ETV Bharat / state

ಬೆಳಗಾವಿ ಮಾಹಿತಿ ಆಯುಕ್ತರ ಹುದ್ದೆ ಭರ್ತಿ, ಕಲಬುರಗಿ ಪೀಠದ ಕಾರ್ಯಾಚರಣೆ ಕೋರಿ ಅರ್ಜಿ: ಸರ್ಕಾರಕ್ಕೆ ನೊಟೀಸ್

author img

By ETV Bharat Karnataka Team

Published : Aug 22, 2023, 8:14 PM IST

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದೆ.

ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಖಾಲಿ ಇರುವ ಮಾಹಿತಿ ಆಯುಕ್ತರ ಹುದ್ದೆ ಭರ್ತಿ ಮಾಡಬೇಕು ಹಾಗೂ ಕಳೆದ ನಾಲ್ಕು ವರ್ಷಗಳಿಂದ ಕಾರ್ಯ ಸ್ಥಗಿತಗೊಂಡಿರುವ ಕಲಬುರಗಿ ಪೀಠದ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ಇಂದು ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.

ವಕೀಲಾರದ ಸುಧಾ ಕಾಟ್ವ ಎಂಬವರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಳಿಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೊಟೀಸ್ ಜಾರಿಗೊಳಿಸಿ, ನಾಲ್ಕು ವಾರಗಳಲ್ಲಿ ಉತ್ತರ ನೀಡುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ವಾದ: ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಸ್. ಉಮಾಪತಿ, ಸಾರ್ವಜನಿಕರ ಅನುಕೂಲಕ್ಕಾಗಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದ ಜನರಿಗೆ ಪ್ರಯೋಜನವಾಗುವ ಉದ್ದೇಶದಿಂದ ಕರ್ನಾಟಕ ಮಾಹಿತಿ ಆಯೋಗದ ಪೀಠಗಳನ್ನು ಬೆಳಗಾವಿ ಮತ್ತು ಕಲಬುರಗಿಯಲ್ಲಿ 2019ರಲ್ಲಿ ಸರ್ಕಾರ ರಚನೆ ಮಾಡಿತು. ಆದರೆ, 2019ರಿಂದಲೇ ಕಲಬುರಗಿ ಪೀಠ ಕಾರ್ಯಾಚರಿಸುತ್ತಿಲ್ಲ.

2022ರ ಏಪ್ರಿಲ್‌ನಲ್ಲಿ ಕಲಬುರಗಿ ಪೀಠಕ್ಕೆ ರವೀಂದ್ರ ಢಾಕಪ್ಪ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಯಿತು. ಆದರೆ, ಅವರು ಕಲಬುರಗಿಯ ಬದಲಿಗೆ ಬೆಂಗಳೂರಿನಲ್ಲೇ ಕಲಾಪ ನಡೆಸುತ್ತಿದ್ದಾರೆ. ಅದೇ ರೀತಿ ಗೀತಾ ಅವರ ರಾಜೀನಾಮೆಯಿಂದ 2022ರ ಏಪ್ರಿಲ್‌ನಿಂದ ಬೆಳಗಾವಿ ಪೀಠದ ಮಾಹಿತಿ ಆಯುಕ್ತರ ಹುದ್ದೆ ಖಾಲಿ ಇದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಮಾಹಿತಿ ಆಯೋಗದಲ್ಲಿ ಅಂದಾಜು 31 ಸಾವಿರ ಆರ್‌ಟಿಐ ಮನವಿಗಳು ಬಾಕಿ ಇದ್ದು, ಅದರಲ್ಲಿ 19, 131 ಮನವಿಗಳು ಬೆಳಗಾವಿ ಹಾಗೂ ಕಲರಬುರಗಿ ಪೀಠಕ್ಕೆ ಸಂಬಂಧಿಸಿದ ಮನವಿಗಳಾಗಿವೆ. ಕಲಬುರಗಿಯಲ್ಲಿ ಮಾಹಿತಿ ಆಯುಕ್ತ ಪೀಠದ ಇದೆ. ಆದರೆ, ಕಚೇರಿಗೆ ಸೂಕ್ತ ಕಟ್ಟಡವನ್ನು ಸರ್ಕಾರ ಒದಗಿಸಿಲ್ಲ. ಪರಿಣಾಮವಾಗಿ ಉತ್ತರ ಕರ್ನಾಟಕ ಭಾಗದ ಜನ ಪ್ರಕರಣಗಳ ವಿಚಾರಣೆಗೆ ಸುಮಾರು 700 ಕಿ.ಮೀ ದೂರ ಪ್ರಯಾಣಿಸಿ ಬೆಂಗಳೂರಿಗೆ ಬರಬೇಕಾಗಿದೆ. ಕಲಬುರಗಿ ಪೀಠದಲ್ಲಿ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳ ದೂರು ಹಾಗೂ ಮೇಲ್ಮನವಿಗಳ ವಿಚಾರಣೆ ನಡೆಯುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅದೇ ರೀತಿ ಬೆಳಗಾವಿ ಪೀಠದಲ್ಲಿ ಮಾಹಿತಿ ಆಯುಕ್ತರಾಗಿದ್ದ ಗೀತಾ ಅವರ ರಾಜೀನಾಮೆ ಬಳಿಕ 2022ರ ಏಪ್ರಿಲ್‌ನಿಂದ ಮಾಹಿತಿ ಆಯುಕ್ತರ ನೇಮಕ ಆಗಿಲ್ಲ. ಪರಿಣಾಮವಾಗಿ ಬೆಳಗಾವಿ ಪೀಠವೊಂದರಲ್ಲೇ 7,783 ಪ್ರಕರಣಗಳು ಬಾಕಿ ಇವೆ. ಅಲ್ಲದೆ ಪ್ರತಿ ತಿಂಗಳು ಈ ಪೀಠದಲ್ಲಿ 500ರಿಂದ 700ವರೆಗೆ ಮೇಲ್ಕನವಿಗಳು ದಾಖಲಾಗುತ್ತವೆ. ಏಳು ಜಿಲ್ಲೆಗಳ ದೂರು ಮತ್ತು ಮೇಲ್ಮನವಿಗಳನ್ನು ಬೆಳಗಾವಿ ಪೀಠದಲ್ಲಿ ವಿಚಾರಣೆ ನಡೆಸಲಾಗುತ್ತದೆ. ಮಾಹಿತಿ ಆಯುಕ್ತರ ನೇಮಕ ಆಗಿಲ್ಲದ ಕಾರಣ ಜನರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಹೀಗಾಗಿ ತಕ್ಷಣ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಖಾಲಿ ಇರುವ ಮಾಹಿತಿ ಆಯುಕ್ತರ ನೇಮಕಾತಿ ಪ್ರಕ್ರಿಯೆ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮತ್ತು ಕಲಬುರಗಿ ಪೀಠದಲ್ಲಿ ಮಾಹಿತಿ ಆಯುಕ್ತರು ಕಾರ್ಯಾರಂಭ ಮಾಡಿ ಕಲಾಪ ನಡೆಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : High Court: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಆಡಳಿತ ನಿರ್ವಹಣೆ ವಿವಾದ.. ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.