ETV Bharat / state

High Court News: ಹೈಕೋರ್ಟ್‌ಗೆ ಅಗತ್ಯ ಮೂಲಸೌಲಭ್ಯ ಒದಗಿಸುವ ಸಲುವಾಗಿ ಸಮಗ್ರ ಪ್ರಸ್ತಾವನೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ

author img

By

Published : Jul 19, 2023, 4:51 PM IST

ಹೈಕೋರ್ಟ್‌ನ ಕಟ್ಟಡದ ನೆಲಮಾಳಿಗೆಯಲ್ಲಿ ಕಚೇರಿಗಳನ್ನಾಗಿ ಬಳಕೆ ಮಾಡಿಕೊಳ್ಳುವುದರ ಬಗ್ಗೆ ವಾದ - ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಈ​ ಸೂಚನೆ ನೀಡಿದೆ.

ಹೈಕೋರ್ಟ್‌
ಹೈಕೋರ್ಟ್‌

ಬೆಂಗಳೂರು : ಹೈಕೋರ್ಟ್‌ನ ಕಚೇರಿಗಳು, ನ್ಯಾಯಾಧೀಶರ ಕೊಠಡಿಗಳು ಮತ್ತು ನ್ಯಾಯಾಲಯದ ಸಭಾಂಗಣಗಳಿಗೆ ಹೆಚ್ಚುವರಿ ಸ್ಥಳಾವಕಾಶ ಒದಗಿಸುವ ಸಂಬಂಧ ಸಮಗ್ರವಾದ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಈ ಸಂಬಂಧ ತುಮಕೂರಿನ ವಕೀಲ ರಮೇಶ್ ನಾಯಕ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದಿನ ಮೂರು ವಾರಗಳ ಕಾಲ ಮುಂದೂಡಿತು. ಹೈಕೋರ್ಟ್‌ಗೆ ಹೆಚ್ಚುವರಿ ಕಚೇರಿಗಳನ್ನು ಸ್ಥಳಾವಕಾಶವನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಗಮನ ಹರಿಸಿದೆ.

ಆದರೆ, ಹೈಕೋರ್ಟ್‌ಗೆ ಸಲ್ಲಿಕೆಯಾಗುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ನ್ಯಾಯಾಧೀಶರ ನೇಮಕಾತಿ ಹಾಗೂ ಪದೋನ್ನತಿ ಪಡೆಯುತ್ತಿದ್ದು, ನ್ಯಾಯಾಧೀಶರಿಗೆ ಕೊಠಡಿಗಳನ್ನು ಒದಗಿಸುವುದು ಕಷ್ಟ ಸಾಧ್ಯವಾಗುತ್ತಿದೆ. ಹೀಗಾಗಿ ನ್ಯಾಯಾಲಯದ ಸಭಾಂಗಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿಂತೆ ಸಮಗ್ರವಾದ ಪ್ರಸ್ತಾವನೆಯನ್ನು ಸಿದ್ದಪಡಿಸಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸಿದಲ್ಲಿ ಪರಿಸ್ಥಿತಿ ಕೆಟ್ಟುಹೋಗಲಿದೆ ಎಂದು ಪೀಠ ತಿಳಿಸಿದೆ.

ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಹಿಂದಿನ ಆದೇಶದಂತೆ ಕೆಲ ವಿಭಾಗಗಳನ್ನು ಸ್ಥಳಾಂತರಿಸಲು ತಾಂತ್ರಿಕ ಶಿಕ್ಷಣ ಇಲಾಖೆಯ ಕಟ್ಟಡವೊಂದರಲ್ಲಿ ಎರಡು ಕೊಠಡಿಗಳನ್ನು ಸರ್ಕಾರ ಹಸ್ತಾಂತರಿಸಿತ್ತು. ಇದಲ್ಲದೇ, ಹೆಚ್ಚುವರಿ ಸ್ಥಳಾವಕಾಶ ಒದಗಿಸುವುದಾಗಿ ಭರವಸೆ ನೀಡಿತ್ತು. ಆದ್ದರಿಂದ ಹೈಕೋರ್ಟ್‌ಗೆ ಸ್ಥಳಾವಕಾಶ ಒದಗಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಗತ್ಯವಾದ ಪ್ರಸ್ತಾವನೆಯೊಂದಿಗೆ ಬರಲು ತಿಳಿಸಿತು.

ವಿಚಾರಣೆ ವೇಳೆ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರನ್ನು ಉದ್ದೇಶಿಸಿ, ಎರಡು ಕೊಠಡಿಗಳ ಸ್ಥಳವನ್ನು ನಾಲ್ಕು ನ್ಯಾಯಾಧೀಶರ ಚೇಂಬರ್‌ಗಳನ್ನಾಗಿ ಮಾಡಲಾಗಿದೆ. ಚೇಂಬರ್‌ಗಳಿಗೆ ಯಾದರೂ ಸಂದರ್ಶಕರು ಬಂದಲ್ಲಿ ಸ್ವಾಗತಿಸಿ ಕೂರುವಂತೆ ಹೇಳುವುದಕ್ಕೂ ಸ್ಥಳದ ಕೊರತೆಯಾಗಿದ್ದು, ಕಷ್ಟಕರದ ಪರಿಸ್ಥಿತಿಯಲ್ಲಿ ನ್ಯಾಯಾಧೀಶರು ಹೊಂದಾಣಿಕೆ ಮಾಡಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ಕಡತಗಳ ಸಂಗ್ರಹ ಸೇರಿದಂತೆ ಕಚೇರಿ ಸಿಬ್ಬಂದಿ, ಸ್ಥಳಾವಕಾಶ ಬೇಕಾಗಿದೆ. ಬೇಡಿಕೆ ವಕೀಲರಿಗೆ ಸೂಕ್ತ ರೀತಿಯ ಶೌಚಾಲಯ ವ್ಯವಸ್ಥೆ ಇಲ್ಲವಾಗಿದ್ದು, ಮೂಲಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರನ್ನು ಮೂಲ ಸೌಲಭ್ಯಗಳಿಗಾಗಿ ನ್ಯಾಯಾಲಯದ ಆವರಣದಿಂದ ಹೊರಕ್ಕೆ ಹೋಗುವಂತೆ ಸೂಚನೆ ನೀಡಲು ಸಾಧ್ಯವೇ ಎಂದು ನ್ಯಾಯಪೀಠ ಪ್ರಶ್ನೆ ಮಾಡಿತು. ಈ ಎಲ್ಲ ಸಮಸ್ಯೆಗಳ ಸರಿಪಡಿಸಲು ನಾವು ಐಶಾರಾಮಿ ಸ್ಥಳಾವಕಾಶ ನೀಡುವಂತೆ ಕೇಳುತ್ತಿಲ್ಲ. ಇದರ ಬದಲಾಗಿ ಕಕ್ಷಿದಾರರ ಅರ್ಜಿಗಳ ವಿಚಾರಣೆ, ವಕೀಲರೊಂದಿಗೆ ಚರ್ಚೆ ನಡೆಸುವುಕ್ಕಾಗಿ ಅಗತ್ಯ ಸ್ಥಳಾವಕಾಶವನ್ನಾದರೂ ಒದಗಿಸಬೇಕು ಎಂದು ಪೀಠ ಮೌಖಿಕವಾಗಿ ಅಭಿಪ್ರಾಯ ಪಟ್ಟಿತು.

ಪ್ರಕರಣದ ಹಿನ್ನೆಲೆ ಏನು ? : ಹೈಕೋರ್ಟ್‌ನ ಕಟ್ಟಡದ ನೆಲಮಾಳಿಗೆಯಲ್ಲಿ ಕಚೇರಿಗಳನ್ನಾಗಿ ಬಳಕೆ ಮಾಡಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ತಕ್ಷಣ ನೆಲ ಮಾಳಿಗೆಗಳಲ್ಲಿನ ಕಚೇರಿಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು. ಅಲ್ಲದೇ, ನ್ಯಾಯಾಲಯದ ಅಗತ್ಯತೆಗೆಳಿಗೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಹೆಚ್ಚುವರಿ ಜಾಗವನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲರ ರಮೇಶ್ ನಾಯ್ಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಹಲವು ವರ್ಷಗಳ ಬಳಿಕ ದೋಷಾರೋಪ ಪಟ್ಟಿ ಸಲ್ಲಿಕೆ: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.