ETV Bharat / state

ನಂದಿನಿ ಹಾಲಿನ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದ್ದು ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ: ಕೆಎಂಎಫ್ ಸ್ಪಷ್ಟನೆ

author img

By

Published : Apr 9, 2023, 6:51 AM IST

ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಬಗ್ಗೆ ಹರಿದಾಡುತ್ತಿರುವ ಕೆಲವು ವದಂತಿಗಳ ಬಗ್ಗೆ ಸಂಸ್ಥೆ ಸ್ಪಷ್ಟೀಕರಣ ನೀಡಿದೆ.

nandini milk
ನಂದಿನಿ ಹಾಲು

ಬೆಂಗಳೂರು: ರಾಜ್ಯದಲ್ಲಿ ಸದ್ಯ ಅಮುಲ್ ಮತ್ತು ನಂದಿನಿ ಹಾಲಿನ ವಿಚಾರ ಸದ್ದು ಮಾಡುತ್ತಿದೆ. ಈ ಕುರಿತಂತೆ ರಾಜಕೀಯವಾಗಿ ರಾಜ್ಯದ ಅಸ್ಮಿತೆಯ ಬಗ್ಗೆ ರೈತರು, ಸಾಹಿತಿಗಳು ಸೇರಿದಂತೆ ನಾಡಿನ ಜನರು ಮಾತನಾಡುತ್ತಿದ್ದಾರೆ. ಇದಕ್ಕೆ ಕೆಎಮ್ಎಫ್​ ಎಂಡಿ ಸ್ಪಷ್ಟನೆ ನೀಡಿದ್ದಾರೆ.

ಕೆಎಂಎಫ್ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಗ್ರಾಹಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆಯ ಎಂಡಿ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟವು ದೇಶದ 2ನೇ ಅತೀ ದೊಡ್ಡ ಸಹಕಾರ ಹಾಲು ಮಹಾಮಂಡಳ ಸಂಸ್ಥೆಯಾಗಿದೆ. 26 ಲಕ್ಷ ಗ್ರಾಮೀಣ ರೈತರಿಂದ ದಿನಂಪ್ರತಿ ಸರಾಸರಿ 85 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಿ, ಸುಮಾರು 150ಕ್ಕೂ ಹೆಚ್ಚು ವಿವಿಧ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಾಜ್ಯದ ಜನತೆಗೆ ಕಳೆದ 4 ದಶಕಗಳಿಂದ ಒದಗಿಸುತ್ತಿದೆ. ಹಾಲಿನ ಶೇಖರಣೆಯನ್ನು ಮುಂದಿನ ದಿನಗಳಲ್ಲಿ ಪ್ರತಿನಿತ್ಯ 1 ಕೋಟಿಗೂ ಅಧಿಕ ಲೀಟರ್ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಹಾಲಿನ ಸರಾಸರಿ ಶೇಖರಣೆ ಶೇ.6 ರಿಂದ 7ರಷ್ಟು ಪ್ರಗತಿಯಾಗಿದೆ. ಮಾರಾಟ ಶೇ.25 ರಷ್ಟು ಪ್ರಗತಿಯನ್ನು ಸಾಧಿಸುತ್ತಾ, ದೇಶದ ವಿವಿಧ ರಾಜ್ಯಗಳಲ್ಲಿ ಹೊರ ರಾಜ್ಯಗಳಲ್ಲೂ ತನ್ನ ಮಾರಾಟ ಜಾಲವನ್ನು ವಿಸ್ತರಿಸುತ್ತಾ ಗ್ರಾಹಕರ ಆಯ್ಕೆಯ ನೆಚ್ಚಿನ ಬ್ರ್ಯಾಂಡ್ ಆಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಬಗ್ಗೆ ಕೆಲವು ವದಂತಿಗಳು ಹರಿದಾಡುತ್ತಿದ್ದು, ಕರ್ನಾಟಕ ಹಾಲು ಉತ್ಪಾದನಾ ಮಹಾಮಂಡಳವನ್ನು ಮತ್ತೊಂದು ದೊಡ್ಡ ಸಹಕಾರಿ ಸಂಸ್ಥೆಯೊಂದಿಗೆ ವಿಲೀನ ಮಾಡಲಾಗುತ್ತದೆ. ನಂದಿನಿ ಬ್ರ್ಯಾಂಡ್ ಅನ್ನು ಮತ್ತೊಂದು ಸಹಕಾರಿ ಸಂಸ್ಥೆಗೆ ಮಾರಾಟ ಮಾಡಲಾಗುತ್ತಿದೆ. ನಂದಿಸಿ ಬ್ರ್ಯಾಂಡ್ ಹಾಲು ಇನ್ನು ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ ಅನ್ನೋ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಇದೆಲ್ಲವೂ ಸತ್ಯಕ್ಕೆ ದೂರವಾಗಿದೆ. ಅಂತಹ ಯಾವುದೇ ಬೆಳವಣಿಗೆಗಳು ಕೆಎಂಎಫ್‌ನಲ್ಲಿ ನಡೆದಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಅಮುಲ್ ರಾಜ್ಯ ಪ್ರವೇಶ: ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಲೆ.. ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕರು ಹೇಳುವುದೇನು?

ಕೆಎಂಎಫ್ ಹೆಚ್ಚುವರಿಯಾಗಿ ಹಾಲು ಉತ್ಪಾದನೆ ಮಾಡುವುದಕ್ಕಾಗಲಿ, ವ್ಯಾಪಾರ ವೃದ್ಧಿಗೋಸ್ಕರವಾಗಲಿ ದೇಶದ ಯಾವುದೇ ಸಹಕಾರ ಸಂಸ್ಥೆ ಅಥವಾ ಹಾಲು ಉತ್ಪಾದನಾ ಮಹಾಮಂಡಳದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದಿಲ್ಲ. ಗುಣಮಟ್ಟ ಮತ್ತು ಸ್ವರ್ಧಾತ್ಮಕ ಬೆಲೆಯ ಮೂಲಕವೇ ಮನೆ ಮಾತಾಗಿರೋ ನಂದಿಸಿ ಹಾಲು ಇತರೆ ಹಾಲಿನ ಬ್ರ್ಯಾಂಡ್​ಗಳಿಗೆ ಪೈಪೋಟಿ ನೀಡುತ್ತಾ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಇತ್ತೀಚಿನ ವರ್ಷಗಳು ದೇಶದ ಅನೇಕ ನಗರಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಾಗುತ್ತಿವೆ. ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರ, ವಿದರ್ಭ ಪ್ರಾಂತ್ಯ (ನಾಗಪುರ), ತೆಲಂಗಾಣದ ಹೈದರಾಬಾದ್, ತಮಿಳುನಾಡಿನ ಚೆನ್ನೈ, ಕೇರಳ ಮತ್ತು ಗೋವಾದಲ್ಲಿ ಪ್ರತಿನಿತ್ಯ 7 ಲಕ್ಷಕ್ಕೂ ಅಧಿಕ ಲೀಟರ್ ಹಾಲು ಮತ್ತು ಮೊಸರನ್ನು ಸ್ಥಳೀಯವಾಗಿ ಅಲ್ಲಿನ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಎಂ ಡಿ ತಿಳಿಸಿದ್ದಾರೆ.

ನಂದಿನಿ ಬ್ರ್ಯಾಂಡ್​ ಅನ್ನು ದೇಶ ವ್ಯಾಪ್ತಿಯಲ್ಲಿ ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಕೆಎಂಎಫ್ ಮಾರುಕಟ್ಟೆ ವಿಸ್ತೀರ್ಣದ ಬಗ್ಗೆ ಹಲವಾರು ಯೋಜನೆಯನ್ನು ಹಮ್ಮಿಕೊಂಡಿದೆ. 26 ಲಕ್ಷ ಹೈನುಗಾರ ರೈತರ ಶ್ರಮ, 2 ಲಕ್ಷಕ್ಕೂ ಅಧಿಕ ಕಾರ್ಮಿಕರ ದುಡಿಮೆ, ಆರು ಕೋಟಿಗೂ ಅಧಿಕ ಗ್ರಾಹಕರ ಹಾರೈಕೆಯಿಂದ ಸಂಸ್ಥೆ ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರೋ ಹಾಲು ಉತ್ಪಾದನಾ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇಂತಹ ಸಂಸ್ಥೆಯ ಬಗ್ಗೆ ಸದ್ಯ ಹರಿದಾಡುತ್ತಿರೋ ಸುದ್ದಿಗಳು ಸುಳ್ಳಾಗಿದ್ದು, ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ. ಗ್ರಾಹಕರು ಎಂದಿನಂತೆ 'ನಂದಿನಿ' ಬ್ರ್ಯಾಂಡ್​ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೊಂಡು ಪ್ರೋತ್ಸಾಹಿಸುವಂತೆ ಅವರು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.