ್ನುವ ಗುರಿ ನಿಗದಿಪಡಿಸಿಕೊಂಡು ಹೊಸ ಟಾಸ್ಕ್ ಅನ್ನು ರಾಜ್ಯ ಬಿಜೆಪಿಗೆ ನೀಡಿದೆ. ಹಗಲು ರಾತ್ರಿ ಈ ಟಾರ್ಗೆಟ್ ರೀಚ್ ಮಾಡಲು ಶ್ರಮಿಸುವಂತೆ ತಾಕೀತು ಮಾಡಿದ್ದು, ಇದಕ್ಕೆ ಪೂರಕವಾಗಿಯೇ ಹೊಸ ಮುಖಗಳಿಗೆ ಮಣೆಹಾಕಿ ಪ್ರಯೋಗಕ್ಕೆ ಮುಂದಾಗಿರುವುದಾಗಿ ರಾಜ್ಯ ಘಟಕಕ್ಕೆ ತಿಳಿಸಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕರ್ನಾಟಕ ಚುನಾವಣೆ ಬಿಜೆಪಿ ಹೈಕಮಾಂಡ್​ಗೆ ಬಹಳ ಮುಖ್ಯವಾಗಿದೆ. ಹೀಗಾಗಿ ಶತಾಯ ಗತಾಯ ರಾಜ್ಯದಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲೇಬೇಕು ಎಂದು ನಿರ್ಧರಿಸಿರುವ ವರಿಷ್ಠರು ನೇರವಾಗಿ ಚುನಾವಣಾ ನಿರ್ವಹಣೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹೈಕಮಾಂಡ್ ಅಣತಿಯಂತೆಯೇ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರ ಕಾರ್ಯದವರೆಗೂ ಎಲ್ಲವೂ ನಡೆಯುತ್ತಿದೆ.

ಬಿಜೆಪಿ ಚುನಾವಣೆಗೂ ಮುನ್ನವೇ ಹಳೆ ಮೈಸೂರು ಟಾರ್ಗೆಟ್ ಮಾಡಿಕೊಂಡು ಚುನಾವಣಾ ಪೂರ್ವ ಆಪರೇಷನ್ ಕಮಲ ಮಾಡಿ ಇದೀಗ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಬೆಂಬಲದೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬಲಪಡಿಸಿಕೊಳ್ಳಲು ಯತ್ನಿಸಿದೆ. ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಒಂದಷ್ಟು ಸ್ಥಾನ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ. ಇದೀಗ ಮಿಷನ್ 150ಯಲ್ಲಿ ಬಿಜೆಪಿ 70 ಸ್ಥಾನ ತಲುಪಿದೆ. ಬಿಜೆಪಿ ವರಿಷ್ಠರ ಆಂತರಿಕ ಸರ್ವೆ, ಖಾಸಗಿ ಸರ್ವೆ, ರಾಜ್ಯದ ಘಟಕದ ಮಾಹಿತಿ ಎಲ್ಲವನ್ನೂ ಆಧರಿಸಿ ಈಗ ಗೆಲ್ಲಬಹುದಾಗಿರುವ ಕ್ಷೇತ್ರಗಳ ಪಟ್ಟಿ ಮಾಡಿದೆ.

ವರುಣಾ ಕ್ಷೇತ್ರವೂ ಇದೆ: ಗೆಲ್ಲುವ ಕ್ಷೇತ್ರವನ್ನು ಬಿಟ್ಟು ನೇರ ಪೈಪೋಟಿ ಇರುವ ಹಾಗೂ ಎರಡನೇ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇರುವ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಅಲ್ಲಿ ಕಮಲ ಅರಳಿಸಬೇಕು, ಈ ಭಾಗದಲ್ಲಿ 50 ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ಟಾಸ್ಕ್ ಇದಾಗಿದೆ. ಈಗಾಗಲೇ ಈ ಕುರಿತ ಪಟ್ಟಿಯೂ ಸಿದ್ದವಾಗಿದೆ. ಈ ಪಟ್ಟಿಯಲ್ಲಿ ವರುಣಾ ಕ್ಷೇತ್ರವೂ ಇದೆ ಎನ್ನುವುದು ಅಚ್ಚರಿಯ ವಿಷಯ. ವರುಣಾದಲ್ಲಿ ಕಮಲ ಅರಳಿಸಬೇಕು ಎನ್ನುವುದು ಟಾರ್ಗೆಟ್​​ನಲ್ಲಿದೆ ಎನ್ನಲಾಗಿದೆ.

ಈವರೆಗೂ ಗೆಲ್ಲಲಾಗದ ಕ್ಷೇತ್ರಗಳು ಸೇರಿದಂತೆ ಪಕ್ಷಕ್ಕೆ ನೆಲೆ ಇದ್ದು ತೀವ್ರ ಪೈಪೋಟಿ ನೀಡುತ್ತಿರುವ ಕ್ಷೇತ್ರಗಳ ಮೇಲೆ ಬಿಜೆಪಿ ವರಿಷ್ಠರು ಕಣ್ಣು ಹಾಕಿದ್ದಾರೆ. ಅದಕ್ಕಾಗಿಯೇ ಈ ಬಾರಿ 73 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಸತತವಾಗಿ ಸೋತ ಅಭ್ಯರ್ಥಿಗಳ ಬದಲು ಹೊಸಬರ ಮೂಲಕ ಹೊಸ ಬದಲಾವಣೆ ಮಾಡಲು ಈ ಪ್ರಯೋಗ ನಡೆಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ನಾಯಕರಿಗೆ ತಿಳಿಸಿದ್ದಾರೆ.

ಅಮಿತ್ ಶಾ ಅವರ ಈ ಸೂಚನೆ ಬರುತ್ತಿದ್ದಂತೆ ಟಾರ್ಗೆಟ್ 50 ಫಿಕ್ಸ್ ಮಾಡಿಕೊಂಡಿರುವ ರಾಜ್ಯ ಘಟಕ ಹೊಸ ಯೋಜನೆ ರೂಪಿಸಿದೆ. ಈ ಭಾಗದಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಕೇಂದ್ರದ ನಾಯಕರ ಪ್ರವಾಸ ಆಯೋಜನೆ ಮಾಡಬೇಕು, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರಿಂದಲೂ ಈ ಭಾಗಗಳಲ್ಲಿ ಹೆಚ್ಚಿನ ಪ್ರಚಾರ ಕಾರ್ಯ ನಡೆಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದೆ.

ಹೊಸದಾಗಿ ಗುರಿ ನಿಗದಿಪಡಿಸಿಕೊಂಡಿರುವ 50 ಕ್ಷೇತ್ರಗಳ ಗ್ರೌಂಡ್ ರಿಪೋರ್ಟ್ ಪಡೆದುಕೊಂಡು ಬೂತ್ ಮಟ್ಟದಿಂದ ಮತ್ತೊಂದು ಬಾರಿ ಸಂಘಟನೆ ನಡೆಸಬೇಕು, ಪ್ರಚಾರಕರ ಮೂಲಕ ಮನೆ ಮನೆ ತಲುಪಬೇಕು, ತಾರಾ ಪ್ರಚಾರಕರ ಬಳಸಿಕೊಂಡು ಮತದಾರರ ಸೆಳೆಯಬೇಕು, ಪ್ರತಿ ದಿನ ವರದಿ ಪಡೆದುಕೊಂಡು 50 ಕ್ಷೇತ್ರಗಳ ಮೇಲೆ ನಿಗಾ ಇರಿಸಬೇಕು, ಹಂತ ಹಂತವಾಗಿ ಈ ಕ್ಷೇತ್ರಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಪೂರಕವಾಗಿ ತಂತ್ರಗಾರಿಕೆ ಹೆಣೆಯಬೇಕು, ಈ 50 ಕ್ಷೇತ್ರಗಳ ಜವಾಬ್ದಾರಿಯನ್ನು ಪ್ರಮುಖರಿಗೆ ವಹಿಸಬೇಕು ಎನ್ನುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯವೂ ಪ್ರಮುಖವಾಗಿ ಚರ್ಚೆಯಾಗಿದೆ. ವಿಸ್ತಾರಕರು ನೀಡಿದ ವರದಿಯನುಸಾರವಾಗಿಯೇ ಹೊಸದಾಗಿ ಟಾರ್ಗೆಟ್ 50 ನಿಗದಿಪಡಿಸಿಕೊಂಡು ರಾಜ್ಯ ಘಟಕಕ್ಕೆ ಹೊಸ ಟಾಸ್ಕ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಟಾರ್ಗೆಟ್ 50 ಆಧಾರದಲ್ಲಿಯೇ ಯಡಿಯೂರಪ್ಪ 130 ಸ್ಥಾನದ ಬಗ್ಗೆ ಮಾತನಾಡುತ್ತಿದ್ದಾರೆ. ಈವರೆಗೂ ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. 140 ರಿಂದ 150 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದ ಯಡಿಯೂರಪ್ಪ ಇಂದು ವರಸೆ ಬದಲಿಸಿದ್ದು, ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ. 120-130 ಸ್ಥಾನ ಪಡೆಯುತ್ತೇವೆ ಎನ್ನುವ ಹೇಳಿಕೆ ನೀಡಿದ್ದಾರೆ.

ಇದು ಬಿಜೆಪಿಗೆ ಈಗ 70 ಸ್ಥಾನದ ಗೆಲುವಿನ ಖಚಿತತೆ ಸಿಕ್ಕಿದೆ. ಇನ್ನು 50 ಸ್ಥಾನದ ಟಾರ್ಗೆಟ್ ಇದೆ ಈ ಟಾರ್ಗೆಟ್ ಅನ್ನು ಅಮಿತ್ ಶಾ ಹೊಸದಾಗಿ ನೀಡಿದ್ದಾರೆ ಎನ್ನುವುದಕ್ಕೆ ಪೂರಕವಾಗಿ ನೋಡಬಹುದಾಗಿದೆ. ಒಟ್ಟಿನಲ್ಲಿ ಮಿಷನ್ 150 ಯಡಿ ಮೊದಲ ಹಂತ ತಲುಪಿರುವ ಮಾಹಿತಿ ಪಡೆದುಕೊಂಡಿರುವ ಬಿಜೆಪಿ ಅಧಿಕಾರ ಸ್ಥಾಪಿಸಲು ಬೇಕಾದ ಸಂಖ್ಯೆ ತಲುಪಲು ಎರಡನೇ ಹಂತದ ಹೊಸ ಗುರಿಯನ್ನು ಮತ್ತೊಮ್ಮೆ ನಿಗದಿಪಡಿಸಿಕೊಂಡಿದೆ. ಮಿಷನ್ 150 ಮತ್ತು ಟಾರ್ಗೆಟ್ 50 ಎನ್ನುವ ಎರಡು ತಂತ್ರಗಾರಿಕೆಯಡಿ ಪ್ರಚಾರ ಕಾರ್ಯ ಆರಂಭಿಸಿರುವ ಬಿಜೆಪಿಯ ಮಿಷನ್ ಸಕ್ಸಸ್ ಆಗಲಿದೆಯಾ ಅಥವಾ ಟಾರ್ಗೆಟ್ ಫೇಲ್ ಆಗಲಿದೆಯಾ ಎನ್ನುವುದನ್ನು ಫಲಿತಾಂಶದವರೆಗೂ ಕಾದು ನೋಡಬೇಕಿದೆ.

ಇದನ್ನೂ ಓದಿ: ಸಚಿವ ಆನಂದ್ ಸಿಂಗ್ ಸಹೋದರಿ ಬಿ ಎಲ್ ರಾಣಿ ಸಂಯುಕ್ತ ಕಾಂಗ್ರೆಸ್ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.