ETV Bharat / state

ಸಹೋದ್ಯೋಗಿ ಮೇಲೆ ಅತ್ಯಾಚಾರ, ಗರ್ಭಪಾತ.. ಆರೋಪಿಗೆ ಹೈಕೋರ್ಟ್​ ಜಾಮೀನು ನೀಡಿದ್ದೇಕೆ ಗೊತ್ತಾ?

author img

By

Published : Jan 24, 2022, 9:44 PM IST

ಪ್ರಕರಣದ ಸಂತ್ರಸ್ತೆಗೆ 27 ವರ್ಷ ವಯಸ್ಸಾಗಿದ್ದು, ಲೈಂಗಿಕ ಸಂಬಂಧ ಹೊಂದಿದರೆ, ಅದರ ಪರಿಣಾಮವೇನು ಎಂಬುದು ಆಕೆಗೆ ತಿಳಿದಿದೆ. ಎರಡು ಬಾರಿ ಗರ್ಭಪಾತ ಮಾಡಿಸಿದ್ದಾರೆ. ಆರೋಪಿ ವ್ಯಕ್ತಿ ಸಂತ್ರಸ್ತೆಯೊಂದಿಗೆ ಒತ್ತಾಯಪೂರ್ವಕ ಲೈಂಗಿಕ ಸಂಬಂಧ ಹೊಂದಿದ್ದ ಎಂಬುದನ್ನು ನಂಬಲು ಕಷ್ಟ. ಮೇಲ್ನೋಟಕ್ಕೆ ಸಂತ್ರಸ್ತೆ ಮತ್ತು ಆರೋಪಿ ನಡುವಿನ ಸಂಬಂಧ ಒಪ್ಪಿತವೆಂಬಂತೆ ಕಾಣುತ್ತದೆ. ಆದ್ದರಿಂದ ಆರೋಪಿಗೆ ಜಾಮೀನು ನೀಡಬಹುದು ಎಂದು ಹೈಕೋರ್ಟ್​ ಪೀಠ ಆದೇಶದಲ್ಲಿ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿ, ಜಾತಿ ಕಾರಣಕ್ಕೆ ವಿವಾಹ ನಿರಾಕರಿಸಿದ ಆರೋಪದಡಿ ಜೈಲು ಸೇರಿದ್ದ ಖಾಸಗಿ ಕಂಪನಿಯ ಮ್ಯಾನೇಜರ್​​ಗೆ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿ ಎಂ.ಆರ್ ಮನೋಜ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ಪೀಠ ತನ್ನ ಆದೇಶದಲ್ಲಿ ಪ್ರಕರಣದ ಸಂತ್ರಸ್ತೆಗೆ 27 ವರ್ಷ ವಯಸ್ಸಾಗಿದ್ದು, ಲೈಂಗಿಕ ಸಂಬಂಧ ಹೊಂದಿದರೆ ಅದರ ಪರಿಣಾಮವೇನು ಎಂಬುದು ಆಕೆಗೆ ತಿಳಿದಿದೆ. ಎರಡು ಬಾರಿ ಗರ್ಭಪಾತ ಮಾಡಿಸಿದ್ದಾರೆ. ಆರೋಪಿ ವ್ಯಕ್ತಿ ಸಂತ್ರಸ್ತೆಯೊಂದಿಗೆ ಒತ್ತಾಯಪೂರ್ವಕ ಲೈಂಗಿಕ ಸಂಬಂಧ ಹೊಂದಿದ್ದ ಎಂಬುದನ್ನು ನಂಬಲು ಕಷ್ಟ. ಮೇಲ್ನೋಟಕ್ಕೆ ಸಂತ್ರಸ್ತೆ ಮತ್ತು ಆರೋಪಿ ನಡುವಿನ ಸಂಬಂಧ ಒಪ್ಪಿತವೆಂಬಂತೆ ಕಾಣುತ್ತದೆ. ಆದ್ದರಿಂದ ಆರೋಪಿಗೆ ಜಾಮೀನು ನೀಡಬಹುದು ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿರುವ ಎಂ.ಆರ್ ಮನೋಜ್ ಕುಮಾರ್​ ಹಾಗೂ ಸಹೋದ್ಯೋಗಿ ಆಗಿರುವ ಸಂತ್ರಸ್ತೆ ನಡುವೆ ಪರಿಚಯವಿತ್ತು. ಇಬ್ಬರ ಪರಿಚಯ ಪ್ರೇಮವಾಗಿ ಮಾರ್ಪಟ್ಟಿತ್ತು. 2021ರ ಸೆಪ್ಟಂಬರ್ 6ರಂದು ಸಂತ್ರಸ್ತೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ಮನೋಜ್ ಕುಮಾರ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಖಾಸಗಿ ಕ್ಷಣಗಳ ವಿಡಿಯೋ ಮಾಡಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ, ಕೃತ್ಯ ಮುಂದುವರೆಸಿದ್ದ. ಪರಿಣಾಮ ನಾನು ಎರಡು ಬಾರಿ ಗರ್ಭಿಣಿಯಾಗಿದ್ದೆ. ಆದರೆ, ಮನೋಜ್ ಒತ್ತಾಯದ ಮೇರೆಗೆ ಗರ್ಭಪಾತ ಮಾಡಿಸಿದ್ದೆ. ಬಳಿಕ ನಾನು ಅನ್ಯ ಜಾತಿಗೆ ಸೇರಿದ ಕಾರಣಕ್ಕೆ ನನ್ನ ಮದುವೆಯಾಗಲು ನಿರಾಕರಿಸಿದ. ಬೇರೊಬ್ಬರನ್ನು ಮದುವೆಯಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕತ್ತು ಹಿಸುಕಿ ನನ್ನ ಕೊಲೆ ಮಾಡಲು ಯತ್ನಿಸಿದ. ಇದರಿಂದ ಮನನೊಂದು ನಾನು ಆತ್ಮಹತ್ಯೆಗೆ ಪ್ರಯತ್ನಿಸಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದರು.

ಆರೋಪಿ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ, ಕೊಲೆಯತ್ನ ಮತ್ತು ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಮನೋಜ್​ನನ್ನು ಬಂಧಿಸಿದ್ದರು. ಆರೋಪಿಗೆ ನಗರದ 70ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿ 2021ರ ಡಿಸೆಂಬರ್ 12ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.