ETV Bharat / state

ಹೈವೋಲ್ಟೇಜ್ ಬಹಿರಂಗ ಪ್ರಚಾರ ಇಂದೇ ಕೊನೆ, 3 ದಿನ ಮದ್ಯ ಮಾರಾಟ ನಿಷೇಧ

author img

By

Published : May 8, 2023, 10:15 AM IST

Updated : May 8, 2023, 1:42 PM IST

ಮೇ 10 ರಂದು ನಡೆಯಲಿರುವ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆ ಬೀಳಲಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಕ್ಷೇತ್ರದ ಮತದಾರರಲ್ಲದವರು ಆ ಕ್ಷೇತ್ರದಲ್ಲಿ ಉಳಿಯುವಂತಿಲ್ಲ.

Karnataka polls
ಕರ್ನಾಟಕ ಚುನಾವಣೆ

ರಾಜ್ಯ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ, ರೋಡ್‌ ಶೋ ಹಾಗೂ ಸಮಾವೇಶಗಳ ಮೂಲಕ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈ ನಡುವೆ ಹೈವೋಲ್ಟೇಜ್ ಮತಪ್ರಚಾರ ಇಂದು ಅಂತ್ಯಗೊಳ್ಳಲಿದೆ. ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಕೊನೆಯ ಹಂತದ ಕಸರತ್ತಿನಲ್ಲಿ ನಿರತವಾಗಿವೆ.

ಮತದಾನ ಮುಕ್ತಾಯದ 48 ಗಂಟೆಗೂ ಮುನ್ನ ಬಹಿರಂಗ ಪ್ರಚಾರ ಮುಗಿಯಲಿದೆ. ಅದರಂತೆ ಇಂದು(ಸೋಮವಾರ) ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತದೆ. ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಯಾವುದೇ ಅಭ್ಯರ್ಥಿ ಧ್ವನಿವರ್ಧಕ ಬಳಸಿ, ಸಮಾವೇಶ, ರೋಡ್ ಶೋಗಳ ಮೂಲಕ ಮತ ಯಾಚಿಸುವಂತಿಲ್ಲ. ಆದರೆ, ಮನೆ ಮನೆಗೆ ತೆರಳಿ ಮಂಗಳವಾರ ಸಂಜೆಯವರೆಗೂ ಮತ ಕೇಳಬಹುದು.

ಮದ್ಯ ಮಾರಾಟ ನಿಷೇಧ : ಇಂದು ಮಧ್ಯರಾತ್ರಿಯಿಂದ ಮೇ 10ರ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮೇ 10ರಂದು ಮತದಾನ ನಡೆಯಲಿದೆ. ಹೀಗಾಗಿ ಒಂದು ದಿನ ಮುಂಚೆಯೇ ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ ಮಾಡಲಾಗುತ್ತದೆ. ಮೇ 13ರಂದು ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟ ಮಾಡುವಂತಿಲ್ಲ. ಯಾವುದೇ ಮದ್ಯದಂಗಡಿಗಳು, ಮದ್ಯ ಮಾರಾಟ ಮಾಡುವ ಹೋಟೆಲ್‌ಗಳು, ಪಂಚತಾರಾ ಹೋಟೆಲ್‌ಗಳು ಸೇರಿದಂತೆ ಎಲ್ಲಿಯೂ ಮದ್ಯ ಮಾರಾಟ ಮಾಡುವಂತಿಲ್ಲ. ಪೊಲೀಸರು ಸಂಬಂಧಪಟ್ಟ ಕ್ಷೇತ್ರದಲ್ಲಿ ಸಂಚಾರ ಮಾಡಿ ಮದ್ಯದಂಗಡಿಗಳನ್ನು ಮುಚ್ಚಿಸಲಿದ್ದಾರೆ.

'ಸಂಪೂರ್ಣ ಬಹುಮತದೊಂದಿಗೆ ಸರ್ಕಾರ': ಆಡಳಿತಾರೂಢ ಬಿಜೆಪಿ 38 ವರ್ಷಗಳ ಪರ್ಯಾಯ ಸರ್ಕಾರಗಳ ಮಾದರಿಯನ್ನು ಮುರಿದು ತನ್ನ ದಕ್ಷಿಣ ಕೋಟೆಯನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದೆ. ಇತ್ತ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಶ್ರಮಿಸುತ್ತಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ತನ್ನೆಲ್ಲ ಶಕ್ತಿಯನ್ನು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು,"ಕಿಂಗ್" ಆಗಿ ಹೊರಹೊಮ್ಮಲು ಬಯಸುತ್ತಿದೆ. ರಾಜ್ಯದಲ್ಲಿ 224 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯ ಪ್ರಚಾರದ ವೇಳೆ 'ಸಂಪೂರ್ಣ ಬಹುಮತದೊಂದಿಗೆ ಸರ್ಕಾರ' ಎಂಬುದು ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ನೆಚ್ಚಿನ ಘೋಷಣೆಯಾಗಿತ್ತು.

ಬಿಜೆಪಿಯ ಪ್ರಚಾರವು ಪ್ರಧಾನಮಂತ್ರಿ ನರೇಂದ್ರ ಮೋದಿ, 'ಡಬಲ್ ಇಂಜಿನ್' ಸರ್ಕಾರ, ರಾಷ್ಟ್ರೀಯ ಸಮಸ್ಯೆಗಳು ಮತ್ತು ಕಾರ್ಯಕ್ರಮಗಳು, ಕೇಂದ್ರ ಸರ್ಕಾರದ ಸಾಧನೆಗಳ ಮೇಲೆ ಕೇಂದ್ರೀಕರಿಸಿದೆ. ಕಾಂಗ್ರೆಸ್ ಆರಂಭದಲ್ಲಿ ಸ್ಥಳೀಯ ಸಮಸ್ಯೆಗಳ ಮೇಲೆ ಪ್ರಚಾರ ಕೇಂದ್ರೀಕರಿಸಿತ್ತು. ನಂತರ ಪ್ರಚಾರಕ್ಕೆ ಕೇಂದ್ರ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿಕೊಂಡರು. ಜೆಡಿಎಸ್​ ಕೂಡ ಹೆಚ್ಚು ಸ್ಥಳೀಯ ಪ್ರಚಾರವನ್ನು ನಡೆಸಿತು. ನಾಯಕ ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮೂಲಕ ಜನಮನ ತಲುಪಲು ಯತ್ನಿಸಿದರು. ಅವರಿಗೆ ದೇವೇಗೌಡರು ಸಾಥ್​​ ನೀಡಿದ್ದರು.

ಬಿಜೆಪಿ ಪ್ರಚಾರದ ವಿವರ: ಏಪ್ರಿಲ್ 29 ರಿಂದ ಕಳೆದ ಒಂದು ವಾರದಲ್ಲಿ ಪ್ರಧಾನಿ ಮೋದಿ 18 ಮೆಗಾ ಸಾರ್ವಜನಿಕ ಸಭೆಗಳು ಮತ್ತು ಆರು ರೋಡ್ ಶೋ ನಡೆಸಿದ್ದಾರೆ. 'ಬಹುಮತದ ಬಿಜೆಪಿ ಸರ್ಕಾರ' ಎಂಬ ಚುನಾವಣಾ ಘೋಷ ವಾಕ್ಯದೊಂದಿಗೆ ಪಿಎಂ ರಾಜ್ಯಾದ್ಯಂತ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು. ಚುನಾವಣೆ ಘೋಷಣೆಗೆ ಮೊದಲು ಮೋದಿ ಹಲವಾರು ಯೋಜನೆಗಳನ್ನು ಅನಾವರಣಗೊಳಿಸಲು ಜನವರಿಯಿಂದ 7 ಏಳು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಹಲವಾರು ಸಭೆಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದರು.

ಬಿಜೆಪಿ ನಾಯಕರ ಪ್ರಕಾರ "ರಾಜ್ಯಾದ್ಯಂತ ಮೋದಿ ಅವರ ಪ್ರಚಾರವು ಮತದಾರರಲ್ಲಿ ಪಕ್ಷದ ನೈತಿಕತೆ ಮತ್ತು ವಿಶ್ವಾಸವನ್ನು ಹೆಚ್ಚಿಸಿದೆ. ಇದು ಮತಗಳಾಗಿ ಪರಿವರ್ತನೆಯಾಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ರಾಜ್ಯಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡು ಚುನಾವಣಾ ಪ್ರಚಾರ ಮತ್ತು ಕಾರ್ಯತಂತ್ರ ರೂಪಿಸಿದ್ದಾರೆ. "ಚುನಾವಣೆಯ ಪೂರ್ವದಲ್ಲಿ ಪಿಎಂ ಮತ್ತು ಶಾ ಕಾಂಗ್ರೆಸ್ ಅನ್ನು ಹಿಮ್ಮೆಟ್ಟಿಸಿದ್ದಾರೆ" ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

150 ಸ್ಥಾನ ಗೆಲ್ಲುವ ಗುರಿ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಾದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್, ಗೋವಾದ ಪ್ರಮೋದ್ ಸಾವಂತ್ ಹಾಗೂ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಸ್.ಜೈಶಂಕರ್, ಸ್ಮೃತಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ರಾಜ್ಯದ ವಿವಿಧೆಡೆ ಪ್ರಚಾರ ನಡೆಸಿದ್ದಾರೆ. 2008 ಮತ್ತು 2018ರಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಶ್ರಮಿಸಿದ ಬಿಜೆಪಿ ಈ ಬಾರಿ ಪೂರ್ಣ ಬಹುಮತದೊಂದಿಗೆ ಸ್ಪಷ್ಟ ಜನಾದೇಶದ ನಿರೀಕ್ಷೆಯಲ್ಲಿದೆ. ಕನಿಷ್ಠ 150 ಸ್ಥಾನ ಗೆಲ್ಲುವ ಗುರಿ ಹೊಂದಿದೆ.

ಅಬ್ಬರದ ಪ್ರಚಾರದಲ್ಲಿ ಕಾಂಗ್ರೆಸ್​: ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವುದೇ ಕಾಂಗ್ರೆಸ್​​ನ ಮುಖ್ಯಗುರಿಯಾಗಿದೆ. 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರುದ್ಧದ ಪ್ರಮುಖ ಪ್ರತಿಪಕ್ಷವಾಗಿ ತನ್ನ ರುಜುವಾತು ಬಲಪಡಿಸಲು ಈ ಚುನಾವಣೆ ಕೀಲಿಯಾಗಿದೆ. ಕರ್ನಾಟಕವನ್ನು ಗೆಲ್ಲುವ ಮೂಲಕ, ಹಿಂದಿಯ ಹೃದಯಭಾಗವಾದ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿ ಈ ವರ್ಷದ ಕೊನೆಯಲ್ಲಿ ಬಿಜೆಪಿ ವಿರುದ್ಧ ಸಮರ ಸಾರಲು ಯತ್ನಿಸುತ್ತಿದೆ. ಇದರತ್ತ ಗಮನ ಹರಿಸಿರುವ ಪಕ್ಷ ಈ ಬಾರಿ ಅಬ್ಬರದ ಪ್ರಚಾರದಲ್ಲಿ ತೊಡಗಿದೆ.

ಪ್ರಚಾರಕ್ಕೆ ವೇಗ ನೀಡಿದ ಖರ್ಗೆ: ಆರಂಭದಲ್ಲಿ ರಾಜ್ಯ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಸುತ್ತ ಪ್ರಚಾರ ಕೇಂದ್ರಿತವಾಗಿದ್ದರೂ, ನಂತರ ಖರ್ಗೆ ಅದಕ್ಕೆ ವೇಗವನ್ನು ನೀಡಿದರು. ಬಳಿಕ ಪಕ್ಷದ ಉನ್ನತ ನಾಯಕರಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಸೇರ್ಪಡೆಗೊಂಡರು. ಸಹೋದರ-ಸಹೋದರಿ ಜೋಡಿಯು ರಾಜ್ಯಾದ್ಯಂತ ವ್ಯಾಪಕವಾಗಿ ಸಂಚರಿಸಿ, ಬಿಜೆಪಿಯ ಪ್ರಚಾರ ಯಂತ್ರಕ್ಕೆ ಸವಾಲು ಹಾಕಿತು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಟುವಾಗಿ ಟೀಕಿಸಿದರು. ಪ್ರಚಾರದ ಅಂತಿಮ ದಿನಗಳಲ್ಲಿ, ಅವರ ತಾಯಿ ಮತ್ತು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ಹುಬ್ಬಳ್ಳಿಯಲ್ಲಿ ಪಕ್ಷದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. 'ಕಲಬುರಗಿ ಜಿಲ್ಲೆಯವರೇ ಆದ ಕನ್ನಡಿಗ ಖರ್ಗೆ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿರುವ ಹಿರಿಮೆ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ'. ಪಕ್ಷ 150 ಸ್ಥಾನ ಗೆಲ್ಲುವ ಗುರಿ ಹೊಂದಿದೆ.

ರಾಜಕೀಯ ಉಳಿವಿನ ಕದನ: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯು ಜೆಡಿಎಸ್‌ಗೆ ರಾಜಕೀಯ ಉಳಿವಿನ ಕದನವಾಗಲಿದೆಯೇ ಅಥವಾ 2018 ರಲ್ಲಿ ನಡೆದಂತೆ ಪ್ರಾದೇಶಿಕ ಪಕ್ಷವು ಮತ್ತೊಮ್ಮೆ ಕಿಂಗ್‌ಮೇಕರ್ ಆಗಿ ಹೊರಹೊಮ್ಮುತ್ತದೆಯೇ? ಎಂಬುದು ಈ ಬಾರಿಯೂ ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ. ಪಕ್ಷಾಂತರಗಳು, ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು "ಕುಟುಂಬ ಪಕ್ಷ" ಎಂಬ ಇಮೇಜ್‌ನೊಂದಿಗೆ ಗೌಡರ ಮಗ ಕುಮಾರಸ್ವಾಮಿ ರಾಜ್ಯಾದ್ಯಂತ ಜೆಡಿಎಸ್ ಪ್ರಚಾರವನ್ನು ಏಕಾಂಗಿಯಾಗಿ ನಿರ್ವಹಿಸಿದ್ದಾರೆ. ಇವರಿಗೆ ತಂದೆ ದೇವೇಗೌಡು ಸಾಥ್​ ನೀಡಿದ್ದಾರೆ. 89ರ ಹರೆಯದ ಗೌಡರು ವಯೋಸಹಜ ಕಾಯಿಲೆಗಳಿಂದ ಆರಂಭದಲ್ಲಿ ಪ್ರಚಾರದಿಂದ ದೂರ ಉಳಿದಿದ್ದರೂ, ಕಳೆದೆರಡು ವಾರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಅದರಲ್ಲೂ ವಿಶೇಷವಾಗಿ ಹಳೆ ಮೈಸೂರು ಭಾಗದ ಪಕ್ಷದ ಭದ್ರಕೋಟೆಯಲ್ಲಿ ಸಂಚರಿಸಿ ಪ್ರಚಾರ ನಡೆಸಿದ್ದಾರೆ

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿ (ಎಸ್) ಇನ್ನೊಂದರ 'ಬಿ ಟೀಮ್' ಎಂದು ಆರೋಪಿಸಿವೆ ಮತ್ತು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಜೆಡಿಎಸ್ ಕೇವಲ 35-40 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಟೀಕೆಗಳನ್ನು ಎದುರಿಸುತ್ತಿದ್ದರೂ, ಕುಮಾರಸ್ವಾಮಿ ಅವರು ತಮ್ಮ ಪ್ರಚಾರದಲ್ಲಿ ಪ್ರಾದೇಶಿಕತೆ ಮತ್ತು ಕನ್ನಡಿಗ ಅಸ್ಮಿತೆಯ ವಿಷಯಗಳ ಜತೆಗೆ ರೈತರು ಮತ್ತು ಬಡವರ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳನ್ನು ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಬೆಂಗಳೂರು ರೋಡ್ ಶೋಗೆ ತೆರೆ; ಎರಡು ದಿನ ಒಟ್ಟು 32.5 ಕಿ.ಮೀ. ಮೋದಿ ಮೋಡಿ ಮೂಲಕ ಮತಬೇಟೆ

Last Updated : May 8, 2023, 1:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.