ETV Bharat / state

ಆರೋಪಿ ಪರ ವಕಾಲತ್ತು ವಹಿಸದಂತೆ ನಿರ್ಬಂಧಿಸುವ ಅಧಿಕಾರ ಸಿಕ್ಕಿದ್ದೇಗೆ?: ವಕೀಲರ ಸಂಘಕ್ಕೆ ಹೈಕೋರ್ಟ್ ಪ್ರಶ್ನೆ

author img

By

Published : Jan 19, 2021, 5:31 PM IST

ಮೈಸೂರು ವಿವಿ ಆವರಣದಲ್ಲಿ 2020ರ ಜ. 8ರಂದು ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ್’ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ನಳಿನಿ ಬಾಲಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪರ ವಕಾಲತ್ತು ವಹಿಸದಂತೆ ನಿರ್ಬಂಧಿಸುವ ಅಧಿಕಾರ ಸಿಕ್ಕಿದ್ದು ಹೇಗೆ ಎಂದು ವಕೀಲರ ಸಂಘಕ್ಕೆ ಹೈಕೋರ್ಟ್​ ಪ್ರಶ್ನಿಸಿದೆ.

Karnataka high court
ಕರ್ನಾಟಕ ಹೈಕೋರ್ಟ್​

ಬೆಂಗಳೂರು: ಸಿಎಎ ಹಾಗೂ ಎನ್ಆರ್​​​ಸಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ಕೈಗೊಂಡ ನಿರ್ಣಯಕ್ಕೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಈ ಕುರಿತು ವಕೀಲ ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮೈಸೂರು ವಕೀಲರ ಸಂಘದ ಪರ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಆರೋಪಿ ಪರ ವಕಾಲತ್ತು ಹಾಕದಂತೆ ನಿರ್ಣಯ ಕೈಗೊಳ್ಳುವ ಅಧಿಕಾರ ಸಂಘಕ್ಕೆ ಸಿಕ್ಕಿದ್ದು ಹೇಗೆ.? ಯಾವ ಕಾನೂನಿನ ಅಡಿಯಲ್ಲಿ ಇಂತಹ ನಿರ್ಣಯ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ವಕೀಲರು ಈ ಕುರಿತು ಸಂಘದಿಂದ ಮಾಹಿತಿ ಪಡೆದು ವಿವರಣೆ ನೀಡುವುದಾಗಿ ತಿಳಿಸಿದರು. ಮತ್ತೆ ಪ್ರಶ್ನಿಸಿದ ಪೀಠ, ವಕೀಲರಾಗಿರುವ ನೀವು ಕೂಡ ಓರ್ವ ಕೋರ್ಟ್ ಅಧಿಕಾರಿ. ಆರೋಪಿ ಪರ ವಕಾಲತ್ತು ಹಾಕದಂತೆ ನಿರ್ಣಯ ಕೈಗೊಳ್ಳುವುದು ಸರಿಯೇ ಎಂದಿತು. ಅಲ್ಲದೇ ವಕೀಲರ ಸಂಘಗಳು ಇಂತಹ ನಿರ್ಣಯ ಕೈಗೊಳ್ಳುವುದು ಸರಿಯಲ್ಲ. ಆದ್ದರಿಂದ ಇಂತಹ ಕ್ರಮಗಳನ್ನು ನಿಯಂತ್ರಿಸಲು ಭಾರತೀಯ ವಕೀಲರ ಪರಿಷತ್ತು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟು, ಫೆಬ್ರವರಿ 12 ರೊಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ, ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿತು.

ಮೈಸೂರು ವಿವಿ ಆವರಣದಲ್ಲಿ 2020ರ ಜ. 8ರಂದು ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ್’ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ನಳಿನಿ ಬಾಲಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ನಳಿನಿ ಪರ ಯಾರೊಬ್ಬ ವಕೀಲರೂ ವಕಾಲತ್ತು ವಹಿಸಬಾರದೆಂದು ಜ. 16ರಂದು ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಣಯ ಕೈಗೊಂಡಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ವಕೀಲರ ಸಂಘದ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್‌ಗೆ ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಎಲ್ಲಾ 32 ಸಚಿವರನ್ನೂ ಕೈ ಬಿಟ್ಟು, ಹೊಸದಾಗಿ ಸಂಪುಟ ರಚಿಸಿ : ಶಾಸಕ ಶಿವನಗೌಡ ನಾಯಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.