ETV Bharat / state

ಪ್ರಧಾನಿ ಬೆಂಗಳೂರು ರೋಡ್ ಶೋಗೆ ತೆರೆ; ಎರಡು ದಿನ ಒಟ್ಟು 32.5 ಕಿ.ಮೀ. ಮೋದಿ ಮೋಡಿ ಮೂಲಕ ಮತಬೇಟೆ

author img

By

Published : May 7, 2023, 3:36 PM IST

ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಭರ್ಜರಿ ರೋಡ್​ ಶೋ ನಡೆಸಿದರು. ಮೋದಿ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು.

Etv Bharat
Etv Bharat

ಪ್ರಧಾನಿ ಮೋದಿ ಅಬ್ಬರದ ಬೆಂಗಳೂರು ರೋಡ್ ಶೋಗೆ ತೆರೆ; ಎರಡು ದಿನ ಒಟ್ಟು 32.5 ಕಿ.ಮೀ. ಮೋದಿ ಮೋಡಿ ಮೂಲಕ ಮತಬೇಟೆ

ಬೆಂಗಳೂರು : ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಭಾನುವಾರವೂ ಭರ್ಜರಿ ರೋಡ್ ಶೋ ನಡೆಸಿದರು. ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳ ಹೂಮಳೆ‌ ಮಧ್ಯೆ ಪ್ರಧಾನಿ ಮೋದಿ ಸುಮಾರು 6.5 ಕಿ.ಮೀನಷ್ಟು ರೋಡ್ ಶೋ ನಡೆಸಿದರು.

ಬೆಂಗಳೂರಿನ ನ್ಯೂ ತಿಪ್ಪಸಂದ್ರದಲ್ಲಿ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬೆಳಗ್ಗೆ 10.15ಕ್ಕೆ ಪ್ರಧಾನಿ ಮೋದಿ ತಮ್ಮ ಎರಡನೇ ದಿನದ ರೋಡ್ ಶೋ ಆರಂಭಿಸಿದರು.‌ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ, ಘೋಷಣೆಗಳ ಮಧ್ಯೆ ವಿಶೇಷ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಪವರ್ ಶೋ ಆರಂಭಿಸಿದರು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಸಂಸದ ಪಿ.ಸಿ. ಮೋಹನ್ ಜೊತೆಗೂಡಿ ಅಬ್ಬರದ ರೋಡ್ ಶೋ ನಡೆಸಿದ್ರು.

ನೀಟ್ ಪರೀಕ್ಷೆ ಹಿನ್ನೆಲೆ ವಿದ್ಯಾರ್ಥಿಗಳಿಗೆ ಅನಾನುಕೂಲ ತಪ್ಪಿಸಲು ರೋಡ್ ಶೋ ಮಾರ್ಗದಲ್ಲಿ ಕೊಂಚ ಬದಲಾವಣೆ ಮಾಡಿದ್ದಲ್ಲದೆ, ರೋಡ್ ಶೋ ಅಂತರವನ್ನು ಕಡಿತಗೊಳಿಸಲಾಗಿತ್ತು. ನ್ಯೂ ತಿಪ್ಪಸಂದ್ರದಿಂದ ಆರಂಭಿಸಿ ಹೆಚ್ಎಎಲ್ 2ನೇ ಹಂತ, 80 ಅಡಿ ರಸ್ತೆ ಜಂಕ್ಷನ್, ಹೆಚ್ಎಎಲ್ 2ನೇ ಹಂತ, 12ನೇ ಮುಖ್ಯ ರಸ್ತೆ ಜಂಕ್ಷನ್, ಇಂದಿರಾನಗರ, ಸಿಎಂಎಚ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆ, ಹಲಸೂರು ಮಾರ್ಗವಾಗಿ ಸಾಗಿ ಟ್ರಿನಿಟಿ ವೃತ್ತದಲ್ಲಿ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ತಮ್ಮ ಅದ್ಧೂರಿ ರೋಡ್ ಶೋ ಮುಕ್ತಾಯಗೊಳಿಸಿದರು. ಟ್ರಿನಿಟಿ ವೃತ್ತದಲ್ಲಿ ನೆರೆದಿದ್ದ ಜನಸ್ತೋಮಕ್ಕೆ ತಲೆಬಾಗಿ ನಮಿಸಿ ತಮ್ಮ ಎರಡು ದಿನಗಳ ರೋಡ್ ಶೋಗೆ ಅಂತ್ಯ ಹಾಡಿದರು. ಲಕ್ಷಾಂತರ ಬಿಜೆಪಿ ಕಾರ್ಯರ್ತರು, ಬೆಂಗಳೂರಿಗರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಹೂವಿನ ಮಳೆಗರೆಯುವ ಮೂಲಕ ಮೋದಿ ರೋಡ್ ಶೋಗೆ ಸ್ವಾಗತ ನೀಡಿದರು.‌ ದಾರಿಯುದ್ದಕ್ಕೂ ಜನರು ಮೋದಿ ಪರ ಘೋಷಣೆ ಕೂಗಿದರು.

ಈ ಹೂಮಳೆಯ ಮಧ್ಯೆ ಮೋದಿ ಮೋದಿ ಎಂಬ ಹರ್ಷೋದ್ಗಾರ ರೋಡ್ ಶೋನಲ್ಲಿ ಮಾರ್ಧನಿಸಿತು. ರೋಡ್ ಶೋ ಸಾಗಿದ ರಸ್ತೆಗಳಲ್ಲಿ ಯಕ್ಷಗಾನ ಪೋಷಾಕು, ಮೋದಿ ಪರ ಬಂಟಿಂಗ್ಸ್, ಪೋಸ್ಟರ್​​ಗಳು, ಕೇಸರಿ ಬಾವುಟಗಳು ರಾರಾಜಿಸಿದವು. ತೆರೆದ ವಾಹನದಲ್ಲಿ ನಿಂತು ಪ್ರಧಾನಿ ‌ಮೋದಿ ಜನರತ್ತ ಕೈ ಬೀಸುತ್ತಾ ಸಾಗಿದರು. ಇತ್ತ ಮೋದಿ ಸಾಗುವ ರಸ್ತೆಯುದ್ದಕ್ಕೂ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಇಂದು ಸುಮಾರು 1.15 ಗಂಟೆ ನಡೆದ ರೋಡ್ ಶೋ ಮುಗಿಸಿ ಬಳಿಕ ಶಿವಮೊಗ್ಗದತ್ತ ತೆರಳಿದ್ರು.

ಎರಡು ದಿನ 32.5 ಕಿ.ಮೀ. ಮೋದಿ ಮೋಡಿ : ಪ್ರಧಾನಿ ಮೋದಿ ಇಂದಿನ‌ ತಮ್ಮ 6.5 ಕಿ.ಮೀ. ರೋಡ್ ಶೋ ಮೂಲಕ ಕೆ.ಆರ್. ಪುರಂ, ಸಿ.ವಿ. ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ಮಹದೇವಪುರ ಹೀಗೆ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪವರ್ ಶೋ ಮಾಡಿದರು. ನಿನ್ನೆ 13 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 26 ಕಿ.ಮೀ ರೋಡ್ ಶೋ ನಡೆಸಿ ಮತಯಾಚಿಸಿದ್ದರು. ಆ ಮೂಲಕ 28 ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರದ ಜನರಲ್ಲಿ ಮೋದಿ ರೋಡ್ ಶೋ ಮಾಡಿ ಮತಬೇಟೆ ನಡೆಸಿದರು.

ಶನಿವಾರ ಪ್ರಧಾನಿ ಮೋದಿ 26 ಕಿ.ಮೀ. ಅದ್ಧೂರಿ ರೋಡ್ ಶೋ ನಡೆಸಿ ಸುಮಾರು 13 ವಿಧಾನಸಭೆ ಕ್ಷೇತ್ರಗಳಲ್ಲಿ ಮತಯಾಚನೆ ಮಾಡಿದ್ದರು. ಶನಿವಾರ ಬೆಳಗ್ಗೆ 10.20ಕ್ಕೆ ಸರಿಯಾಗಿ ಜೆಪಿನಗರ ಕೋಣನಕುಂಟೆ ಬಳಿಯ ಶ್ರೀ ಸೋಮೇಶ್ವರ ಸಭಾಭವನದಿಂದ ರೋಡ್ ಶೋ ಆರಂಭಿಸಿ, ಜೆಪಿನಗರ 5ನೇ ಹಂತ, ಜಯನಗರ 5ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಸೌತ್‍ಎಂಡ್ ಸರ್ಕಲ್, ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಮೈಸೂರು ಬ್ಯಾಂಕ್ ಸಿಗ್ನಲ್, ಟೋಲ್ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರಮಠ ಚೌಕ, ಮಲ್ಲೇಶ್ವರಂ ವೃತ್ತ, 18ನೇ ಅಡ್ಡರಸ್ತೆ ಜಂಕ್ಷನ್, ಸಂಪಿಗೆ ರಸ್ತೆ ಮಾರ್ಗವಾಗಿ ಮೆಗಾ ರೋಡ್ ಶೋ ನಡೆಸಿದರು.

ನಿನ್ನೆ ನಡೆಸಿದ ರೋಡ್ ಶೋ ಮೂಲಕ ಪ್ರಧಾನಿ ಮೋದಿ ಬೆಂಗಳೂರು ದಕ್ಷಿಣ, ಜಯನಗರ, ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ, ರಾಜಾಜಿನಗರ, ಗೋವಿಂದರಾಜನಗರ, ವಿಜಯನಗರ, ಮಹಾಲಕ್ಷ್ಮಿಲೇಔಟ್ ಹಾಗೂ ಮಲ್ಲೇಶ್ವರಂ ಸೇರಿದಂತೆ ಒಟ್ಟು 13 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರವಾದ ಅಲೆಯನ್ನು ಸೃಷ್ಟಿಸುವ ಪ್ರಯತ್ನ ಮಾಡಿದರು.

ಪ್ರಧಾನಿ ಮೋದಿ ಶನಿವಾರ ಹಾಗೂ ಭಾನುವಾರ ಎರಡು ದಿನ ಬೆಂಗಳೂರಿನಲ್ಲಿ ಒಟ್ಟು 32.5 ಕಿ.ಮೀ. 'ನಮ್ಮ ಬೆಂಗಳೂರು ನಮ್ಮ ಹೆಮ್ಮೆ' ರೋಡ್ ಶೋ ನಡೆಸಿ ಬಿಜೆಪಿ ಅಲೆ ಸೃಷ್ಟಿಸಲು ಯತ್ನಿಸಿದರು. ಇಂದು ಯಶವಂತಪುರ, ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಒಳಗೊಂಡು ಪ್ರಧಾನಿ ಮೋದಿ ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್ ನಿಂದ ಸುಮನಹಳ್ಳಿ ಜಂಕ್ಷನ್ ವರೆಗೆ 5.3 ಕಿ.ಮೀ. ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದಾರೆ. ಬೆಂಗಳೂರಲ್ಲಿ ಗರಿಷ್ಠ ಕ್ಷೇತ್ರಗಳನ್ನು ಗೆಲ್ಲುವ ಉದ್ದೇಶದೊಂದಿಗೆ ಬಿಜೆಪಿ ಮೋದಿ ರೋಡ್ ಶೋ ನಡೆಸಿದೆ.

ನೀಟ್ ಪರೀಕ್ಷೆಗಾಗಿ ರೋಡ್ ಶೋ ಕುಂಠಿತ : ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಬಳಿಕ ನೀಟ್ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳ ಓಡಾಟಕ್ಕೆ ಅಡಚಣೆಯಾಗಬಾರದೆಂಬ ಉದ್ದೇಶದಿಂದ ಮೋದಿ ರೋಡ್ ಶೋವನ್ನು ಕಡಿತಗೊಳಿಸಲಾಯಿತು.‌ ಇಂದಿನ ರೋಡ್ ಶೋವನ್ನು 6.5 ಕಿ.ಮೀ.ಗೆ ಕಡಿತಗೊಳಿಸಿ ಬೆಳಗ್ಗೆ 11.30ಕ್ಕೆ ಮುಕ್ತಾಯಗೊಳಿಸಲಾಯಿತು.

ಭಾನುವಾರವಾದ ಕಾರಣ ವಾಹನ‌ ಓಡಾಟ ಕಡಿಮೆ ಇದ್ದಿದ್ದರಿಂದ ಇಂದಿನ ರೋಡ್ ಶೋನಿಂದ ಹೆಚ್ಚಿನ ಟ್ರಾಫಿಕ್ ಸಮಸ್ಯೆ ಎದುರಾಗಿಲ್ಲ‌. ಆದರೂ ಬೆಳಗ್ಗೆಯಿಂದ ರೋಡ್ ಶೋ ಸಾಗುವ ಮಾರ್ಗದಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಿದ ಕಾರಣ ಕೆಲವೆಡೆ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಯಿತು. ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಕೊನೆ ಹಂತ ತಲುಪಿದ್ದು, ರಾಷ್ಟ್ರೀಯ ನಾಯಕರೆಲ್ಲ ಇಂದು ತಮ್ಮ ಕೊನೆ ಪ್ರಚಾರ ನಡೆಸಿ ದೆಹಲಿಗೆ ವಾಪಸ್ಸಾಗಲಿದ್ದಾರೆ. ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ : ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.