ETV Bharat / state

ಕೇವಲ ಸಚಿವರ ಮನೆ ಮುಂದಿನ ರಸ್ತೆ ಉತ್ತಮವಾಗಿದ್ದರೆ ಸಾಲದು: ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿಗೆ ಹೈಕೋರ್ಟ್ ಚಾಟಿ

author img

By

Published : Oct 16, 2021, 10:22 AM IST

ರಸ್ತೆ ಗುಂಡಿ ಮುಚ್ಚುವ ಕೆಲಸ ಸಂಬಂಧ ಪಿಐಎಲ್​ ವಿಚಾರಣೆ ನಡೆಸಿದ ಹೈಕೋರ್ಟ್​, ಪಾಲಿಕೆಯ ಮಸೂರದಲ್ಲೇ ಸಮಸ್ಯೆ ಇದೆ. ಹೀಗಾಗಿಯೇ ಪಾಲಿಕೆಗೆ ಕೇವಲ ಸಚಿವರ ಮನೆ, ಹೈಕೋರ್ಟ್ ಹಾಗೂ ವಿಧಾನಸೌಧಗಳ ಮುಂದಿನ ರಸ್ತೆಗಳು ಮಾತ್ರ ಕಾಣಿಸುತ್ತಿವೆ. ಅದರಲ್ಲಿ ಜನಸಾಮಾನ್ಯರು ಸಂಚರಿಸುವ ರಸ್ತೆಗಳು ಕಾಣುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದೆ.

High Court
ಹೈಕೋರ್ಟ್

ಬೆಂಗಳೂರು: ನಗರದ ರಸ್ತೆಗಳು ಪದೇಪದೆ ಗುಂಡಿ ಬೀಳುತ್ತಿರುವ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಬಿಬಿಎಂಪಿಗೆ ತಾಕೀತು ಮಾಡಿದೆ.

ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಬಿಬಿಎಂಪಿ ಗುಂಡಿ ಮುಚ್ಚಿದ್ದ ರಸ್ತೆಗಳಲ್ಲಿ ಎರಡು-ಮೂರು ತಿಂಗಳಲ್ಲೇ ಮತ್ತೆ ಗುಂಡಿಗಳು ಕಾಣಿಸಿಕೊಳ್ಳುತ್ತವೆ. ಕೇವಲ ಸಚಿವರ ಮನೆಗಳ ಮುಂದಿನ ರಸ್ತೆ ಉತ್ತಮವಾಗಿದ್ದರೆ ಸಾಲದು, ಸಾಮಾನ್ಯ ಜನರ ಮನೆಗಳ ಬಳಿಯೂ ರಸ್ತೆಗಳು ಉತ್ತಮ ಸ್ಥಿತಿಯಲ್ಲಿರಬೇಕು. ಪದೇಪದೆ ರಸ್ತೆಗಳಲ್ಲಿ ಗುಂಡಿ ಬೀಳದ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಪಾಲಿಕೆ ನಿರ್ದೇಶಿಸಿದೆ.

ವಿಚಾರಣೆ ಸಂದರ್ಭದಲ್ಲಿ ಬಿಬಿಎಂಪಿ ವಕೀಲರು, ನಗರದಾದ್ಯಂತ ಪ್ರತಿದಿನ ಗುಂಡಿ ಮುಚ್ಚುತ್ತಿದ್ದೇವೆ. ಮಳೆ ಕಾರಣದಿಂದ ಗುಂಡಿ ಮುಚ್ಚುವ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂಬ ಹೇಳಿಕೆಯನ್ನು ಟೀಕಿಸಿರುವ ನ್ಯಾಯಾಲಯ, ಪಾಲಿಕೆಯ ಮಸೂರದಲ್ಲೇ ಸಮಸ್ಯೆ ಇದೆ. ಹೀಗಾಗಿಯೇ ಪಾಲಿಕೆಗೆ ಕೇವಲ ಸಚಿವರ ಮನೆ, ಹೈಕೋರ್ಟ್ ಹಾಗೂ ವಿಧಾನಸೌಧಗಳ ಮುಂದಿನ ರಸ್ತೆಗಳು ಮಾತ್ರ ಕಾಣಿಸುತ್ತಿವೆ. ಅದರಲ್ಲಿ ಜನಸಾಮಾನ್ಯರು ಸಂಚರಿಸುವ ರಸ್ತೆಗಳು ಕಾಣುತ್ತಿಲ್ಲ ಎಂದು ಚಾಟಿ ಬೀಸಿದೆ.

ಅಂತಿಮವಾಗಿ, ನಗರದ ಎಲ್ಲ ರಸ್ತೆಗಳಲ್ಲಿನ ಗುಂಡಿಗಳನ್ನೂ ಮುಚ್ಚಬೇಕು ಹಾಗೂ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಪಾಲಿಕೆಗೆ ನಿರ್ದೇಶಿಸಿರುವ ಹೈಕೋರ್ಟ್, ಕಾಮಗಾರಿಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು 2 ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ನ.11ಕ್ಕೆ ಮುಂದೂಡಿದೆ.

ಇದನ್ನೂ ಓದಿ: ದಸರಾ ಪಾರ್ಟಿ ಮಾಡುತ್ತಿದ್ದ ವೇಳೆ ಜಗಳ: ಸ್ನೇಹಿತನಿಗೆ ಚೂರಿ ಇರಿದ ಕಿರಾತಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.