ETV Bharat / state

ಮಾರ್ಚ್​​ವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಸೂಕ್ತವಲ್ಲ: ಸಚಿವ ಸುಧಾಕರ್​

author img

By

Published : Oct 28, 2020, 4:03 PM IST

ಚಳಿಗಾಲದಲ್ಲಿ ವೈರಸ್ ಹೇಗೆ ಹರಡುತ್ತದೆ ಎಂಬುದು ಕೂಡ ಇನ್ನೂ ತಿಳಿಯಬೇಕಿದೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆದರೆ, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮೊದಲಾದ ಕ್ರಮಗಳನ್ನು ಅನುಸರಿಸುವುದು ಕಷ್ಟವಾಗುತ್ತದೆ..

minister sudhakar statement on local body election postpone
ಸಚಿವ ಸುಧಾಕರ್​

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಗ್ರಾಮೀಣ‌ ಪ್ರದೇಶದಲ್ಲಿ ಚುನಾವಣೆ ಸೂಕ್ತವಲ್ಲ. ಮಾರ್ಚ್‌ವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬೇಡ ಎಂದು ತಜ್ಞರು ಕೂಡ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಹಬ್ಬ. ಆದರೆ, ಕೋವಿಡ್ ಸಾಂಕ್ರಾಮಿಕದ ಈ ಸಮಯದಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾರ್ಚ್‌ವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಜನರು ಚುನಾವಣೆ ಮೂಲಕ ತಮ್ಮ ಸೇವೆ ಮಾಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಈ ರೀತಿ ಜನಾದೇಶದ ಮೂಲಕ ನಡೆಯುವ ವ್ಯವಸ್ಥೆ ಪ್ರಜೆಗಳ ಪರವಾಗಿರುತ್ತದೆ. ಆದರೆ, ಈ ಸಂದರ್ಭದಲ್ಲಿ ಕೋವಿಡ್ ಮಹಾಮಾರಿಯಿಂದಾಗಿ ಎಲ್ಲ ಚಟುವಟಿಕೆಗಳಿಗೂ ಅಡ್ಡಿಯಾಗಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೆ ಕೋವಿಡ್ ಸೋಂಕು ಮತ್ತಷ್ಟು ಹರಡುವ ಆತಂಕವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಕೊರೊನಾ ವೈರಸ್ ಯಾವ ಕಾಲದಲ್ಲಿ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಇನ್ನೂ ಅಧ್ಯಯನಗಳಾಗುತ್ತಿವೆ. ಚಳಿಗಾಲದಲ್ಲಿ ವೈರಸ್ ಹೇಗೆ ಹರಡುತ್ತದೆ ಎಂಬುದು ಕೂಡ ಇನ್ನೂ ತಿಳಿಯಬೇಕಿದೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆದರೆ, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮೊದಲಾದ ಕ್ರಮಗಳನ್ನು ಅನುಸರಿಸುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ವಿಧಾನಸಭೆಯ ಎರಡು ಮತ್ತು ವಿಧಾನಪರಿಷತ್‍ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲೇ ಜನರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುವಲ್ಲಿ ಎಡವುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇವೆ. ಇನ್ನು, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೆ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳ ಪಾಲನೆ ಬಹಳ ಕಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರ ಬದುಕಿನ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವುದು ಒಳಿತು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.