ETV Bharat / state

ಕೇಂದ್ರ ಅನುದಾನಿತ ಯೋಜನೆಗಳಿಗೆ ಅನುದಾನ ಬಿಡುಗಡೆ ನಿರಾಶಾದಾಯಕ: ಪ್ರಗತಿ ಕಳಪೆ

author img

By

Published : Feb 4, 2023, 10:55 PM IST

ರಾಜ್ಯದಲ್ಲಿ ಕುಂಟುತ್ತಾ ಸಾಗಿದ ಕೇಂದ್ರ ಅನುದಾನಿತ ಯೋಜನೆಗಳು - ಜಲ ಜೀವನ್ ಮಿಷನ್ ಯೋಜನೆ ಪ್ರಗತಿ ಕೇವಲ ಶೇ 34.55 - ಸ್ವಚ್ಛ ಭಾರತ ಯೋಜನೆ ಶೇ10.42ರಷ್ಟು ಮಾತ್ರ ಪ್ರಗತಿ - ಪಿಎಂ ಆಯುಷ್ಮಾನ್ ಭಾರತ್ ಪ್ರಗತಿನೂ ಅಷ್ಟಕಷ್ಟೇ

Bangalore Vidhana Soudha
ಬೆಂಗಳೂರು ವಿಧಾನಸೌಧ

ಬೆಂಗಳೂರು: ಕೇಂದ್ರ ಅನುದಾನಿತ ಪ್ರಮುಖ ಯೋಜನೆಗಳು ರಾಜ್ಯದಲ್ಲಿ ಕುಂಟುತ್ತಾ ಸಾಗುತ್ತಿವೆ. ಇನ್ನೇನು ಬಜೆಟ್ ವರ್ಷ ಮುಕ್ತಾಯ ಹಂತದಲ್ಲಿದ್ದು, ಪ್ರಮುಖ ಯೋಜನೆಗಳ ಪ್ರಗತಿ ತೆವಳುತ್ತಾ ಇದೆ. ಪ್ರಮುಖ ಯೋಜನೆಗಳಾದ ಜಲಜೀವನ್ ಮಿಷನ್, ಸ್ವಚ್ಛ ಭಾರತ, ಪಿಎಂ ಆಯುಷ್ಮಾನ್ ಭಾರತ ಯೋಜನೆಗಳಿಗೆ ಅನುದಾನ ಬಿಡುಗಡೆಯೂ ನಿರಾಶಾದಾಯಕವಾಗಿದೆ.
ಜಲಜೀವನ ಮಿಷನ್, ಆಯುಷ್ಮಾನ್ ಭಾರತ, ಸ್ವಚ್ಛ ಭಾರತ ಬಿಜೆಪಿ ಸರ್ಕಾರದ ಪ್ರಸಿದ್ಧ ಯೋಜನೆಗಳು.

ಮೋದಿ ಸರ್ಕಾರದ ಬಹು ಚರ್ಚಿತ, ಬಹು ದೊಡ್ಡ ಯೋಜನೆಗಳಾಗಿವೆ‌. ರಾಜ್ಯವೂ ಈ ಯೋಜನೆಗಳನ್ನು ಬಹಳ ಆಸಕ್ತಿಯಿಂದ ನೋಡುತ್ತಿದೆ. ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಡಬಲ್ ಇಂಜಿನ್ ಸರ್ಕಾರ ಈ ಯೋಜನೆಗಳ ಬಗ್ಗೆ ಆಗಾಗ್ಗೆ ಬೆನ್ನು ತಟ್ಟುತ್ತಲೇ ಇರುತ್ತದೆ. ಅತಿ ಹೆಚ್ಚು ಅನುದಾನ ಹಂಚಿಕೆಯಾಗಿರುವ ಪಿಎಂ ಮೋದಿಯ ನೆಚ್ಚಿನ ಯೋಜನೆಗಳಾಗಿವೆ.

ತೆವಳುತ್ತ ಸಾಗಿದ ಕೇಂದ್ರದ ಯೋಜನೆಗಳು:ಮೋದಿ ಸರ್ಕಾರದ ಮಹತ್ವದ ಯೋಜನೆಗಳತ್ತ ಬೊಮ್ಮಾಯಿ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿಲ್ಲವೇ ಎಂಬ ಅನುಮಾನ ಮೂಡುತ್ತಿದೆ‌. ಈ ಪ್ರಮುಖ ಯೋಜನೆಗಳಿಗೆ ಬಿಡುಗಡೆಯಾದ ಅನುದಾನ, ಮಾಡಿದ ವೆಚ್ಚ, ಪ್ರಗತಿ ನೋಡಿದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಇಚ್ಛಾಶಕ್ತಿ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತಿದೆ. ಇನ್ನೇನು 2022-23ರ ಬಜೆಟ್ ವರ್ಷ ಮುಕ್ತಾಯದ ಹೊಸ್ತಿಲ್ಲಲ್ಲಿ ಇದೆ. ಆದರೂ ಜಲಜೀವನ್ ಮಿಷನ್, ಆಯುಷ್ಮಾನ್ ಭಾರತ್, ಸ್ವಚ್ಛ ಭಾರತ ಯೋಜನೆಗಳು ರಾಜ್ಯದಲ್ಲಿ ತೆವಳುತ್ತಾ ಸಾಗುತ್ತಿದೆ.

ಜಲಜೀವನ್ ಮಿಷನ್ ಹಣ ಬಿಡುಗಡೆ ಅತ್ಯಲ್ಪ: ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆ ಈ ಜಲಜೀವನ್ ಮಿಷನ್ ಯೋಜನೆ. ಗ್ರಾಮೀಣ ಭಾಗದ ಜನರ‌ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆ ಆಗಿದೆ. ಆದರೆ, ಈ ಪ್ರಮುಖ ಕೇಂದ್ರ ಪುರಸ್ಕೃತ ಯೋಜನೆಗೆ ಆಗಿರುವ ಅನುದಾನ ಬಿಡುಗಡೆ, ಈ ವರೆಗಿನ ವೆಚ್ಚ ನೋಡಿದರೆ ವಸ್ತುಸ್ಥಿತಿ ಗೊತ್ತಾಗುತ್ತದೆ.

ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನ ವಿಳಂಬ: ಕೆಡಿಪಿ ಅಂಕಿ - ಅಂಶದ ಪ್ರಕಾರ ಜಲ ಜೀವನ್ ಮಿಷನ್ ಯೋಜನೆಗೆ 2023-24ರಲ್ಲಿ ಒಟ್ಟು 11,859.74 ಕೋಟಿ ರೂ.‌ ಅನುದಾನ ಹಂಚಿಕೆಯಾಗಿದೆ. ಆದರೆ, ಈ ವರೆಗೆ ಬಿಡುಗಡೆಯಾಗಿರುವುದು ಕೇವಲ 1,939.90 ಕೋಟಿ ರೂಗಳು ಮಾತ್ರ. ಜನವರಿ ವರೆಗೆ ಸುಮಾರು 3,109.66 ವೆಚ್ಚ ಮಾಡಲಾಗಿದೆ. ಅಂದರೆ ಹಂಚಿಕೆ ಪ್ರತಿ ಕಂಡಿರುವ ಪ್ರಗತಿ ಕೇವಲ ಶೇ34.55 ರಷ್ಟು ಮಾತ್ರ.

ಜಲಜೀವನ್ ಮಿಷನ್ ರಾಜ್ಯದ ಪಾಲು ಇರುವುದು ಸುಮಾರು 2586.49 ಕೋಟಿ ರೂ. ಆದರೆ, ಈ ವರೆಗೆ ಬಿಡುಗಡೆ ಆಗಿರುವುದು ಕೇವಲ 336.33 ಕೋಟಿ ಮಾತ್ರ. 583.33 ಕೋಟಿ ರೂ. ರಷ್ಟು ವೆಚ್ಚ ಮಾಡಲಾಗಿದೆ. ಇನ್ನು ಜಲಜೀವನ್ ಮಿಷನ್ ಗೆ ಕೇಂದ್ರದ ಪಾಲು 2,376.60 ರೂ. ಇದೆ. ಈ ವರೆಗೆ ಕೇಂದ್ರದಿಂದ ಹಣ ಬಿಡುಗಡೆ ಮಾಡಿಲ್ಲ.

ಸ್ವಚ್ಛ ಭಾರತದ ವಸ್ತುಸ್ಥಿತಿಯೂ ನಿರಾಶಾದಾಯಕ: ಇತ್ತ ಪ್ರಧಾನಿ ಮೋದಿಯವರ ಕನಸಿನ ಸ್ವಚ್ಛ ಭಾರತ ಯೋಜನೆಯೂ ರಾಜ್ಯದಲ್ಲಿ ತೆವಳುತ್ತಾ ಸಾಗುತ್ತಿದೆ. ಸ್ವಚ್ಛ ಭಾರತ ಯೋಜನೆಗೆ ಈವರೆಗೆ ಬಿಡುಗಡೆಯಾಗಿರುವ ಹಣ, ಮಾಡಿರುವ ವೆಚ್ಚವನ್ನು ನೋಡಿದರೆ ಡಬಲ್ ಇಂಜಿನ್ ಸರ್ಕಾರಗಳಿಗಿರುವ ಕಾಳಜಿಯನ್ನು ತೋರಿಸುತ್ತದೆ. ಈ ವರೆಗೆ ಸ್ವಚ್ಛ ಭಾರತ ಯೋಜನೆ ಒಟ್ಟು ಶೇ. 10.42ರಷ್ಟು ಮಾತ್ರ ಪ್ರಗತಿ ಕಂಡಿದೆ.

ಕೆಡಿಪಿ ಅಂಕಿ- ಅಂಶದಂತೆ ಸ್ವಚ್ಛಭಾರತ ಯೋಜನೆಯಡಿ ರಾಜ್ಯದ ಪಾಲು ಸುಮಾರು 166.40 ಕೋಟಿ ರೂ. ಅನುದಾನ ಹೊಂದಿದೆ. ಆದರೆ ಇದುವರೆಗೆ ಬಿಡುಗಡೆಯಾಗಿರುವ ಹಣ ಕೇವಲ 2.60 ಕೋಟಿ ರೂ.‌ಮಾತ್ರ. ಇತ್ತ ಯೋಜನೆ ಜಾರಿಗಾಗಿ ಮಾಡಿರುವ ವೆಚ್ಚವೂ ಬರೇ 7.81 ಕೋಟಿ ರೂ. ಆ ಮೂಲಕ ರಾಜ್ಯದ ಪಾಲಿನಲ್ಲಾದ ಒಟ್ಟು ಹಂಚಿಕೆಗೆ ಪ್ರಗತಿ ಕಂಡಿದ್ದು ಕೇವಲ ಶೇ 4.69ರಷ್ಟು ಮಾತ್ರ. ಇನ್ನು ಸ್ವಚ್ಛ ಭಾರತ ಯೋಜನೆಗೆ ಕೇಂದ್ರದ ಪಾಲಿನ‌ ರೂಪದಲ್ಲಿ 577.67 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ ಈವರೆಗೆ ಬಿಡಿಗಾಸನ್ನೂ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಕೇಂದ್ರದ ಪಾಲಿನಲ್ಲಾಗಿರುವ ವೆಚ್ಚ 69.72 ಕೋಟಿ ರೂ. ಮಾತ್ರ.

ಪಿಎಂ ಆಯುಷ್ಮಾನ್ ಭಾರತ್ ಪ್ರಗತಿನೂ ಅಷ್ಟಕಷ್ಟೇ: ಇತ್ತ ಬಡವರಿಗೆ ಆರೋಗ್ಯ ವಿಮೆ ಕಲ್ಪಿಸುವ ಆಯುಷ್ಮಾನ್ ಭಾರತ ಯೋಜನೆಯ ಅನುಷ್ಠಾನವೂ ಹಳಿ ತಪ್ಪಿದೆ. ಪಿಎಂ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಒಟ್ಟಾರೆ ಶೂನ್ಯ ಪ್ರಗತಿ ಕಂಡಿದೆ. ಪಿಎಂ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ನಲ್ಲಿ ಕೇಂದ್ರದ ಪಾಲಿನ ಅನುದಾನ ಹಂಚಿಕೆ 127.76 ಕೋಟಿ ರೂ. ಆದರೆ ಇತ್ತ ವೆಚ್ಚವೂ ಆಗಿಲ್ಲ, ಅನುದಾನವೂ ಬಿಡುಗಡೆ ಆಗಿಲ್ಲ. ಅದೇ ರೀತಿ ಪಿಎಂ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ನಡಿ ರಾಜ್ಯದ ಪಾಲಿನಲ್ಲಿ 85.17 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ರಾಜ್ಯವೂ ಬಿಡಿಗಾಸು ಹಣ ಬಿಡುಗಡೆ ಮಾಡಿಲ್ಲ. ಹಾಗಾಗಿ ಪ್ರಗತಿ ಶೂನ್ಯವಾಗಿದೆ.

ಒಟ್ಟು ಆಯುಷ್ಮಾನ್ ಭಾರತ ಯೋಜನೆ ಜಾರಿಗೆ 1,207 ಕೋಟಿ ರೂ. ಅನುದಾನ ಅಂಚಿಕೆಯಾಗಿದೆ. ಈ ಪೈಕಿ ಈವರೆಗೆ 779 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಒಟ್ಟು 910 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಇದನ್ನೂಓದಿ:ಶೇ50ರಷ್ಟು ರಿಯಾಯಿತಿ ಎಫೆಕ್ಟ್: ಎರಡನೇ ದಿನವೂ ಕೋಟಿ‌ ಕೋಟಿ ಸಂಚಾರಿ ದಂಡ ಪಾವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.