ETV Bharat / state

ಕಾರವಾರ ಬಂದರು ವಿಸ್ತರಣೆಗೆ ಕೆಎಸ್​ಪಿಸಿಬಿ ಸಮ್ಮತಿ ಕಾನೂನು ಬಾಹಿರ: ಹೈಕೋರ್ಟ್

author img

By

Published : Jul 30, 2021, 7:14 AM IST

ಸಾಗರ ಮಾಲಾ ಯೋಜನೆಯಡಿ 2ನೇ ಹಂತದ ಬಂದರು ಅಭಿವೃದ್ದಿ ಯೋಜನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಅನುಮತಿ ಅಕ್ರಮ ಎಂದು ಆದೇಶಿಸಿರುವ ಹೈಕೋರ್ಟ್​ ನ್ಯಾಯಪೀಠ, ಪರಿಸರ ನಿಯಮಗಳಿಗೆ ಅನುಗುಣವಾಗಿ ಹೊಸದಾಗಿ ಕೆಎಸ್​ಪಿಸಿಬಿಯಿಂದ ಅನುಮತಿ ಪಡೆಯುವವರೆಗೆ ಕಾಮಗಾರಿ ಪ್ರಾರಂಭಿಸುವಂತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

high-court
ಹೈಕೋರ್ಟ್

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 2ನೇ ಹಂತದ ವಾಣಿಜ್ಯ ಬಂದರು ಅಭಿವೃದ್ಧಿ ಯೋಜನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಸಮ್ಮತಿ ಕಾನೂನು ಬಾಹಿರ ಹಾಗೂ ಅಕ್ರಮ ಎಂದು ಹೈಕೋರ್ಟ್ ಆದೇಶಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಬೈತಕುಳ ಬಂದರು ನಿರಾಶ್ರಿತರ ಯಾಂತ್ರಿಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಸಾಗರ ಮಾಲಾ ಯೋಜನೆಯಡಿ 2ನೇ ಹಂತದ ಬಂದರು ಅಭಿವೃದ್ದಿ ಯೋಜನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಅನುಮತಿ ಅಕ್ರಮ ಎಂದು ಆದೇಶಿಸಿರುವ ಪೀಠ, ಪರಿಸರ ನಿಯಮಗಳಿಗೆ ಅನುಗುಣವಾಗಿ ಹೊಸದಾಗಿ ಕೆಎಸ್​ಪಿಸಿಬಿಯಿಂದ ಅನುಮತಿ ಪಡೆಯುವವರೆಗೆ ಕಾಮಗಾರಿ ಪ್ರಾರಂಭಿಸುವಂತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೇಂದ್ರದ ಸಾಗರ ಮಾಲಾ ಯೋಜನೆ ಅಡಿ ಕಾರವಾರದ ಬೈತಕುಳ ಗ್ರಾಮದ 17 ಎಕರೆ ಪ್ರದೇಶದಲ್ಲಿ 2ನೇ ಹಂತದ ವಾಣಿಜ್ಯ ಬಂದರು ಅಭಿವೃದ್ಧಿ ಕಾಮಗಾರಿಯನ್ನು ಖಾಸಗಿ ಸಂಸ್ಥೆಯೊಂದು ಕೈಗೊಂಡಿತ್ತು. ಇದಕ್ಕೆ ಸ್ಥಳೀಯ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಪೀಠ 2020ರ ಜನವರಿ 24ರಂದು ಬಂದರು ಅಭಿವೃದ್ದಿ ಕಾಮಗಾರಿಗೆ ಮಧ್ಯಂತರ ತಡೆ ನೀಡಿತ್ತು. ಅಲ್ಲದೇ, ಸಮುದ್ರ ತೀರವನ್ನು ಯಥಾಸ್ಥಿತಿಯಲ್ಲಿಡುವಂತೆ ಆದೇಶಿಸಿತ್ತು. ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ಕಾಮಗಾರಿ ಆರಂಭಿಸಿದ್ದಕ್ಕೆ ಆಕ್ಷೇಪಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.