ETV Bharat / state

ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ​ ರೆಡ್ಡಿ!

author img

By

Published : Dec 25, 2022, 12:13 PM IST

Updated : Dec 25, 2022, 1:51 PM IST

ಮಾಜಿ ಸಚಿವ ಜನಾರ್ದನ​ ರೆಡ್ಡಿ ಅವರ ಮುಂದಿನ ರಾಜಕೀಯ ನಡೆಯೇನು? ಅವರು ಬಿಜೆಪಿಯಲ್ಲೇ ಉಳೀತಾರಾ? ಅಥವಾ ಹೊಸ ಪಕ್ಷ ಸ್ಥಾಪನೆ ಮಾಡ್ತಾರಾ? ಎಂಬೆಲ್ಲ ಪ್ರಶ್ನೆಗಳಿಗೆ ಇಂದು ಅವರೇ ಉತ್ತರ ಕೊಟ್ಟಿದ್ದಾರೆ.

ಮಾಜಿ ಸಚಿವ ಜನಾರ್ದನ್​ ರೆಡ್ಡಿ
ಮಾಜಿ ಸಚಿವ ಜನಾರ್ದನ್​ ರೆಡ್ಡಿ

ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ​ ರೆಡ್ಡಿ

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ನಿರೀಕ್ಷೆಯಂತೆ ಭಾನುವಾರ ಹೊಸ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ದ ಮೂಲಕ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಬಿಜೆಪಿಗೆ ಗುಡ್​ ಬೈ: ಬಿಜೆಪಿ ಜೊತೆಗಿನ ಸಂಬಂಧಕ್ಕೆ ವಿದಾಯ ಹೇಳಿದ ಜನಾರ್ದನ ರೆಡ್ಡಿ, ಇದೀಗ ಹೊಸ ಪಕ್ಷ ಘೋಷಿಸಿದ್ದಾರೆ. ಗೋಲಿಯಾಟದಲ್ಲೇ ಸೋಲನ್ನು ಒಪ್ಪದ ನಾನು, ರಾಜಕೀಯದಲ್ಲಿ ಸೋಲೊಪ್ಪಲ್ಲ. ನನಗೆ ಜನರ ಆಶೀರ್ವಾದ ಸಿಗಲಿದೆ. ಕರ್ನಾಟಕ ಕಲ್ಯಾಣವಾಗಲಿದೆ. ಪ್ರಗತಿ ಕಾಣಲಿದೆ ಎಂದು ಈ ಸಂದರ್ಭದಲ್ಲಿ ರೆಡ್ಡಿ ಹೇಳಿದರು.

ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಜನಾರ್ದನ ರೆಡ್ಡಿ, 12 ವರ್ಷದ ನಂತರ ಬಳ್ಳಾರಿಗೆ ಬರಲು ಕೋರ್ಟ್ ಆದೇಶ ಕೊಟ್ಟರೂ ಮತ್ತೆ ನಮ್ಮನ್ನು ಬಳ್ಳಾರಿಯಿಂದ ಸಿಬಿಐ ಬಳಸಿ ಹೊರಹಾಕಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಹಿತೈಷಿಗಳು ನಾವೆಲ್ಲಾ ನಿಮ್ಮ ಜೊತೆ ಇರಲಿದ್ದೇವೆ. ನಿಮ್ಮ ಶಕ್ತಿಯಾಗಿ ಕೆಲಸ ಮಾಡುತ್ತೇವೆ. ನಿಮ್ಮ ಬೆನ್ನೆಲುಬಾಗಿ ಇರಲಿದ್ದೇವೆ. ಧರ್ಮ, ಸತ್ಯ , ಮಾನವೀಯ ಮೌಲ್ಯ ಸತ್ತುಹೋಗಿದೆ. ಈ ಕ್ಷಣದಲ್ಲಿಯೂ ಬಿಜೆಪಿಯಿಂದ ಹೊರಗೆ ಬಂದಿಲ್ಲ ಎಂದರೆ ಹೇಗೆ? 12 ವರ್ಷ ವನವಾಸ ಅನುಭವಿಸಿದ್ದೀಯ. ನಿಮ್ಮ ಜೊತೆ ನಾವಿದ್ದು ಕೆಲಸ ಮಾಡುತ್ತೇವೆ ಎಂದು ಬಳ್ಳಾರಿಯ ಜನ ಹೇಳಿದಾಗ ನಾನು ಹೊಸ ಪಕ್ಷ ಆರಂಭಿಸುವ ನಿರ್ಧಾರ ಮಾಡಿದೆ ಎಂದರು.

ಬಿಜೆಪಿ ಜೊತೆಗಿನ ಸಂಬಂಧ ಬಿಡುತ್ತಿದ್ದೇನೆ: ಬಸವಣ್ಣ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ರೀತಿ, ಇವನಾರವ ಇವನಾರವ ಇವ ನಮ್ಮವ ಇವ ನಮ್ಮವ ಕೂಡಲ ಸಂಗಮ ದೇವ ನಾನಿನ್ನ ಮನೆಯ ಮಗನೆನಿಸಯ್ಯ ಎನ್ನುವಂತೆ ಜಾತಿ ಮತ ಬೇಧ ಇಲ್ಲದಂತೆ ಲಿಂಗ ಬೇಧ, ಮೇಲು ಕೀಳು ಇಲ್ಲದಂತೆ ರಾಜ್ಯದ ಅಭಿವೃದ್ಧಿಗೆ ನಾನು ಕಂಡ ಕನಸು, ನಾನು ಏನು ಎಂದು ತೋರಿಸಲು, ಜನರು ಬೆಂಬಲ ಕೊಡುತ್ತಿರುವ ಈ ಸಂದರ್ಭದಲ್ಲಿ ವಾಜಪೇಯಿ ಸಿದ್ದಾಂತ ನಂಬಿದ್ದ ನಾನು ಇವತ್ತಿಗೆ ಬಿಜೆಪಿ ಜೊತೆಗಿನ ಸಂಬಂಧ ಬಿಡುತ್ತಿದ್ದೇನೆ ಎಂದು ತಿಳಿಸಿದರು.

ಆ ಪಕ್ಷದ ಸದಸ್ಯ ಅಲ್ಲ ಎಂದರೂ ನಾನು ಆ ಪಕ್ಷದವನೇ ಎಂದು ಜನ ಅಂದುಕೊಂಡಿದ್ದರು. ಅದಕ್ಕೆ ಇಂದು ತೆರೆ ಎಳೆಯುತ್ತಿದ್ದೇನೆ. ಇನ್ನು ಮುಂದೆ ಬಿಜೆಪಿ ಜೊತೆಗೆ ಸಂಬಂಧ ಇಲ್ಲ. ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಸರಿನಲ್ಲಿ ಪಕ್ಷ ಆರಂಭಿಸುತ್ತೇನೆ. ನನ್ನದೇ ಆದ ಯೋಚನೆಗಳೊಂದಿಗೆ ಹೊಸ ಪಕ್ಷ ಕಟ್ಟುತ್ತೇನೆ. ಇಡೀ ಕರ್ನಾಟಕ ರಾಜ್ಯದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿರುವ ವೇಳೆ ಅದಕ್ಕೆ ಅವಕಾಶವಿಲ್ಲ ಎನ್ನುವ ಸಂದೇಶ ನೀಡುತ್ತಾ ಹೊಸ ಪಕ್ಷ ಘೋಷಣೆ ಮಾಡಿದರು. ಪ್ರತಿ ಹಳ್ಳಿ ಮನೆ ಮನೆಗೂ ಬರುತ್ತೇನೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ: ಸಂಪುಟ ವಿಸ್ತರಣೆಯತ್ತ ಹೈಕಮಾಂಡ್ ಚಿತ್ತ: ಆಕಾಂಕ್ಷಿತರ ಪಟ್ಟಿಯೊಂದಿಗೆ ನಾಳೆ ಸಿಎಂ ದೆಹಲಿಗೆ

ಹೊಸ ಕೆಲಸದಲ್ಲಿ ನನಗೆ ಸೋಲು ಆಗುವುದಿಲ್ಲ. ಚಿಕ್ಕವನಿದ್ದಾಗ ಗೋಲಿಯಾಟದಲ್ಲಿಯೂ ಸೋಲು ಒಪ್ಪಲು ಸಿದ್ದನಿರಲಿಲ್ಲ. ಇಂದು ಪಕ್ಷ ಕಟ್ಟಿ ಜನರ ಮುಂದೆ ಹೋಗುತ್ತಿದ್ದೇನೆ. ಜನರ ಆಶೀರ್ವಾದ ಸಿಕ್ಕೇ ಸಿಗಲಿದೆ. ಕಲ್ಯಾಣ ಕರ್ನಾಟಕವಾಗಲಿದೆ, ಪ್ರಗತಿ ಕಾಣಲಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಯಡಿಯೂರಪ್ಪ ಅವರಿಗೆ ತಂದೆ ಸ್ಥಾನದ ಗೌರವ: ಯಡಿಯೂರಪ್ಪ ನಾವು ಒಟ್ಟಿಗೆ ಪ್ರಯಾಣ ಬೆಳೆಸಿದ್ದೆವು, ಎಂದೂ ಬೇರೆಯಾಗಿಲ್ಲ. ಯಡಿಯೂರಪ್ಪ ಅವರಿಗೆ ತಂದೆ ಸ್ಥಾನದ ಗೌರವ ಕೊಟ್ಟಿದ್ದೇವೆ. ಅದೇ ರೀತಿ ಕಾಣುತ್ತೇವೆ. ಆ ಪ್ರೀತಿ ವಿಶ್ವಾಸ ನಂಬಿಕೆ ಹಾಗೆಯೇ ಇರಲಿದೆ. ಆದರೆ ಹೊಸ ಪಕ್ಷದ ಕುರಿತು ಅವರ ಜೊತೆ ಚರ್ಚಿಸಿಲ್ಲ. ಅಲ್ಲದೆ ನಾನು ಶ್ರೀರಾಮುಲು ಮತ್ತು ಸಹೋದರರಿಗೆ ಬಿಜೆಪಿ ತೊರೆದು ನನ್ನ ಜೊತೆ ಬರುವಂತೆ ಒತ್ತಡ ಹಾಕಲ್ಲ ಎಂದರು.

Last Updated : Dec 25, 2022, 1:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.