ETV Bharat / state

ಸಚಿವ ಮುನಿರತ್ನ ಅವರನ್ನು ಕರೆಸಿ ನಿರ್ಮಲಾನಂದ ಶ್ರೀಗಳು ಮಾತನಾಡಿದ್ದಾರೆ : ಸಚಿವ ಆರ್​ ಅಶೋಕ್

author img

By

Published : Mar 20, 2023, 5:25 PM IST

ಕಂದಾಯ ಸಚಿವ ಆರ್ ಅಶೋಕ್
ಕಂದಾಯ ಸಚಿವ ಆರ್ ಅಶೋಕ್

ಕಾಂಗ್ರೆಸ್​ ಅಧಿಕಾರಕ್ಕೆ ಬರುವ ಗ್ಯಾರಂಟಿ ಇಲ್ಲ. ಇನ್ನು ಅವರ ಗ್ಯಾರಂಟಿ ಕಾರ್ಡ್​ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಹೇಳಿದ್ದಾರೆ.

ಕಂದಾಯ ಸಚಿವ ಆರ್ ಅಶೋಕ್

ಬೆಂಗಳೂರು : ಉರಿಗೌಡ, ನಂಜೇಗೌಡ ಚಿತ್ರ ನಿರ್ಮಾಣ ಮಾಡುತ್ತಿರುವ ಸಂಬಂಧ ಸಚಿವ ಮುನಿರತ್ನ ಅವರನ್ನು ಕರೆಸಿ ನಿರ್ಮಲಾನಂದ ಶ್ರೀಗಳು ಮಾತನಾಡಿದ್ದಾರೆ. ಆದರೆ, ಏನು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆಯೇ ಉರಿಗೌಡ ನಂಜೇಗೌಡ ಅವರ ಬಗ್ಗೆ ಸಾಹಿತಿಗಳು ಪುಸ್ತಕವನ್ನೇ ಬರೆದಿದ್ದಾರೆ. ಅದು ಕುಮಾರಸ್ವಾಮಿ ಅವರು ಸಿಎಂ ಇದ್ದಾಗಲೇ ಬಿಡುಗಡೆ ಆಗಿದೆ. ಆಗಲೇ ಅದರ ಬಗ್ಗೆ ಪ್ರಸ್ತಾಪ ಆಗಿದೆ. ಅಂದರೆ ಅವರು ಕಾಲ್ಪನಿಕವಲ್ಲ, ಅವರು ಇದ್ದರು ಎಂಬುದನ್ನು ಪುಸ್ತಕ ಹೇಳುತ್ತಿದೆ. ಅಲ್ಲದೇ ಲಾವಣಿ ಹಾಡು ಹೇಳುತ್ತಿದೆ. ಅದರಿಂದ ನಮ್ಮ ಸ್ಟಾಂಡ್​ನಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿನಿಮಾ ತೆಗೆಯುವ ಬಗ್ಗೆ ಮಾತ್ರ ಸ್ವಾಮೀಜಿ ಕರೆದು ಮಾತನಾಡಿದ್ದಾರೆ. ಈಗ ಮುನಿರತ್ನ ಅವರನ್ನು ಕರೆದು ಮಾತನಾಡಿ ಅಂತ ಸ್ವಾಮೀಜಿ ಹೇಳಿದ್ದಾರೆ. ನಾನು ಕೂಡ ಅವರನ್ನು ಕರೆದು ಮಾತನಾಡುತ್ತೇನೆ ಎಂದ ಅಶೋಕ್​, ಸಿನಿಮಾ ನಿರ್ಮಾಣದ ಬಗ್ಗೆ ಸಚಿವ ಡಾ ಅಶ್ವತ್ಥ ನಾರಾಯಣ್​ ಅವರ ಅಭಿಪ್ರಾಯವೇ ನನ್ನ ಅಭಿಪ್ರಾಯ ಎಂದರು.

ಕಾಂಗ್ರೆಸ್ ಗ್ಯಾರಂಟಿ ಅಧಿಕಾರಕ್ಕೆ ಬರಲ್ಲ-ಸಚಿವ ಅಶೋಕ್​ : ಕಾಂಗ್ರೆಸ್​ನ ಗ್ಯಾರಂಟಿ ಕಾರ್ಡ್​ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರೋದೆ ಗ್ಯಾರಂಟಿ ಇಲ್ಲ. ಇನ್ನೂ ಗ್ಯಾರಂಟಿ ಕಾರ್ಡ್​ನಿಂದ ಉಪಯೋಗ ಏನಿಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿನೇ ಸರ್ಕಾರ ಮಾಡೋದು, ನಮ್ಮ ಸರ್ಕಾರನೇ ಅಧಿಕಾರಕ್ಕೆ ಬರೋದು. ತಿಪ್ಪರಲಾಗ ಹಾಕಿದ್ರು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್​ ಪಕ್ಷದವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು- ಅಶೋಕ್​ ವ್ಯಂಗ್ಯ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಹುಲ್ ಗಾಂಧಿಯವರು ನಿರುದ್ಯೋಗ ಯುವಕರಿಗೆ 3 ಸಾವಿರ ರೂ. ಮಹಿಳೆಯರಿಗೆ 2 ಸಾವಿರ ರೂ. ನೀಡುವ ಬಗ್ಗೆ ಹೇಳಿಕೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶೋಕ್, 75 ವರ್ಷ ಆದ ನಂತರ ಅವರಿಗೆ ಇವೆಲ್ಲ ನೆನಪಾಗಿದೆ ಬಂದಿದೆ ಅಲ್ಲವೇ?. ಈಗ ನೆನಪು ಮಾಡಿಕೊಂಡಿದ್ದಕ್ಕೆ ಅವರಿಗೆ ನೊಬೆಲ್ ಪ್ರಶಸ್ತಿ ಕೊಡೋಣ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್​ ಬರುವುದು ಗ್ಯಾರಂಟಿಯೇ ಇಲ್ಲ-ಅಶೋಕ್​: ಇದೇ ಸಿದ್ದರಾಮಯ್ಯ ಐದು ವರ್ಷ, ಕುಮಾರಸ್ವಾಮಿ-ಸಿದ್ದರಾಮಯ್ಯ 14 ತಿಂಗಳು ಅಧಿಕಾರ ಮಾಡಿದರಲ್ಲ, ಆಗ ಯಾಕೆ ಮಹಿಳೆಯರಿಗೆ 2000 ಕೊಡಲಿಲ್ಲ?. ನಿರುದ್ಯೋಗ ಯುವಕರಿಗೆ ಹಣ ನೀಡಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಈ ಹಿಂದೆ ಪವರ್ ಮಿನಿಸ್ಟರ್ ಆಗಿದ್ದರು. ಆಗ ಅವರು ಪವರ್ ಫುಲ್​ ಆಗಿದ್ದವರು.‌ ಆಗ 200 ಯುನಿಟ್ ಏನು?. ಒಂದು ಸಾವಿರ ಯುನಿಟ್‌ ಬೇಕಾದರೂ ಕೊಡಬಹುದಿತ್ತು. ಆಗ ಯಾಕೆ ಕೊಡಲಿಲ್ಲ?. ಅದಕ್ಕೆ ರಾಹುಲ್ ಗಾಂಧಿಯವರು ಇನ್ನೊಂದು ಘೋಷಣೆ ಮಾಡುತ್ತಿದ್ದಾರೆ. ಅದನ್ನೂ ಕೂಡಾ ಅಧಿಕಾರದಲ್ಲಿ ಇದ್ದಾಗ ಕೊಡಲಿಲ್ಲ. ಅವರಿಗೀಗ ಅಧಿಕಾರನೇ ಇಲ್ಲ, ಮುಂದೆನೂ ಸಹ ಗ್ಯಾರಂಟಿ ಇಲ್ಲ. ಕಾಂಗ್ರೆಸ್ ಬರುವುದು ಗ್ಯಾರಂಟಿ ಇಲ್ಲ. ಹಾಗಾಗಿ ಎಲ್ಲ ಕಡೆ ಪೋಸ್ಟರ್ ಹಾಕಿದ್ದಾರೆ. ಎಲ್ಲ ಕಡೆ ಇವರು ಖಾಲಿ ಖಾಲಿಯಾಗಿದ್ದಾರೆ. ಇವರು ಅಧಿಕಾರಕ್ಕೆ ಬರೋದೆ ಗ್ಯಾರಂಟಿ ಇಲ್ಲ ಅಂದ ಮೇಲೆ ಪೋಸ್ಟರ್​ನಿಂದ ಏನು ಉಪ್ಪು ಖಾರ ಅರೆಯುತ್ತೀರಾ? ಎಂದು ಲೇವಡಿ ಮಾಡಿದರು.

ಭಾರತೀಯತೆ-ಹಿಂದೂತ್ವ ನಮ್ಮ ಅಜೆಂಡಾ: ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಕ್ಕಲಿಗ ಸಮುದಾಯದವರಾದ ನೀವು ಸಿಎಂ ಆಗುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶೋಕ್, ನಮ್ಮದು ನ್ಯಾಷನಲ್ ಪಾರ್ಟಿ, ಜಾತಿ ಪಾರ್ಟಿ ಅಲ್ಲ. ಜಾತಿ ಅಂತ ಹೋದೋರೆಲ್ಲ ಜಿಲ್ಲೆಗಳಿಗೆ ಸೀಮಿತ ಆಗಿದ್ದಾರೆ. ಭಾರತೀಯತೆ- ಹಿಂದೂತ್ವ ನಮ್ಮ ಅಜೆಂಡಾ. ಈ ವಿಚಾರದ ಮೇಲೆ ನಾವು ಚುನಾವಣೆ ಎದುರಿಸುತ್ತೇವೆ ಎಂದರು. ಪದ್ಮನಾಭನಗರದಲ್ಲಿ ನಟಿ ರಮ್ಯಾ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಯಾರು ಎಲ್ಲಿ ಬೇಕಾದ್ರೂ ನಿಲ್ಲಬಹುದು. ಇದು ಸಂವಿಧಾನದ ಹಕ್ಕು ಅಷ್ಟೇ. ಅವರವರ ಪಕ್ಷದ ನಿರ್ಧಾರ ಅವರದ್ದು ಎಂದು ಹೇಳಿದರು.

ಇದನ್ನೂ ಓದಿ : ಉರಿಗೌಡ ನಂಜೇಗೌಡ ಸಿನಿಮಾಕ್ಕೆ ಬ್ರೇಕ್; ಶ್ರೀಗಳ ಭೇಟಿ ಬಳಿಕ ಯೂಟರ್ನ್ ಹೊಡೆದ ಸಚಿವ ಮುನಿರತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.