ETV Bharat / state

ಬೆಂಗಳೂರಲ್ಲಿ ವರುಣಾರ್ಭಟಕ್ಕೆ ಇಬ್ಬರು ಕಾರ್ಮಿಕರು ಬಲಿ; 200ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

author img

By

Published : May 18, 2022, 10:12 AM IST

Updated : May 18, 2022, 1:47 PM IST

ಬೆಂಗಳೂರಿನಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಕಮಲಾ‌ನಗರ, ನಂದಿನಿ ಬಡಾವಣೆ, ಕಂಠೀರವ ನಗರ ಸೇರಿದಂತೆ ಲೇಔಟ್​​ನ ತಗ್ಗು ಪ್ರದೇಶದ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಪೈಪ್ ಲೈನ್ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

heavy-rain-in-bengaluru-two-workers-died
ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಇಬ್ಬರು ಕಾರ್ಮಿಕರು ಬಲಿ

ಬೆಂಗಳೂರು: ರಾಜಧಾನಿಯಲ್ಲಿ ನಿನ್ನೆ ರಾತ್ರಿ ಸುರಿದ ಜೋರು ಮಳೆಗೆ ಪೈಪ್​​ಲೈನ್ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಾಳದ ಉಪ್ಪಾರ್ ನಗರದ ಬಸ್ ನಿಲ್ದಾಣದ ಬಳಿ ಕಾವೇರಿ ನೀರಿನ 5ನೇ ಹಂತದ ಕಾಮಗಾರಿ ನಡೆಯುತ್ತಿತ್ತು.

ಬಿಹಾರ ಮೂಲದ ದೇವ್‌ ಬಾತ್ ಹಾಗೂ ಉತ್ತರಪ್ರದೇಶದ ಅಂಕಿತ್ ಕುಮಾರ್ ಸೇರಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ರಾತ್ರಿ ಏಳು ಗಂಟೆ ವೇಳೆ ಮಳೆ ಜಾಸ್ತಿಯಾಗಿದ್ದರಿಂದ ಪೈಪ್​​ನೊಳಗೆ​ ಕೆಲಸ ಮಾಡುವಾಗ ಏಕಾಏಕಿ ನೀರು ತುಂಬಿಕೊಂಡಿದ್ದು, ದೇವ್ ಬಾತ್ ಹಾಗೂ ಅಂಕಿತ್ ಉಸಿರುಗಟ್ಟಿಸಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಕಾರ್ಮಿಕ ಪಾರಾಗಿದ್ದಾನೆ.

heavy-rain-in-bengaluru-two-workers-died
ಪೈಪ್ ಲೈನ್ ಕಾಮಗಾರಿ

ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ‌ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೇಲ್ನೋಟಕ್ಕೆ ನಿರ್ಲಕ್ಷ್ಯ ಕಂಡುಬಂದಿದ್ದು, ಈ ಸಂಬಂಧ ಪೊಲೀಸರು ಇಬ್ಬರು ಗುತ್ತಿಗೆದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

200ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು: ಮಳೆಯಿಂದ ನಗರದ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಕಮಲಾ‌ನಗರ, ನಂದಿನಿ ಬಡಾವಣೆ, ಕಂಠೀರವ ನಗರ ಸೇರಿದಂತೆ ಲೇಔಟ್​​ನ ತಗ್ಗು ಪ್ರದೇಶದ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕ್ಷೇತ್ರದ ಶಾಸಕ, ಅಬಕಾರಿ ಸಚಿವ ಕೆ.ಗೋಪಾಲಯ್ಯ ರಾತ್ರಿ ಕೆಲ ಮನೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮಳೆ ನೀರಿನಿಂದ ಮನೆಯಲ್ಲಿನ ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ. ಅಡುಗೆ ಮಾಡಿಕೊಳ್ಳಲು ಜನರು ಪರಿತಪಿಸಬೇಕಾದ ಸ್ಥಿತಿ ‌ನಿರ್ಮಾಣವಾಗಿತ್ತು. ಹೀಗಾಗಿ, ಇಂದು ಬೆಳಗ್ಗೆ ಮತ್ತೆ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದ ಗೋಪಾಲಯ್ಯ 250ಕ್ಕೂ ಹೆಚ್ಚು ಕುಟುಂಬಗಳಿಗೆ ‌ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ‌ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.

heavy rain in bengaluru
ಸಚಿವ ಕೆ.ಗೋಪಾಲಯ್ಯ ಭೇಟಿ, ಪರಿಶೀಲನೆ

ಒಳಚರಂಡಿ ತಡೆಗೋಡೆ ನಿರ್ಮಾಣ: ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಕೈಗೊಂಡಿರುವ ಒಳಚರಂಡಿ ತಡೆಗೋಡೆ ನಿರ್ಮಾಣ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಇದೇ ವೇಳೆ ಸಚಿವರು ಸೂಚನೆ ನೀಡಿದರು. ಇದಕ್ಕೂ ಮುನ್ನ ಮಧ್ಯರಾತ್ರಿಯೇ ಬಿಬಿಎಂಪಿ ಅಧಿಕಾರಿಗಳು ಮತ್ತು ಇಂಜಿನಿಯರ್​​ಗಳನ್ನು ಸ್ಥಳಕ್ಕೆ ಕರೆಯಿಸಿ ಪರಿಸ್ಥಿತಿ ಅವಲೋಕಿಸಿದರು. ಹೊರಮಾವುನಲ್ಲಿ ಅತ್ಯಧಿಕ 155 ಮಿ.ಮೀ., ಯಲಹಂಕದಲ್ಲಿ 129 ಮಿ.ಮೀ., ವಿದ್ಯಾಪೀಠ ಭಾಗದಲ್ಲಿ 127 ಮಿ.ಮೀ. ಹಾಗೂ ಅತಿ ಕಡಿಮೆ ಕೆಂಗೇರಿಯಲ್ಲಿ 37 ಮಿ.ಮೀ. ಮಳೆಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಧಾರಾಕಾರ‌‌ ಮಳೆಗೆ ನದಿಯಂತಾದ ರಸ್ತೆಗಳು: ಬೆಂಗಳೂರಲ್ಲಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್‌

Last Updated : May 18, 2022, 1:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.