ETV Bharat / state

ಬೆಂಗಳೂರಿನಲ್ಲಿ ಇಂದು, ನಾಳೆ ಮಳೆ; ಆರೆಂಜ್‌ ಅಲರ್ಟ್‌ - ಸಿಎಂ ಸಿಟಿ ರೌಂಡ್ಸ್‌, ಪರಿಹಾರ ಘೋಷಣೆ

author img

By

Published : May 18, 2022, 10:51 AM IST

Updated : May 18, 2022, 1:09 PM IST

ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ರಾಜಧಾನಿ ಬೆಂಗಳೂರು ತತ್ತರಿಸಿದೆ. ಮಳೆಯಿಂದ ಹಾನಿಗೊಳಗಾದ ಕೆಲ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರ್​.ಆರ್. ನಗರ ಮತ್ತು ಹೊಸಕೆರೆಹಳ್ಳಿಗೆ ಸಿಎಂ ಭೇಟಿ ನೀಡಿದರು.

IMD issues orange alert for Bengaluru, predicts heavy rains
ಬೆಂಗಳೂರಿನಲ್ಲಿ ಇಂದು, ನಾಳೆ ಆರೆಂಜ್ ಅಲರ್ಟ್

ಬೆಂಗಳೂರು: ವಾಯುಭಾರ ಕುಸಿತದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರುಪೂರ್ವ ಮಳೆಯಾಗುತ್ತಿದ್ದು, ಮುಂದಿನ ನಾಲ್ಕು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ವ್ಯಾಪಕ ಮಳೆ ಬೀಳಲಿರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್, 20 ಮತ್ತು 21ರಂದು ಯೆಲ್ಲೋ ಅಲರ್ಟ್ ಘೋಷಿಸಿದೆ.

ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ರಾಜಧಾನಿ ಬೆಂಗಳೂರು ತತ್ತರಿಸಿದೆ. ಮಂಗಳವಾರ ಸಂಜೆಯಿಂದ ಬುಧವಾರ ಬೆಳಗಿನ ಜಾವದವರೆಗೆ ಬಿಟ್ಟೂಬಿಡದೆ ಸುರಿದ ಮಳೆಯಿಂದಾಗಿ 200ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಹಲವು ಬಡಾವಣೆಗಳ ನಿವಾಸಿಗಳು ಪರದಾಡುವಂತಾಗಿದೆ.

ಸಿಎಂ ಭೇಟಿ: ನಗರದಲ್ಲಿ ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್‌ಗೆ ತೆರಳಿದ್ದು, ಮಳೆಯಿಂದ ಹಾನಿಗೊಳಗಾದ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರ್​.ಆರ್. ನಗರ ಮತ್ತು ಹೊಸಕೆರೆಹಳ್ಳಿಗೆ ಸಿಎಂ ಭೇಟಿ ನೀಡಿದ್ದಾರೆ. ಈ ವೇಳೆ ಸಚಿವರಾದ ಆರ್ ಅಶೋಕ್​ ಮತ್ತು ಮುನಿರತ್ನ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಇತರರು ಇದ್ದರು. ಈ ವೇಳೆ ಬಡಾವಣೆಗಳ ಜನರು ತಮ್ಮ ಕಷ್ಟ ಹೇಳಿಕೊಂಡರು, ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ನಂತರ ಐಡಿಯಲ್ ಹೋಮ್ಸ್ ಬಡಾವಣೆಗೆ ಸಿಎಂ ಭೇಟಿ ನೀಡಿ, ಮಳೆಹಾನಿ ಪ್ರದೇಶದ ವೀಕ್ಷಣೆ ಮಾಡಿದರು.

ಪರಿಹಾರ ಘೋಷಣೆ: ಹಾನಿಗೊಳಗಾದ ಮನೆಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ 25 ಸಾವಿರ ರೂ.ಗಳ ಪರಿಹಾರ ಘೋಷಣೆ ಮಾಡಿದ್ದು, ಕೊಳಚೆ ಪ್ರದೇಶ ಸೇರಿ ಮಳೆಹಾನಿ ಸಂತ್ರಸ್ತರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಾವೇ ಮನೆಗಳಲ್ಲಿ ತುಂಬಿರುವ ನೀರು ಹೊರಹಾಕಿಸಿ ಸ್ವಚ್ಛಪಡಿಸಿಕೊಡುತ್ತೇವೆ ಎಂದು ತಿಳಿಸಿದರು.

  • Karnataka CM Basavaraj Bommai, along with state cabinet ministers R Ashoka and Munirathna, BJP national general secretary CT Ravi and other officials, visited rain-affected areas near Hosakerehalli, south Bengaluru while he was on his way to Chikamagalur.

    (Source: CMO) pic.twitter.com/rmUMBoNcE1

    — ANI (@ANI) May 18, 2022 " class="align-text-top noRightClick twitterSection" data=" ">

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಇಂತಹ ಮಳೆಹಾನಿ ಸಮಸ್ಯೆಗೆ ಪರಿಹಾರ ಸಿಗಬೇಕಾದರೆ ನಮ್ಮ ರಾಜಕಾಲುವೆಗಳನ್ನು ಪೂರ್ಣಪ್ರಮಾಣದಲ್ಲಿ ನಗರದ ಹೊರ ಭಾಗಕ್ಕೆ ಸಂಪರ್ಕ ಕಲ್ಪಿಸಬೇಕು. ಇದರಿಂದ ಸರಾಗವಾಗಿ ಹೊರಭಾಗಕ್ಕೆ ನೀರು ಹರಿದು ಹೋಗಲಿದೆ ಎಂದರು.

ಇದಕ್ಕಾಗಿ 1,600 ಕೋಟಿ ರೂ. ಒದಗಿಸಲಾಗಿದ್ದು, ಕಾಮಗಾರಿ ಆರಂಭವಾಗಲಿದೆ. ಇವೆಲ್ಲವನ್ನೂ ಮಾಡಿದರೂ ಕೂಡ ಕೆಲವು ತಗ್ಗುಪ್ರದೇಶದಲ್ಲಿ ನೀರು ನಿಲ್ಲಲಿದೆ. ಕೆಲವರು ಕೆರೆ ಪ್ರದೇಶದಲ್ಲಿ ನಿವೇಶನ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಹೀಗಾಗಿ ಅಂತಹ ವಾರ್ಡ್​​ಗಳಲ್ಲಿ ಡ್ರೈನೇಜ್​ ಅಭಿವೃದ್ಧಿಪಡಿಸುವ ಕೆಲಸ ಮಾಡಲಿದ್ದೇವೆ. ಇನ್ನೊಂದೆರಡು ವರ್ಷದಲ್ಲಿ ಎಲ್ಲ ಸರಿಪಡಿಸುವ ಕೆಲಸವಾಗಲಿದೆ. ಆದಷ್ಟು ಬೇಗ ಒಳಚರಂಡಿ, ರಾಜಕಾಲುವೆ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದರು.

ಇದೇ ವೇಳೆ ಉಲ್ಲಾಳ ಉಪನಗರದ ಬಳಿ ನಿನ್ನೆ ಮಳೆಯಿಂದಾಗಿ ಕಾವೇರಿ 5ನೇ ಹಂತದ ಕಾಮಗಾರಿಗೆ ಪೈಪ್‌ಲೈನ್ ಅಳವಡಿಕೆ ವೇಳೆ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ಸಿಎಂ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು. ಏಳು ಗಂಟೆ ಸಮಯದಲ್ಲಿ ಮಳೆ ಜಾಸ್ತಿಯಾಗಿದ್ದರಿಂದ ಪೈಪ್​​ನೊಳಗೆ​ ಕೆಲಸ ಮಾಡುವಾಗ ಏಕಾಏಕಿ ನೀರು ತುಂಬಿಕೊಂಡಿತ್ತು. ದೇವ್ ಬಾತ್ ಹಾಗೂ ಅಂಕಿತ್ ಎಂಬುವರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಕಾರ್ಮಿಕ ಪಾರಾಗಿದ್ದ.

ಜಾತ್ರೆಗೆ ಸಿಎಂ ಚಾಲನೆ: ಚಿಕ್ಕಮಗಳೂರು ಪ್ರವಾಸಕ್ಕೆ ತೆರಳುವ ಮೊದಲು ಜಯನಗರದ ಕಾಮಾಕ್ಷಿಪಾಳ್ಯಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಟಾಲಮ್ಮ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಉತ್ಸವದಲ್ಲಿ ಭಾಗಿಯಾಗಿ ಜನತೆಗೆ ಶುಭ ಕೋರಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ವರುಣಾರ್ಭಟಕ್ಕೆ ಇಬ್ಬರು ಕಾರ್ಮಿಕರು ಬಲಿ; 200ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

Last Updated : May 18, 2022, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.