ETV Bharat / state

ಡಬಲ್​​ ಇಂಜಿನ್ ಸರ್ಕಾರ ಏನು ಮಾಡಿದೆ ಎಂದ ಪ್ರತಿಪಕ್ಷಗಳಿಗೆ ಟಕ್ಕರ್ ಕೊಟ್ಟ ಮಾಧುಸ್ವಾಮಿ..!

author img

By

Published : Feb 21, 2023, 5:46 PM IST

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಬೆಂಗಳೂರು ಮೈಸೂರು ದಶಪಥ ರಸ್ತೆ ಮಾಡಿದ್ದೇವೆ. ಎಕ್ಸ್​ಪ್ರೆಸ್ ವೇ, 9 ರೈಲ್ವೆ ಹೊಸ ಯೋಜನೆ, ಆರು ಹೊಸ ವಿಮಾನ ನಿಲ್ದಾಣ, ಇದೆಲ್ಲಾ ಡಬಲ್​​ ಇಂಜಿನ್ ಸರ್ಕಾರದ ಸಾಧನೆ ಎಂದರು.

madhuswami-hit-the-opposition-saying-what-the-double-engine-government-has-done-dot
ಡಬ್ಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದ ಪ್ರತಿಪಕ್ಷಗಳಿಗೆ ಟಕ್ಕರ್ ನೀಡಿದ ಮಾಧುಸ್ವಾಮಿ..!

ಬೆಂಗಳೂರು: ಮಾತೆತ್ತಿದರೆ ಡಬಲ್​​ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಿದ್ದೀರಲ್ಲ, ಕೋವಿಡ್ ನಂತರದ ಆರ್ಥಿಕ ಚೇತರಿಕೆ, ರಾಜ್ಯದ ಪ್ರಗತಿ, ಅಭಿವೃದ್ಧಿ ಕಾರ್ಯಗಳೆಲ್ಲಾ ಏನು? ಎಂದು ಪ್ರತಿಪಕ್ಷಗಳ ವಿರುದ್ಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಪ್ರಶ್ನಿಸಿದರು. ಪ್ರತಿಪಕ್ಷ ಸದಸ್ಯರ ಪ್ರತಿ ಆರೋಪಗಳಿಗೂ ಮಾಧುಸ್ವಾಮಿ ತಿರುಗೇಟು ನೀಡಿದರು.

ವಿಧಾನ ಪರಿಷತ್​ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಮಾಧುಸ್ವಾಮಿ, 1989ರಿಂದ ಸದನದಲ್ಲಿದ್ದೇನೆ. ರಾಜ್ಯಪಾಲರ ಭಾಷಣ ಎಂದರೆ ನಾವೇನು ಮಾಡಿದ್ದೇವೆ ಮತ್ತು ಏನು ಮಾಡಲು ಹೊರಟಿದ್ದೇವೆ ಎನ್ನುವ ಕಿರುಪರಿಚಯ ಮಾತ್ರ, ಬಜೆಟ್​ನಲ್ಲಿ ಎಲ್ಲ ವಿವರ ಇರಲಿದೆ. ಹಾಗಾಗಿ ಬಜೆಟ್ ನಲ್ಲಿ ಏನು ಬೇಕಾಗಬಹುದು ಎನ್ನುವ ಸಲಹೆ ನೀಡುವ ಕೆಲಸ ಪ್ರತಿಪಕ್ಷದಿಂದ ಆಗಬೇಕು. ಆದರೆ, ಅದರ ಬದಲು ಬರೀ ಟೀಕೆಗಳಿಗೇ ಮೀಸಲಾದಂತಿದೆ ಎಂದು ಕಾನೂನು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಮಾತೆತ್ತಿದರೆ ಡಬಲ್​​ ಇಂಜಿನ್ ಸರ್ಕಾರ ಏನು ಮಾಡಿದೆ ಎನ್ನುತ್ತೀರಿ, ಜಿಎಸ್​ಟಿ ಬಗ್ಗೆ ಟೀಕಿಸುತ್ತೀರಿ. ಕೇಂದ್ರದಿಂದ ನೇರವಾಗಿ ಬರುವ ಹಣ ಬೇರೆ, ಪರೋಕ್ಷವಾಗಿ ಬರುವ ಹಣವೇ ಬೇರೆ. ಎಂಟು ವರ್ಷದಲ್ಲಿ ಡಬಲ್​ ಇಂಜಿನ್ ಸರ್ಕಾರ ಬಂದ ನಂತರ ಆಗಿರುವ ಅಭಿವೃದ್ಧಿ ಏನು ಎಂದು ಪಟ್ಟಿ ನೀಡಲು ಸಿದ್ದ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಆಧ್ಯತೆ ನೀಡಿದೆ. ಸುಸ್ಥಿರ ಜೀವನಕ್ಕೆ ಪೂರಕವಾಗಿ ಅನುದಾನ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

ನಾವು ಅಧಿಕಾರಕ್ಕೆ ಬಂದಿದ್ದು ಕಷ್ಟಕರ ಕಾಲದಲ್ಲಿ: ನಾವು ಅಧಿಕಾರ ಸ್ವೀಕಾರ ಮಾಡಿದ ಸಮಯ ಸಂಕಷ್ಟದ ಸಮಯವಾಗಿತ್ತು. ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ನೆರೆ ಹಾವಳಿ ವೀಕ್ಷಣೆಗೆ ಹೋದರು, ಸಂಪುಟ ರಚಿಸಿದರೂ ನಮಗೆ ಖಾತೆ ನೀಡದೇ ಜಿಲ್ಲೆಗಳಿಗೆ ಕಳುಹಿಸಿದ್ದರು ಎನ್ನುತ್ತಿದ್ದಂತೆ ಜೆಡಿಎಸ್ ಸದಸ್ಯ ಶರವಣ ಯಡಿಯೂರಪ್ಪ ಇದ್ದಾಗ ಚೆನ್ನಾಗಿತ್ತು ಎಂದು ಸಮ್ಮಿಶ್ರ ಸರ್ಕಾರದ ವಿಚಾರದತ್ತ ವಿಷಯ ಹೊರಳುವಂತೆ ಮಾಡಿದರು.

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದ ಮಾಧುಸ್ವಾಮಿ, ಅದಕ್ಕೆ ಇಡೀ ನಾಡೇ ಸಾಕ್ಷಿ, ವಿಧಾನಸಭೆಯಲ್ಲಿ ಯಾರು ಯಾರ ಪರ ಕೈ ಎತ್ತಿದ್ದಾರೆ ಎಂದು ಜನತೆಯೇ ಸಾಕ್ಷಿ ಇದ್ದಾರೆ. ಒಪ್ಪಂದದಂತೆ ನಡೆದುಕೊಂಡಿದ್ದರೆ ನಾವು ಸರ್ವಕಾಲ ಋಣಿಯಾಗಿರುತ್ತಿದ್ದೆವು. ಆದರೆ, ಆಗಿದ್ದೆ ಬೇರೆ ಇದನ್ನೆಲ್ಲಾ ನೋಡಿಯೂ ನಮ್ಮ ನಂತರ ಕಾಂಗ್ರೆಸ್​ನವರೂ ಹೋಗಿ ಅಲ್ಲಿಯೇ ಸಿಲುಕಿಕೊಂಡರು ಅನುಭವಿಸಿದರು. ಇಂದು ನಾವೇ ನಮ್ಮಿಂದಲೇ ಅನ್ನುವ ಸ್ಥಿತಿ ಎದುರಿಸುವಂತಾಗಿದೆ ಎಂದು ಮೈತ್ರಿ ಸರ್ಕಾರವನ್ನು ಉಲ್ಲೇಖಿಸಿ ಟೀಕಿಸಿದರು.

ವಂಶವೊಂದರ ಗುಲಾಮಗಿರಿ ಮಾಡುತ್ತಿದ್ದೀರಿ: ಈ ವೇಳೆ ನೀವು ಸರ್ಕಾರ ನಡೆಸುತ್ತಿಲ್ಲ ಮ್ಯಾನೇಜ್ ಮಾಡುತ್ತಿದ್ದೀರಿ ಎಂದು ಹರಿಪ್ರಸಾದ್ ಕುಟುಕಿದರು. ಇದಕ್ಕೆ ತಿರುಗೇಟು ನೀಡಿದ ಮಾಧುಸ್ವಾಮಿ, ಬಹಳ ಕಷ್ಟದ ದಿನದಲ್ಲಿ ನಾವು ಅಧಿಕಾರ ವಹಿಸಿಕೊಂಡಿದ್ದೆವು, ಮ್ಯಾನೇಜ್ ಮಾಡುತ್ತಿದ್ದೇವೆ ಎನ್ನುವ ಧೈರ್ಯವಾದರೂ ನಮಗೆ ಇದೆ, ನಿಮಗೆ ಅದು ಇಲ್ಲ, ಗುಲಾಮರಂತೆ ಮಾತನಾಡುತ್ತಿದ್ದೀರಿ, ವಂಶವೊಂದರ ಗುಲಾಮಗಿರಿ ಮಾಡುತ್ತಿದ್ದೀರಿ ಎಂದರು.

ಇದಕ್ಕೆ ಟಾಂಗ್ ನೀಡಿದ ಹರಿಪ್ರಸಾದ್, ನಿಮ್ಮ ಪಕ್ಷದ ಸೂತ್ರದಾರರು, ನೇತ್ರದಾರರು ಒಂದೇ ಒಂದು ಪಂಚಾಯತ್ ಚುನಾವಣೆ ಗೆದ್ದಿಲ್ಲ, ನಿಮ್ಮ ಮೋದಿ ಒಂದೇ ಒಂದು ಪಂಚಾಯತ್​ಗೆ ನಿಲ್ಲದೆ ಸಿಎಂ ಆಗಿದ್ದರು, ನಾಗಪುರದವರು ಸೂತ್ರಧಾರಿಗಳು, ಅವರು ಯಾವ ಚುನಾವಣೆ ಎದುರಿಸಿದ್ದಾರೆ ಎಂದು ಪ್ರಶ್ನಿಸಿದರು.

ಇದಕ್ಕೆ ಟಕ್ಕರ್ ನೀಡಿದ ಮಾಧುಸ್ವಾಮಿ, ಕಮಾಂಡ್​ ತಂದು ಮೋದಿ ಸಿಎಂ, ಪಿಎಂ ಆಗಿಲ್ಲ, ನಿಮ್ಮ ಪ್ರಧಾನಿ ಹೇಗೆ ಆಗಿದ್ದರು ಯೋಚಿಸಿ ಎಂದರು. ಇದಕ್ಕೆ ಹರಿಪ್ರಸಾದ್ ನಿಮ್ಮ ಪ್ರಧಾನಿ ಡಿಗ್ರಿ ಮಾಡಿದ್ದಾಗಿ ಸುಳ್ಳು ಹೇಳಿದ್ದಾರೆ, ಒಂದೇ ಒಂದು ಸುದ್ದಿಗೋಷ್ಠಿ ಮಾಡಿಸಿ ನೋಡೋಣ ಎಂದು ಸವಾಲು ಹಾಕಿದರು . ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೆಯಿತು.

ಬಿಜೆಪಿ ಸರ್ಕಾರ ಬರಲು ಕುಮಾರಸ್ವಾಮಿ ಕಾರಣ: ಈ ವೇಳೆ ಸಭಾಪತಿ ಅನುಮತಿ ಮೇರೆಗೆ ಮಾತನಾಡಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಸಚಿವರು ಮಾತನಾಡುವಾಗ ಪ್ರತಿಪಕ್ಷದ ಕಡೆ ಕೈ ತೋರಿಸಿ ಗುಲಾಮರು ಎನ್ನುವ ಪದ ಬಳಸಿದ್ದಾರೆ ಅದನ್ನು ಕಡತದಿಂದ ತೆಗೆಯಿರಿ ಎಂದು ಮನವಿ ಮಾಡಿದರು. ಸತ್ಯವಂತರು, ಅಸತ್ಯವಂತರು ಎಲ್ಲ ಪಕ್ಷದಲ್ಲೂ ಇರಲಿದ್ದಾರೆ. ಯಡಿಯೂರಪ್ಪಗೆ ಕುಮಾರಸ್ವಾಮಿ ಮೋಸ ಮಾಡಿದ್ದರು ಎಂದರು, ಆದರೆ ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆಗಲು, ಮಾಧುಸ್ವಾಮಿ ಸಚಿವರಾಗಲು, ಬಿಜೆಪಿ ಸರ್ಕಾರ ಬರಲು ಕುಮಾರಸ್ವಾಮಿ ಕಾರಣ, ಅವರನ್ನು ನೆನಸಿಕೊಳ್ಳಬೇಕು, ಮೈತ್ರಿ ಮಾಡಿಕೊಳ್ಳದಿದ್ದಲ್ಲಿ ಇವರೆಲ್ಲಿ ಇರುತ್ತಿದ್ದರು ಎಂದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಮಾಧುಸ್ವಾಮಿ, ಬೆಂಗಳೂರು ಮೈಸೂರು ದಶಪಥ ರಸ್ತೆ ಮಾಡಿದ್ದೇವೆ, ಎಕ್ಸ್​ಪ್ರೆಸ್ ವೇ ಗಳನ್ನು ಮಾಡಿದ್ದೇವೆ, ಇದೆಲ್ಲಾ ಡಬಲ್ ಇಂಜಿನ್ ಸರ್ಕಾರದ ಸಾಧನೆ. ರಸ್ತೆ ನಿರ್ಮಾಣಕ್ಕೆ ಆದ್ಯತೆ ಕೊಡಲಾಗಿದೆ. ಐದಾರು ವರ್ಷದಿಂದ ಆಗುತ್ತಿರುವ ಹೆದ್ದಾರಿ ಕಾಮಗಾರಿಗಳು ಈವರೆಗೂ ರಾಜ್ಯದಲ್ಲಿ ಎಂದೂ ಆಗಿಲ್ಲ. 64,512 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ, 148 ಕಿಲಿ ರೈಲ್ವೆ ಯೋಜನೆ, 9 ರೈಲ್ವೆ ಹೊಸ ಯೋಜನೆ ಮಾಡುತ್ತಿದ್ದೇವೆ. ಆರು ಹೊಸ ವಿಮಾನ ನಿಲ್ದಾಣ ಮಾಡುತ್ತಿದ್ದೇವೆ. ಸ್ವಚ್ಛ ಭಾರತ್ ಯೋಜನೆಗೆ ಯಥೇಚ್ಛವಾಗಿ ಅನುದಾನ ಕೊಟ್ಟಿದ್ದೇವೆ. ಪ್ರತಿ ಗ್ರಾಮಪಂಚಾಯತ್​ನಲ್ಲೂ ವಾಹನ ಕೊಡಲಾಗಿದೆ. ಬಂಡವಾಳ ಹೂಡಿಕೆ ಹರಿದುಬಂದಿದೆ.‌ 5,400 ಕೋಟಿ ಭದ್ರಾ ಮೇಲ್ದಂಡೆಗೆ ಬಂದಿದೆ. ಕಳಸಾ ಬಂಡಾರಿ ಯೋಜನೆಗೆ ಅನುಮತಿ ಸಿಕ್ಕಿರಲಿಲ್ಲ. ಅದೂ ಈಗ ಆಗಿದೆ ಇದು ಡಬ್ಬಲ್ ಇಂಜಿನ್ ಸರ್ಕಾರದ ಸಾಧನೆಯಲ್ಲದೆ ಇನ್ನೇನು ಎಂದರು.

ಇದನ್ನೂಓದಿ: ಬೆಳಗಾವಿಗೂ ಬರ್ತಾರೆ ಪ್ರಧಾನಿ ಮೋದಿ.. ರಾಜ್ಯಾದ್ಯಂತ ಬಿಜೆಪಿ ಪ್ರಗತಿ ರಥ ಯಾತ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.