ETV Bharat / state

ಪ್ರಗತಿಪರ ಚಿಂತಕರ ರಕ್ಷಣೆಗೆ ಕಮಿಷನರ್, ಡಿಜಿಪಿಗೆ ಸೂಚನೆ: ಡಾ.ಜಿ.ಪರಮೇಶ್ವರ್

author img

By

Published : Aug 17, 2023, 2:26 PM IST

Updated : Aug 17, 2023, 4:05 PM IST

ಪ್ರಗತಿಪರರಿಗೆ ಬಂದ ಬೆದರಿಕೆ‌ ಪತ್ರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

Dr g parameshwar
ಡಾ.ಜಿ.ಪರಮೇಶ್ವರ್

ಬೆಂಗಳೂರು: ಪ್ರಗತಿಪರ ಚಿಂತಕರಿಗೆ ಬೆದರಿಕೆ ಪತ್ರ ಸಂಬಂಧ ಕಮಿಷನರ್, ಡಿಜಿಪಿಗೆ ರಕ್ಷಣೆ ನೀಡುವಂತೆ ಸೂಚಿಸಿದ್ದೇನೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಪ್ರಗತಿಪರರಿಗೆ ಬೆದರಿಕೆ ಪತ್ರ ವಿಚಾರವಾಗಿ ಇಂದು ನಗರದಲ್ಲಿ ಮಾತನಾಡಿದ ಅವರು, ಕೆಲ‌ ಸಾಹಿತಿಗಳು ಭೇಟಿಗಾಗಿ ಸಮಯ ಕೇಳಿದ್ದಾರೆ. ಸಮಯ ನೀಡಿ ಭೇಟಿಯಾಗುತ್ತೇನೆ. ಅವರು ಬರೆದ ಪತ್ರವನ್ನು ಡಿಜಿಪಿಗೆ ಕಳುಹಿಸುತ್ತೇನೆ. ನಾವು ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಇನ್ನೂ ಮರೆತಿಲ್ಲ. ಹೀಗಾಗಿ ಬೆದರಿಕೆ ಬಂದಿದೆ ಅಂದ್ರೆ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಸಾಹಿತಿಗಳನ್ನು ಭೇಟಿಯಾದ ಮೇಲೆ ಗೊತ್ತಾಗುತ್ತೆ, ಯಾರು ಯಾಕೆ ಬರೆದರು ಅಂತ ಎಂದು ತಿಳಿಸಿದರು.

ಸಾಹಿತಿಗಳ ಪತ್ರದಲ್ಲೇನಿದೆ? "ಆಗಸ್ಟ್ 14ರಂದು ಪ್ರೊ.ಕೆ.ಮರುಳಸಿದ್ದಪ್ಪ ಬರೆದಿರುವ ಪತ್ರದಲ್ಲಿ "ಕೋಮುವಾದ, ಜಾತಿವಾದ, ಮೌಢ್ಯ ವಿರೋಧಿ ನಿಲುವುಳ್ಳ ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ ಬೆದರಿಕೆ ಪತ್ರಗಳ ಸರಣಿಯಿಂದ ಮಾನಸಿಕ ಹಿಂಸೆಯಾಗುತ್ತಿದೆ. ಯಾವ ಸಂದರ್ಭದಲ್ಲಾದರೂ ತಮ್ಮ ಮೇಲೆ ದಾಳಿಯಾಗಬಹುದು ಎಂಬ ಆತಂಕದಿಂದಲೇ ತಮ್ಮ ಸೃಜನಶೀಲ, ಸಮಾಜಮುಖಿ ಕೆಲಸಗಳಲ್ಲಿ ತೊಡಗುವಂತಾಗಿದೆ. ಪ್ರೊ.ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ಪ್ರಕರಣಗಳ ಹಿನ್ನೆಲೆಯ ವಾಸ್ತವ ಸಂಗತಿಯು ಇದರ ಗಂಭೀರತೆ ಹೆಚ್ಚಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಗತಿಪರ ಆಶಯಗಳ ಬಗೆಗೆ ಅಸಹನೆ ಆಕ್ರೋಶವಿರುವ ಹಿಂಸಾರಭಸಮತಿಗಳು ಈ ಬೆದರಿಕೆ ಪತ್ರಗಳ ಹಿಂದಿನ ರೂವಾರಿಗಳಾಗಿದ್ದು, ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್‌ ಇಲಾಖೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಆದೇಶ ನೀಡಬೇಕು.

ಅಲ್ಲದೇ ಈ ಬಗೆಗೆ ವಿವರಗಳನ್ನು ನೀಡಿ ತಮಗೆ ಮನವರಿಕೆ ಮಾಡಿಕೊಡಲು ನಾವು ಕೆಲವರು ತಮ್ಮನ್ನು ಭೇಟಿಯಾಗಲು ಬಯಸಿದ್ದೇವೆ. ಪ್ರೊ. ಕೆ.ಮರುಳಸಿದ್ದಪ್ಪ, ಡಾ. ಜಿ. ರಾಮಕೃಷ್ಣ, ಡಾ. ವಿಜಯನ್ನು ಪ್ರೊ.ಎಸ್. ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್‌, ವಿಮಲಾ, ಶ್ರೀಪಾದ ಭಟ್‌, ಸುರೇಂದ್ರ ರಾವ್ ಮುಂತಾಗಿ ಹದಿನೈದಕ್ಕೂ ಹೆಚ್ಚು ಸಾಹಿತಿಗಳು ತಮ್ಮನ್ನು ಭೇಟಿ ಮಾಡಲು ಉದ್ದೇಶಿಸಿದೆ" ಎಂದು ಭೇಟಿಗೆ ಸೂಕ್ತ ದಿನ, ಸಮಯವನ್ನು ನಿಗದಿ ಪಡಿಸಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಾಗಿದೆ.

ಇನ್ನು ನಟ ಉಪೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿರುವ ಪರಮೇಶ್ವರ್, ಉಪೇಂದ್ರ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ದುರುದ್ದೇಶದಿಂದ ಹೇಳಿಲ್ಲ ಅಂತ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಕಾನೂನು ಬೇರೆ ದೃಷ್ಟಿಯಲ್ಲೇ ನೋಡುತ್ತೆ. ಈ ನಿಟ್ಟಿನಲ್ಲಿ ಪೊಲೀಸರು ಕ್ರಮವಹಿಸುತ್ತಾರೆ. ಕಾನೂನು ಇದೆ, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಉಪೇಂದ್ರ, ಮಲ್ಲಿಕಾರ್ಜುನ್‌ ಅಂತ ಬೇಧ ಭಾವ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನಾನು ಸಿಎಂ ಭೇಟಿಯಾದ ಉದ್ದೇಶವೇ ಬೇರೆ. ಈ ವಿಚಾರಕ್ಕೆ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷಕ್ಕೆ ವಾಪಸ್ ಬರುತ್ತೇನೆ ಅಂದ್ರೆ ಒಪ್ಪುತ್ತೇವೆ: ಎಸ್.ಟಿ.ಸೋಮಶೇಖರ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಪಕ್ಷಕ್ಕೆ ವಾಪಸ್ ಬರುತ್ತೇನೆ ಎಂದರೆ ಒಪ್ಪುತ್ತೇವೆ. ನಾನು ಅವರನ್ನು ಸಂಪರ್ಕ ಮಾಡಿಲ್ಲ. ಹಿಂದೆ ಕಾಂಗ್ರೆಸ್​ಗೆ ದುಡಿದಂತವರು.‌ ಪಕ್ಷದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ನಾನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷನಾಗಿದ್ದೆ. ಅವರನ್ನು ಜಿಲ್ಲಾಧ್ಯಕ್ಷನಾಗಿ ಮಾಡಿದ್ದೆ. ಒಳ್ಳೆ ಕೆಲಸ ಮಾಡಿದ್ದಾರೆ. ಅವರನ್ನು ಪಕ್ಷವು ಅದೇ ರೀತಿಯಲ್ಲಿ ನೋಡಿಕೊಂಡಿತ್ತು. ನಮ್ಮ ಪಕ್ಷದಲ್ಲಿ ಮೂರು ಭಾರಿ ಶಾಸಕರಾಗಿದ್ದರು. ಇಲ್ಲೇ ಇದ್ದಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು. ಅವರಿಗೆ ಅಲ್ಲಿ ಬೇಸರವಾಗಿದೆ ಎಂದು ಹೇಳಿದ್ದಾರೆ. ಅವರು ಪಕ್ಷಕ್ಕೆ ವಾಪಸ್ ಬರುತ್ತೇನೆ ಅಂದ್ರೆ ಒಪ್ಪುತ್ತೇವೆ ಎಂದು ಸಚಿವರು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಅವರು ಬರಬಾರದು ಎಂದು ಅಡತಡೆ ಮಾಡಲು ಹೋಗಲ್ಲ. ಪಕ್ಷಕ್ಕೆ ಸ್ಥಾನವನ್ನು ನೋಡಿ ಬರ್ತಿನಿ ಎಂದು ಹೇಳಿಲ್ಲ. ನಮ್ಮ ಪಕ್ಷದ ಸಿದ್ದಾಂತ ನೋಡಿ ಬರಬಹುದು. ಯಾವುದೇ ರೀತಿ ಭೇದ ಭಾವ ಮಾಡುವುದಕ್ಕೆ ಹೋಗಲ್ಲ. ಅವರ ಸಾಮರ್ಥ್ಯವನ್ನು ನೋಡಿ ಅಧಿಕಾರ ಸಿಗುತ್ತೆ. ರಾಜಕೀಯದಲ್ಲಿ ಎಲ್ಲವೂ ಸಾಧ್ಯವಿದೆ ಎಂದು ಪರೋಕ್ಷ ಸುಳಿವು ನೀಡಿದರು.

ಇತ್ತೀಚಿಗಿನ ಕೆಲ ಬೆಳವಣಿಗೆಗಳು ಎಸ್.ಟಿ.ಸೋಮಶೇಖರ್ ವಾಪಸ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಕ್ಷೇತ್ರದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ರನ್ನು ಹೊಗಳಿ ಭಾಷಣ ಮಾಡಿದ್ದರು. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಸ್ವತಃ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಪಕ್ಷ ಸೇರುವ ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು: ಡಿಕೆಶಿ ಮಂತ್ರಿ ಆಗಿರೋದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಕುಮಾರಸ್ವಾಮಿ ಪ್ರಶ್ನೆ

Last Updated : Aug 17, 2023, 4:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.