ETV Bharat / state

ಕೆಆರ್​ಐಡಿಎಲ್​ ಮೂಲ ಉದ್ದೇಶ ಈಡೇರಿಸಲು ವಿಫಲ: ಸಿಎಜಿ ವರದಿಯಲ್ಲಿ ಬಹಿರಂಗ

author img

By

Published : Feb 23, 2023, 6:05 PM IST

ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ಅವರು ಸಿಎಜಿ ವರದಿಯನ್ನು ಮಂಡಿಸಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ ಸಾಧಿಸಿರುವ ಕುರಿತು ವರದಿ ಮಾಹಿತಿ ಬಹಿರಂಗಗೊಳಿಸಿದೆ.

Higher Education Minister Dr CN Aswatthanarayan
ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವತ್ಥನಾರಾಯಣ

ಬೆಂಗಳೂರು: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್​ಡಿಬಿ) ಅಸ್ತಿತ್ವಕ್ಕೆ (2019) ಬಂದ ನಂತರ ಮೊದಲ ಬಾರಿಗೆ ಭಾರತೀಯ ಮಹಾಲೆಕ್ಕಪರಿಶೋಧಕರ ವರದಿ ಪ್ರಕಟವಾಗಿದೆ. ಮುಖ್ಯಮಂತ್ರಿಗಳ ಪರವಾಗಿ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವತ್ಥನಾರಾಯಣ ಅವರು ವರದಿಯನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಪ್ರದೇಶಗಳು ಇನ್ನೂ ಹಿಂದುಳಿದ ಹಾಗೆಯೇ ಇವೆ ಎಂಬುದನ್ನು ವರದಿ ಗುರುತಿಸಿದೆ. ಡಾ. ನಂಜುಂಡಪ್ಪ ವರದಿಯನ್ನು ಮಾನದಂಡಗಳಲ್ಲಿ ಪ್ರಮುಖವಾಗಿ ಇಟ್ಟುಕೊಂಡು ಮಂಡಳಿಯ ಲೆಕ್ಕಪರಿಶೋಧನೆ ನಡೆದಿದೆ. ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯನ್ನು ಇದು ಹೊಂದಿತ್ತು. ನೀತಿ ಆಯೋಗದ ಸೂಚ್ಯಂಕಗಳು, ಬಹು ಆಯಾಮದ ಬಡತನ ಸೂಚ್ಯಂಕಗಳು ಇತ್ಯಾದಿ ವಿವಿಧ ಅಭಿವೃದ್ಧಿ ಸೂಚ್ಯಂಕಗಳ ವಿಷಯದಲ್ಲಿ ಗಮನಿಸಿದಾಗ ಪ್ರದೇಶದ ಹಿಂದುಳಿದಿರುವಿಕೆ ಮೊದಲಿನಂತೆಯೇ ಇದೆ ಎಂದು ವರದಿ ಹೇಳಿದೆ.

ಸಂವಿಧಾನದ 371-ಜೆ ವಿಧಿಯ ಅನ್ವಯ ವಿಶೇಷ ಸ್ಥಾನಮಾನಗಳನ್ನು ಒದಗಿಸಿ ಮಂಡಳಿ ಸ್ಥಾಪನೆಯಾದ ನಂತರವೂ ರಾಜ್ಯದ ಉಳಿದ ಭಾಗಗಳಿಗೆ ಹೋಲಿಸಿದರೆ ಇಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಸೂಚ್ಯಂಕಗಳು ಕೆಳಮಟ್ಟದಲ್ಲೇ ಉಳಿದಿವೆ. ನೀತಿ ಆಯೋಗ, ಡಾ.ನಂಜುಂಡಪ್ಪ ವರದಿ ಸೇರಿದಂತೆ ವಿವಿಧ ತಜ್ಞರ ವರದಿಗಳು ಗುರುತಿಸಿದ ಮಾಹಿತಿಯನ್ನು (ದತ್ತಾಂಶಗಳು) ಈ ಮಂಡಳಿ ಇಟ್ಟುಕೊಂಡೇ ಇಲ್ಲ ಎಂಬ ಮಹತ್ವದ ಅಂಶ ವರದಿಯಿಂದ ಬೆಳಕಿಗೆ ಬಂದಿದೆ. ಇದರಿಂದ ಪ್ರದೇಶದ ಅಭಿವೃದ್ಧಿಗೆ ಅಗತ್ಯವಾದ ದತ್ತಾಂಶಗಳ ಕೊರತೆ ಎದುರಾಗಿ ಮಂಡಳಿಯ ಉದ್ದೇಶ ಹಿನ್ನೆಡೆ ಕಂಡಿದೆ ಎಂಬುದನ್ನು ವರದಿಯಲ್ಲಿ ಪರೋಕ್ಷವಾಗಿ ತಿಳಿಸಲಾಗಿದೆ.

ರಾಜ್ಯದ ಉಳಿದೆಡೆ ವಾರ್ಷಿಕ ತಲಾ ಆದಾಯದ ಪ್ರಮಾಣ 2013ರಿಂದ 2020ರ ಅವಧಿಯಲ್ಲಿ ಶೇಕಡಾ 74ರಷ್ಟು ಹೆಚ್ಚಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದು ಕೇವಲ ಶೇಕಡಾ 63.64ರಷ್ಟು ಮಾತ್ರ. ಅದರಲ್ಲೂ ಕಲ್ಯಾಣ ಕರ್ನಾಟಕದ ರಾಜಧಾನಿ ಎಂದೇ ಕರೆಯಬಹುದಾದ ಮಹಾನಗರ ಕಲಬುರಗಿಯ ವಾರ್ಷಿಕ ತಲಾ ಆದಾಯ, ಕಲ್ಯಾಣ ಭಾಗದ ಉಳಿದ ಜಿಲ್ಲೆಗಳಿಗಿಂತ ಅತೀ ಕಡಿಮೆ (ಶೇ 47.96). ಕಲ್ಯಾಣ ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣವೂ ರಾಜ್ಯದ ಉಳಿದ ಭಾಗಗಳಿಗಿಂತ ಹೆಚ್ಚಾಗಿದೆ. ರಾಜ್ಯದ ಉಳಿದೆಲ್ಲ ಭಾಗಗಳಲ್ಲಿ ಶಿಶು ಮರಣ ಪ್ರಮಾಣ ಶೇ. 11 ರಷ್ಟಿದ್ದರೆ, ಈ ಭಾಗವೊಂದರಲ್ಲೇ ಶೇ. 12ರಷ್ಟಿರುವ ಗಂಭೀರ ಸಂಗತಿಯನ್ನು ವರದಿ ತಿಳಿಸಿದೆ.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್ಐಡಿಎಲ್) ತನ್ನ ಮೂಲೋದ್ದೇಶಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂಬ ಗಂಭೀರ ಲೋಪವನ್ನು ಭಾರತೀಯ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಮೀಣ ಮೂಲಸೌಕರ್ಯ ಹಾಗೂ ಗ್ರಾಮಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸಂಸ್ಥೆಯ ಉದ್ದೇಶಗಳಲ್ಲಿ ದಕ್ಷತೆ ವಿಷಯವನ್ನು ಪ್ರಧಾನ ಆಧಾರವಾಗಿಟ್ಟುಕೊಂಡು ಈ ಲೆಕ್ಕಪರಿಶೋಧನೆ ನಡೆದಿದೆ. ಕೆಆರ್​ಐಡಿಎಲ್ ವತಿಯಿಂದ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಪೈಕಿ ಶೇ. 28ರಷ್ಟನ್ನು ಮಾತ್ರ ಪೂರ್ಣಗೊಳಿಸಲಾಗಿದೆ.
ಈ ಸಂಸ್ಥೆಗೆ 84,574 ಕಾಮಗಾರಿಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿತ್ತು. ಈ ಪೈಕಿ ಕೇವಲ 24,014 ಕಾಮಗಾರಿಗಳನ್ನು ಮಾತ್ರ ಸಂಸ್ಥೆ ಪೂರೈಸಿತು.

ಅನುದಾನದ ಲಭ್ಯತೆ ಇತ್ತು. ಆದರೆ ಗ್ರಾಮಾಂತರ ಭಾಗಕ್ಕೆ ಅನುಕೂಲವಾಗಲು ಕೈಗೆತ್ತಿಕೊಳ್ಳಬೇಕಾಗಿದ್ದ ಕಾಮಗಾರಿಗಳನ್ನು ಆರಂಭಿಸುವುದಕ್ಕೇ ಎರಡು ವರ್ಷಗಳವರೆಗೆ ವಿಳಂಬ ಮಾಡಲಾಯಿತು. ಇದಲ್ಲದೇ ತಾನು ವಹಿಸಿಕೊಂಡಿರುವ ಕಾಮಗಾರಿಗಳನ್ನು ಹಾಗೂ ಲಭ್ಯ ಸಂಪನ್ಮೂಲಗಳನ್ನು ವಿಶ್ಲೇಷಣೆ ಮಾಡುವ ಕಾರ್ಯವಿಧಾನವನ್ನೇ ಈ ಮಹತ್ವದ ಸಂಸ್ಥೆ ಹೊಂದಿಲ್ಲ ಎಂಬುದಾಗಿ ವರದಿ ಹೇಳಿದೆ.

352.88 ಕೋಟಿ ರೂ.ನಿಂದ 1,679 ಕೋಟಿಯ ನಡುವೆ ಸಂಸ್ಥೆ ಹಣವನ್ನು ಪಡೆದುಕೊಳ್ಳುವ ಅವಕಾಶ ಇತ್ತು. ಆದರೆ ಮಿತಿ ಮೀರಿ (2604ರಿಂದ 4610.35 ಕೋಟಿವರೆಗೆ) ಸರ್ಕಾರದಿಂದ ಈ ಸಂಸ್ಥೆ ಹಣವನ್ನು ತೆಗೆದುಕೊಂಡಿತು. ಪಡೆದುಕೊಂಡ ಈ ಹಣದ ಪ್ರಮಾಣದಲ್ಲಿ ಕೆಲಸಗಳನ್ನು ನಡೆಸಲಿಲ್ಲ. ಪರಿಣಾಮವಾಗಿ ಕೆಆರ್​ಐಡಿಎಲ್​ನಲ್ಲಿ 2021ರ ಅಂತ್ಯಕ್ಕೆ 17,320 ಕೋಟಿ ರೂಪಾಯಿ ಸಂಗ್ರಹವಾಯಿತು. ಸಕಾಲಕ್ಕೆ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿನ ಅಸಮರ್ಥತೆಯು ಇದಕ್ಕೆ ಕಾರಣ ಎಂದು ಸಿಎಜಿ ವರದಿ ಗಂಭೀರ ಲೋಪವನ್ನು ಬಹಿರಂಗ ಮಾಡಿದೆ.

ಹಣ ಬಿಡುಗಡೆಗೆ ಮುನ್ನವೇ ವೆಚ್ಚ ಮಾಡಿರುವುದು ಮತ್ತು ಅಂದಾಜು ವೆಚ್ಚಕ್ಕಿಂತ ಅಧಿಕ ವೆಚ್ಚ ಮಾಡಿರುವುದನ್ನೂ ಸಂಚಿತವಾಗಿ ಗಮನಿಸಿ ಲೆಕ್ಕಪರಿಶೋಧನೆಗೆ ಒಳಪಡಿಸಲಾಗಿದೆ. ಇದರಿಂದ ಕೆಆರ್​ಐಡಿಎಲ್​ನ ದಕ್ಷತಾ ಸೂಚ್ಯಂಕ ಹಿನ್ನಡೆ ಕಂಡಿರುವುದು ಬೆಳಕಿಗೆ ಬಂದಿದೆ. ಕಾಮಗಾರಿಗಳನ್ನು ಕಾರ್ಯಗತಗೊಳಿಸುವಲ್ಲಿ ಲೋಪಗಳಾಗಿವೆ. ಪೂರ್ಣಗೊಂಡ ಕಾಮಗಾರಿಗಳ ಬಗ್ಗೆ ವರದಿಗಳನ್ನು ನೀಡಿಲ್ಲ. ಹೆಚ್ಚುವರಿ ವೆಚ್ಚಗಳನ್ನು ಮಾಡಲಾಗಿದೆ. ಅಂತಿಮ ಬಿಲ್​ಗಳನ್ನು ಸಲ್ಲಿಸಿಲ್ಲ ಹಾಗೂ ಕಾಮಗಾರಿಯನ್ನು ಇತ್ಯರ್ಥ ಮಾಡಿಲ್ಲ. ಇವೆಲ್ಲ ಈ ಸಂಸ್ಥೆಯಲ್ಲಿ ಮೇಲ್ವಿಚಾರಣೆ ಅತ್ಯಂತ ಕಳಪೆಯಾಗಿರುವುದನ್ನು ತೋರಿಸುತ್ತದೆ ಎಂದಿದೆ.

ಇವನ್ನೆಲ್ಲ ಸಂಸ್ಥೆ ಸರಿಪಡಿಸಿಕೊಂಡು ಕಾಮಗಾರಿಗಳನ್ನು ಏಕೆ- ಯಾರಿಗೆ ವಹಿಸಲಾಗಿದೆ ಎಂಬುದರ ಬಗ್ಗೆ ಸಮರ್ಥನೆ ನೀಡುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಬೇಕು. ಈ ಸಂಸ್ಥೆಯ ಹೊಣೆಗಾರಿಕೆಯ ಬಗ್ಗೆ ಸರ್ಕಾರ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಮೂರು ಹಂತದ ಗುಣಮಟ್ಟ ನಿರ್ವಹಣೆಯ ವ್ಯವಸ್ಥೆಯನ್ನು ಈ ಸಂಸ್ಥೆಯಲ್ಲಿ ಜಾರಿಗೆ ತರಬೇಕು. ಸಂಸ್ಥೆಯ ಗುಣಮಟ್ಟ ನಿರ್ವಹಣಾ ವಿಭಾಗ ನಿಷ್ಕ್ರಿಯವಾಗಿದ್ದು, ಇದನ್ನು ಪುನರುಜ್ಜೀವನಗೊಳಿಸಬೇಕು. ಲಭ್ಯ ಇರುವ ಮಾನವ ಶಕ್ತಿಯ ಆಧಾರದ ಮೇಲೆ ಕಾಮಗಾರಿಗಳನ್ನು ಒಪ್ಪಿಕೊಳ್ಳುವಂತೆ ಈ ಸಂಸ್ಥೆಗೆ ಸೂಚನೆ ನೀಡಬೇಕು ಎಂದು ಸಿಎಜಿ ಶಿಫಾರಸು ಮಾಡಿದೆ.

ಇದನ್ನೂ ಓದಿ: ನಷ್ಟದಲ್ಲಿ ಸಾರಿಗೆ ನಿಗಮಗಳು, ಬಿಡಿಎಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟ: ಸಿಎಜಿ ವರದಿಯಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.