ETV Bharat / state

ವರ್ಗಾವಣೆಯಲ್ಲಿ ಲಂಚ ಪಡೆದಿದ್ದೇನೆ ಎಂದು ಯಾರಾದ್ರು ಹೇಳಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಸಿಎಂ ಸಿದ್ದರಾಮಯ್ಯ

author img

By

Published : Jul 13, 2023, 9:27 PM IST

ನಮ್ಮ ಸರ್ಕಾರ ಬಂದ ಮೇಲೆ ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಬೆಂಗಳೂರು : ವರ್ಗಾವಣೆಯಲ್ಲಿ ಲಂಚ ಪಡೆದಿದ್ದೇನೆ ಎಂದು ಯಾರಾದರು ಒಬ್ಬರು ಹೇಳಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡುತ್ತಾ, ವರ್ಗಾವಣೆ ಆದಾಗಲೇ ಅದರಲ್ಲಿ ದಂಧೆ ನಡೆದಿದೆ ಎಂಬುದು ಹಾಸ್ಯಾಸ್ಪದ. ಅದು ಸತ್ಯಕ್ಕೆ ದೂರವಾದ ಮಾತು. ಐದು ವರ್ಷ ಅವಧಿಗೆ ರಾಜ್ಯದ ಜನರು ನಮಗೆ ಆಶೀರ್ವಾದ ನೀಡಿದ್ದಾರೆ. ಎರಡು ತಿಂಗಳಲ್ಲಿ ವರ್ಗಾವಣೆ ದಂಧೆ ಆಗಿದೆ ಎಂಬ ಟೀಕೆ ಮಾಡಲಾಗಿದೆ. ವರ್ಗಾವಣೆ ಆಗುವುದು ಸಹಜ. ಅದು ಬಿಜೆಪಿ ಸರ್ಕಾರ ಆಗಿದ್ದಾಗಲೂ ಆಗಿತ್ತು. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಆಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕಾರಣ ತುಸು ಹೆಚ್ಚು ವರ್ಗಾವಣೆ ಆಗಬಹುದು. ನಮ್ಮ ಸರ್ಕಾರ ಬಂದ ಮೇಲೆ ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡಬೇಕಾಗುತ್ತದೆ ಎಂದರು.

ಖಂಡತುಂಡವಾಗಿ ಅಲ್ಲಗಳೆಯುತ್ತೇನೆ: ಅವರ ಕಾಲದಲ್ಲಿ ವರ್ಗಾವಣೆ ಆಗಿತ್ತಲ್ಲ. ಹಾಗಾದರೆ ಆವಾಗಲೂ ದಂಧೆ, ವ್ಯಾಪಾರ ನಡೆದಿತ್ತಾ?. ನಾನು ಎರಡನೇ ಬಾರಿ ಸಿಎಂ ಆಗಿದ್ದೇನೆ. ಸಿಎಂ ಆಗಿ ಐದು ವರ್ಷ ಕಾಲ ಪೂರ್ಣಾವಧಿ ಅಧಿಕಾರದಲ್ಲಿದ್ದೆ. ಇಷ್ಟು ಸುದೀರ್ಘವಾದ ರಾಜಕಾರಣದಲ್ಲಿ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಮಾಡಿದ್ದೇನೆ ಎಂಬ ಯಾವ ಕಳಂಕ, ಆರೋಪವೂ ನನ್ನ ಮೇಲೆ ಇಲ್ಲ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯಬಾರದು ಎಂದು ಸಂಪುಟ ಸಭೆಯಲ್ಲಿ ಎಲ್ಲಾ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ವರ್ಗಾವಣೆ ದಂಧೆ ನಡೆದಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ, ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ ನಾನು ಅದನ್ನು ಖಂಡತುಂಡವಾಗಿ ಅಲ್ಲಗಳೆಯುತ್ತೇನೆ ಎಂದರು.

ಭ್ರಷ್ಟಾಚಾರದ ಆರೋಪ ಅದು ಕಪೋಲಕಲ್ಪಿತ: ನನ್ನ ಇಲಾಖೆಗಳಲ್ಲೇ ಒಂದೂ ವರ್ಗಾವಣೆ ಮಾಡೇ ಇಲ್ಲ. ಬಜೆಟ್ ಪೂರ್ವ ಸಿದ್ಧತೆ ಹಿನ್ನೆಲೆ ಸಮಯ ಇರಲಿಲ್ಲ. ಯಾವ ಇಲಾಖೆಗಳಲ್ಲೂ ಭ್ರಷ್ಟಾಚಾರ ‌ನಡೆಯಲು ಸಾಧ್ಯವಿಲ್ಲ. ನಮಗೆ ಗೊತ್ತಿಲ್ಲದಂತೆ ಮಾಡಿದ್ದರೆ ಆಗಿರಬಹುದು. ನಾನು ಸಂಪೂರ್ಣ ಭ್ರಷ್ಟಾಚಾರ ನಡೆಯುವುದಿಲ್ಲ ಎಂದು ಹೇಳಲ್ಲ. ಗೊತ್ತಿದ್ದು ಭ್ರಷ್ಟಾಚಾರ ಆಗಲು ಸಾಧ್ಯವಿಲ್ಲ. ಭ್ರಷ್ಟಾಚಾರದ ಆರೋಪ ಅದು ಕಪೋಲಕಲ್ಪಿತವಾಗಿದೆ. ನಮ್ಮ ಸರ್ಕಾರದ ಮೇಲೆ ಹೇಳಲು ಏನೂ ಇಲ್ಲ‌ ಅದಕ್ಕೆ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಹಿಂದಿನ ಸರ್ಕಾರದ ಅಕ್ರಮಗಳನ್ನು ತನಿಖೆ ಮಾಡಲು ಹೇಳಿದ್ದೇನೆ. 2013 ರಿಂದಲೂ ತನಿಖೆ ಮಾಡಲು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದರು. ನಾನು 10 ಸಾರಿ ಹೇಳಿದ್ದೇನೆ. ನೀವು ಅಧಿಕಾರದಲ್ಲಿದ್ದಾಗ ತನಿಖೆ ಮಾಡಿಸಿ ಎಂದು ಹೇಳಿದ್ದೆ. ಆದರೆ ಮೂರುವರೆ ವರ್ಷದಲ್ಲಿ ತನಿಖೆ ಮಾಡಿಸಬಹುದಿತ್ತಲ್ಲ. ನಾವು ಯಾರೂ ಅಡ್ಡಿ ಮಾಡಿಲ್ಲ. ಯಾಕೆ ತನಿಖೆ ಮಾಡಿಸಿಲ್ಲ. ಏಕೆ ಮಾಡಿಲ್ಲ ಅಂದರೆ ಅವರಿಗೆ ನಮ್ಮ ಮೇಲೆ ಯಾವುದೇ ಸಾಕ್ಷಿಗಳು ಇರಲಿಲ್ಲ. ಅದಕ್ಕೆ ತನಿಖೆ ಮಾಡಿರಲಿಲ್ಲ ಎಂದು ತಿಳಿಸಿದರು.

ಬೇರೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆತಾ ಇದಿಯಾ?: ಇದೇ ವೇಳೆ ಮಧ್ಯಪ್ರವೇಶ ಮಾಡಿದ ಮಾಜಿ ಸಿಎಂ ಬೊಮ್ಮಾಯಿ, ವರ್ಗಾವಣೆ ದಂಧೆ ಮಾತನಾಡುವಾಗ, ಇಡೀ ಸರ್ಕಾರದ ವರ್ಗಾವಣೆ ಬಗ್ಗೆ ಜನರು ಬೀದಿಗಳಲ್ಲಿ ಮಾತನಾಡುತ್ತಾರೆ ಅಂದಿದ್ದೇವೆ. ಸಿಎಂ ಭ್ರಷ್ಟಾಚಾರ ಮಾಡಿದ್ದಾರೆ ಎಂದು ನಾವು ಹೇಳಿಲ್ಲ. ಆದರೆ ನಾನು ಮಾಡಿಲ್ಲ ಅಂದರೆ ಏನು ಅರ್ಥ. ಅಂದರೆ ಬೇರೆ ಇಲಾಖೆಗಳಲ್ಲಿ ನಡೆಯುತ್ತಿದೆ ಎಂದರ್ಥನಾ? ಎಂದು ಪ್ರಶ್ನಿಸಿದರು.

ನೀವು ಏನು ಆಧಾರರಹಿತ ಆರೋಪ ಮಾಡಿದ್ದಿರಿ. ಅದರ ಬಗ್ಗೆ ತನಿಖೆ ನಡೆಸಿ.‌ ನಮಗೆ ಭಯ ಇಲ್ಲ. ಲೋಕಾಯುಕ್ತ ಸಂಸ್ಥೆಗೆ ನಿಮ್ಮ ಸರ್ಕಾರ, ಮಂತ್ರಿಗಳ ವಿರುದ್ಧ ದೂರು ನೀಡಿದ್ದೇನೆ. ಅದನ್ನೆಲ್ಲಾ ಸೇರಿಸಿ ತನಿಖೆ ಮಾಡಿ ಎಂದು ನಾವು ಹೇಳಿದ್ದೇವೆ. ನಾವು ತನಿಖೆಯನ್ನೇ ಮಾಡಿಲ್ಲ ಅಂತ ಹೇಳಬೇಡಿ. ಯಾವ ರೀತಿ ಭ್ರಷ್ಟಾಚಾರ ಆಗಿದೆ ಎಲ್ಲವೂ ಹೊರ ಬರಲಿ. ನೀವು ತನಿಖೆ ನಡೆಸುತ್ತಿರುವ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ. ನಿಮ್ಮ ಮೇಲಿರುವ ಆರೋಪಗಳ ಬಗ್ಗೆಯೂ ಎಸ್ಐಟಿಗೆ ಕೊಟ್ಟರೆ ಬೇಗ ತನಿಖೆ ಆಗುತ್ತೆ ಎಂಬುದು ನಮ್ಮ ಮನವಿ ಎಂದರು.

ನಮ್ಮ ಹಿಂದಿನ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ: ಲೋಕಾಯುಕ್ತರನ್ನು ನಿಷ್ಕ್ರಿಯ ಮಾಡಿದ್ದೀರಿ ಎಂಬುದು ಸತ್ಯಕ್ಕೆ ದೂರವಾಗಿದ್ದು, ಎಸಿಬಿ 18 ರಾಜ್ಯಗಳಲ್ಲಿದೆ. ಬಿಜೆಪಿ ಆಡಳಿತ ನಡೆಸುವ ರಾಜ್ಯದಲ್ಲೂ ಎಸಿಬಿ ಇವೆ. ಸಿಬಿಐ ರೂಪದಲ್ಲಿ ಮಾಡೋಣ ಎಂದು ಎಸಿಬಿ ಮಾಡಿದ್ದೆವು. ನೀವು ಅಧಿಕಾರಕ್ಕೆ ಬಂದ ತಕ್ಷಣ ಎಸಿಬಿ ರದ್ದು ಮಾಡುತ್ತೇವೆ ಎಂದಿದ್ದೀರಿ. ಆದರೆ ಮಾಡಲೇ ಇಲ್ಲ. ಲೋಕಾಯುಕ್ತ ಅಸ್ತಿತ್ವದಲ್ಲಿ ಇರಲೇ ಇಲ್ಲ ಅಂದರೆ ವಿಶ್ವನಾಥ ಶೆಟ್ಟಿ ಯಾರು? ಎಂದು ಪ್ರಶ್ನಿಸಿದರು.

ಕೋರ್ಟ್ ಎಸಿಬಿ ರದ್ದು ಮಾಡಿತು. ಅದನ್ನೇನು ನೀವು ರದ್ದು ಮಾಡಿಲ್ಲ. ಹೈಕೋರ್ಟ್​ನಲ್ಲಿ ನಿಮ್ಮ ಸರ್ಕಾರದ ಅಭಿಪ್ರಾಯ ಏನು ಇತ್ತು. ಅಂದಿನ ಅಡ್ವೊಕೇಟ್ ಜನರಲ್ ಆಗಿದ್ದಾಗ ನಿಮ್ಮ ಸರ್ಕಾರ ಏನು ವಾದ ಮಾಡಿತ್ತು ಎಂದು ಪ್ರಶ್ನಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಾದ ಮುಖ್ಯನಾ? ಜಡ್ಜ್ ಮೆಂಟ್ ಮುಖ್ಯನಾ?. ತೀರ್ಪಿನಲ್ಲಿ ನಿಮ್ಮ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.

ನೀವು ಅವಕಾಶ ಇದ್ದಾಗ ತನಿಖೆ ಮಾಡಿಲ್ಲ. ಈಗ ಮಾಡಿ ಅಂದರೆ ಅದಕ್ಕೇನಾದರೂ ಬಲ ಇದೆಯಾ?.‌ ನಮ್ಮ 2013-2018 ನಮ್ಮ ಸರ್ಕಾರ ಇದ್ದಾಗ ಯಾವುದೇ ‌ಭ್ರಷ್ಟಾಚಾರ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಿಮಗೆ ಯಾವತ್ತೂ ಮ್ಯಾಂಡೇಟ್ ಸಿಕ್ಕಿಲ್ಲ: ಯಾವತ್ತಾದರೂ ಬಿಜೆಪಿಗೆ ಬಹುಮತ ಸಿಕ್ಕಿದೆಯಾ?. ಜನರ ಆಶೀರ್ವಾದ ಪಡೆದಿದ್ದರಾ?. ಕುತಂತ್ರ ಮಾಡಿ, ಆಪರೇಷನ್ ಮಾಡಿ ಅಧಿಕಾರಕ್ಕೆ ಬಂದಿದ್ದೀರಿ. ನಿಮಗೆ ಇಲ್ಲಿಯವರೆಗೆ ಯಾವುದೇ ಮ್ಯಾಂಡೇಟ್ ಇದ್ದೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ದೂರಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಒಮ್ಮೆ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಅಧಿಕಾರಕ್ಕೆ ಬರಲೇ ಇಲ್ಲ.‌ ನಿಮ್ಮ ಕ್ರೆಡೆಬಿಲಿಟಿನೂ ಹಾಗೇ ಇತ್ತು. ನಮ್ಮಲ್ಲಿನ ಒಡಕಿನ ಲಾಭ ಪಡೆದು ಅಧಿಕಾರಕ್ಕೆ ಬಂದಿದ್ದೀರಿ. ನಿಮ್ಮ ಬಲದಿಂದ ಅಧಿಕಾರಕ್ಕೆ ಬಂದೇ ಇಲ್ಲ. ಕರ್ನಾಟಕದಲ್ಲಿ ಮೊದಲ ಆಪರೇಷನ್ ಹಸ್ತ ಆಗಿರುವುದು ನಿಮ್ಮಿಂದಲೇ. ಅದು 2007ರಲ್ಲಿ ಆಪರೇಷನ್ ಆಗಿದೆ ಎಂದರು.

2008ರಲ್ಲಿ ನಿಮಗೆ ಯಾವ ಮ್ಯಾಂಡೇಟ್ ಇತ್ತು?: 2018ರಲ್ಲಿ ನಿಮಗೆ ಮ್ಯಾಂಡೇಟ್ ಇತ್ತಾ?. 80 ಸೀಟ್ ಬಂದು ಸಮ್ಮಿಶ್ರ ಸರ್ಕಾರ ಮಾಡಿದ್ರಲ್ಲಾ ಯಾವ ಮ್ಯಾಂಡೇಟ್ ಇತ್ತು?. ನೀವು ನಮಗೆ ಮ್ಯಾಂಡೇಟ್ ಬಗ್ಗೆ ಪಾಠ ಮಾಡುತ್ತೀರಾ?. 2004ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಜನ ತಿರಸ್ಕಾರ ಮಾಡಿದ್ದರು. ಅಂದು ಮ್ಯಾಂಡೇಟ್ ಕೊಡದೇ ಇದ್ದರೂ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದರು. ಆವತ್ತು ನೀವು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಲ್ವಾ? ಎಂದು ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.

ನಾನು ಜೆಡಿಎಸ್​ನಿಂದ ವಜಾ ಆದೆ. ನಾನು ರಾಜೀನಾಮೆ ಕೊಟ್ಟೆ. ಆಮೇಲೆ ಉಪಚುನಾವಣೆಯಲ್ಲಿ ಗೆದ್ದೆ. ನಾನು ಅಧಿಕಾರದಲ್ಲಿದ್ದ ಪಕ್ಷಕ್ಕೆ ಹೋಗಿಲ್ಲ. ಆಗ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ನಾನು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿ ಗೆದ್ದೆ. ಅದು ವಾಸ್ತವಾಂಶ ಎಂದು ಸಿಎಂ ಸಿದ್ದರಾಮಯ್ಯ ವಿವರಣೆ ನೀಡಿದರು.

ಕುದುರೆ ವ್ಯಾಪಾರದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ: ಕುದುರೆ ವ್ಯಾಪಾರದ ಬಗ್ಗೆ ಮಾತನಾಡಲು ನಮಗೆ ಯಾರಿಗೂ ಯೋಗ್ಯತೆ ಇಲ್ಲ. ಯುಪಿಎ ಸರ್ಕಾರದಲ್ಲಿ ಪರಮಾಣು ಒಪ್ಪಂದ ಆದಾಗ ಕುದುರೆ ವ್ಯಾಪಾರ ಆಗಿಲ್ಲವಾ?. ಎಲ್ಲರ ಕಾಲದಲ್ಲೂ ಕುದುರೆ ವ್ಯಾಪಾರ ಆಗಿದೆ.ಈ ಬಗ್ಗೆ ಎಲ್ಲರೂ ನಾವು ಗಾಜಿನ‌ ಮನೆಯಲ್ಲೇ ಇದ್ದೇವೆ.‌ ಅದರ ಬಗ್ಗೆ ಮಾತನಾಡುತ್ತೇವೆ. ರಾಜಕೀಯ ಮಾತನಾಡಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಜನ ತೀರ್ಪು ಕೊಟ್ಟಿದ್ದಾರೆ, ಅದಕ್ಕೆ ನಾವು ಇಲ್ಲಿ ಬಂದು ಕೂತಿರೋದು. ಆಪರೇಷನ್ ನಮ್ಮಿಂದ ಅಂದಿದ್ದೀರಿ. 2004ರ ಚುನಾವಣೆಯ ಪರ್ಸೆಂಟೇಜ್ ಬಗ್ಗೆ ಹೇಳಿದ್ರು. ಆವತ್ತಿನ ಕಾಂಗ್ರೆಸ್ ಸರ್ಕಾರವನ್ನು ಜನರು ತಿರಸ್ಕಾರ ಮಾಡಿದ್ರು.

ಆವತ್ತು ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ನಾವೇ ಸರ್ಕಾರ ಮಾಡಬೇಕು ಎಂದು ಹೇಳಿದರು. ಅವರ ಒತ್ತಡದಿಂದಲೇ ಸಮ್ಮಿಶ್ರ ಸರ್ಕಾರ ಆಯ್ತು. 2008ರಲ್ಲಿ ನಾವು ಅಧಿಕಾರ ಹಸ್ತಾಂತರ ಮಾಡಿಲ್ಲ ಅಂದ ಕಾರಣ ಅವರಿಗೆ ಹೆಚ್ಚು ಸೀಟು ಬಂತು. ಆರು ಪಕ್ಷೇತರ ಬೆಂಬಲದೊಂದಿಗೆ ಅವರು ಸರ್ಕಾರ ಮಾಡಿದ್ರು. ಬೇರೆ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಆಪರೇಷನ್ ಮಾಡಿಲ್ವಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ 136 ಸೀಟು ಗೆದ್ದಿರಬಹುದು. ಈವಾಗ ನಡೆಯುತ್ತಿರುವ ವಾತಾವರಣ ಯಾರಿಗೂ ಶಾಶ್ವತ ಅಲ್ಲ. ಚಕ್ರ ತಿರುಗುತ್ತಿರುತ್ತದೆ. ನಾಳೆ‌ ಬೆಳಗ್ಗೆ ಯಾವುದೇ ಚುನಾವಣೆ ಬರಲ್ಲ. 2018 ರಲ್ಲಿ ಆಪರೇಷನ್​ಗೆ ಅವಕಾಶ ಮಾಡಿಕೊಟ್ಟಿಲ್ಲ ಅಂದಿದ್ರೆ. ಅವರು ಯಾಕೆ ಆಪರೇಷನ್ ಮಾಡ್ತಿದ್ರು ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಪ್ರಧಾನಿಗಳೇ ಕರೆ ಮಾಡಿ ಬೆಂಬಲ ಸೂಚಿಸಿದ್ದರು: 2018ರಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ಪ್ರಧಾನಿಗಳೇ ಫೋನ್ ಮಾಡಿ ನೀವು 5 ವರ್ಷ ಸಿಎಂ ಎಂದಿದ್ರು. 2018ರಲ್ಲಿ ಪ್ರಧಾನಿ ಮೋದಿ ನನ್ನನ್ನು ಕರೆಸಿ ಸುಮಾರು ಒಂದೂವರೆ ತಾಸು ಚರ್ಚೆ ನಡೆಸಿದ್ದರು. ನಾನು ನಿಮಗೆ ಬೆಂಬಲ ಕೊಡುತ್ತೇವೆ. ನೀವು ಮುಂದಿನ ಐದು ವರ್ಷ ಸಿಎಂ ಆಗಿರುತ್ತೀರಾ? ಎಂದು ಹೇಳಿದ್ದರು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇವೆ. ಆದರೆ ನಾನು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.

ಇನ್ನೂ ವಿಪಕ್ಷ ನಾಯಕ ಆಯ್ಕೆ ಆಗಿಲ್ಲ: ಚುನಾವಣೆ ಆಗಿ ಎರಡು ತಿಂಗಳಾಯ್ತು. ಸರ್ಕಾರ ಬಂದು ಎರಡು ತಿಂಗಳಾಗ್ತಾ ಬಂತು. ಸದನ ಪ್ರಾರಂಭವಾಗಿ 12 ದಿನ ಆಯ್ತು. ಆದರೆ ಇನ್ನೂ ಪ್ರತಿಪಕ್ಷ ನಾಯಕರ ಆಯ್ಕೆಯಾಗಿಲ್ಲ. ಇದು ಕರ್ನಾಟಕದ ಇತಿಹಾಸದಲ್ಲೇ ಮೊದಲು. ಬೊಮ್ಮಾಯಿಯವರೇ ನಿಮಗೆ ಅವಕಾಶ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಬೊಮ್ಮಾಯಿ ಕಾಲೆಳೆದರು.

ಇದನ್ನೂ ಓದಿ: ವರ್ಗಾವಣೆ ದಂಧೆಗೆ ಅಡ್ಡಗಳನ್ನು ಮಾಡಿಕೊಂಡಿದ್ದಾರೆ, ದಾಖಲೆ ಇಟ್ಟಿದ್ದಕ್ಕೆ ಈಗ ಜಾತಿ ಬಣ್ಣ ಕಟ್ಟಿದ್ದಾರೆ: ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.