ETV Bharat / state

ಸಂಚಾರ ದಟ್ಟಣೆ ನಿವಾರಣೆಗೆ ಮೆಟ್ರೋ ಇನ್ನಿತರೆ ಸಾರಿಗೆ ವ್ಯವಸ್ಥೆಗಳ ಸಂಪರ್ಕ ಕೊಂಡಿ ಯೋಜನೆ ಅಗತ್ಯ: ಡಿಸಿಎಂ ಡಿ ಕೆ ಶಿವಕುಮಾರ್

author img

By ETV Bharat Karnataka Team

Published : Oct 7, 2023, 5:40 PM IST

ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ ಮೆಟ್ರೋ ಇನ್ನಿತರ ಸಾರಿಗೆ ವ್ಯವಸ್ಥೆಗಳ ಸಂಪರ್ಕ ಕೊಂಡಿ ಯೋಜನೆ ಅಗತ್ಯ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

metro-and-other-transport-links-are-necessary-to-reduce-bengaluru-traffic-problem-says-dcm-d-k-shivakumar
ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು : ವಾರದಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದ್ದು, ಇದನ್ನು ಸುಧಾರಿಸಲು ಮೆಟ್ರೋ ಇನ್ನಿತರೆ ಸಾರಿಗೆ ವ್ಯವಸ್ಥೆಗಳ ಸಂಪರ್ಕ ಕೊಂಡಿ ಯೋಜನೆ ಅಗತ್ಯವಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಹೊರವರ್ತುಲ ರಸ್ತೆ ಕಂಪನಿಗಳ ಸಂಘದ (ORRCA) ಸದಸ್ಯರೊಂದಿಗೆ ಕಾಡುಬೀಸನಹಳ್ಳಿಯಲ್ಲಿ ನಡೆದ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಜನರ ಸಮಯ ರಸ್ತೆಗಳಲ್ಲಿ ವ್ಯರ್ಥವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ. ಬೆಂಗಳೂರಿನ ಐದನೇ ಒಂದು ಭಾಗದಷ್ಟು ಆದಾಯ ಹೊರ ವರ್ತುಲ ರಸ್ತೆಯ ಉದ್ದಿಮೆಗಳಿಂದಲೇ ಬರುತ್ತಿದೆ. ನಮಗೆ ಬೆಂಗಳೂರಿನ ಹಾಗೂ ಹೊರ ವರ್ತುಲ ರಸ್ತೆಯ ಉದ್ದಿಮೆಗಳ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಅರಿವಿದೆ. ನಿಮಗೆ ಹಾಗೂ ನಿಮ್ಮ ನೌಕರರಿಗೆ, ಆ ಭಾಗದ ನಿವಾಸಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಸಮಸ್ಯೆ ನಿವಾರಿಸುವುದೇ ನಮ್ಮ ಆದ್ಯತೆ ಎಂದು ತಿಳಿಸಿದರು.

ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ 6 ರಿಂದ 8 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಂಚಾರ ದಟ್ಟಣೆಗೆ ಇರುವ ಸಮಸ್ಯೆಗಳನ್ನು ಮೊದಲು ನಿವಾರಿಸಲಾಗುವುದು. ಮುಂದಿನ ಮೂರು ತಿಂಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿರುವ ಅನಧಿಕೃತ ಅಂಗಡಿ- ಮುಂಗಟ್ಟುಗಳನ್ನು ಗುರುತಿಸಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ತೆರವುಗೊಳಿಸಲಾಗುವುದು. ಬೆಂಗಳೂರು ಯೋಜಿತ ನಗರವಲ್ಲ. ಕಳೆದ 30 ವರ್ಷಗಳಲ್ಲಿ ಹೆಚ್ಚು ಬೆಳವಣಿಗೆ ಕಂಡಿದೆ. ಇಲ್ಲಿ ಸಂಚಾರ ದಟ್ಟಣೆಯೊಂದೇ ಸಮಸ್ಯೆಯಲ್ಲ, ಘನತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು, ವಸತಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಈ ನಗರ ಹೊಂದಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಸವಾಲು ನಮ್ಮ ಮುಂದಿದೆ ಎಂದರು.

45 ಮೀಟರ್ ರಸ್ತೆ ಯೋಜನೆ ಪರಿಶೀಲನೆ : ಮಹದೇವಪುರ ವಲಯ ಹೊರ ವರ್ತುಲ ರಸ್ತೆಯಿಂದ ಭೋಗನಹಳ್ಳಿ, ಗುಂಜೂರು ಹಾಗೂ ವರ್ತೂರು ಮುಖಾಂತರ ಹೊಸ ಪಿ.ಆರ್. ಆರ್ ರಸ್ತೆಗೆ ಸಂಪರ್ಕ ಕಲ್ಪಿಸಲು 5.6 ಕಿ.ಮೀ ಉದ್ದದ 45 ಮೀಟರ್ ಅಗಲದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ 4 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ 1.6 ಕಿ.ಮೀ ರಸ್ತೆ ಕಾಮಗಾರಿ ಬಾಕಿಯಿದೆ. ಬಾಕಿ ರಸ್ತೆ ಕಾಮಗಾರಿಯಲ್ಲಿ ರೈಲ್ವೆ ಮೇಲು ಸೇತುವೆ ಕಾಮಗಾರಿ ಹಾಗೂ ಅರಣ್ಯ ಇಲಾಖೆಯಿಂದ ಜಾಗ ಪಡೆಯಬೇಕಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡು ಬಾಕಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಇಂದು ನಾನು ಸ್ವಯಂ ಪ್ರೇರಿತವಾಗಿ ORRCA ಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದೇನೆ. ಅನೇಕ ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಪೊಲೀಸ್ ಆಯುಕ್ತರು, ಬಿಡಿಎ ಆಯುಕ್ತರು, ಮೆಟ್ರೋ, ಪಾಲಿಕೆ, ಸಂಚಾರಿ ಪೊಲೀಸ್ ಇಲಾಖೆ ಅಧಿಕಾರಿಗಳು ನನ್ನೊಂದಿಗೆ ಸಭೆಯಲ್ಲಿ ಭಾಗವಹಿಸಿ ಸಮಸ್ಯೆ ಆಲಿಸಿದ್ದಾರೆ. ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಹೊರವರ್ತುಲ ರಸ್ತೆ ಅತ್ಯಂತ ಪ್ರಮುಖ ಪ್ರದೇಶ. ಇಲ್ಲಿನ ಸಂಸ್ಥೆಗಳು ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿ, ದೇಶ ಹಾಗೂ ರಾಜ್ಯಕ್ಕೆ ಉತ್ತಮ ತೆರಿಗೆ ಪಾವತಿಸುತ್ತಿವೆ. ನಿಮ್ಮ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ. ಹೊರವರ್ತುಲ ರಸ್ತೆಯ ದಟ್ಟಣೆ ಕಡಿಮೆ ಮಾಡಲು ಕೆಲವು ಸ್ಥಳಗಳನ್ನು ಗುರುತಿಸಿದ್ದೇವೆ. ಎಲ್ಲರೂ ಸೇರಿ ಜವಾಬ್ದಾರಿಯಿಂದ ಸಮಸ್ಯೆಗೆ ಪರಿಹಾರ ನೀಡಬೇಕಿದೆ ಎಂದರು.

ರಾಜಕಾಲುವೆ ಒತ್ತುವರಿ ತೆರವು : ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ರಾಜಕಾಲುವೆ ತೆರವು ಮಾಡಲು ಸರ್ಕಾರ ಅಧಿಕಾರಿಗಳಿಗೆ ಸಂಪೂರ್ಣ ಜವಾಬ್ದಾರಿ ನೀಡಿದೆ. ರಾಜಕಾಲುವೆಗಳನ್ನು ಎಲ್ಲೂ ಒತ್ತುವರಿ, ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸ್ವತಂತ್ರರು. ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಿಲ್ಲ. ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ರಸ್ತೆ ಗುಂಡಿ ವಿಚಾರವಾಗಿ ಕೇಳಿದಾಗ, “ರಸ್ತೆಗುಂಡಿಗಳನ್ನು ಮುಂದಿನ ನವೆಂಬರ್ ವೇಳೆಗೆ ಸರಿಪಡಿಸಲು ಸೂಚಿಸಿದ್ದೇನೆ. ರಸ್ತೆಗುಂಡಿ ಎಲ್ಲೆಲ್ಲಿದೆ ಎಂದು ಗುರುತಿಸಿ ಮಾಹಿತಿ ನೀಡಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ. ಸಂಚಾರಿ ಪೊಲೀಸ್ ಹಾಗೂ ಪಾಲಿಕೆ ಒಟ್ಟಿಗೆ ಸೇರಿ ಈ ಜವಾಬ್ದಾರಿ ನಿರ್ವಹಿಸಲು ಸೂಚನೆ ನೀಡಿದ್ದೇನೆ. ಇದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದ ಫೆರಿಫೆರಲ್ ರಸ್ತೆಗೆ ಬೇಡಿಕೆ ಹೆಚ್ಚಾಗಿದೆ. ಈ ಯೋಜನೆ ಯಾವಾಗ ಆರಂಭವಾಗಲಿದೆ ಎಂದು ಕೇಳಿದಾಗ, “ಆದ್ಯತೆ ಮೇರೆಗೆ ಎಲ್ಲ ಯೋಜನೆ ಜಾರಿ ಮಾಡಲಾಗುವುದು. ಪಿಆರ್ ಆರ್ ಯೋಜನೆಗೆ ಕೆಲವು ಕಾನೂನು ತೊಡಕುಗಳಿವೆ. ಹೀಗಾಗಿ ತಡವಾಗಿದೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಆರಂಭವಾಗುತ್ತಿತ್ತು. ಕಾನೂನು ಮೀರಿ ಕೆಲಸ ಮಾಡಲು ಆಗುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ : ಗ್ರಾಮದ ಚಿತ್ರಣ ಬದಲಿಸಿದ ಶಿಕ್ಷಕ.. ವರ್ಗಾವಣೆಗೊಂಡಾಗ ಊರಿಗೆ ಊರೇ ಕಣ್ಣೀರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.