ETV Bharat / state

2023ರ ಎಕ್ಸಿಟ್​ ಪೋಲ್ಸ್​ ರಾಜಕೀಯ ಭವಿಷ್ಯ ನಿಜವಾಗುತ್ತಾ? 2018ರಲ್ಲಿ ಸಮೀಕ್ಷೆಗಳು ಏನ್​ ಹೇಳಿದ್ದವು?

author img

By

Published : May 11, 2023, 7:11 PM IST

ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆಗೆ ತೆರೆ ಬಿದ್ದಿದೆ. ಬುಧವಾರ (ಮೇ 13ರಂದು) ಫಲಿತಾಂಶ ಹೊರ ಬರಲಿದೆ. ಇದರ ನಡುವೆ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳ ವರದಿಗಳು ಕುತೂಹಲಕ್ಕೆ ಕಾರಣವಾಗಿದೆ.

karnataka-assembly-elections-2023-exit-polls-analysis
2023ರ ಎಕ್ಸಿಟ್​ ಪೋಲ್ಸ್​ ರಾಜಕೀಯ ಭವಿಷ್ಯ ನಿಜವಾಗುತ್ತಾ?

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯು ದೇಶದ ಗಮನ ಸೆಳೆದಿದೆ. ಬುಧವಾರ ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಫಲಿತಾಂಶದ ಬಗ್ಗೆ ವಿವಿಧ ಎಕ್ಸಿಟ್​ ಪೋಲ್​ಗಳು ಪ್ರಕಟವಾಗಿವೆ. ಈ ಬಗ್ಗೆ ಪರ ಮತ್ತು ವಿರೋಧ ಚರ್ಚೆ ಆಗುತ್ತಿದೆ. ಇದರ ಜೊತೆಗೆ ಕಳೆದ 2018ರ ಚುನಾವಣಾ ಸಂದರ್ಭದಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ಏನಾಗಿತ್ತು ಎಂಬ ಚರ್ಚೆಯೂ ಮುನ್ನಲೆಗೆ ಬಂದಿದೆ.

224 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಕನಿಷ್ಠ 113 ಸ್ಥಾನಗಳ ಅಗತ್ಯವಿದೆ. ರಾಜ್ಯ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳು ಹಾಗೂ ಸಂಸ್ಥೆಗಳ ಸಮೀಕ್ಷೆಗಳು ಸೇರಿ ಒಟ್ಟು 11 ಎಕ್ಸಿಟ್​ ಪೋಲ್​ಗಳು ಹೊರಬಿದ್ದಿವೆ. ಇದರಲ್ಲಿ ಬಹುತೇಕ ಸಮೀಕ್ಷೆಗಳು ಅತಂತ್ರ ಫಲಿತಾಂಶದ ಸೂಚನೆ ಕೊಟ್ಟಿವೆ. ಆದರೆ, ಇದರ ಜೊತೆಗೆ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳಿದ್ದು, ಆಡಳಿತಾರೂಢ ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿಯಲಿದೆ. ಜೆಡಿಎಸ್​ ಮೂರನೇ ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಈ ಮೂಲಕ ಜೆಡಿಎಸ್​ ಕಿಂಗ್​ ಮೇಕರ್​ ಆಗುವ ಸಾಧ್ಯತೆಯೂ ಇದೆ ಎಂದು ಭವಿಷ್ಯ ಹೇಳಲಾಗಿದೆ.

exit-polls
ಎಕ್ಸಿಟ್​ ಪೋಲ್ಸ್

11 ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎರಡು ಎಕ್ಸಿಟ್​ ಪೋಲ್​ಗಳು ಕಾಂಗ್ರೆಸ್​ಗೆ ಸ್ಪಷ್ಟ ಬಹುಮತವನ್ನು ನೀಡಿವೆ. ನ್ಯೂಸ್ 24 - ಟುಡೇಸ್ ಚಾಣಕ್ಯ ಮತ್ತು ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿವೆ. ಇದೇ ವೇಳೆ ಮತ್ತೆರಡು ಸಮೀಕ್ಷೆಗಳಾದ ನ್ಯೂಸ್ ನೇಷನ್- ಸಿಜಿಎಸ್​ ಮತ್ತು ಸುವರ್ಣ ನ್ಯೂಸ್ ಜನ್ ಕಿ ಬಾತ್ ಎಕ್ಸಿಟ್​ ಪೋಲ್​ಗಳು​ ಬಿಜೆಪಿ ಅಧಿಕಾರದಲ್ಲಿ ಮುಂದುವರೆಯುತ್ತದೆ ಎಂದು ಹೇಳಿವೆ.

exit-polls
ಎಕ್ಸಿಟ್​ ಪೋಲ್ಸ್

2018ರ ಸಮೀಕ್ಷೆಗಳು ಏನಾಗಿದ್ದವು?: 2013ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಐದು ವರ್ಷಗಳ ಕಾಲ ಸಂಪೂರ್ಣವಾಗಿ ಆಡಳಿತವನ್ನೂ ನಡೆಸಿತ್ತು. 2018ರಲ್ಲಿ ಚುನಾವಣೆ ನಡೆದಾಗ ಅತಂತ್ರ ಫಲಿಂತಾಶದ ಭವಿಷ್ಯವನ್ನು ಎಕ್ಸಿಟ್​ ಪೋಲ್​ಗಳು​ ನುಡಿದಿದ್ದವು.

exit-polls
ಎಕ್ಸಿಟ್​ ಪೋಲ್ಸ್

ಟೈಮ್ಸ್ ನೌ-ವಿಎಂಆರ್, 90ರಿಂದ 103 ಸ್ಥಾನಗಳೊಂದಿಗೆ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಲಿದೆ. 80ರಿಂದ 93 ಸ್ಥಾನಗಳು ಪಡೆದು ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ, ಮತ ಎಣಿಕೆಯ ದಿನ ಇದು ಉಲ್ಟಾ ಆಗಿತ್ತು. ನ್ಯೂಸ್‌ಎಕ್ಸ್ - ಸಿಎನ್‌ಎಕ್ಸ್ ಮಾತ್ರ ಮೂರು ಪಕ್ಷಗಳ ಸ್ಥಾನಗಳ ಬಗ್ಗೆ ನಿಖರವಾಗಿ ಊಹೆ ಮಾಡಿತ್ತು. ಕಾಂಗ್ರೆಸ್ 72ರಿಂದ 98, ಬಿಜೆಪಿ 102ರಿಂದ 110 ಮತ್ತು ಜೆಡಿಎಸ್​ 35ರಿಂದ 39 ಸ್ಥಾನ ಪಡೆಯಲಿದೆ ಎಂದು ಹೇಳಿತ್ತು. ಅದೇ ರೀತಿ ಫಲಿತಾಂಶ ಹೊರ ಬಂದಿತ್ತು.

ಇಂಡಿಯಾ ಟುಡೇ - ಆಕ್ಸಿಸ್​ ಸಮೀಕ್ಷೆ ಸಂಪೂರ್ಣವಾಗಿ ಉಲ್ಟಾ ಹೊಡೆದಿತ್ತು. ಕಾಂಗ್ರೆಸ್ 106ರಿಂದ 118 ಸ್ಥಾನದೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ಹೇಳಿತ್ತು. ಆದರೆ, ಕಾಂಗ್ರೆಸ್ ಕೇವಲ 78 ಗೆಲ್ಲಲು ಸಾಧ್ಯವಾಗಿತ್ತು. ಬಿಜೆಪಿ 79ರಿಂದ 92 ಸ್ಥಾನ ಪಡೆಯಲಿದೆ ಎಂದು ಹೇಳಿತ್ತು. ಬಿಜೆಪಿ 104 ಸ್ಥಾನಗಳೊಂದಿಗೆ ಶತಕದ ಗಡಿ ದಾಟಿತ್ತು.

ಎಬಿಪಿ ನ್ಯೂಸ್ - ಸಿವೋಟರ್​ ಬಿಜೆಪಿ ಕುರಿತ ಸರಿಯಾದ ಭವಿಷ್ಯ ನುಡಿದಿತ್ತು. ಆದರೆ, ಕಾಂಗ್ರೆಸ್​ ಮತ್ತು ಜೆಡಿಎಸ್​ ಸ್ಥಾನಗಳ ಕುರಿತ ಭವಿಷ್ಯ ಸುಳ್ಳಾಗಿತ್ತು. ಇಂಡಿಯಾ ಟಿವಿ ಸಮೀಕ್ಷೆ ಕೂಡ ತಪ್ಪಾಗಿತ್ತು. ರಿಪಬ್ಲಿಕ್ - ಜನ್ ಕಿ ಬಾತ್ ಕಾಂಗ್ರೆಸ್ ಮತ್ತು ಬಿಜೆಪಿ ಮತ್ತು ಜೆಡಿಎಸ್ ಸ್ಥಾನಗಳ ಬಗ್ಗೆ ನಿಖರವಾಗಿ ಊಹಿಸಿತ್ತು. ಆದರೆ, ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿತ್ತು. ಅಂತಿಮವಾಗಿ ಫಲಿತಾಂಶದಲ್ಲಿ ಕಾಂಗ್ರೆಸ್​ 78, ಬಿಜೆಪಿ 104, ಜೆಡಿಎಸ್​​ 37 ಹಾಗೂ ಇತರರು ಮೂರು ಸ್ಥಾನಗಳನ್ನು ಪಡೆದಿದ್ದರು.

ಇದನ್ನೂ ಓದಿ: Karnataka Exit polls: ಮತದಾನೋತ್ತರ ಸಮೀಕ್ಷೆಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.