ETV Bharat / state

ಬಿಸಿಯೂಟದ ಆಹಾರಧಾನ್ಯ ಅಸಮರ್ಪಕ ವಿತರಣೆ: ಗೋದಾಮಿನಲ್ಲೇ ಧಾನ್ಯಗಳು ಹಾಳಾಗುವ ಆತಂಕ

author img

By

Published : May 21, 2021, 7:27 AM IST

ಕೋವಿಡ್​ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಹಾಗಾಗಿ ಬಿಸಿಯೂಟವೂ ಇಲ್ಲ. ಈ ಬಿಸಿಯೂಟದ ಬದಲು ಆಹಾರಧಾನ್ಯವನ್ನು ವಿದ್ಯಾರ್ಥಿಗಳ ಮನೆಗಳಿಗೆ ವಿತರಿಸಲಾಗುತ್ತಿದೆ. ಆದ್ರೆ ಅಸಮರ್ಪಕ ವಿತರಣೆಯಿಂದ ಆಹಾರಧಾನ್ಯಗಳು ಮತ್ತೆ ಹಾಳಾಗುವ ಆತಂಕ ಎದುರಾಗಿದೆ.

lock down effects on midday meal food grains storage !
ವಿದ್ಯಾರ್ಥಿಗಳಿಗೆ ಬಿಸಿಯೂಟದ ಆಹಾರಧಾನ್ಯ ಅಸಮರ್ಪಕ ವಿತರಣೆ

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಪರಿಣಾಮ ಮತ್ತೆ ಶಾಲೆಗಳನ್ನು ಮುಚ್ಚಲಾಗಿದ್ದು ಮಕ್ಕಳಿಗೆ ‌ನೀಡಲಾಗುವ ಮಧ್ಯಾಹ್ನದ ಉಪಹಾರ ಯೋಜನೆಯೂ ಸ್ಥಗಿತಗೊಂಡಿದೆ. ಕಳೆದ ಬಾರಿಯ ಲಾಕ್‌ಡೌನ್​ನಿಂದ ರಾಜ್ಯದ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಬಿಸಿಯೂಟದ ಆಹಾರ ಪದಾರ್ಥಗಳು ಕೊಳೆತು ಹೋಗಿದ್ದವು. ಇದೀಗ ಮತ್ತೆ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಲಾಗಿದ್ದು, ಅಸಮರ್ಪಕ ವಿತರಣೆಯಿಂದ ಆಹಾರಧಾನ್ಯಗಳು ಹಾಳಾಗುವ ಆತಂಕವಿದೆ.

ಕಳೆದ ಬಾರಿಯ ಲಾಕ್‌ಡೌನ್​ನಿಂದೀಚೆಗೆ ಶಾಲೆಗಳಲ್ಲಿ ಬಿಸಿಯೂಟ ನೀಡಲಾಗುತ್ತಿಲ್ಲ. ಇದರ ಬದಲು ಆಹಾರಧಾನ್ಯವನ್ನು ವಿದ್ಯಾರ್ಥಿಗಳ ಮನೆಗಳಿಗೆ ವಿತರಿಸಲಾಗುತ್ತಿದೆ. ಎರಡನೇ ಲಾಕ್‌ಡೌನ್​ನಲ್ಲೂ ಅದೇ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ.

ರಾಜ್ಯ ಅಕ್ಷರದಾಸೋಹ ಸಂಘಟನೆ ಪ್ರಧಾನ ಕಾರ್ಯದರ್ಶಿ ಮಾಲಿನಿ‌ ಮೇಸ್ತ

ವಿತರಿಸುವ ಆಹಾರ ಧಾನ್ಯಗಳು:

ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಉಚಿತ ಅಕ್ಕಿ, ತೊಗರಿಬೇಳೆ, ತಾಳೆ ಎಣ್ಣೆಯನ್ನು ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರು ಅಥವಾ ಬಿಸಿಯೂಟ ಸಹಾಯಕರು ವಿತರಿಸುತ್ತಿದ್ದಾರೆ. 1-5 ನೇ ತರಗತಿ ವಿದ್ಯಾರ್ಥಿಗಳಿಗೆ ನಿತ್ಯ 100 ಗ್ರಾಂ ಅಕ್ಕಿ, 58 ಗ್ರಾಂ ತೊಗರಿ ಬೇಳೆ ವಿತರಿಸಲಾಗುತ್ತಿದ್ದರೆ, 6-10ನೇ ತರಗತಿ ವಿದ್ಯಾರ್ಥಿಗಳಿಗೆ 150 ಗ್ರಾಂ ಅಕ್ಕಿ, 87 ಗ್ರಾಂ ತೊಗರಿಬೇಳೆ ವಿತರಿಸಲಾಗುತ್ತಿದೆ.

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ಯೋಜನೆಯಡಿ ವಿತರಿಸಲು ವಿವಿಧ ತಾಲೂಕುಗಳಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಗೋದಾಮುಗಳಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲಾಗಿದೆ. ನಿಗಮವು ರಾಜ್ಯಾದ್ಯಂತ 67 ಉಗ್ರಾಣಗಳನ್ನು ಹೊಂದಿದೆ. ಕೆಲವು ಜಿಲ್ಲೆಗಳಲ್ಲಿ 37 ಪ್ರತ್ಯೇಕ ಉಗ್ರಾಣಗಳನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯ ಆಹಾರ ಸಾಮಗ್ರಿಗಳ ದಾಸ್ತಾನಿಗಾಗಿ ನಿರ್ವಹಿಸಲಾಗುತ್ತಿದೆ. 206 ಪಿಡಿಎಸ್ ಉಗ್ರಾಣಗಳಲ್ಲಿ ಕೆಲವು ಉಗ್ರಾಣಗಳನ್ನು ಜಂಟಿಯಾಗಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯ ಸರಕುಗಳ ವಹಿವಾಟು ನಡೆಸಲಾಗುತ್ತಿದೆ.

ಗೋದಾಮಿನಲ್ಲಿ ಸಂಗ್ರಹವಿರುವ ಆಹಾರ ಧಾನ್ಯ ಎಷ್ಟು?

ಕೆಎಫ್‌ಸಿಎಸ್‌ಸಿ ಗೋದಾಮಿನಲ್ಲಿ ಬಿಸಿಯೂಟದ ಬದಲಾಗಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಆಹಾರಧಾನ್ಯಗಳನ್ನು ಸಂಗ್ರಹಿಸಿಡಲಾಗಿದೆ. ಮಧ್ಯಾಹ್ನ ಉಪಹಾರ ಯೋಜನೆಯ ರಾಜ್ಯದ ಅಧಿಕಾರಿಗಳು, ಏಪ್ರಿಲ್ ಮತ್ತು ಮೇ ತಿಂಗಳಿಗೆ ಜಿಲ್ಲಾವಾರು ಅಗತ್ಯವಿರುವ ಆಹಾರಧಾನ್ಯಗಳ ಪಟ್ಟಿ ಕ್ರೋಢೀಕರಿಸಿ ‌ಧಾನ್ಯ ಪೂರೈಸುವಂತೆ ಕೆಎಫ್‌ಸಿಎಸ್‌ಸಿಗೆ ಸೂಚಿಸಿದ್ದರು. ಎಲ್ಲ ತಾಲೂಕುಗಳಲ್ಲಿರುವ ಗೋದಾಮುಗಳಿಗೆ ಕೆಎಫ್‌ಸಿಎಸ್‌ಸಿ ಧಾನ್ಯ ‍‍ಪೂರೈಸಿದೆ.

ಕೆಎಫ್​ಸಿಎಸ್​ಸಿ ನೀಡಿರುವ ಮಾಹಿತಿ ಪ್ರಕಾರ, ಸದ್ಯ ಗೋದಾಮುಗಳಲ್ಲಿ 2.21 ಲಕ್ಷ ಕ್ವಿಂಟಾಲ್ ಅಕ್ಕಿ, 2.39 ಲಕ್ಷ ಕ್ವಿಂಟಾಲ್ ತೊಗರಿಬೇಳೆ, 94 ಲಕ್ಷ ಲೀಟರ್ ಸೂರ್ಯಕಾಂತಿ ಎಣ್ಣೆ ಮತ್ತು 46 ಲಕ್ಷ ಕೆಜಿ ಉಪ್ಪನ್ನು ಬಿಸಿಯೂಟ ಯೋಜನೆಯಡಿ ವಿದ್ಯಾರ್ಥಿಗಳ ಮನೆಗಳಿಗೆ ಕಳುಹಿಸಿಕೊಡಲು ಸಂಗ್ರಹಿಸಿಡಲಾಗಿದೆ.

ಏಪ್ರಿಲ್ ಮತ್ತು ಮೇ ತಿಂಗಳ ಆಹಾರ ಧಾನ್ಯಗಳನ್ನು ಗೋದಾಮಿಗೆ ಇತ್ತೀಚೆಗಷ್ಟೇ ಪೂರೈಸಲಾಗಿದೆ. ನಮ್ಮ ಗೋದಾಮಿನಿಂದ ಶಿಕ್ಷಣ ಇಲಾಖೆ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡುತ್ತಿದ್ದು, ಅದನ್ನು ವಿದ್ಯಾರ್ಥಿಗಳ ಮನೆಗಳಿಗೆ ವಿತರಣೆ ಮಾಡುತ್ತಿದ್ದಾರೆ. ಈ ಬಾರಿ ಯಾವುದೇ ಆಹಾರಧಾನ್ಯಗಳು ಗೋದಾಮಿನಲ್ಲಿ ಹಾಳಾಗುತ್ತಿಲ್ಲ ಎಂದು ಕೆಎಫ್‌ಸಿಎಸ್‌ಸಿ ಎಂಡಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.

ಆಹಾರಧಾನ್ಯಗಳು ಉಗ್ರಾಣದಲ್ಲೇ ಹಾಳಾಗುವ ಆತಂಕ

ಈ ಬಾರಿಯೂ ಆಹಾರ ಧಾನ್ಯಗಳು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ವಿತರಿಸಲಾಗದೆ ಹಾಳಾಗುವ ಆತಂಕ ಎದುರಾಗಿದೆ. ಕಳೆದ ಬಾರಿ ಹೆಚ್ಚಿನ ಮಳೆ ಮತ್ತು ವಾತಾವರಣದಲ್ಲಿರುವ ತೇವಾಂಶದ ಪರಿಣಾಮ ಬಿಸಿಯೂಟಕ್ಕೆ ಎತ್ತುವಳಿ ಮಾಡಲಾಗಿದ್ದ ಆಹಾರ ಧಾನ್ಯಗಳು ವಿದ್ಯಾರ್ಥಿಗಳಿಗೆ ವಿತರಿಸದೆ ಹಾಳಾಗಿರುವ ಆರೋಪ ಕೇಳಿ ಬಂದಿತ್ತು.

ಕಳೆದ ಬಾರಿಯ ಲಾಕ್‌ಡೌನ್ ವೇಳೆ ಬಿಸಿಯೂಟ ಸ್ಥಗಿತವಾದ ಹಿನ್ನೆಲೆಯಲ್ಲಿ 43,258 ಟನ್‌ ಅಕ್ಕಿ, 1,716 ಟನ್‌ ಗೋಧಿ, 12,046 ಟನ್‌ ತೊಗರಿ ಬೇಳೆ, 16,786 ಲೀಟರ್‌ ಅಡುಗೆ ಎಣ್ಣೆ, 1,594 ಕಿಲೋ ಹಾಲಿನ ಪುಡಿ ದಾಸ್ತಾನು ಇಟ್ಟಿದ್ದ ಬಹುತೇಕ ಆಹಾರಧಾನ್ಯಗಳು ಬಳಸಲಾಗದಷ್ಟು ಹಾಳಾಗಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಬಾರಿಯೂ ಆಹಾರ ಧಾನ್ಯಗಳು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ವಿತರಿಸಲಾಗದೆ ಹಾಳಾಗುವ ಆತಂಕವನ್ನು ರಾಜ್ಯ ಅಕ್ಷರದಾಸೋಹ ಸಂಘಟನೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಶ್ರಮಿಕರಿಗೆ ಆರ್ಥಿಕ ಸಹಾಯ ‌ಕೋರಿ ಪ್ರಧಾನಿ, ಸಿಎಂ, ಸಚಿವರಿಗೆ ಡಿ.ಕೆ ಸುರೇಶ್ ಪತ್ರ

ಈ ಬಗ್ಗೆ ಮಾತನಾಡಿರುವ ಸಂಘಟನೆ ಪ್ರಧಾನ ಕಾರ್ಯದರ್ಶಿ ಮಾಲಿನಿ‌ ಮೇಸ್ತ, ಬಿಸಿಯೂಟ ನೌಕರರು ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ ಆಹಾರಧಾನ್ಯಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ವಿವಿಧ ಜಿಲ್ಲೆಗಳಲ್ಲಿ ಆಹಾರ ಧಾನ್ಯ ವಿತರಣೆ ವ್ಯತ್ಯಯ ಮಾಡಲಾಗುತ್ತಿದೆ.‌ ಕೆಲವೆಡೆ ಅಕ್ಕಿಯನ್ನು ಮಾತ್ರ ಕೊಟ್ಟರೆ, ಇನ್ನು ಕೆಲವೆಡೆ ತೊಗರಿಬೇಳೆಯನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಅಸಮರ್ಪಕ ವಿತರಣೆಯಿಂದ ವಿದ್ಯಾರ್ಥಿಗಳಿಗೆ ಕೊಡಮಾಡುವ ಆಹಾರ ಧಾನ್ಯ ಹಲವು ಉಗ್ರಾಣಗಳಲ್ಲಿ ಹಾಳಾಗುವ ಆತಂಕ ಎದುರಾಗಿದೆ. ಇತ್ತ ಸಿಬ್ಬಂದಿಗಳಿಗೆ ವೇತನವನ್ನೂ ನೀಡದೆ ಕೆಲಸ ಮಾಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.