ETV Bharat / state

ಬರ: ಕೇಂದ್ರ ತಂಡಕ್ಕೆ ನಮ್ಮ ವಸ್ತುಸ್ಥಿತಿಯ ಮನವಿ ಮನವರಿಕೆಯಾಗಿದೆ- ಸಚಿವ ಕೃಷ್ಣ ಬೈರೇಗೌಡ

author img

By ETV Bharat Karnataka Team

Published : Oct 9, 2023, 4:29 PM IST

ರಾಜ್ಯದ ಬರ ಪರಿಸ್ಥಿತಿಯ ಕುರಿತು ಕೇಂದ್ರ ತಂಡಕ್ಕೆ ವಸ್ತುಸ್ಥಿತಿಯಿಂದ ಕೂಡಿದ ಮನವಿ‌ ಮಾಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ರಾಜ್ಯದ ಬರ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರ ತಂಡಕ್ಕೆ ನಾವು ಪರಿಸ್ಥಿತಿಯನ್ನು ವಸ್ತುಸ್ಥಿತಿಯಿಂದ ವಿವರಿಸಿದ್ದು, ಅವರಿಗೆ ಮನವರಿಕೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೇಂದ್ರ ಬರ ಅಧ್ಯಯನ ತಂಡ ಕೇಂದ್ರ ಸರ್ಕಾರಕ್ಕೆ ಒಂದು ವಾರದಲ್ಲಿ ವರದಿ ಸಲ್ಲಿಸಲಿದೆ. ಎಷ್ಟು ಪರಿಹಾರ ಕೊಡುತ್ತಾರೆ ನೋಡೋಣ. ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ ತಂಡ ಪರಿಸ್ಥಿತಿ ಅವಲೋಕನ ಮಾಡಿದೆ. ಕುಡಿಯುವ ನೀರು,‌ ನರೇಗಾ ಕಾಮಗಾರಿ, ಮೇವು‌ ಪರಿಸ್ಥಿತಿ ಅವಲೋಕಿಸಿದ್ದಾರೆ. ನಮ್ಮ ಮನವಿ ಆಧಾರದಲ್ಲಿ ಬರ ಅಧ್ಯಯನ ತಂಡ ಬಂದು ರಾಜ್ಯದಲ್ಲಿ ಪ್ರವಾಸ ಮಾಡಿದೆ. ಪರಿಶೀಲನೆ ಸಂದರ್ಭದಲ್ಲಿ ನಮ್ಮ ಮನವಿ ವಸ್ತುಸ್ಥಿತಿಯಿಂದ ಕೂಡಿತ್ತು. ತಳಮಟ್ಟದಲ್ಲಿ ಸಾಕಷ್ಟು ರೈತರಿಗೆ ಬೆಳೆ ಹಾನಿ ತೊಂದರೆ ಆಗಿದೆ ಎಂದು ಮನವರಿಕೆಯಾಗಿದೆ. ಹಿಂಗಾರು ಮಳೆ ತೊಂದರೆ ಆಗಬಹುದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಧ್ಯಯನ ತಂಡಕ್ಕೆ ರಾಜ್ಯದ ಭೇಟಿ ಸುಗಮವಾಗಿ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ನಮ್ಮ ಮನವಿ ವಸ್ತುಸ್ಥಿತಿಯಿಂದ ಕೂಡಿದೆ ಎಂದು ಕೇಂದ್ರ ತಂಡವೂ ಹೇಳಿದೆ. ಸಣ್ಣ, ಅತಿ ಸಣ್ಣ ರೈತರ ಅಂಕಿ‌ಸಂಖ್ಯೆ ಕೇಳಿದ್ದಾರೆ. ಅದನ್ನು ಒದಗಿಸಿಕೊಡುತ್ತೇವೆ" ಎಂದರು.

"ರಾಜ್ಯದಲ್ಲಿ ವಿಚಿತ್ರ ಹವಾಮಾನ ಪರಿಸ್ಥಿತಿ ಇದೆ. ಕೆಲವು ತಿಂಗಳಲ್ಲಿ ವಾಡಿಕೆಗಿಂತ ಮಳೆ ಜಾಸ್ತಿಯಾದರೆ, ಕೆಲವು ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಮಳೆ ಸ್ಥಿತಿಗತಿಗಳ ಬಗ್ಗೆ‌ ಸ್ಪಷ್ಟತೆ ಇಲ್ಲದ ವಾತಾವರಣವಿದೆ. ಹವಾಮಾನ ಏರುಪೇರನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಇದಕ್ಕನುಗುಣವಾಗಿ ಸರ್ಕಾರದ ನೀತಿ, ಕಾರ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವರಿಕೆ ಮಾಡಿದ್ದೇವೆ" ಎಂದು ಹೇಳಿದರು.

"ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಪಾವತಿ ಆಗಿಲ್ಲ.‌ 475 ಕೋಟಿ ರೂ. ಪಾವತಿ ಬಾಕಿ ಇದೆ. ಬಡವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತಕ್ಷಣ ಬಾಕಿ ಹಣ ಬಿಡುಗಡೆ ಮಾಡಲು ಕೇಂದ್ರದ ಅಧಿಕಾರಿಗಳ ಬಳಿ ಮಾತನಾಡುವಂತೆ ಮನವಿ ಮಾಡಿದ್ದೇವೆ ಎಂದು ಒತ್ತಾಯಿಸಿದ್ದೇವೆ. ಫಸಲು ಭೀಮಾ ಯೋಜನೆ ರೈತರಿಗೆ ಪರಿಣಾಮಕಾರಿ ಅನುಕೂಲ ಆಗುತ್ತಿಲ್ಲ. ಇದನ್ನು ಕೇಂದ್ರದ ಅಧಿಕಾರಿಗಳ ಗಮನಕ್ಕೆ ತರುವಂತೆ ಹೇಳಿದ್ದೇವೆ. ಬರ ಪರಿಹಾರ ಎಷ್ಟು ಕೊಡುತ್ತಾರೆ ಎಂಬುದು ಅವರ ತೀರ್ಮಾನ. ನಾವು ಒತ್ತಡ ಹಾಕಬಹುದು, ಆದರೆ ಅಂತಿಮ ನಿರ್ಧಾರ ಅವರದ್ದೇ" ಎಂದು ಕೃಷ್ಣ ಬೈರೇಗೌಡ ನುಡಿದರು.

ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ ಮಾತನಾಡಿ, "ಕೇಂದ್ರ ತಂಡದ ವರದಿ ಸಲ್ಲಿಕೆ ಹಾಗೂ ಇತರ ಪ್ರಕ್ರಿಯೆಗೆ ಕೆಲವು ದಿನಗಳ ಅಗತ್ಯವಿದೆ.‌ ಪರಿಹಾರ ವಿಳಂಬವಾದಲ್ಲಿ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ರೈತರಿಗೆ ಅನ್ಯಾಯವಾಗಲು ಬಿಡಲ್ಲ. ರೈತರ ಕಷ್ಟದಲ್ಲಿ ನಾವು ಸದಾ ಇರುತ್ತೇವೆ. ಕಾವೇರಿ ಅಚ್ಚುಕಟ್ಟಿನಲ್ಲಿ ರೈತರ ಬೆಳೆಗೆ ಸಮಸ್ಯೆ ಆಗದಂತೆ ನೀರು‌ ಕೊಡುತ್ತಿದ್ದೇವೆ. ರೈತರ ಹಿತ ಕಾಪಾಡುತ್ತೇವೆ" ಎಂದರು.

ಜೆಡಿಎಸ್ ಕೋರ್ ಕಮಿಟಿ‌ ಅಧ್ಯಕ್ಷ ಜಿ.ಟಿ‌.ದೇವೇಗೌಡ ಆರೋಪಕ್ಕೆ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ,‌‌ "ದೇವೇಗೌಡರು ಕೋರ್ ಕಮಿಟಿ ಅಧ್ಯಕ್ಷ ಸ್ಥಾನವನ್ನು ಸಿಎಂ ಸ್ಥಾನ ಎಂದು ತಿಳಿದುಕೊಂಡಿರಬೇಕು. ನಾವು ಇದ್ದಾಗ ಜೆಡಿಎಸ್​ನಲ್ಲಿ ಯಾರ್ಯಾರನ್ನು ಹೇಗೆ ನಡೆಸಿಕೊಂಡರು ಎಂಬುದು ಗೊತ್ತು. ಕಾಂಗ್ರೆಸ್ ಮೇಲೆ ಅಟ್ಯಾಕ್ ಮಾಡಿದರೆ ಪ್ರಮೋಷನ್ ಸಿಗುತ್ತದೆ ಎಂದು ಅಂದುಕೊಂಡಿರಬಹುದು" ಎಂದು ತಿರುಗೇಟು ನೀಡಿದರು.

ಮತ್ತೆ 21 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸುವ ನಿಟ್ಟಿನಲ್ಲಿ ಬೆಳೆ ಸಮೀಕ್ಷೆ ಅಂತಿಮ ಹಂತದಲ್ಲಿದೆ. ಈ ಪೈಕಿ ನಾಲ್ಕು ತಾಲೂಕುಗಳು ತೀವ್ರ ಬರ ಪೀಡಿತವಾಗಿದ್ದರೆ, ಉಳಿದ 17 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಗುರುತಿಸಲಾಗುತ್ತಿದೆ. ಈಗಾಗಲೇ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.‌ ಅದಕ್ಕೆ ಈ 21 ತಾಲೂಕುಗಳು ಸೇರ್ಪಡೆಯಾಗಲಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ : ಲೋಕಸಭೆ ಚುನಾವಣೆ ದೃಷ್ಠಿಯಿಂದ ನಮ್ಮ ಪಕ್ಷದ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ: ಮಾಜಿ ಸಚಿವ ಸಿ ಪಿ ಯೋಗೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.