ಬಡ್ತಿ ಮೀಸಲು ಜಾರಿ ಗೊಂದಲ ನಿವಾರಣೆಗೆ ಹೊಸ ಮಾರ್ಗಸೂಚಿ ಸೂಕ್ತ: ಹೈಕೋರ್ಟ್

ಬಡ್ತಿ ಮೀಸಲು ಜಾರಿ ಗೊಂದಲ ನಿವಾರಣೆಗೆ ಹೊಸ ಮಾರ್ಗಸೂಚಿ ಸೂಕ್ತ: ಹೈಕೋರ್ಟ್
ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿಯಲ್ಲಿ ಮೀಸಲು ಜಾರಿಗೊಳಿಸುವಲ್ಲಿ ಆಗುತ್ತಿರುವ ಗೊಂದಲಗಳನ್ನು ನಿವಾರಿಸಲು ಹೊಸ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ರಚಿಸುವುದು ಸೂಕ್ತ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿಯಲ್ಲಿ ಮೀಸಲು ಜಾರಿಗೊಳಿಸುವಲ್ಲಿ ಆಗುತ್ತಿರುವ ಗೊಂದಲಗಳನ್ನು ನಿವಾರಿಸಲು ರಾಜ್ಯ ಸರ್ಕಾರ ನಾಗರಿಕ ಸೇವಾ ಕಾಯ್ದೆ 2017 ರ ಅಡಿ ಹೊಸ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ರಚಿಸಿಸುವುದು ಸೂಕ್ತ ಎಂದು ಹೈಕೋರ್ಟ್ ನಿರ್ದೇಶಿಸಿದೆ. ರಾಜ್ಯದ ವಿದ್ಯುತ್ ಕಂಪನಿಗಳಲ್ಲಿ ಮುಖ್ಯ ಇಂಜಿನಿಯರ್‌ಗಳು, ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರ ಹುದ್ದೆೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾನ್ಯ ವರ್ಗಕ್ಕೆ ಸೇರಿದ ಬಿ.ಗುರುಮೂರ್ತಿ ಸೇರಿದಂತೆ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕ ಸದಸ್ಯಪೀಠ ಅರ್ಜಿಗಳನ್ನು ವಜಾಗೊಳಿಸಿತು. ಅಲ್ಲದೇ, ಸೂಕ್ತ ಮಾರ್ಗಸೂಚಿಗಳನ್ನು ರಚಿಸಿ ಗೊಂದಲಗಳುಂಟಾಗದಂತೆ ನಿರ್ದೇಶನ ನೀಡಿದೆ.
2017 ರ ಕಾಯ್ದೆಯನ್ನು ಜಾರಿಗೆ ತರಲು 2019ರ ಜೂ.24 ರಂದು ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ಕೆಲವು ಅಸ್ಪಷ್ಟತೆಗಳಿದ್ದು, ಗೊಂದಲವನ್ನು ತಪ್ಪಿಸಲು ಸರ್ಕಾರ ಆ ಆದೇಶವನ್ನು ಹಿಂಪಡೆಯುವುದು ಒಳ್ಳೆಯದು. ಜೊತೆಗೆ ಹೊಸ ಮಾರ್ಗಸೂಚಿ ಜಾರಿಗೊಳಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹೊಸ ಮಾರ್ಗಸೂಚಿಗಳನ್ನು ರಚಿಸುವ ಸಂದರ್ಭದಲ್ಲಿ ಈ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಎಲ್ಲಾ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. ಬಡ್ತಿಯಲ್ಲಿನ ಬ್ಯಾಕ್‌ಲಾಗ್ ಖಾಲಿ ಹುದ್ದೆೆಗಳ ಭರ್ತಿ, ನಂತರದ ಮೀಸಲು, ಮೀಸಲಾತಿ ವರ್ಗದವರು ಸಾಮಾನ್ಯವಾಗಿ ಅರ್ಹರಾಗಿರುತ್ತಾರೆ ಎಂಬ ಸಮಸ್ಯೆ ನಿವಾರಣೆ ಮತ್ತು ಅರ್ಹತೆ ಹಾಗೂ ಇತರೆ ಸಂಬಂಧಿತ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದಿದೆ. ಸರ್ಕಾರ ಈ ಕ್ರಮ ಕೈಗೊಂಡು ಜಾರಿ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಆಗಬಹುದಾದ ಗೊಂದಲ ನಿವಾರಣೆಯಾಗಲಿದೆ. ಸರ್ಕಾರಿ ಅಧಿಕಾರಿಗಳ ಕಾರ್ಯನಿರ್ವಹಣೆ ಮೇಲೂ ಪರಿಣಾಮ ಬೀರಿ ಅನಗತ್ಯ ವಾಜ್ಯಗಳು ನ್ಯಾಯಾಲಯ ಮೆಟ್ಟಿಲೇರುವುದು ತಪ್ಪಲಿದೆ ಎಂದು ಪೀಠ ತಿಳಿಸಿತು.
ಇದನ್ನೂ ಓದಿ: ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸಾದ ಸರ್ಕಾರಿ ನೌಕರರಿಗೆ ₹5 ಸಾವಿರ ಪ್ರೋತ್ಸಾಹ ಧನ
ಪ್ರಕರಣವೇನು?: ಅರ್ಜಿದಾರರಾದ ಗುರುಮೂರ್ತಿ ಸೇರಿದಂತೆ ಇತರೆ ಅಧಿಕಾರಿಗಳು ಸರ್ಕಾರಿ ಆದೇಶದ ಕಾನೂನು ಬದ್ಧತೆ ಮತ್ತು 2017 ರ ಕಾಯ್ದೆ ಹಾಗೂ ಸರ್ಕಾರದ ಆದೇಶಗಳನ್ನು ಆಧರಿಸಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (ಕೆಪಿಟಿಸಿಎಲ್) ಸೂಚಿಸಿರುವ ಅಧಿಕಾರಿಗಳ ತಾತ್ಕಾಲಿಕ ಮತ್ತು ಅಂತಿಮ ಜೇಷ್ಠತಾ ಪಟ್ಟಿಯನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್ನಲ್ಲಿ ಮನವಿ ಮಾಡಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆಲ ಅಧಿಕಾರಿಗಳಿಗೆ ಕೆಪಿಟಿಸಿಎಲ್ ನೀಡಿರುವ ಬಡ್ತಿ ಕಾನೂನಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು.
ಇದನ್ನೂ ಓದಿ: ಹಿರಿಯ ಪೊಲೀಸ್ ಅಧಿಕಾರಿಗಳ ಬಡ್ತಿ, ವರ್ಗಾವಣೆ ಮಾಡಿ ಸರ್ಕಾರ ಆದೇಶ
ವಾದ-ಪ್ರತಿ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಾದವನ್ನು ತಿರಸ್ಕರಿಸಿದೆ. ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಸರ್ಕಾರಕ್ಕೆ ಸಲಹೆ ನೀಡುವುದು ಅಗತ್ಯ. ಅಲ್ಲದೇ, ಸುಪ್ರೀಂ ಕೋರ್ಟ್ ಈಗಾಗಲೇ ಎತ್ತಿ ಹಿಡಿದಿರುವ 2017ರ ಕಾಯ್ದೆ ಅನಾವಶ್ಯಕ ವ್ಯಾಜ್ಯಗಳನ್ನು ಹುಟ್ಟುಹಾಕುತ್ತಿದೆ. ಹಾಗಾಗಿ, ಅದನ್ನು ವಸ್ತುಶಃ ಜಾರಿಗೊಳಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಹೊಸ ಮಾರ್ಗಸೂಚಿ ಅಗತ್ಯವೆಂದು ನ್ಯಾಯಪೀಠ ಹೇಳಿತು.
