ETV Bharat / state

ಸಚಿವರ ಸಂಬಂಧಿಗೆ ಉನ್ನತ ಹುದ್ದೆ : ಆರ್​ ಅ​ಶೋಕ್, ಎಸ್​​ ಆರ್ ವಿಶ್ವನಾಥ್​​ ಪ್ರತಿವಾದಿಯಾಗಿಸಲು ಹೈಕೋರ್ಟ್ ಸೂಚನೆ

author img

By

Published : Jun 4, 2021, 5:17 PM IST

Updated : Jun 4, 2021, 6:33 PM IST

ಆರ್​ ಅ​ಶೋಕ್, ಎಸ್​​ ಆರ್ ವಿಶ್ವನಾಥ್​​
ಆರ್​ ಅ​ಶೋಕ್, ಎಸ್​​ ಆರ್ ವಿಶ್ವನಾಥ್​​

ವಿಮಾನ ನಿಲ್ದಾಣದ ಸುತ್ತಲಿನ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಬಹುದೊಡ್ಡ ವ್ಯಾಪ್ತಿಯ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ, ಮಾನ್ಯ ಮಾಡುವ ಅಥವಾ ತಿರಸ್ಕರಿಸುವ ಜವಾಬ್ದಾರಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಹೊಂದಿದೆ. ಇಂತಹ ಪ್ರಾಧಿಕಾರಕ್ಕೆ ಕನಿಷ್ಠ ಶೈಕ್ಷಣಿಕ ಅರ್ಹತೆಯೂ ಇಲ್ಲದ ವ್ಯಕ್ತಿಯನ್ನು ರಾಜಕೀಯ ಕಾರಣಗಳಿಗಾಗಿ ನೇಮಕ ಮಾಡಲಾಗಿದೆ..

ಬೆಂಗಳೂರು : ನಿಗದಿತ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಕಂದಾಯ ಸಚಿವ ಆರ್. ಅಶೋಕ್ ಸಂಬಂಧಿ ಎ.ರವಿ ಎಂಬುವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ವಿಚಾರವಾಗಿ ಹೈಕೋರ್ಟ್ ತೀವ್ರ ಅಸಾಮಾಧಾನ ಹೊರ ಹಾಕಿದೆ.

ಅಲ್ಲದೇ, ಪ್ರಾಧಿಕಾರಕ್ಕೆ ರವಿ ಅವರನ್ನು ಅಧ್ಯಕ್ಷರಾಗಿ ನೇಮಿಸಲು ಶಿಫಾರಸು ಮಾಡಿರುವ ಸಚಿವರಾದ ಆರ್.ಅಶೋಕ್ ಹಾಗೂ ಎಸ್.ಆರ್ ವಿಶ್ವನಾಥ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಸೇರಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ. ಎ.ರವಿ ನೇಮಕ ಪ್ರಶ್ನಿಸಿ ಆರ್‌ಟಿಐ ಕಾರ್ಯಕರ್ತ ಟಿ. ನರಸಿಂಹಮೂರ್ತಿ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ನೇಮಕಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಸಚಿವರಾದ ಆರ್.ಅಶೋಕ್ ಮತ್ತು ಎಸ್.ಆರ್ ವಿಶ್ವನಾಥ್​ ಅವರ ಶಿಫಾರಸು ಪತ್ರ ಆಧರಿಸಿ ಮುಖ್ಯಮಂತ್ರಿಗಳು, ಎ.ರವಿ ಅವರನ್ನು ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಎ.ರವಿ ಅವರು ಆರ್. ಅಶೋಕ್ ಅವರ ಸೋದರ ಸಂಬಂಧಿ ಎನ್ನಲಾಗಿದೆ. ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಅವರೊಬ್ಬರ ಹೆಸರನ್ನೇ ಏಕೆ ಶಿಫಾರಸು ಮಾಡಲಾಗಿದೆ ಎಂದು ಪೀಠ ಪ್ರಶ್ನಿಸಿತು.

ರವಿ ಅವರನ್ನು ಹೊರತುಪಡಿಸಿ ಸೂಕ್ತ ಅರ್ಹತೆ ಇರುವ ಬೇರೆ ಯಾರೂ ಸಿಗಲಿಲ್ಲವೇ? ಪ್ರಾಧಿಕಾರಗಳಿಗೆ ನೇಮಕ ಮಾಡಲು ಬೇಕಾದ ಅರ್ಹತೆ, ಪ್ರಕ್ರಿಯೆ ಇವರಿಗೆ ಅನ್ವಯವಾಗುವುದಿಲ್ಲವೇ? ಎಂದು ಕಟುವಾಗಿ ಪ್ರಶ್ನಿಸಿದ ಪೀಠ, ರವಿ ಅವರನ್ನು ಶಿಫಾರಸು ಮಾಡಿರುವ ರಾಜಕಾರಣಿಗಳು ಈ ಬಗ್ಗೆ ಏನು ಹೇಳುತ್ತಾರೆಂದು ಕೇಳೋಣ ಎಂದು ಅಭಿಪ್ರಾಯಪಟ್ಟಿತು. ಜೊತೆಗೆ ಇಬ್ಬರನ್ನೂ ಪ್ರತಿವಾದಿಯಾಗಿ ಸೇರಿಸಿದ ತಿದ್ದುಪಡಿ ಅರ್ಜಿಯನ್ನು ಎರಡು ವಾರಗಳಲ್ಲಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಆರೋಪ : ನಿಗದಿತ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಸಚಿವ ಆರ್.ಅಶೋಕ್ ಸಂಬಂಧಿ ಎ.ರವಿ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಾಧಿಕಾರದ ಅಧ್ಯಕ್ಷರಾಗಿರುವ ಎ.ರವಿ ಪಿಯುವರೆಗೆ ಮಾತ್ರ ಓದಿದ್ದು, ಪದವಿ ಕೂಡ ಪೂರೈಸಿಲ್ಲ. ಹಾಗಿದ್ದೂ ಪ್ರಭಾವ ಬಳಸಿ ಉನ್ನತ ಹುದ್ದೆ ಪಡೆದುಕೊಂಡಿದ್ದಾರೆ.

ವಿಮಾನ ನಿಲ್ದಾಣದ ಸುತ್ತಲಿನ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಬಹುದೊಡ್ಡ ವ್ಯಾಪ್ತಿಯ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ, ಮಾನ್ಯ ಮಾಡುವ ಅಥವಾ ತಿರಸ್ಕರಿಸುವ ಜವಾಬ್ದಾರಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಹೊಂದಿದೆ. ಇಂತಹ ಪ್ರಾಧಿಕಾರಕ್ಕೆ ಕನಿಷ್ಠ ಶೈಕ್ಷಣಿಕ ಅರ್ಹತೆಯೂ ಇಲ್ಲದ ವ್ಯಕ್ತಿಯನ್ನು ರಾಜಕೀಯ ಕಾರಣಗಳಿಗಾಗಿ ನೇಮಕ ಮಾಡಿದ್ದು, ನೇಮಕಾತಿ ಆದೇಶ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಓದಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಎಫ್ಐಆರ್ ರದ್ದು ಕೋರಿ ಶರತ್ ಬಚ್ಚೇಗೌಡ ಸಲ್ಲಿಸಿದ್ದ ಅರ್ಜಿ ವಜಾ

Last Updated :Jun 4, 2021, 6:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.