ETV Bharat / state

ಪಕ್ಷಕ್ಕಾಗಿ ಶ್ರಮ ಪಟ್ಟಿದ್ದೇನೆ, ಈಗ ನನಗೆ ಹಿರಿ-ಕಿರಿಯರ ಸಹಕಾರ ಸಿಗುವ ವಿಶ್ವಾಸ ಇದೆ: ಡಿಕೆಶಿ

author img

By

Published : May 12, 2023, 6:06 PM IST

Updated : May 12, 2023, 6:32 PM IST

ಸಿಎಂ ಕುರ್ಚಿಗಾಗಿ ಫೈಟ್​ ಶುರುವಾಗಿದ್ದು, ಇದೀಗ ಜಿ ಪರಮೇಶ್ವರ್​​ ಹಾಗೂ ಡಿಕೆಶಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

KPCC President D K Shivakumar
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಬೆಂಗಳೂರು: ಪಕ್ಷಕ್ಕಾಗಿ ನಾನು ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಹಾಗಾಗಿ ಈಗ ನನಗೆ ಹಿರಿ- ಕಿರಿಯ ಎಲ್ಲರೂ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಡಿಕೆ ಶಿವಕುಮಾರ್ ಮಾರ್ಮಿಕ ಉತ್ತರ ನೀಡಿದ್ದು, ಮುಂದಿನ ಸಿಎಂ ಆಗುವ ಆಶಯ ವ್ಯಕ್ತಪಡಿಸಿದ್ದಾರೆ.

ನನಗೆ ಜವಾಬ್ದಾರಿ ಕೊಟ್ಟ ದಿನದಿಂದ ನಾನೂ ಮಲಗಿಲ್ಲ, ಉಳಿದವರನ್ನೂ ಮಲಗುವುದಕ್ಕೆ ಬಿಟ್ಟಿಲ್ಲ. ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿರ್ವಹಿಸುವುದು ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದಾಗ ಆ ಜವಾಬ್ದಾರಿಯನ್ನು ನನಗೆ ಕೊಟ್ಟರು. ಆಗ ನೈತಿಕ ಹೊಣೆ ಹೊತ್ತು ಎಲ್ಲರೂ ರಾಜೀನಾಮೆ ಕೊಟ್ಟಿದ್ರು. ಆಗ ನನಗೆ ಸೋನಿಯ ಗಾಂಧಿ ಜವಾಬ್ದಾರಿ ಕೊಟ್ಟರು. ಈಗ ಎಲ್ಲರೂ ನಮಗೆ ಸಹಕಾರ ಕೊಡ್ತಾರೆ. ಹಿರಿಯರು ಕಿರಿಯರು ಎಲ್ಲರೂ ನಮಗೆ ಈಗ ಸಹಕಾರ ಕೊಡ್ತಾರೆ. ಉತ್ತಮವಾದ ಸರ್ಕಾರ ಕೊಡ್ತೀವಿ ಎನ್ನುವ ಭರವಸೆ ನನಗಿದೆ ಎಂದು ಹೇಳಿದರು.

ಎಕ್ಸಿಟ್ ಪೋಲ್​ನಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷ ಎಂದು ಬಿಂಬಿತವಾದ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಸಿಎಂಗಾದಿ ಫೈಟ್ ಶುರುವಾಗಿದೆ. ಇದೀಗ ನೇರವಾಗಿ ಸಿಎಂ ಗಾದಿಗೆ ಕ್ಲೇಮ್ ಮಾಡಿರುವ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೂ ಭೇಟಿ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಡಿಕೆ ಶಿವಕುಮಾರ್ ಸಭೆ ನಡೆಸಿದ್ದಾರೆ. ಜ್ವರದಿಂದ ಬಳಲುತ್ತಿದ್ದರೂ, ನಾಳೆಯೇ ಫಲಿತಾಂಶ ಇರುವ ಹಿನ್ನೆಲೆ ಡಿಕೆಶಿ ನೇರವಾಗಿ ಸದಾಶಿವನಗರದಲ್ಲಿರುವ ಖರ್ಗೆ ನಿವಾಸಕ್ಕೆ ತೆರಳಿ ಹೈ ವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ.

ಬೆಳಗ್ಗೆಯಷ್ಟೇ ಖರ್ಗೆ ಭೇಟಿ ಮಾಡಿದ್ದ ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಪರಮೇಶ್ವರ್ ಸುದೀರ್ಘ ಮಾತುಕತೆ ನಡೆಸಿದ್ದರು. ಇದೀಗ ಡಿಕೆ ಶಿವಕುಮಾರ್ ತೆರಳಿ ಮಾತುಕತೆ ನಡೆಸಿದ್ದಾರೆ. ಮುಂದಿನ ತಂತ್ರಗಾರಿಕೆ ಭಾಗವಾಗಿ ಡಿಕೆಶಿ- ಖರ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಇತ್ತ ತಮ್ಮ ಸದಾಶಿವನಗರ ನಿವಾಸದಲ್ಲಿ ಮಾತನಾಡಿರುವ ಡಿಕೆಶಿ, ನನಗೆ ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ. ನನ್ನ ಸಂಖ್ಯೆ 141, ಎಕ್ಸಿಟ್ ಪೋಲ್​ನ ಸಂಖ್ಯೆ ಬಹಳ ಕಡಿಮೆ ಇದೆ. ನಮ್ಮ ಎಕ್ಸಿಟ್ ಪೋಲ್ ಸ್ಯಾಂಪಲ್ಸ್ ಹೆಚ್ಚಿದೆ. ಕಾಂಗ್ರೆಸ್ ಪರವಾಗಿ ದೊಡ್ಡ ಗಾಳಿ ಇದೆ. ಮೊದಲು ಹೆಚ್ಚು ತೋರಿಸಿದವರು, ಆಮೇಲೆ ಕಡಿಮೆ ತೋರಿಸಿದರು. ಯಾವ ಕಾರಣಕ್ಕೂ ಸಂಖ್ಯೆ ಕಡಿಮೆಯಾಗುವುದಿಲ್ಲ. ನಿಚ್ಚಳವಾದ ಬಹುಮತ ಕಾಂಗ್ರೆಸ್ ಪಕ್ಷಕ್ಕೆ ಬರುತ್ತದೆ. ಬ್ಯಾಲೆಟ್ ಈಸ್ ಸ್ಟ್ರಾಂಗರ್ ದ್ಯಾನ್ ದಿ ಬುಲೆಟ್. ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಾಗ ಜನ ಹೇಗೆ ಬುಲೆಟ್​ಗೆ ಹೆದರಲಿಲ್ಲವೋ, ಹಾಗೆ ಜನ ಈ ಬಾರಿ ಆಸೆ ಆಮಿಷಗಳಿಗೆ ಮನ್ನಣೆ ನೀಡಿಲ್ಲ. ನಾಳೆ ಒಂದು ಗಂಟೆ ಅಷ್ಟೊತ್ತಿಗೆ ಎಲ್ಲ ತೀರ್ಪು ಹೊರಬರಲಿದೆ ಎಂದರು.

ತೆರೆಯೂ ಇಲ್ಲ. ಮರೆಯೂ ಇಲ್ಲ. ಎಚ್​ಡಿಕೆ ಏನು ಹೇಳ್ತಾರೆ, ಮಾಡ್ತಾರೆ ಗೊತ್ತಿಲ್ಲ. ಮೈತ್ರಿ ಬಗ್ಗೆ ಎಚ್​ಡಿಕೆ ಮಾತು ಗೊತ್ತಿಲ್ಲ. ಕುಮಾರಣ್ಣನ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು, ಅದಕ್ಕೆ ಮಾತಾಡ್ತಾರೆ. ನಾನಂತೂ ಹೋರಾಟ ಮಾಡುವವನು, ಈಗಲೇ ರಿಟೈರ್ ಆಗುವವನಲ್ಲ. ನಾನು ಕೊನೇ ಉಸಿರು ಇರುವ ತನಕ ಫೈಟ್ ಮಾಡುವವನು. ಜೆಡಿಎಸ್ ನಾಯಕರು ಕಾರ್ಯಕರ್ತರಿಗೆ ಹೇಳ್ತಾ ಇದ್ದೇನೆ, ಬಂದು ನನ್ನ ಸೇರಿಕೊಳ್ಳಿ ಎಂದು ಮುಕ್ತ ಆಹ್ವಾನ ನೀಡಿದರು.

ರೆಸಾರ್ಟ್ ರಾಜಕಾರಣ ಮುಗಿದು ಹೋಯ್ತು. ಎಷ್ಟೇ ನಂಬರ್ ಬಂದರೂ ಸರ್ಕಾರ ಮಾಡ್ತೀವಿ ಅಂತ ಹೇಳಿದ್ದಾರಲ್ಲ. ಎಲ್ಲಾ ಪಾರ್ಟಿಯವರು ಅವರವರ ಶಾಸಕರನ್ನು ಹಿಡಿದಿಟ್ಟುಕೊಳ್ತಾರೆ. ಯಾವ ಅಧಿಕಾರ ಹಂಚಿಕೆಯ ಮಾತೂ ಇಲ್ಲ. ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಏನು ಹೇಳ್ತಾರೋ ಹಾಗೆ ಕೇಳ್ತೀವಿ ಎಂದರು.

ಸಿಎಂ ಸ್ಥಾನಕ್ಕೆ ಗುಪ್ತ ಮತದಾನ: ಸಿದ್ದರಾಮಯ್ಯ ನಿವಾಸದಲ್ಲಿ ಕಲಘಟಗಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಮಾತನಾಡಿದ್ದು, ಮೂರ್ನಾಲ್ಕು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಇದೆ. ಖಂಡಿತವಾಗಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ನಂಬಿಕೆ ಇದೆ. ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಇದೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರವೂ ಕಾಂಗ್ರೆಸ್ ಗೆಲ್ಲುತ್ತೆ. ನನ್ನ ಕ್ಷೇತ್ರದಲ್ಲಿ ನಾನು ಗೆಲುವು ಸಾಧಿಸುತ್ತೇನೆ. ಬಿಜೆಪಿ ಹಳೇ ಟ್ರಿಕ್ಸ್ ಇದು. ಈ ಬಗ್ಗೆ ನಮಗೆ ಅರಿವು ಇದೆ. ಅವರಿಗೆ ಟ್ರಿಕ್ಸ್​ ಮಾಡೋಕೆ ಅವಕಾಶ ಸಿಗುತ್ತಾ ಇಲ್ವಾ ನೋಡೋಣ ಎಂದರು.

ಸಿಎಂ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಇದೆ. ಸಿಎಲ್​ಪಿ ಸಭೆಯಲ್ಲಿ ನಿರ್ಧಾರ ಆಗುತ್ತೆ. ಹೈಕಮಾಂಡ್ ಏನು ಹೇಳುತ್ತಾರೆ ಅದರ ಮೇಲೆ ನಮ್ಮ ಒಲವು. ಸಿಎಂ ಸ್ಥಾನಕ್ಕೆ ಕೇವಲ ಎರಡು ಹೆಸರು ಮಾತ್ರ ಏಕೆ? ಸಾಕಷ್ಟು ನಾಯಕರು ಇದ್ದಾರೆ. ಸಿಎಲ್​ಪಿ ಸಭೆಯಲ್ಲಿ ಗುಪ್ತ ಮತದಾನ ನಡೆಯುತ್ತೆ ಎಂದು ಹೇಳಿದರು.

ಇದನ್ನೂ ಓದಿ: ನಮ್ಮದೇ ಸರ್ಕಾರ ರಚನೆ, ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಿದ್ದೇನೆ: ಸಿಎಂ ಬೊಮ್ಮಾಯಿ

Last Updated :May 12, 2023, 6:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.