ETV Bharat / state

ಪಿಎಫ್‌ಐ ಕಾರ್ಯಕರ್ತರ ಜಾಮೀನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್

author img

By

Published : Apr 23, 2023, 7:00 AM IST

high court
ಹೈಕೋರ್ಟ್

ಐವರು ಪಿಎಫ್‌ಐ ಕಾರ್ಯಕರ್ತರ ಜಾಮೀನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರಾಜ್ಯ ಹೈಕೋರ್ಟ್​ ಎತ್ತಿಹಿಡಿದಿದೆ. ಆರೋಪಿಗಳ ಜಾಮೀನು ನಿರಾಕರಿಸುವ ಅಧಿಕಾರವು ಎನ್‌ಐಎ ವಿಶೇಷ ನ್ಯಾಯಾಲಯಕ್ಕಿದೆ ಎಂದು ಕೋರ್ಟ್ ತಿಳಿಸಿದೆ.

ಬೆಂಗಳೂರು: ಇತ್ತೀಚೆಗೆಷ್ಟೇ ಕೇಂದ್ರ ಸರ್ಕಾರ ನಿಷೇಧಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಐವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ವಿಶೇಷ ನ್ಯಾಯಾಲಯಕ್ಕೆ ಆರೋಪಿಗಳಿಗೆ ಜಾಮೀನು ನಿರಾಕರಿಸಿರುವ ಅಧಿಕಾರವಿದೆ ಎಂದು ತಿಳಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ(ಯುಎಪಿಎ)ಅಡಿ ಬಂಧಿತರಾಗಿರುವ ಮೊಹಮ್ಮದ್ ಬಿಲಾಲ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ರದ್ದು ಮಾಡಿ, ಬಂಧನದ ಅವಧಿ ವಿಸ್ತರಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ವಿಜಯಕುಮಾರ್ ಎ. ಪಾಟೀಲ್ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.

ಅಲ್ಲದೇ, ಎನ್‌ಐಎ ಕಾಯ್ದೆ ಸೆಕ್ಷನ್ 22(1)ರ ಅಡಿ ರಾಜ್ಯ ಸರ್ಕಾರವು ಒಂದು ಅಥವಾ ಅದಕ್ಕಿಂತ ಹೆಚ್ಚಿನ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬಹುದಾಗಿದೆ. ರಾಜ್ಯ ಸರ್ಕಾರವು 2012 ರ ಜುಲೈ 19 ರಂದು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು ವಿಶೇಷ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಆದೇಶ ಮಾಡಿದೆ. ಹೀಗಾಗಿ, ಆರೋಪಿಗಳಿಗೆ ಜಾಮೀನು ನಿರಾಕರಿಸಿರುವುದಕ್ಕೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ : ಪತಿ ವಿರುದ್ಧ ಸುಳ್ಳು ದೂರು ನೀಡುವುದು ಕ್ರೌರ್ಯಕ್ಕೆ ಸಮಾನ : ಹೈಕೋರ್ಟ್

ಪ್ರಕರಣದ ಹಿನ್ನೆಲೆ ಏನು ?: ನಿಷೇದಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರಾದ ಮೊಹಮ್ಮದ್ ಬಿಲಾಲ್, ಮೊಹಮ್ಮದ್ ರಫೀಕ್, ಅಬ್ಬಾಸ್ ಕೀನ್ಯಾ, ಅಕ್ಬರ್ ಸಿದ್ದಿಕಿ ಮತ್ತು ಮೊಹಮ್ಮದ್ ರಫೀಕ್ ಅವರನ್ನು 2022 ರ ಅಕ್ಟೋಬರ್ 12 ರಂದು ಮಂಗಳೂರಿನ ಪಣಂಬೂರು ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಬಂಧಿಸಿದ್ದರು. ಅಲ್ಲದೇ, ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ)ಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಿದ್ದರು.

ಈ ಪ್ರಕರಣವನ್ನು 2022ರ ಡಿಸೆಂಬರ್ 28 ರಂದು ಮ್ಯಾಜಿಸ್ಟ್ರೇಟ್ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದ್ದರು. 2023 ರ ಜನವರಿ 9 ರಂದು ವಿಶೇಷ ನ್ಯಾಯಾಲಯವು ಅರ್ಜಿದಾರರ ಕಸ್ಟಡಿಯನ್ನು 90 ರಿಂದ 180 ದಿನಗಳಿಗೆ ವಿಸ್ತರಿಸಿತ್ತು. ಅಲ್ಲದೆ, ಜನವರಿ 17 ರಂದು ವಿಶೇಷ ನ್ಯಾಯಾಲಯವು ಆರೋಪಿಗಳು ಸಲ್ಲಿಸಿದ್ದ ಡೀಫಾಲ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದು, ಸದರಿ ಪ್ರಕರಣದ ವಿಚಾರಣೆ ನಡೆಸುವ ವ್ಯಾಪ್ತಿ ಹೊಂದಿರುವುದಾಗಿ ಆದೇಶಿಸಿತ್ತು. ಅರ್ಜಿ ಬಾಕಿ ಇರುವಾಗ ರಾಜ್ಯ ತನಿಖಾ ತಂಡವು ಏಪ್ರಿಲ್ 10 ರಂದು ಆರೋಪ ಪಟ್ಟಿ ಸಲ್ಲಿಸಿದ್ದು, ಏಪ್ರಿಲ್ 17 ರಂದು ನ್ಯಾಯಾಲಯವು ಸಂಜ್ಞೆ ಪರಿಗಣಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಇದನ್ನೂ ಓದಿ : ಶಿಯೋಮಿ 5,551.21 ಕೋಟಿ ವಶಪಡಿಸಿಕೊಂಡಿದ್ದ ಇಡಿ ಕ್ರಮ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಸ್ತುತದ ಪ್ರಕರಣದಲ್ಲಿ ರಾಜ್ಯ ಪೊಲೀಸರು ತನಿಖೆ ನಡೆಸಿದ್ದು, ಎನ್‌ಐಎ ಕಾಯಿದೆ ಸೆಕ್ಷನ್ 22(1)ರ ಅಡಿ ವಿಶೇಷ ನ್ಯಾಯಾಲಯ ಸ್ಥಾಪಿಸಿರುವ ಕುರಿತು ಅಧಿಸೂಚನೆ ಹೊರಡಿಸಿಲ್ಲ. ಎನ್‌ಐಎ ಕಾಯಿದೆ ಸೆಕ್ಷನ್ 22(3)ರ ಅಡಿ ಮಂಗಳೂರಿನ ಸತ್ರ ನ್ಯಾಯಾಲಯ ಮಾತ್ರ ಪ್ರಕರಣದ ವಿಚಾರಣೆ ನಡೆಸುವ ವ್ಯಾಪ್ತಿ ಹೊಂದಿದೆ. ರಿಮ್ಯಾಂಡ್ ನೀಡುವುದು ಮತ್ತು ಡೀಫಾಲ್ಟ್ ಅರ್ಜಿಯನ್ನು ಮಂಗಳೂರು ನ್ಯಾಯಾಲಯ ಪರಿಗಣಿಸಬೇಕು. ಹೀಗಾಗಿ, ವಿಶೇಷ ನ್ಯಾಯಾಲಯದ ಆದೇಶವು ಕಾನೂನುಬಾಹಿರ. ಹೀಗಾಗಿ ಅರ್ಜಿಯನ್ನು ಪುರಸ್ಕರಿಸಬೇಕು ಎಂದು ಮನವಿ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.