ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸಾದ ಸರ್ಕಾರಿ ನೌಕರರಿಗೆ ₹5 ಸಾವಿರ ಪ್ರೋತ್ಸಾಹ ಧನ

author img

By

Published : Jan 25, 2023, 6:52 AM IST

vidhana soudha

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸರ್ಕಾರಿ ನೌಕರರಿಗೆ ಐದು ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ (ಸಿಎಲ್​ಟಿ ಪರೀಕ್ಷೆಯಲ್ಲಿ) ಉತ್ತೀರ್ಣರಾಗಬೇಕೆಂದು ಈ ಹಿಂದೆ ಸರ್ಕಾರ ತಿಳಿಸಿತ್ತು. ಇದೀಗ ಮತ್ತೊಂದು ಗುಡ್​ ನ್ಯೂಸ್​ ಕೊಟ್ಟಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನೌಕರರಿಗೆ ತಲಾ ಐದು ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಸರ್ಕಾರ ಮುಂದಾಗಿದೆ.

ಆದೇಶದ ವಿವರ: ಪ್ರೋತ್ಸಾಹ ಧನದ ಸೌಲಭ್ಯ ಏಪ್ರಿಲ್‌ 17, 2021ರೊಳಗೆ ಉತ್ತೀರ್ಣರಾಗಿರುವ ಅರ್ಹ ಸೇವಾನಿರತ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗಲಿದೆ. ನೌಕರರು ಹಾಜರುಪಡಿಸುವ ಡಿಜಿಟಲ್ ಸಹಿ ಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಉತ್ತೀರ್ಣರಾದ ದಿನಾಂಕವನ್ನು ಖಚಿತಪಡಿಸಿಕೊಂಡು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಗಳು ಪ್ರೋತ್ಸಾಹ ಧನವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ಈ ಕ್ರಮವೇಕೆ?: ಪ್ರೋತ್ಸಾಹ ಧನವನ್ನು ಸರ್ಕಾರಿ ನೌಕರರು ಪಡೆಯುವ ವೇತನದಲ್ಲಿ ಸೇರಿಸಿ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಲಾಯಿತು. ನೌಕರರಿಗೆ ನೀಡಲ್ಪಡುವ ಪ್ರಮಾಣಪತ್ರದ ನಮೂನೆ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಪ್ರೋತ್ಸಾಹ ಧನ ನೀಡಲು ತಡೆ ನೀಡಲಾಗಿತ್ತು. ಇದೀಗ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿರುವುದರಿಂದ ಪ್ರೋತ್ಸಾಹಧನ ನೀಡಲು ಕ್ರಮ ವಹಿಸಲಾಗಿದೆ.

ನೇರ ನೇಮಕಾತಿ ಹೊಂದಿರುವ ಮತ್ತು ಸೇವಾನಿರತ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ನಿಗದಿತ ಅಂಕ ಪಡೆದು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅನುತ್ತೀರ್ಣರಾಗುವ ನೌಕರರು ಪರಿವೀಕ್ಷಣಾ ಅವಧಿ, ಬಡ್ತಿ ಹಾಗೂ ವಾರ್ಷಿಕ ವೇತನ ಹೆಚ್ಚಳ ಪಡೆಯಲು ಅನರ್ಹತೆ ಹೊಂದುತ್ತಾರೆ. ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 1(3)ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಹೊರತುಪಡಿಸಿ, ಇನ್ನಿತರ ಎಲ್ಲ ಅಭ್ಯರ್ಥಿಗಳಿಗೆ ಈ ಪರೀಕ್ಷೆ ಕಡ್ಡಾಯ. ರಾಜ್ಯ ಸರ್ಕಾರ ಅನುಮೋದಿಸಿರುವ ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: ನೌಕರರು ಕಂಪ್ಯೂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಬಡ್ತಿ, ವಾರ್ಷಿಕ ವೇತನ ಹೆಚ್ಚಳಕ್ಕೆ ಬೀಳಲಿದೆ ಕತ್ತರಿ

IAS ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ವಸತಿ ಇಲಾಖೆ ಸರ್ಕಾರದ ಕಾರ್ಯದರ್ಶಿಯಾಗಿದ್ದ ಡಾ.ರವಿಶಂಕರ್. ಜೆ ಅವರನ್ನು ಅಬಕಾರಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ಡಾ.ರಾಮ್ ಪ್ರಸಾದ್ ಮನೋಹರ್ ಅವರಿಗೆ ಪ್ರವಾಸೋದ್ಯಮ ನಿರ್ದೇಶಕ ಹೊಣೆ ನೀಡಲಾಗಿದೆ. ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ (ಸುಧಾರಣೆ) ಜಂಟಿ ನಿರ್ದೇಶಕರಾಗಿದ್ದ ಪ್ರೀತಿ ಗೆಹ್ಲೋಟ್ ಅವರನ್ನು ಬಿಬಿಎಂಪಿ (ಎಸ್ಟೇಟ್) ವಿಶೇಷ ಆಯುಕ್ತರಾಗಿ ವರ್ಗಾಯಿಸಲಾಗಿದೆ.

ಇದನ್ನೂ ಓದಿ: IPS ಅಧಿಕಾರಿಗಳ ವರ್ಗಾಯಿಸಿ ಸರ್ಕಾರ ಆದೇಶ: ಕಲಬುರಗಿಗೆ ಹೊಸ ಪೊಲೀಸ್ ಕಮೀಷನರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.