ETV Bharat / state

ಹಾನಗಲ್ ಸೋಲಿಗೆ ಸಿಎಂ ಕಾರಣರಲ್ಲ, ಬೊಮ್ಮಾಯಿ ನೇತೃತ್ವದಲ್ಲೇ ಸಾರ್ವತ್ರಿಕ ಚುನಾವಣೆ: ಸೋಮಣ್ಣ

author img

By

Published : Nov 2, 2021, 5:02 PM IST

ಹಾನಗಲ್ ಸೋಲನ್ನು ಸವಾಲಾಗಿ ಸ್ವೀಕರಿಸಲಿದ್ದೇವೆ, ಮುಂದಿನ‌ ಸಲ ಹಾನಗಲ್ ನಮ್ಮದೇ ಆಗಲಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ನಾವು ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

minister v somanna pressmeet over  by election result
ವಿ.ಸೋಮಣ್ಣ ಸುದ್ದಿಗೋಷ್ಟಿ

ಬೆಂಗಳೂರು: ಉಪ ಚುನಾವಣೆಯಲ್ಲಿ ನಮಗೆ ಎರಡೂ ಕ್ಷೇತ್ರ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಒಂದು ಕ್ಷೇತ್ರದಲ್ಲಿ ಸೋತಿದ್ದೇವೆ. ಹಾನಗಲ್ ಸೋಲನ್ನು ಸವಾಲಾಗಿ ಸ್ವೀಕರಿಸಲಿದ್ದೇವೆ, ನಮ್ಮ ಸರ್ಕಾರ ಭದ್ರವಾಗಿದ್ದು, ಬೊಮ್ಮಾಯಿ ನೇತೃತ್ವದಲ್ಲಿ ನಾವು ಚುನಾವಣೆಗೆ ಹೋಗುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.


ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸೋಲು-ಗೆಲುವಿಗೆ ಒಬ್ಬರು ಕಾರಣರಾಗುವುದಿಲ್ಲ. ಈ ಬಾರಿ ಜನ ಪ್ರಚಲಿತ ವಿಚಾರಗಳನ್ನು ಗಮನಿಸಿ ಜನರು ಮತ ನೀಡಿಲ್ಲ. ಸಿಂದಗಿಯಲ್ಲಿ ಅಭಿವೃದ್ಧಿಗೆ ಮತ ಕೇಳಿದ್ದೆವು, ನಾವು ಟೀಮ್ ವರ್ಕ್ ಆಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ, ಅಲ್ಲಿ ಗೆಲುವು ಸಿಕ್ಕಿದೆ. ಹಾನಗಲ್​​ನಲ್ಲೂ ಅದೇ ರೀತಿಯ ಕೆಲಸ ಮಾಡಲಾಗಿತ್ತು ಆದರೂ ಸೋಲಾಗಿದೆ ಇದಕ್ಕೆ ಸಿಎಂ ಒಬ್ಬರೇ ಕಾರಣರಾಗಲ್ಲ ಎಂದರು.

ಇದನ್ನೂ ಓದಿ:ಹಾನಗಲ್ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್​ ಅಭ್ಯರ್ಥಿ ಶ್ರೀನಿವಾಸ ಮಾನೆ ಜಯಭೇರಿ

ಹಾನಗಲ್​ನಲ್ಲಿ ನಮಗೆ ಸೋಲಾಗಿದೆ. ಉದಾಸಿಯವರಿಗೆ ಅನಾರೋಗ್ಯವಾಗಿತ್ತು. ಹಾಗಾಗಿ ಕ್ಷೇತ್ರ ಕಡೆ ಸ್ವಲ್ಪ ಗಮನ ಕೊಡಲಿಕ್ಕಾಗಿರಲಿಲ್ಲ. ಶ್ರೀನಿವಾಸ್ ಮಾನೆ ತಮ್ಮ ವೈಯಕ್ತಿಕ ವರ್ಚಸ್ಸಿಂದ ಗೆದ್ದಿದ್ದಾರೆ. ಅದು ಕಾಂಗ್ರೆಸ್ ಗೆಲುವಲ್ಲ, ಮಾನೆ ಗೆಲುವು, ಹಾನಗಲ್ ಸೋಲನ್ನು ಸವಾಲಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಸಿಂದಗಿ ಬೈಎಲೆಕ್ಷನ್​ ಫಲಿತಾಂಶ.. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31,185 ಮತಗಳ ಅಂತರದಿಂದ ಭರ್ಜರಿ ಗೆಲುವು

ಸಿಂದಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ ನಿರ್ಧಾರ ಮಾಡಿದ್ದಾರೆ. ಜನಕ್ಕೆ ಅಭಿವೃದ್ಧಿ ಬೇಕು, ಅಭಿವೃದ್ಧಿ ಮನಸಲ್ಲಿಟ್ಕೊಂಡು ಸಿಂದಗಿ ಜನ ಅಭೂತಪೂರ್ವ ತೀರ್ಪು ಕೊಟ್ಟಿದ್ದಾರೆ. ನವೆಂಬರ್ 8 ರಂದು ನಾವು ಸಿಂದಗಿಗೆ ಹೋಗುತ್ತೇವೆ. ಅಲ್ಲಿನ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಕೊಡುವ ಕೆಲಸ ಮಾಡುತ್ತೇವೆ ಎಂದರು.

ಹಾನಗಲ್​ನಲ್ಲಿ ನಮಗೆ ಕಳೆದ ಸಲ ಬಂದಿದ್ದ ಮತಗಳು ಬಂದಿವೆ. ಸಜ್ಜನರ್ 79,513 ಮತ ತಗೊಂಡಿದ್ದಾರೆ ಮಾನೆ 87+ ಸಾವಿರ ಮತ ತಗೊಂಡಿದ್ದಾರೆ. ನಮ್ಮ ಮತ ಎಲ್ಲೂ ಹೋಗಿಲ್ಲ, ನಮ್ಮ ಮತ ನಮಗೇ ಬಂದಿದೆ. ಉದಾಸಿಯವರ ಆರೋಗ್ಯ ಕ್ಷೀಣಿಸಿದ್ದರಿಂದ ಕೋವಿಡ್ ವೇಳೆ ಓಡಾಡಲು ಆಗಿರಲಿಲ್ಲ. ಸಾಮೂಹಿಕ‌ ನಾಯಕತ್ವದಲ್ಲಿ ನಾವು ಚುನಾವಣೆ ಮಾಡಿದ್ದೆವು. ಯಡಿಯೂರಪ್ಪ ಸಹ ಮೂರು ದಿನ‌ ಅಲ್ಲೇ ಇದ್ದರು. ಸೋಲು-ಗೆಲುವು ಯಾರದ್ದು ಅಂತಲ್ಲ ಮಾನೆ ಕೋವಿಡ್ ಸಮಯದಲ್ಲಿ ಜನರಿಗೆ ಉಪಕಾರ ಮಾಡಿದ್ದರು, ಜನ ಉಪಕಾರ ಸ್ಮರಿಸಿ ಮಾನೆ ಗೆಲ್ಲಿಸಿದ್ದಾರೆ ಎಂದರು.

ಬೊಮ್ಮಾಯಿ ಅವರದ್ದೇ ನಾಯಕತ್ವ:

ನಿರೀಕ್ಷೆ ಮೀರಿ‌ ಸಿಂದಗಿ ಜನ ನಮಗೆ ಜಯ ತಂದು ಕೊಟ್ಟಿದ್ದಾರೆ. ಹಾನಗಲ್​​ನಲ್ಲಿ ಸಣ್ಣ ಪ್ರಮಾಣದ‌ ಸೋಲಾಗಿದೆ ಸೋಲಿಗೆ ಕಾರಣ ಹುಡುಕಿ ಸರಿಪಡಿಸಿ ಮತ್ತೆ ಗೆಲ್ಲುತ್ತೇವೆ. ಜನಾದೇಶಕ್ಕೆ ತಲೆ ಬಾಗುತ್ತೇವೆ. ತಿದ್ದಿಕೊಳ್ಳೋದಕ್ಕೆ ಇದೊಂದು ಸಮಯ. ಹಾನಗಲ್​​ನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಮುಖ್ಯಮಂತ್ರಿ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಅದನ್ನು ಅಮಿತ್ ಶಾ ಅವರೇ ಹೇಳಿದ್ದಾರೆ ಎಂದು ಬೊಮ್ಮಾಯಿ ನಾಯಕತ್ವದಲ್ಲಿ ಚುನಾವಣೆ ಎಂದು ಸೋಮಣ್ಣ ಒತ್ತಿ ಹೇಳಿದರು.

ಬಿಟ್ ಕಾಯಿನ್ ಪ್ರಕರಣದಲ್ಲಿ ಹಿಟ್ ಅಂಡ್ ರನ್ ಬೇಡ:

ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ನಾಯಕರಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸೋಮಣ್ಣ,ಆ ಪುಣ್ಯಾತ್ಮರಿಗೇ ಅದನ್ನು ಕೇಳಬೇಕು.ಬಿಟ್ ಕಾಯಿನ್ ಗಂಧವೂ ನಮಗೆ ಗೊತ್ತಿಲ್ಲ. ನಾನು ಈ ಎಲ್ಲ ಪದಗಳನ್ನು ಕೇಳೇ ಇಲ್ಲ. ಬಿಟ್ ಅಂದ್ರೆ ಗೊತ್ತಿಲ್ಲ, ಬೀಟ್ ಅಂದ್ರೆ ಪೊಲೀಸ್ ಬೀಟ್ ಅನ್ಕೊಂಡಿದ್ದೆ ನಾನು. ನಾನು ಬೆಂಗಳೂರಿಗೆ ಬಂದು 51 ವರ್ಷ ಆಯ್ತು.ಸಿದ್ದರಾಮಯ್ಯ ನವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅದೇನಾದರೂ ಇದ್ದರೆ ಹೇಳಲಿ. ಹಿಟ್ ಅಂಡ್ ರನ್ ಬೇಡ.‌ ಅವರು ಮಂತ್ರಿ ಆಗಿದ್ರು, ನಾನು ಮಂತ್ರಿಯಾಗಿದ್ದೆ. ಅದೃಷ್ಟದಿಂದ ಅವರು ಮುಖ್ಯಮಂತ್ರಿಯಾಗಿದ್ರು, ಯಾರೇ ಏನೇ ಮಾತನಾಡಲಿ ಆದರೆ ಅವರು ಮಾತನಾಡುವಾಗ ಸ್ವಲ್ಪ ಯೋಚನೆ ಮಾಡಿ ಮಾತನಾಡಲಿ ಎಂದರು.

ಬೆಂಗಳೂರು ಉಸ್ತುವಾರಿ ವಿಚಾರ ಕುರಿತು ಮಾತನಾಡಿದ ಸೋಮಣ್ಣ, ಬೆಂಗಳೂರು ನಗರ ಸಿಎಂ ತಮ್ಮ ಬಳಿಯೇ ಇರಿಸಿಕೊಂಡರೆ ನಮ್ಮ ತಕರಾರಿಲ್ಲ ಯಾರಿಗೆ ಕೊಟ್ಟರೂ ಸಮಸ್ಯೆ ಇಲ್ಲ ಎಂದರು.

ನ್ಯೂನತೆ ಸರಿಪಡಿಸಿಕೊಳ್ಳುತ್ತೇವೆ:

ಸಚಿವ ಸಿ.ಸಿ.ಪಾಟೀಲ್ ಮಾತನಾಡಿ,‌ ಹಾನಗಲ್ ಸೋಲಿನ ಹೊಣೆ ಸಿಎಂ ಮೇಲೆ ಹಾಕಲು ಆಗಲ್ಲ, ನ್ಯೂನತೆಗಳಾಗಿದಾವೆ, ಹಾನಗಲ್​​ನಲ್ಲಿ ಕೋವಿಡ್ ವೇಳೆ ಎಡವಿದ್ದೇವೆ. ನ್ಯೂನತೆಗಳನ್ನು ಸರಿಪಡಿಸಿಕೊಳ್ತೇವೆ, ಮುಂದಿನ‌ ಸಲ ಹಾನಗಲ್ ನಮ್ಮದೇ ಆಗಲಿದೆ ಎಂದರು.

ಚುನಾವಣೆಯಲ್ಲಿ ಸೋಲು ಗೆಲುವು ಸ್ವಾಭಾವಿಕ. ಮುಂದೆ ಮತ್ತೆ ನಾವು ಹಾನಗಲ್ ಪಡೆಯುತ್ತೇವೆ. ಹಾನಗಲ್​​ನಲ್ಲಿ ಪಂಚಮಸಾಲಿ‌ ಸಮುದಾಯದ ಮೀಸಲಾತಿ ವಿಚಾರ ಪ್ರಭಾವ ಬೀರಿಲ್ಲ, ಸಿಂದಗಿಯಲ್ಲೂ ಅಷ್ಟೇ ಪಂಚಮಸಾಲಿ ಮತದಾರರು ಇದ್ದಾರೆ. ಹಾಗಿದ್ದರೆ ಸಿಂದಗಿಯಲ್ಲಿ ಹೇಗೆ ನಮಗೆ ಗೆಲುವಾಯ್ತು? ಎಂದು ಮೀಸಲಾತಿ ಹೋರಾಟದ ಫ್ಯಾಕ್ಟರ್ ಅನ್ನು ತಳ್ಳಿಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.