ETV Bharat / state

ರಾಜ್ಯದಲ್ಲಿ ಬರ: ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ 21 ತಾಲೂಕುಗಳ ಪಟ್ಟಿ ಬಿಡುಗಡೆ

author img

By ETV Bharat Karnataka Team

Published : Oct 9, 2023, 10:33 PM IST

ಬರ ಕುರಿತಂತೆ ಸಚಿವ ಸಂಪುಟ ಉಪ ಸಮಿತಿ ಶಿಫಾರಸಿನಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು 21 ತಾಲೂಕುಗಳ ಪಟ್ಟಿ ಬಿಡುಗಡೆಗೊಳಿಸಿದೆ.

karnataka-drought-list-of-21-taluks-released-by-center-for-natural-disaster-management
ರಾಜ್ಯದಲ್ಲಿ ಬರ: ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ 21 ತಾಲೂಕುಗಳ ಪಟ್ಟಿ ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲು ಉದ್ದೇಶಿಸಿರುವ 21 ತಾಲೂಕುಗಳಲ್ಲಿ ಆ್ಯಪ್‌ ಮೂಲಕ ತಳಮಟ್ಟದ ನೈಜ ಸ್ಥಿತಿ ಪರಿಶೀಲಿಸಿ, ಬರ ಕೈಪಿಡಿ ಅನ್ವಯ ದೃಢೀಕರಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮುಂಗಾರಿನಲ್ಲಿ ಉಂಟಾದ ಮಳೆ ಕೊರತೆಯಿಂದಾಗಿ ಈಗಾಗಲೇ ಬರ ಘೋಷಣೆ ಆಗಿರುವ 195 ತಾಲೂಕು ಹೊರತುಪಡಿಸಿ ಇನ್ನೂ 21 ತಾಲೂಕುಗಳಲ್ಲಿ ಬರ ಉಂಟಾಗಿರುವುದಾಗಿ ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು 21 ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಿದೆ.

ಇದಲ್ಲದೆ, ಈ ತಾಲೂಕುಗಳಲ್ಲಿ ಶೇಕಡಾ 10ರಷ್ಟು ಗ್ರಾಮಗಳನ್ನು ಆಯ್ಕೆ ಮಾಡಿ ಪ್ರಮುಖ ಬೆಳೆಗಳನ್ನು ಗುರುತಿಸಿ ಪ್ರತಿ ಬೆಳೆಗಳ ಸುಮಾರು 5 ಜಮೀನುಗಳಿಗೆ (1 ಎಕರೆಗಿಂತ ಕಡಿಮೆ ಇಲ್ಲದ) ಭೇಟಿ ನೀಡಬೇಕು. ಹಾಗೂ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಆ್ಯಪ್‌ ಮೂಲಕ ಗ್ರೌಂಡ್‌ ಟ್ರೂತನಿಂಗ್‌ ಮಾಡಿ ಬರ ಕೈಪಿಡಿಯಲ್ಲಿ ನಮೂದಿಸಿರುವ ದೃಢೀಕರಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವರದಿ ಸಲ್ಲಿಕೆಗೆ ಸೂಚನೆ: ಜಿಲ್ಲಾಧಿಕಾರಿಗಳು ಅಕ್ಟೋಬರ್​​ 9 ರಂದು ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ರಚಿಸಬೇಕು. ಅ. 9 ಹಾಗೂ 10 ರಂದು ಬರ ಪರಿಸ್ಥಿತಿ ಉದ್ಭವಿಸಿರುವ ತಾಲೂಕುಗಳಲ್ಲಿ ಪರಿಶೀಲಿಸಿ ಗ್ರೌಂಡ್‌ ಟ್ರೂತನಿಂಗ್‌ ನಡೆಸಬೇಕು. ಅಕ್ಟೋಬರ್ 11 ರಂದು ಕ್ರೋಢೀಕರಿಸಿ ದೃಢೀಕೃತ ದಾಖಲಾತಿಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

21 ತಾಲೂಕುಗಳ ವಿವರ : ಚಾಮರಾಜನಗರ, ಯಳಂದೂರು, ಕೃಷ್ಣರಾಜನಗರ, ಬೆಳಗಾವಿ, ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್‌, ಶಿಗ್ಗಾಂವಿ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರು, ಅರಸೀಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ ಹಾಗೂ ದಾಂಡೇಲಿ.

ಇದನ್ನೂ ಓದಿ: ಬರ: ಕೇಂದ್ರ ತಂಡಕ್ಕೆ ನಮ್ಮ ವಸ್ತುಸ್ಥಿತಿಯ ಮನವಿ ಮನವರಿಕೆಯಾಗಿದೆ- ಸಚಿವ ಕೃಷ್ಣ ಬೈರೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.