ETV Bharat / state

ಸಚಿವ ಆನಂದ್ ಸಿಂಗ್ ಸಹೋದರಿ ಬಿ ಎಲ್ ರಾಣಿ ಸಂಯುಕ್ತ ಕಾಂಗ್ರೆಸ್ ಸೇರ್ಪಡೆ

author img

By

Published : Apr 22, 2023, 5:50 PM IST

Updated : Apr 22, 2023, 6:38 PM IST

ವಿಜಯನಗರ ಟಿಕೆಟ್​ ಆಕಾಂಕ್ಷಿಯಾಗಿದ್ದ ಸಚಿವ ಆನಂದ್​ ಸಿಂಗ್​ ಸಹೋದರಿ ಬಿ ಎಲ್ ರಾಣಿ ಸಂಯುಕ್ತ ಇಂದು ಕಾಂಗ್ರೆಸ್​ ಹಿರಿಯ ನಾಯಕ ಜೈ ರಾಮ್​​ ರಮೇಶ್​ ನೇತೃತ್ವದಲ್ಲಿ ಕಾಂಗ್ರೆಸ್​ ಸೇರ್ಪಡೆಯಾದರು.​

minister-anand-singhs-sister-bl-rani-samyuktha-joins-congress
ಸಚಿವ ಆನಂದ್ ಸಿಂಗ್ ಸಹೋದರಿ ಬಿ.ಎಲ್ ರಾಣಿ ಸಂಯುಕ್ತ ಕಾಂಗ್ರೆಸ್ ಸೇರ್ಪಡೆ

ಸಚಿವ ಆನಂದ್ ಸಿಂಗ್ ಸಹೋದರಿ ಬಿ ಎಲ್ ರಾಣಿ ಸಂಯುಕ್ತ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು : ಸಚಿವ ಆನಂದ್ ಸಿಂಗ್ ಸಹೋದರಿ ಬಿ ಎಲ್ ರಾಣಿ ಸಂಯುಕ್ತ ಅವರು ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.

ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಸದಸ್ಯರಾಗಿದ್ದ ರಾಣಿ ಸಂಯುಕ್ತ, ಈ ಬಾರಿ ವಿಜಯನಗರದಿಂದ ತಮ್ಮ ಸಹೋದರ ಆನಂದ್ ಸಿಂಗ್ ಬದಲು ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ ಬಿಜೆಪಿ ಆನಂದ್ ಸಿಂಗ್ ಪುತ್ರನಿಗೆ ಟಿಕೆಟ್ ನೀಡಿರುವುದರಿಂದ ಮುನಿಸಿಕೊಂಡಿರುವ ಅವರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.

ಈ ಕುರಿತು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಮಾಜಿ ಸದಸ್ಯೆ ಬಿ ಎಲ್ ರಾಣಿ ಸಂಯುಕ್ತ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದ ಮೂರನೇ ಕಾರ್ಯಕ್ರಮವಾಗಿದ್ದು, ಇದು ರಾಜ್ಯದಲ್ಲಿ ಬದಲಾವಣೆಗೆ ಸಾಕ್ಷಿಯಾಗಿದೆ. ಬಿಜೆಪಿಯ ಹಲವು ಹಿರಿಯ ನಾಯಕರು ಕಾಂಗ್ರೆಸ್ ಸೇರಿದ್ದು, ಮೇ 10ರಂದು ಕರ್ನಾಟಕ ರಾಜ್ಯದ ಜನ ಬದಲಾವಣೆಗಾಗಿ ಮತ ಹಾಕಲಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ, ದ್ವೇಷ ರಾಜಕಾರಣದಿಂದ ಮುಕ್ತಿ ಪಡೆಯಲು ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂದರು.

ರಾಣಿ ಸಂಯುಕ್ತ ಅವರ ಜೊತೆಗೆ 18 ಇತರೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷದ ಎಲ್ಲಾ ನಾಯಕರ ಪರವಾಗಿ ಇವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್​ ಸೇರಿದ ಮಾತನಾಡಿದ ರಾಣಿ ಸಂಯುಕ್ತ ಅವರು, ನಾನು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದು, ಆ ಪಕ್ಷದಲ್ಲಿ ನಮಗೆ ಸಾಕಷ್ಟು ನೋವಾಗಿದೆ. ನಾವು ಅನೇಕ ದಿನಗಳಿಂದ ಕಾಂಗ್ರೆಸ್ ಪಕ್ಷವನ್ನು ಗಮನಿಸುತ್ತಿದ್ದೆವು. ಅವರು ಯಾರನ್ನೂ ಕೈಬಿಟ್ಟಿಲ್ಲ. ಆದರೆ ಬಿಜೆಪಿಯಲ್ಲಿ ಅದು ಆಗಿಲ್ಲ. ಕೇವಲ ಟಿಕೆಟ್ ಹಂಚಿಕೆ ಮಾತ್ರವಲ್ಲ, ಬಿಜೆಪಿಯಲ್ಲಿ ಎಲ್ಲರಿಗೂ ನೋವುಂಟು ಮಾಡಲಾಗಿದೆ. ನನಗಿಂತ ಮುಂಚಿತವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಅನೇಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ. ಕಾಂಗ್ರೆಸ್ ಪಕ್ಷ ಯಾವ ಸಿದ್ಧಾಂತದ ಮೇಲೆ ಸಾಗುತ್ತಿದೆಯೋ ಅದೇ ಸಿದ್ಧಾಂತದ ಮೇಲೆ ನಾವು ನಡೆಯುತ್ತೇವೆ. ನಮ್ಮ ಜಿಲ್ಲೆಯಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುತ್ತೇವೆ ಎಂದರು.

ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಜನಪರ ಕಾರ್ಯ ಶ್ರೀಮತಿ ರಾಣಿ ಸಂಯುಕ್ತ ಅವರು ಪಕ್ಷವನ್ನು ಸೇರುವಂತೆ ಸೆಳೆದಿದೆ. ಈ ಸಂದರ್ಭದಲ್ಲಿ ನಾನು ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ನಾವೆಲ್ಲರೂ ಸೇರಿ ಬಿಜೆಪಿಯ ಧ್ರುವೀಕರಣ ರಾಜಕೀಯವನ್ನು, 40% ಕಮಿಷನ್ ಸರ್ಕಾರವನ್ನು ಮಣಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಬಿ ಕೆ ಹರಿಪ್ರಸಾದ್, ‘ಕೇವಲ ಮುಖ್ಯಮಂತ್ರಿ ಕಚೇರಿ ಮಾತ್ರವಲ್ಲ, ಎಲ್ಲಾ ಸಂಸ್ಥೆಗಳ ದುರ್ಬಳಕೆಯಾಗುತ್ತಿರುವುದನ್ನು ನಾವು ನೋಡಿದ್ದೇವೆ. ಇಡಿಯನ್ನು ಜಾರಿ ನಿರ್ದೇಶನಾಲಯ ಎನ್ನುವುದಕ್ಕಿಂತ ಬಿಜೆಪಿಯ ಚುನಾವಣಾ ವಿಭಾಗ ಎಂದು ಹೇಳಬಹುದು’ ಎಂದು ಟೀಕೆ ಮಾಡಿದರು.

ಜಗದೀಶ್ ಶೆಟ್ಟರ್ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಅವರ ಪಕ್ಷದ ಹಿರಿಯ ನಾಯಕ ಯತ್ನಾಳ್ ಅವರು ಹೇಳಿದ ಪ್ರಕಾರ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ಕೊಡಬೇಕು. ಈ ಮೊತ್ತವನ್ನು ಬಿಜೆಪಿಯಲ್ಲಿ ಯಾರು ನೀಡಲಿದ್ದಾರೆ ಎಂದು ಬಿಜೆಪಿ ಹೇಳಬೇಕು. ಮಂತ್ರಿಯಾಗಲು 100 ಕೋಟಿ ನೀಡಬೇಕು ಎಂದು ಹೇಳಿದ್ದು, 34 ಮಂದಿ ಯಾರು 100 ಕೋಟಿ ಕೊಟ್ಟು ಮಂತ್ರಿಯಾಗಲಿದ್ದಾರೆ ಎಂದು ಹೇಳಬೇಕು. ನಮ್ಮ ಪಕ್ಷದಲ್ಲಿ ಆರಿಸಿ ಬರುವ ಶಾಸಕರ ಅಭಿಪ್ರಾಯ ಪಡೆದು ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಇದು ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ’ ಎಂದು ತಿಳಿಸಿದರು.

ಇದನ್ನೂ ಓದಿ : ಬಿಜೆಪಿಯಲ್ಲಿ ಬೇಸತ್ತು ಶೆಟ್ಟರ್​​ - ಸವದಿ ಕಾಂಗ್ರೆಸ್​ ಸೇರಿದ್ದಾರೆ : ವಿಜಯಾನಂದ ಕಾಶಪ್ಪನವರ್​

Last Updated : Apr 22, 2023, 6:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.