ETV Bharat / state

ಪರೀಕ್ಷೆ ನಡೆಸಬಾರದು ಎಂದು ಕೇಳಲು ವಿದ್ಯಾರ್ಥಿಗಳಿಗೆ ಹಕ್ಕಿಲ್ಲ: ಹೈಕೋರ್ಟ್

author img

By

Published : Dec 3, 2021, 2:27 PM IST

ಯುಜಿಸಿ ಸೂಚನೆ ಹೊರತಾಗಿಯೂ ಕೆಎಸ್ಎಲ್​ಯು ಪರೀಕ್ಷೆಗಳನ್ನು ನಡೆಸುವ ಕ್ರಮ ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ಹೈಕೋರ್ಟ್, ಏಕಸದಸ್ಯ ಪೀಠದ ಆದೇಶ ಬದಿಗಿರಿಸಿದ್ದ ವಿಭಾಗೀಯ ಪೀಠ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿ ನವೆಂಬರ್ 24ರಂದು ಆದೇಶಿಸಿತ್ತು. ಈ ಆದೇಶ ಮಾರ್ಪಡಿಸುವಂತೆ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

high-court
ಹೈಕೋರ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾನೂನು ಪದವಿ ತರಗತಿಗಳಿಗೆ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿರುವ ಆದೇಶವನ್ನು ಮಾರ್ಪಡಿಸಬೇಕು ಎಂದು ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಲು ನಿರಾಕರಿಸಿರುವ ಹೈಕೋರ್ಟ್, ಎಲ್‌ಎಲ್‌ಬಿ ಪರೀಕ್ಷೆ ಬರೆಯದೆಯೇ ವಕೀಲರಾಗಲು ಬಯಸಿದ್ದೀರಾ? ಎಂದು ಪ್ರಶ್ನಿಸಿದೆ.

ಯುಜಿಸಿ ಸೂಚನೆ ಹೊರತಾಗಿಯೂ ಕೆಎಸ್ಎಲ್​ಯು ಪರೀಕ್ಷೆಗಳನ್ನು ನಡೆಸುವ ಕ್ರಮ ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಬದಿಗಿರಿಸಿದ್ದ ವಿಭಾಗೀಯ ಪೀಠ, ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿ ನವೆಂಬರ್ 24ರಂದು ಆದೇಶಿಸಿತ್ತು. ಈ ಆದೇಶ ಮಾರ್ಪಡಿಸುವಂತೆ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ವಿದ್ಯಾರ್ಥಿಗಳ ಪರ ವಕೀಲರು ವಾದ ಮಂಡಿಸಿ, ಪರೀಕ್ಷೆಗಳಿಗೆ ತಡೆ ನೀಡಿ ಏಕಸದಸ್ಯ ಪೀಠ ನವೆಂಬರ್ 12 ರಂದು ಮಧ್ಯಂತರ ಆದೇಶ ಹೊರಡಿಸಿದೆ. ಈ ಮಧ್ಯಂತರ ಆದೇಶದ ವಿರುದ್ಧ ವಿವಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹವಾಗಿಲ್ಲ. ವಿವಿ ಏಕ ಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶ ತೆರವು ಕೋರಿ ಆಕ್ಷೇಪಣೆ ಸಲ್ಲಿಸಬೇಕು. ಅಲ್ಲಿಯೇ ವಿಚಾರಣೆ ನಡೆಸುವುದು ಸೂಕ್ತ. ಅಲ್ಲಿವರೆಗೂ ವಿವಿ ಪರೀಕ್ಷೆಗಳನ್ನು ನಡೆಸಬಾರದು. ಅದಕ್ಕಾಗಿ ಈ ಹಿಂದೆ ನೀಡಿರುವ ಆದೇಶವನ್ನು ಮಾರ್ಪಡಿಸಬೇಕು ಎಂದು ವಿದ್ಯಾರ್ಥಿಗಳ ಪರ ವಕೀಲರು ಮನವಿ ಮಾಡಿದರು.

ವಿವಿ ಪರ ವಕೀಲರು ಹಾಗು ಭಾರತೀಯ ವಕೀಲರ ಪರಿಷತ್‌ ಪರ ವಕೀಲರು ಇದಕ್ಕೆ ಆಕ್ಷೇಪಿಸಿ, ಪರೀಕ್ಷೆ ನಡೆಸದೇ ವಿವಿ ಪದವಿ ನೀಡಿದರೆ ಅದನ್ನು ಪರಿಗಣಿಸದಿರಲು ಬಿಸಿಐ ನಿರ್ಧರಿಸಿದೆ. ಈ ವಿಚಾರದಲ್ಲಿ ಬಿಸಿಐ ನಿಲುವು ಸ್ಪಷ್ಟವಾಗಿದೆ. ಪರೀಕ್ಷೆ ನಡೆಸುವುದು ವಿಶ್ವವಿದ್ಯಾಲಯಕ್ಕೆ ಬಿಟ್ಟ ವಿಚಾರ. ಆದರೆ, ಪರೀಕ್ಷೆ ನಡೆಸಿ ನೀಡುವ ಪದವಿಯನ್ನು ಮಾತ್ರವೇ ಬಿಸಿಐ ಪರಿಗಣಿಸಲಿದೆ ಎಂದರು.

ವಾದ ಆಲಿಸಿದ ಪೀಠ, ಪರೀಕ್ಷೆ ನಡೆಸಬೇಡಿ ಎಂದು ಹೇಳಲು ವಿದ್ಯಾರ್ಥಿಗಳಿಗೆ ಯಾವುದೇ ಹಕ್ಕಿಲ್ಲ. ಎಲ್ಎಲ್ ಬಿ ಪರೀಕ್ಷೆ ಬರೆಯದೇ ನೀವು ವಕೀಲರಾಗಲು ಬಯಸುತ್ತಿದ್ದೀರಾ? ಹಾಗಿದ್ದರೆ, ನೀವು ಹೈಕೋರ್ಟ್‌ ನ್ಯಾಯಮೂರ್ತಿಯಾಗಬಹುದು. ಏಕೆಂದರೆ ನ್ಯಾಯಮೂರ್ತಿಯಾಗಲು ಯಾವುದೇ ಪರೀಕ್ಷೆ ಬರೆಯಬೇಕಿಲ್ಲ ಎಂದಿತು.

ಅಲ್ಲದೇ, ನಿಯಮಾನುಸಾರ ವಿವಿ ಪರೀಕ್ಷೆ ನಡೆಸಬೇಕು. ಪರೀಕ್ಷೆಯು ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನಾವು ಈಗಾಗಲೇ ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿದ್ದೇವೆ. ಹೀಗಾಗಿ, ನವೆಂಬರ್‌ 24ರ ಮಧ್ಯಂತರ ಆದೇಶ ಹಿಂಪಡೆಯಲು ಯಾವುದೇ ಸಕಾರಣವಿಲ್ಲ ಪೀಠ ಅಭಿಪ್ರಾಯಪಟ್ಟಿತು.

ಪ್ರಕರಣದ ಹಿನ್ನೆಲೆ

ಕೆಎಸ್‌ಎಲ್‌ಯು ಕಳೆದ ನವೆಂಬರ್ 15 ರಿಂದ ತನ್ನ ಕಾನೂನು ಕಾಲೇಜುಗಳಲ್ಲಿ 3 ಮತ್ತು 5 ವರ್ಷದ ಪದವಿ ತರಗತಿಗಳಿಗೆ ಪರೀಕ್ಷೆ ನಡೆಸಲು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ನವೀನ್ ಮತ್ತಿತರೆ ವಿದ್ಯಾರ್ಥಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕೋವಿಡ್ ಸಂದರ್ಭದಲ್ಲಿ ತರಗತಿಗಳು ಸರಿಯಾಗಿ ನಡೆಯದ ಕಾರಣ ಅಂತಿಮ ವರ್ಷದ ತರಗತಿಗಳಿಗೆ ಹೊರತುಪಡಿಸಿ, ಉಳಿದ ತರಗತಿಗಳಿಗೆ ಪರೀಕ್ಷೆಯಿಲ್ಲದೇ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕು ಎಂದು ಯುಜಿಸಿ ನಿರ್ದೇಶಿಸಿದ್ದರೂ, ವಿವಿ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮ ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಪರೀಕ್ಷೆಗಳಿಗೆ ನವೆಂಬರ್ 12ರಂದು ತಡೆ ನೀಡಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿವಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಸಿಜೆ ನೇತೃತ್ವದ ವಿಭಾಗೀಯ ಪೀಠ, ನವೆಂಬರ್ 24ರಂದು ಪರೀಕ್ಷೆಗಳನ್ನು ನಡೆಸಲು ವಿವಿಗೆ ಅನುಮತಿ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು.

ಅಲ್ಲದೇ, ಪರೀಕ್ಷೆಗಳು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತವೆ ಎಂದು ಸ್ಪಷ್ಟಪಡಿಸಿತ್ತು. ಪರೀಕ್ಷೆ ನಡೆಸಲು ಅನುಮತಿಸಿದ್ದ ವಿಭಾಗೀಯ ಪೀಠದ ಆದೇಶ ಮಾರ್ಪಾಡು ಮಾಡುವಂತೆ ಹಾಗೂ ವಿವಿ ಪರೀಕ್ಷೆಗಳನ್ನು ನಡೆಸಲು ಅನುಮತಿಸಬಾರದು ಎಂದು ಕೋರಿ ವಿದ್ಯಾರ್ಥಿಗಳು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ತಡೆಯುವ ಪಿಐಎಲ್ ಅರ್ಜಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.