ETV Bharat / state

ಸಣ್ಣ ನೀರಾವರಿ ಇಲಾಖೆಯಲ್ಲಿ ಯಾವುದೇ ಅಕ್ರಮ ಕಂಡು ಬಂದರೆ ವರದಿ ನೀಡಲು ಸೂಚನೆ: ಸಚಿವ ಬೋಸರಾಜ್

author img

By

Published : Jun 12, 2023, 6:19 PM IST

Minister Bosaraj
ಸಚಿವ ಬೋಸರಾಜ್

ಕೆರೆಗಳ ಪರಿಸ್ಥಿತಿ ನೋಡುವುದಕ್ಕೂ ಕೂಡ ಎಕ್ಸಿಕ್ಯೂಟಿವ್ ಇಂಜಿನಿಯರ್​ಗಳು ಸ್ಥಳಗಳಿಗೆ ತೆರಳಿದ್ದಾರೆ. ಮಳೆಗಾಲದಲ್ಲಿ ಕೆರೆಗಳ ಒಡ್ಡು ಒಡೆಯದಂತೆ ಪರಿಶೀಲನೆ ನಡೆಸುತ್ತಾರೆ. ಕೆರೆಗಳ ತುಂಬುವ ಕೆಲಸ ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ಅಂತರ್ಜಲ ಹೆಚ್ಚಿಸುವ ಕೆಲಸ ಕೂಡ ನಡೆಯುತ್ತಿದೆ'' ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ಹೇಳಿದರು.

ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜ್ ಮಾತನಾಡಿದರು.

ಬೆಂಗಳೂರು: ''ಸಣ್ಣ ನೀರಾವರಿ ಇಲಾಖೆಯಲ್ಲಿ ಯಾವುದೇ ಅಕ್ರಮ ಕಂಡು ಬಂದರೆ, ವರದಿ ಕೊಡುವಂತೆ ಸೂಚನೆ ನೀಡಲಾಗಿದೆ'' ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜ್ ತಿಳಿಸಿದರು.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ''ಅಧಿಕಾರಿಗಳೆಲ್ಲ ಪರಿಶೀಲನೆಗೆ ತೆರಳಿದ್ದಾರೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಇತ್ತೀಚೆಗೆ ನಡೆದ ಕೆಲಸಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಅಕ್ರಮ ಕಂಡು ಬಂದರೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಬಳಿಕ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು.

''ಕೆರೆಗಳ ಪರಿಸ್ಥಿತಿ ನೋಡುವುದಕ್ಕೂ ಕೂಡ ಎಕ್ಸಿಕ್ಯೂಟಿವ್ ಇಂಜಿನಿಯರ್​ಗಳು ಸ್ಥಳಗಳಿಗೆ ತೆರಳಿದ್ದಾರೆ. ಮಳೆಗಾಲದಲ್ಲಿ ಕೆರೆಗಳ ಒಡ್ಡು ಒಡೆಯದಂತೆ ಪರಿಶೀಲನೆ ನಡೆಸುತ್ತಾರೆ. ಕೆರೆಗಳನ್ನು ತುಂಬಿಸುವ ಕೆಲಸ ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ಅಂತರ್ಜಲ ಹೆಚ್ಚಿಸುವ ಕೆಲಸ ಕೂಡ ನಡೆಯುತ್ತಿದೆ'' ಎಂದರು.

''ಕೆ.ಸಿ. ವ್ಯಾಲಿ ಎರಡು ಪ್ರೊಜೆಕ್ಟ್​ಗಳು ಯಶಸ್ವಿಯಾಗಿವೆ. ಮೂರನೇ ಪ್ರೊಜೆಕ್ಟ್​ಗೆ ಮುಂದಾಗಿದ್ದೇವೆ. ಈ ಬಾರಿಯ ಕ್ಯಾಬಿನೆಟ್​ನಲ್ಲಿ ಚರ್ಚೆಗೆ ಬರುತ್ತಿದೆ. ರಾಜ್ಯಾದ್ಯಂತ ವೇಸ್ಟ್ ವಾಟರ್ ಶುದ್ಧಗೊಳಿಸಿ ಕೆರೆಗಳಿಗೆ ತುಂಬಿಸುವ ಕೆಲಸ ಮಾಡ್ತೇವೆ. ತುಮಕೂರು ನಗರಕ್ಕೆ ನೀರು ಪೂರೈಕೆಗೆ 1,080 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗುತ್ತಿದೆ'' ಎಂದರು. ''ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಮಕ್ಕಳಿಗೆ ಅನುಕೂಲ ಆಗುವ ರೀತಿ ವೈಜ್ಞಾನಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ'' ಎಂದು ತಿಳಿಸಿದರು.

''ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನಾನು ಯಾವುದೇ ಮಾತುಕತೆ ಮಾಡಿಲ್ಲ. ಹೈಕಮಾಂಡ್ ನಾಯಕರು, ಸಿಎಂ, ಡಿಸಿಎಂ ಏನು ನಿರ್ಧಾರ ತೆಗೆದುಕೊಳ್ತಾರೋ ಅದೇ ಅಂತಿಮ. ನಾನು ನಮ್ಮ ನಾಯಕರು ಹೇಳಿದ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ಎಲ್ಲ ಸಮಸ್ಯೆಗಳನ್ನು ಸರಿಪಡಿಸುವ ಕೆಲಸವನ್ನು ಸಿಎಂ, ಡಿಸಿಎಂ ಮಾಡ್ತಾರೆ. ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸಿಕೊಂಡು ಹೋಗುವುದು ನನ್ನ ಕರ್ತವ್ಯ'' ಎಂದರು.

ಹೊಸ ಮನೆ, ಹೊಸ ಬಾಡಿಗೆದಾರರಿಗೆ ವಿದ್ಯುತ್ ಬಳಕೆ 53 ಯೂನಿಟ್- ಕೆ.ಜೆ. ಜಾರ್ಜ್: ಹೊಸ ಮನೆ ಮತ್ತು ಹೊಸ ಬಾಡಿಗೆದಾರರಿಗೆ ಸರಾಸರಿ ವಿದ್ಯುತ್ ಬಳಕೆಯನ್ನು 53 ಯೂನಿಟ್ ಅಂತ ಪರಿಗಣಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು. ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದರು.

ಹೊಸ ಮನೆ ಹಾಗೂ ಹೊಸ ಮನೆ ಬಾಡಿಗೆದಾರರಿಗೆ ಉಚಿತ ವಿದ್ಯುತ್ ನೀಡುವ ಕುರಿತು ಚರ್ಚೆ ನಡೆದಿದೆ. ಈ ಕುರಿತು ಸಿಎಂ‌ ಜೊತೆ ಚರ್ಚೆ ಮಾಡಿದ್ದೇವೆ. ಯಾರೇ ಹೊಸದಾಗಿ ಮನೆ ನಿರ್ಮಿಸಿದ್ದರೆ ಅಥವಾ ಹೊಸ ಬಾಡಿಗೆದಾರರಲ್ಲಿ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆಯ ದಾಖಲೆ ಇರುವುದಿಲ್ಲ. ಅವರನ್ನು ಯಾವ ರೀತಿ ಪರಿಗಣಿಸಬೇಕು ಎಂಬುದರ ಕುರಿತು ಚರ್ಚಿಸಿದ್ದೇವೆ ಎಂದು ತಿಳಿಸಿದರು. ಅವರಿಗೂ ಉಚಿತ ವಿದ್ಯುತ್ ಅನ್ವಯವಾಗಲಿದೆ. ದೇಶದ ಸರಾಸರಿ ಗ್ರಾಹಕರ ವಿದ್ಯುತ್ ಬಳಕೆ 53 ಯೂನಿಟ್ ಆಗಿದೆ. ಹೊಸ ಮನೆ ಮತ್ತು ಹೊಸ ಬಾಡಿಗೆದಾರರಿಗೆ ಈ 53 ಯೂನಿಟ್ ಸರಾಸರಿಯನ್ನು ಪರಿಗಣನೆಗೆ ತೆಗೆದುಕೊಳ್ಳಗುತ್ತದೆ. ಅದರ ಮೇಲೆ ಶೇ 10ರಷ್ಟು ಸೇರಿಸಲಾಗುತ್ತದೆ‌. ಅದರಂತೆ ಹೊಸ ಮನೆ ಹಾಗೂ ಹೊಸದಾಗಿ ಬಾಡಿಗೆಗೆ ಬಂದವರಿಗೆ 58 ಯೂನಿಟ್​ವರೆಗೂ ವಿದ್ಯುತ್ ಉಚಿತ ದೊರೆಲಿದೆ. ಹೊಸ ಮನೆಯವರಿಗೆ ಕೂಡ ಇದೇ ಯೂನಿಟ್ ಅನ್ವಯ ಆಗಲಿದೆ. ಒಂದು ವರ್ಷದವರೆಗೂ ಲೆಕ್ಕ ಸಿಗದೇ ಇದ್ದವರಿಗೆ ಈ ಲೆಕ್ಕವೂ ಕೂಡ ಅನ್ವಯ ಆಗಲಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ಕುರಿತು ಸಿಎಂ, ಡಿಸಿಎಂ ಜೊತೆ ಚರ್ಚೆ: ಕೃಷಿ ಸಚಿವ ಚೆಲುವರಾಯಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.