ETV Bharat / state

ಅರ್ಹ ತೃತೀಯ ಲಿಂಗಿಗಳಿಗೆ ಪ್ರವೇಶಾತಿ ಅವಕಾಶ ನೀಡಲು NLSIUಗೆ ಹೈಕೋರ್ಟ್ ನಿರ್ದೇಶನ

author img

By ETV Bharat Karnataka Team

Published : Aug 22, 2023, 10:12 PM IST

ತೃತೀಯ ಲಿಂಗಿ ವಿದ್ಯಾರ್ಥಿ ಅರ್ಹರಿದ್ದಲ್ಲಿ ಪ್ರವೇಶಾತಿ ಕಲ್ಪಿಸುವಂತೆ ಎನ್​​ಎಲ್​​ಎಸ್​​ಐಯುಗೆ ಹೈಕೋರ್ಟ್​ ನಿರ್ದೇಶನ ನೀಡಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ಪ್ರಸಕ್ತ ವರ್ಷದಲ್ಲಿ 3 ವರ್ಷದ ಕಾನೂನು ಪದವಿಗೆ (ಎಲ್‌ಎಲ್‌ಬಿ ಕೋರ್ಸ್) ತೃತೀಯ ಲಿಂಗಿ ವಿದ್ಯಾರ್ಥಿ ಅರ್ಹವಾಗಿದ್ದಲ್ಲಿ ಪ್ರವೇಶಾತಿ ಕಲ್ಪಿಸುವಂತೆ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಗೆ (ಎನ್‌ಎಲ್‌ಎಸ್‌ಐಯು) ಹೈಕೋರ್ಟ್ ಇಂದು ಮಧ್ಯಂತರ ನಿರ್ದೇಶನ ನೀಡಿದೆ.

ತಮಗೆ ಕಾನೂನು ಪದವಿ ಪ್ರವೇಶಾತಿ ನಿರಾಕರಿಸಿರುವ ಎನ್‌ಎಲ್‌ಎಸ್‌ಯು ಕ್ರಮವನ್ನು ಪ್ರಶ್ನಿಸಿ ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿ ಮುಗಿಲ್ ಅನ್ಬು ವಸಂತ್ ಎಂಬವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿದಾರರ ಪ್ರವೇಶಾತಿಯು ಅರ್ಜಿಯ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು ಮತ್ತು ಇತರೆ ತೃತೀಯಲಿಂಗಿಗಳ ಹಕ್ಕು ಸಂರಕ್ಷಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಕ್ರಮ ಕೈಗೊಳ್ಳುವುದು ಪ್ರತಿವಾದಿಗಳ ಸಾಂವಿಧಾನಿಕ ಹೊಣೆಗಾರಿಕೆ. ಈ ವಿಚಾರದಲ್ಲಿ ಪ್ರತಿವಾದಿಗಳು ತಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಪ್ರಸಕ್ತ ಶೈಕ್ಷಣಿಕ ಸಾಲಿನ ಮೂರು ವರ್ಷದ ಕಾನೂನು ಪದವಿ (ಎಲ್‌ಎಲ್‌ಬಿ) ಪ್ರವೇಶಾತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ (ತೃತೀಯ ಲಿಂಗಿಗಳಿಗೆ) ಮೀಸಲಾತಿ ಕಲ್ಪಿಸದಿರಲು ತನ್ನ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ ಎಂದು ಎನ್‌ಎಲ್‌ಎಸ್‌ಐಯು ತಿಳಿಸಿತ್ತು.

ಕರ್ನಾಟಕ ರಾಜ್ಯ ತೃತೀಯ ಲಿಂಗಿಗಳ ನೀತಿ 2017 ಅನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಆ ಮೂಲಕ ಅರ್ಜಿದಾರರು ಸೇರಿದಂತೆ ತೃತೀಯ ಲಿಂಗಿಗಳಿಗೆ ವಿಶ್ವವಿದ್ಯಾಲಯದಲ್ಲಿ ಮೀಸಲಾತಿ ಕಲ್ಪಿಸಬೇಕು. ಅರ್ಜಿದಾರರಿಗೆ ಪ್ರವೇಶಾತಿ ನಿರಾಕರಿಸಿದ್ದ ಎನ್‌ಎಲ್‌ಎಸ್‌ಐಯು ನಿರ್ಧಾರವನ್ನು ವಜಾ ಮಾಡುವಂತೆ ಅರ್ಜಿದಾರರು ಕೋರಿದ್ದರು.

ಇದನ್ನೂ ಓದಿ: ಮಧುಮೇಹದ ಕಾರಣ ನೀಡಿ ಪತ್ನಿಗೆ ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.