ETV Bharat / state

ಪಠ್ಯ ಪರಿಷ್ಕರಣೆ ವಿವಾದ: ಆರ್​​ಎಸ್​​ಎಸ್ ಕಚೇರಿಯಲ್ಲಿ ಬಿಜೆಪಿ ನಾಯಕರ ಜೊತೆ ಸುದೀರ್ಘ ಸಮಾಲೋಚನೆ

author img

By

Published : Jun 6, 2022, 9:34 PM IST

ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ನಡೆದ ಸಭೆಯಲ್ಲಿ ಆರ್​​ಎಸ್​​ಎಸ್ ಪ್ರಮುಖರಿಗೆ ವಿವರಣೆ ನೀಡಿರುವ ಸಚಿವ ಬಿ.ಸಿ. ನಾಗೇಶ್, ಯಾವ ಯಾವ ಪಠ್ಯ ಪರಿಷ್ಕರಣೆ ಆಗಿದೆ?. ಯಾವ ಪಠ್ಯ ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂಬ ಅಂಶಗಳನ್ನು ದಾಖಲಾತಿ ಸಮೇತ ವಿವರಿಸಿದರು.

meeting-on-textbook-issue-in-bengaluru-rss-office
ಪಠ್ಯ ಪರಿಷ್ಕರಣೆ ವಿವಾದ: ಆರ್​​ಎಸ್​​ಎಸ್ ಕಚೇರಿಯಲ್ಲಿ ಬಿಜೆಪಿ ನಾಯಕರ ಜೊತೆ ಸುದೀರ್ಘ ಸಮಾಲೋಚನೆ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ವಿಚಾರ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ಆರ್​​ಎಸ್​​ಎಸ್ ಕಚೇರಿಯಲ್ಲಿ ಸತತ ಮೂರು ತಾಸುಗಳ ಕಾಲ ಮಹತ್ವದ ಸಭೆ ನಡೆಸಲಾಯಿತು. ಚಾಮರಾಜಪೇಟೆಯ ಕೇಶವ ಶಿಲ್ಪದಲ್ಲಿ ಆರ್​​ಎಸ್​​ಎಸ್ ಪ್ರಮುಖರು ಬಿಜೆಪಿ ನಾಯಕರ ಜೊತೆ ಸುದೀರ್ಘ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಭಾಗಿಯಾಗಿದ್ದರು. ರಾಜ್ಯದ ಪಠ್ಯ ಪರಿಷ್ಕರಣೆ ಕುರಿತು ಚರ್ಚಿಸಲು ಆರ್‌ಎಸ್ಎಸ್ ಪ್ರಮುಖರು ಆಯ್ದ ಬಿಜೆಪಿ ಮುಖಂಡರಿಗೆ ಬುಲಾವ್ ನೀಡಿದ್ದರು. ಸಭೆಯಲ್ಲಿ ಆರ್‌ಎಸ್ಎಸ್ ನಾಯಕರಿಗೆ ಪಠ್ಯ ಪರಿಷ್ಕರಣೆ, ವಿವಾದ, ವಿರೋಧ ಕುರಿತು ಸಂಪೂರ್ಣ ವಿವರಣೆಯನ್ನು ಸಚಿವ ನಾಗೇಶ್ ನೀಡಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಆರ್​​ಎಸ್​​ಎಸ್ ಪ್ರಮುಖರಿಗೆ ವಿವರಣೆ ನೀಡಿರುವ ಸಚಿವ ಬಿ.ಸಿ. ನಾಗೇಶ್, ಯಾವ ಯಾವ ಪಠ್ಯ ಪರಿಷ್ಕರಣೆ ಆಗಿದೆ?. ಯಾವ ಪಠ್ಯ ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂಬ ಅಂಶಗಳನ್ನ ದಾಖಲಾತಿ ಸಮೇತ ವಿವರಿಸಿದರು. ನಾರಾಯಣಗುರು ಪಠ್ಯದ ಬಗ್ಗೆ ಸ್ಪಷ್ಟನೆ‌ ನೀಡಿದ ಅವರು, ನಾರಾಯಣಗುರು ಪಠ್ಯ ತೆಗೆದಿಲ್ಲ. 10ನೇ ತರಗತಿ ಸಮಾಜ ವಿಜ್ಞಾನ ಪಠ್ಯವನ್ನು ಕನ್ನಡ ಭಾಷೆ‌ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಏಳನೇ ತರಗತಿ ಪಠ್ಯದಲ್ಲಿ ಇರುವ ನಾರಾಯಣ ಗುರು ಪಾಠವು ಹಾಗೆಯೇ ಇದೆ. ಪಠ್ಯ ತೆಗೆಯದೇ ಹೋದರೂ ಈ ಬಗ್ಗೆ ಕೆಲವರು ವಿರೋಧ ಮಾಡುತ್ತಿದ್ದಾರೆ ಎಂದು ಸಚಿವರು ವಿವರಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರಿಂದ ಪರಿಷ್ಕರಣೆ ಆದ ಬಗ್ಗೆ ಮಾಹಿತಿ ನೀಡಿದರು. ಬರಗೂರು ಸಮಿತಿಯಲ್ಲಿ ಇದ್ದ ಲೋಪಗಳೇನು? ಯಾವ ಲೋಪ ಸರಿಪಡಿಸಲಾಗಿದೆ ಎಂಬುವರ ಬಗ್ಗೆ ಅವರು ವಿವರಣೆ ನೀಡಿದರು.

ಆರೋಪಗಳಿಗೆ ಸಮರ್ಪಕ ಪ್ರತ್ಯುತ್ತರ ನೀಡುವಂತೆ ಸೂಚನೆ: ಆರೋಪಗಳಿಗೆ ಕೌಂಟರ್ ನೀಡುವಂತೆ ಆರ್‌ಎಸ್ಎಸ್ ಪ್ರಮುಖರು ಬಿಜೆಪಿ ನಾಯಕರು ಹಾಗೂ ವಕ್ತಾರರಿಗೆ ಸೂಚನೆ ನೀಡಿದರು. ಸಾರ್ವಜನಿಕ‌ ವಲಯದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಬಿಜೆಪಿ ನಾಯಕರು ಮುಂದಾಗಬೇಕು. ಇಲ್ಲವಾದರೆ ಆರೋಪಗಳೇ ಸತ್ಯವಾಗುತ್ತ ಹೋಗುತ್ತವೆ. ಹೀಗಾಗಿ ಬಿಜೆಪಿ ನಾಯಕರು ಬಲವಾಗಿ ಸಾಕ್ಷಿ ಸಮೇತವಾಗಿ ಪ್ರತಿಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಲಾಗ್ತಿದೆ.

ಪಠ್ಯ ಪರಿಷ್ಕರಣೆ ಸಂಬಂಧ ಇರುವ ಗೊಂದಲಗಳಿಗೆ ತೆರೆ ಎಳೆಯಬೇಕು.‌ ಇಲ್ಲವಾದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಅದರಲ್ಲೂ ಕುವೆಂಪು, ಅಂಬೇಡ್ಕರ್, ಬಸವಣ್ಣನ ವಿಚಾರದಲ್ಲಿ ಎದುರಾಗಿರುವ ಗೊಂದಲಕ್ಕೆ, ವಿವಾದಕ್ಕೆ ಕೂಡಲೇ ತೆರೆ ಎಳೆಯಬೇಕು ಎಂದು ಆರ್‌ಎಸ್ಎಸ್ ಪ್ರಮುಖರು ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.

ಸಭೆಯಲ್ಲಿ ಭಾಗಿಯಾದವರು ಯಾರು?: ಸಭೆಯಲ್ಲಿ ಆರ್‌ಎಸ್ಎಸ್ ಪ್ರಮುಖರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಬಿ.ಸಿ. ನಾಗೇಶ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ರೋಹಿತ್ ಚಕ್ರತೀರ್ಥ ಪಾಲ್ಗೊಂಡಿದ್ದರು. ಜೊತೆಗೆ ಮಾಜಿ ಸಿಎಂ ಸದಾನಂದ ಗೌಡ, ಶಾಸಕ ಎನ್.ಮಹೇಶ್, ಸಂಸದ ಪ್ರತಾಪ್ ಸಿಂಹ, ಜಗ್ಗೇಶ್, ಪೂರ್ಣಿಮಾ ಶ್ರೀನಿವಾಸ, ಮಾಳವಿಕ ಅವಿನಾಶ್, ಮಾಜಿ ಎಂಎಲ್​ಸಿ ಅಶ್ವಥ್ ನಾರಾಯಣ, ತೇಜಸ್ವಿ ಗೌಡ, ರಾಜ್ ಕುಮಾರ್ ತೇಲ್ಕೂರ್, ಕುಮಾರ್ ಬಂಗಾರಪ್ಪ, ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್‌ ಇದ್ದರು.

ಇದನ್ನೂ ಓದಿ: ಯಾವುದೇ ಪಕ್ಷಕ್ಕೆ ಹೋದ್ರೂ ಯಾವ ಜಾತಿ, ಎಷ್ಟು ದುಡ್ಡು ತರುತ್ತಿಯಾ? ಎಂದು ಕೇಳ್ತಾರೆ: ಬಸವರಾಜ್ ಹೊರಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.