ETV Bharat / state

ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ಧನ: ಅರ್ಜಿ ಸಲ್ಲಿಕೆ ಹೇಗೆ?

author img

By

Published : Jan 28, 2023, 5:57 PM IST

ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್​​ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿರುವ ರಾಜ್ಯ ಸರ್ಕಾರ, ಇದೀಗ ಈ ಪ್ರೋತ್ಸಾಹ ಧನವನ್ನು 15 ಸಾವಿರ ರೂ.ಗೆ ಹೆಚ್ಚಿಸುತ್ತಿದೆ. ಪ್ರೋತ್ಸಾಹ ಧನ ಪಡೆಯಲು ಅರ್ಹತೆಗಳೇನು?, ಇದಕ್ಕೆ ಅರ್ಜಿ ಸಲ್ಲಿಸುವುದೇಗೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

millet
ಸಿರಿಧಾನ್ಯ

ಬೆಂಗಳೂರು: 2023ನೇ ವರ್ಷವನ್ನು 'ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ'ವೆಂದು ಘೋಷಿಸಿರುವ ಸರ್ಕಾರ, ಸಿರಿಧಾನ್ಯ ಕೃಷಿಯನ್ನು ಪ್ರೋತ್ಸಾಹಿಸಲು ಮುಂದಾಗಿದೆ. ರಾಜ್ಯದಲ್ಲಿ ಸುಮಾರು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತದೆ. ದೇಶದಲ್ಲೇ ಹೆಚ್ಚಿನ ಉತ್ಪಾದನೆಯಾಗುವ ಕರ್ನಾಟಕದಲ್ಲಿ ಸಾವಯವ ಹಾಗೂ ಸಿರಿಧಾನ್ಯ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮುನ್ನಣೆ ಸಿಗುತ್ತಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್​​ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿರುವ ರಾಜ್ಯ ಸರ್ಕಾರ, ಇದೀಗ ಈ ಪ್ರೋತ್ಸಾಹ ಧನವನ್ನು 15 ಸಾವಿರ ರೂ.ಗೆ ಹೆಚ್ಚಿಸುತ್ತಿದೆ.

ಸರ್ಕಾರ ಸಿರಿಧಾನ್ಯ ಕೃಷಿ, ಸಂಸ್ಕರಣ ಘಟಕ ಸ್ಥಾಪನೆ, ಮೌಲ್ಯವರ್ಧನೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹವಾಮಾನ ಬದಲಾವಣೆಯಿಂದ ಸಿರಿಧಾನ್ಯಗಳ ಬೆಳೆಯ ಪ್ರಮಾಣ ಹೆಚ್ಚಾಗುತ್ತದೆ. ಅತ್ಯಂತ ಕಡಿಮೆ ನೀರಿನಲ್ಲಿ ಹೆಚ್ಚಿನ ಉತ್ಪಾದನೆ ಮಾಡಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆ ಸಿಗುತ್ತದೆ. ಆಹಾರ ಭದ್ರತೆಯಲ್ಲಿಯೂ ಸಿರಿಧಾನ್ಯಗಳಿಗೆ ಅವಕಾಶ ಸಿಗುತ್ತದೆ. ಉತ್ತಮ ಬೆಲೆ ಸಿಕ್ಕಿದರೆ ರೈತರ ಆದಾಯ ಸಹ ದ್ವಿಗುಣಗೊಳ್ಳುತ್ತದೆ. ಪ್ರೋತ್ಸಾಹ ಧನ ಪಡೆಯಲು ಅರ್ಹತೆಗಳೇನು?, ಇದಕ್ಕೆ ಅರ್ಜಿ ಸಲ್ಲಿಸುವುದೇಗೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಪ್ರೋತ್ಸಾಹ ಧನ ಹೆಚ್ಚಳ: ಪ್ರಮುಖವಾಗಿ ಸಿರಿಧಾನ್ಯ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ಧನವನ್ನು ಸಹ ಒದಗಿಸುತ್ತಿದೆ. 2022-23 ನೇ ಸಾಲಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಮುಖ ಸಿರಿಧಾನ್ಯಗಳಾದ ನವಣೆ, ಸಾಮೆ, ಕೊರಲೆ, ಊದಲು, ಬರಗು (ರಾಗಿ, ಜೋಳ ಮತ್ತು ಸಜ್ಜೆ ಹೊರತುಪಡಿಸಿ) ಸಿರಿಧಾನ್ಯಗಳನ್ನು ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ಆಧಾರದ ಮೇಲೆ ಪ್ರತಿ ಹೆಕ್ಟೇರ್​ಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ.

ನೇರ ಸೌಲಭ್ಯ ವರ್ಗಾವಣೆ ಮುಖಾಂತರ ರೈತರ ಬ್ಯಾಂಕ್ ಖಾತೆಗೆ 10 ಸಾವಿರ ರೂ. ಪ್ರೋತ್ಸಾಹ ಧನ ಜಮೆ ಮಾಡಿ ಹೆಚ್ಚಿನ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ. ಈ ಮಧ್ಯೆ ಪ್ರೋತ್ಸಾಹ ಧನವನ್ನು 6 ಸಾವಿರ ರೂ.ಗೆ ಕಡಿತಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅದಕ್ಕೆ ಕೆಲದಿನಗಳ ಹಿಂದೆ ಸ್ಪಷ್ಟನೆ ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರಸ್ತುತ ನೀಡುತ್ತಿರುವ 10 ಸಾವಿರ ರೂ. ಪ್ರೋತ್ಸಾಹ ಧನವನ್ನು 15 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ಫಲಾನುಭವಿಗಳ ಅರ್ಹತೆಯೇನು?: ಈ ಯೋಜನೆಯ ಫಲಾನುಭವಿಗಳು ರೈತರಾಗಿರಬೇಕು. ಜಮೀನು ಅವರ ಹೆಸರಿನಲ್ಲಿರಬೇಕು. ಜಂಟಿ ಖಾತೆಯಾಗಿದ್ದಲ್ಲಿ, ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು. ಇನ್ನು ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನಿದ್ದರೆ, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮಲೆಕ್ಕಾಧಿಕಾರಿಯಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?: ಒಂದು ವೇಳೆ ಜಮೀನು ಮಹಿಳೆಯ ಹೆಸರಿನಲ್ಲಿದ್ದರೆ, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಮಹಿಳೆಯರ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಮುಖ್ಯವಾಗಿ ಫಲಾನುಭವಿ ರೈತರು ಸಿರಿಧಾನ್ಯಗಳಾದ ನವಣೆ, ಹಾರಕ, ಕೊರಲೆ, ಸಾಮೆ, ಬರಗು ಮತ್ತು ಊದಲು ಸಿರಿಧಾನ್ಯಗಳಿಗೆ ಬೆಳೆದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಮಹಿಳೆಯರು, ಹಿಂದುಳಿದ ವರ್ಗದ ರೈತರಿಗೆ ಹೆಚ್ಚಿನ ಆದ್ಯತೆ ಇದೆ.

ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್​ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹ ಧನ ನೀಡಲಾಗುವುದು. ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯಡಿ ಸಿರಿಧಾನ್ಯ ಪ್ರಾತ್ಯಕ್ಷಿಕೆಯ ಫಲಾನುಭವಿಗಳು ಈ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅರ್ಹವಿರುವುದಿಲ್ಲ. ರೈತರು ಇಲ್ಲಿ ನಮೂದಿಸಲಾದ ಎಲ್ಲ ವಿಷಯಗಳು ಪ್ರಾಥಮಿಕ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಮೂರು ದಿನ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ದೇಶ ವಿದೇಶದ ಸಿರಿಧಾನ್ಯ ಸಂಸ್ಥೆಗಳು ಭಾಗಿ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.