ETV Bharat / state

ಕಿರಿಯ ಎಂಜಿನಿಯರ್​ಗಳಿಗೆ ಬಡ್ತಿ ನೀಡಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಹೊರಡಿಸಿದ್ದ ಅಧಿಸೂಚನೆ ರದ್ದು

author img

By

Published : Jul 20, 2023, 6:55 AM IST

ಕಿರಿಯ ಎಂಜಿನಿಯರ್​ಗಳಿಗೆ ಬಡ್ತಿ ನೀಡಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಕಿರಿಯ ಸಿವಿಲ್ ಎಂಜಿನಿಯರ್‌ಗಳಿಗೆ ಪದೋನ್ನತಿ ನೀಡಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗಳಲ್ಲಿ ಶೇ.25ರಷ್ಟು ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಎಂ.ಆರ್.ರಂಗರಾಮು ಸೇರಿ ರಾಜ್ಯದ ವಿವಿಧ ನಗರಸಭೆ ಮತ್ತು ನಾಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 7 ಮಂದಿ ಸಹಾಯಕ ಸಿವಿಲ್ ಎಂಜಿನಿಯರ್‌ಗಳು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ನಡೆಸಿದರು.

'ಅಧಿಸೂಚನೆ ಅಸಾಂವಿಧಾನಿಕ': ಕಿರಿಯ ಸಿವಿಲ್ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ ಹುದ್ದೆ ಭರ್ತಿ ಮಾಡಲು ಅವಕಾಶವಾಗುವಂತೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ (ಅಧಿಕಾರಿಗಳ ಮತ್ತು ಸಿಬ್ಬಂದಿ ಸಾಮಾನ್ಯ ನೇಮಕಾತಿ) ಅಧಿನಿಯಮಗಳು-2011ರ ಶೆಡ್ಯೂಲ್-3ಕ್ಕೆ ಮಾರ್ಪಾಡು ಮಾಡಿ ಸರ್ಕಾರವು 2011ರ ಏ.11ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯು ಅಸಾಂವಿಧಾನಿಕ ಹಾಗೂ ಸಂವಿಧಾನದ ಪರಿಚ್ಛೇದ 14 (ಸಮಾನತೆ) ಮತ್ತು 16ರ (ಸಮಾನ ಅವಕಾಶ) ಸ್ಪಷ್ಟ ಉಲ್ಲಂಘನೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗೆ ಫೀಡರ್/ಕೆಳ ಶ್ರೇಣಿಯ ಅಧಿಕಾರಿಗಳು ಅಂದರೆ ಸಹಾಯಕ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿ ಹುದ್ದೆಯನ್ನು ಭರ್ತಿ ಮಾಡಬೇಕು. ಈ ಪ್ರಕ್ರಿಯೆಯನ್ನು ಆದೇಶ ಪ್ರತಿ ದೊರೆತ 8 ವಾರಗಳೊಳಗೆ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.

ಇದನ್ನೂ ಓದಿ: ಸೌಲಭ್ಯ ಕಲ್ಪಿಸದ ರೈಲ್ವೆ ಸಿಬ್ಬಂದಿ.. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ನೋಟಿಸ್​ ಕೊಟ್ಟ ನ್ಯಾಯಮೂರ್ತಿಗಳು

2011ರ ಅಧಿಸೂಚನೆಯ ಪ್ರಕಾರ, ಕಿರಿಯ ಎಂಜಿನಿಯರ್ ಹುದ್ದೆಯು ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಯ ಕೆಳ ಶ್ರೇಣಿಯದ್ದಲ್ಲ. ಸಹಾಯಕ ಎಂಜಿನಿಯರ್ ಹುದ್ದೆಯೇ ಕೆಳ ಶ್ರೇಣಿಯದ್ದಾಗಿರುತ್ತದೆ. ಒಂದು ವೇಳೆ 2011ರ ನಿಯಮಗಳನ್ನು ಜಾರಿಗೆ ತಂದು ಕಿರಿಯ ಎಂಜಿನಿಯರ್‌ಗಳಿಗೆ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ ಬಡ್ತಿ ನೀಡಿದರೆ, ಬಡ್ತಿಗೆ ಮುಂಚೂಣಿಯಲ್ಲಿರುವ ಶೇ.25ರಷ್ಟು ಸಹಾಯಕ ಎಂಜಿನಿಯರ್‌ಗಳ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ವಿಚಾರಣೆಯಲ್ಲಿ ಅರ್ಜಿದಾರರ ಪರ ಹಿರಿಯ ವಕೀಲರಾದ ಎಂ.ಎಸ್.ಭಾಗ್ವತ್, ಕೆ.ಎನ್.ಫಣೀಂದ್ರ ವಕೀಲರಾದ ಎಂ.ಪಿ.ಶ್ರೀಕಾಂತ್, ಅನೀಶ್ ಆಚಾರ್ಯ ಮತ್ತು ಕೆ. ಸತೀಶ್ ವಾದ ಮಂಡಿಸಿ, ಸಹಾಯಕ ಎಂಜಿನಿಯರ್‌ಗಳನ್ನು ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗೆ ಭರ್ತಿ ನೀಡಬೇಕಾಗುತ್ತದೆ. ಇದಕ್ಕಿಂತ ಕಡಿಮೆ ಶ್ರೇಣಿಯ ಕಿರಿಯ ಎಂಜಿನಿಯರ್ ಅವರಿಗೆ ಬಡ್ತಿ ನೀಡಿ ನೇರವಾಗಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗೆ ಭರ್ತಿ ನೀಡುವುದು ಅಸಾಂವಿಧಾನಿಕ ಕ್ರಮ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಇದನ್ನೂ ಓದಿ: ನ್ಯಾಯಮೂರ್ತಿ ಅಲೋಕ್ ಆರಾಧೆ ತೆಲಂಗಾಣ ಸಿಜೆ ಆಗಿ ನೇಮಕ ಮಾಡಿ ಕೇಂದ್ರ ಕಾನೂನು ಸಚಿವಾಲಯದಿಂದ ಆದೇಶ

High Court News: ಹೈಕೋರ್ಟ್‌ಗೆ ಅಗತ್ಯ ಮೂಲಸೌಲಭ್ಯ ಒದಗಿಸುವ ಸಲುವಾಗಿ ಸಮಗ್ರ ಪ್ರಸ್ತಾವನೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.