ETV Bharat / state

ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿರುವುದೆಷ್ಟು?: ತೆರವಿಗೆ ಸರ್ಕಾರದ ಹೊಸ ಪ್ಲಾನ್ ಏನು?

author img

By

Published : Apr 1, 2021, 9:18 PM IST

ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ವಿಶೇಷ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿರುವ ಹೊರತಾಗಿಯೂ ಒತ್ತುವರಿ ತೆರವು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಲೇ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸರ್ಕಾರ
ಸರ್ಕಾರ

ಬೆಂಗಳೂರು : ಸರ್ಕಾರದ ಜಮೀನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ ಸಾರ್ವಜನಿಕ ಭೂಮಿ ನಿಗಮವನ್ನು ಸ್ಥಾಪಿಸಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೂ ಪ್ರತಿ ತಿಂಗಳು ಭೂಮಿ ಒತ್ತುವರಿ ತೆರವುಗೊಳಿಸುವ ಕಡೆ ಗಮನಹರಿಸಬೇಕು ಕೆಡಿಪಿ ಸಭೆಗಳಲ್ಲೂ ಚರ್ಚೆಯಾಗಬೇಕೆಂದು ಸರ್ಕಾರ ಸೂಚನೆ ನೀಡಿದೆ.

ಒತ್ತುವರಿಗೆ ಸಂಬಂಧಿಸಿದಂತೆ ಮೂರು ವರದಿಗಳಿವೆ. ಬೆಂಗಳೂರು ನಗರದ ಸುತ್ತಮುತ್ತ ಆಗಿರುವ ಭೂ ಒತ್ತುವರಿಯ ಕುರಿತು ಎ.ಟಿ. ರಾಮಸ್ವಾಮಿ ಅವರು 2007ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅದರಂತೆ ಸುಮಾರು 27,336 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಿರುವ ಸರ್ಕಾರಿ ಭೂಮಿ ಒತ್ತುವರಿ ಕುರಿತು ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣ್ಯನ್ ನೇತೃತ್ವದ ತಂಡ ರಾಜ್ಯದಲ್ಲಿ 12 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ವರದಿ ಸಲ್ಲಿಸಿತ್ತು.

ಇದಲ್ಲದೆ, ಎ.ಟಿ ರಾಮಸ್ವಾಮಿ ವರದಿ ಪ್ರಕಾರ, ಬೆಂಗಳೂರು ನಗರವೊಂದರಲ್ಲೇ ಸುಮಾರು 34 ಸಾವಿರಕ್ಕೂ ಹೆಚ್ಚು ಎಕರೆಯಷ್ಟು ಸರ್ಕಾರಿ ಭೂಮಿ ಒತ್ತುವರಿ ಆಗಿದೆ ಎಂದು ವರದಿ ನೀಡಿತ್ತು. ಇದಾದ ಬಳಿಕ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಕೆರೆಗಳ ಒತ್ತುವರಿಗೆ ಸಂಬಂಧಿಸಿದ ವರದಿ ನೀಡಿದ್ದರು.

ಸರ್ಕಾರದ ಬಳಿ ಖಚಿತ ಮಾಹಿತಿ ಇಲ್ಲ: ಕೆಪಿಎಲ್‌ಸಿ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2017ರಿಂದ 2019ರವರೆಗೂ 63.8 ಲಕ್ಷ ಸರ್ಕಾರಿ ಜಮೀನು ಇತ್ತು. ಈಗ 61.88 ಲಕ್ಷ ಎಕರೆಗೆ ಇಳಿದಿದೆ. ಸರ್ಕಾರಿ ಜಮೀನಿನ ಲೆಕ್ಕಾಚಾರದ ಮರು ಹೊಂದಾಣಿಕೆಯ ಪರಿಣಾಮವಾಗಿ 1.98 ಲಕ್ಷ ಎಕರೆ ಯಷ್ಟು ಕುಸಿತ ಕಂಡುಬಂದಿದೆ ಎಂಬ ವಾದವಿದೆ. ಆದರೆ, ಈಗಲೂ ಕರ್ನಾಟಕದಲ್ಲಿ ಎಷ್ಟು ಎಕರೆ ಸರ್ಕಾರಿ ಜಮೀನು ಇದೆ ಎಂಬ ಖಚಿತವಾದ ಮಾಹಿತಿ ಸರ್ಕಾರದ ಬಳಿಯೂ ಇಲ್ಲ ಎನ್ನಲಾಗ್ತಿದೆ.

ಬಗರ್ ಹುಕುಂ ಸಾಗುವಳಿ 9.9 ಲಕ್ಷ ಎಕರೆ, 2019ರ ಏಪ್ರಿಲ್‌ವರೆಗೆ ರಾಜ್ಯದಲ್ಲಿ 11.77 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿತ್ತು. ಈಗ ಅದು 14.18 ಲಕ್ಷ ಎಕರೆಗೆ ತಲುಪಿದೆ. ನ್ಯಾಯಾಲಯದ ಮುಂದಿರುವ ಒತ್ತುವರಿ ಭೂಮಿ 9,723 ಎಕರೆ, ಸಾರ್ವಜನಿಕ ಉದ್ದೇಶಕ್ಕೆ ಒತ್ತುವರಿ 13,253 ಎಕರೆ, 4.04 ಲಕ್ಷ ಎಕರೆ ಇತರ ಉದ್ದೇಶಕ್ಕೆ ಒತ್ತುವರಿಯಾಗಿದೆ. ರಾಜ್ಯದಲ್ಲಿ ರೈತರ ಬಗರ್ ಹುಕುಂ ಸಾಗುವಳಿ ಬಿಟ್ಟು ಸುಮಾರು 4.04 ಲಕ್ಷ ಎಕರೆ ಭೂಮಿಯನ್ನು ಒತ್ತುವರಿಯಿಂದ ತೆರವು ಮಾಡಬೇಕಾಗಿದೆ. ಸುಮಾರು 9,723 ಎಕರೆಗೆ ಸಂಬಂಧಿಸಿದ ವ್ಯಾಜ್ಯಗಳು ನ್ಯಾಯಾಲಯದ ಮುಂದೆ ಇದೆ.

ವಿವಾದಕ್ಕೆ ಒಳಗಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ಒತ್ತುವರಿಯಲ್ಲಿ ಬೆಂಗಳೂರಿನದ್ದೇ ಹೆಚ್ಚು. ಶೇ. 30ಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ಸೇರಿವೆ. ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಶೇ. 97 ರಷ್ಟು ಒತ್ತುವರಿಯಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಒತ್ತುವರಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಭೂಮಿ ರೈತರ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂಗೆ ಸೇರಿದ ಜಮೀನಾಗಿದೆ.

ಸರ್ಕಾರದ ಹೊಸ ಪ್ಲಾನ್ ಏನು? : ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿಸಲು ರಾಜ್ಯ ಸರ್ಕಾರ ಹೊಸ ಪ್ಲಾನ್ ಮಾಡಲು ಮುಂದಾಗಿದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ವಿಶೇಷ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿರುವ ಹೊರತಾಗಿಯೂ ಒತ್ತುವರಿ ತೆರವು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಲೇ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸರ್ಕಾರ ಭೂ ಕಬಳಿಕೆ ನಿಷೇಧ ಕಾಯ್ದೆ ತಂದ ನಂತರ ಸಾಕಷ್ಟು ಪ್ರಕರಣಗಳು ನ್ಯಾಯಾಲಯದ ಮುಂದಿವೆ. ಬಗರ್ ಹುಕುಂ ಸಾಗುವಳಿ ಪ್ರಕರಣದಲ್ಲಿಯೂ ನ್ಯಾಯಾಲಯದ ಮುಂದೆ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ರೈತರಿಂದ ಬಿಟ್ಟು ಬಲಾಢ್ಯರಿಂದ ಒತ್ತುವರಿ ತೆರವು ಮಾಡಿಸಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರು ಸೇರಿದಂತೆ ಬಹುತೇಕ ಪ್ರಮುಖ ನಗರಗಳಲ್ಲಿ ಬಲಾಢ್ಯರು ಒತ್ತುವರಿ ಮಾಡಿದ್ದಾರೆ. ಆದರೆ ಯಾರೊಬ್ಬರಿಗೂ ಶಿಕ್ಷೆಯಾಗುತ್ತಿಲ್ಲ. ಸಣ್ಣಪುಟ್ಟ ರೈತರು ಶಿಕ್ಷೆಗೆ ಒಳಗಾಗಿರುವ ಉದಾಹರಣೆಗಳಿವೆ. ಪ್ರತಿ ವರ್ಷ ಗ್ರಾಮ ಮಟ್ಟದಲ್ಲಿ ಜಮಾಬಂದಿ ನಡೆಸಬೇಕು. ಆದರೆ, ಇದು ನಡೆಯುತ್ತಿಲ್ಲ. ಮೂಲಗಳ ಪ್ರಕಾರ, 6 ವರ್ಷಗಳಿಂದ ಈ ರೀತಿಯ ಮರು ಹೊಂದಾಣಿಕೆಯ ಪ್ರಕ್ರಿಯೆ ನಡೆಯುತ್ತಲೇ ಇದೆ. ಜಿಲ್ಲಾಧಿಕಾರಿಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅಂಕಿಅಂಶಗಳನ್ನು ನೀಡಿರುವುದೇ ಈ ರೀತಿಯ ವ್ಯತ್ಯಾಸ ಬರಲು ಕಾರಣ. ಇನ್ನೊಂದೆಡೆ ರಾಜ್ಯದಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ನಿರಂತರವಾಗಿ ಮುಂದುವರಿಯುತ್ತಲೇ ಇದೆ ಎಂಬುದನ್ನು ಕೆಪಿಎಲ್‌ಸಿ ನೀಡಿರುವ ಅಂಕಿ-ಅಂಶಗಳು ಹೇಳುತ್ತಿವೆ.

ಸರ್ಕಾರಿ ಭೂಮಿ ಒತ್ತುವರಿ ನಿಯಂತ್ರಣ, ಒತ್ತುವರಿ ತೆರವು ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಪಡೆ ರಚಿಸಿ ಸೂಚನೆ ನೀಡಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ ಅನ್ವಯ ಒತ್ತುವರಿದಾರರಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಜಮೀನು ಒತ್ತುವರಿ ಹಾಗೂ ನಕಲಿ ದಾಖಲೆ ಸೃಷ್ಟಿ ಅಪರಾಧಕ್ಕಾಗಿ 3 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಇದನ್ನೂ ಓದಿ.. ಗದಗ ಮೂಲದ ಅಪ್ರಾಪ್ತೆಯ ಶವ ರಾಮದುರ್ಗದಲ್ಲಿ ಪತ್ತೆ: ಅತ್ಯಾಚಾರವೆಸಗಿ ಕೊಲೆ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.