ETV Bharat / state

ಮುಂದುವರೆಯಲಿದೆ ವರುಣನ ಆರ್ಭಟ: ಉತ್ತರಕರ್ನಾಟಕ ಭಾಗದಲ್ಲಿ ಭಾರಿ ಮಳೆ ಮುನ್ಸೂಚನೆ!

author img

By

Published : Oct 18, 2020, 5:56 PM IST

ಈಗಾಗಲೇ ಸುರಿದಿರುವ ಧಾರಾಕಾರ ಮಳೆಗೆ ಹೆಚ್ಚಿನ ಪ್ರದೇಶಗಳು ತತ್ತರಿಸಿಹೋಗಿವೆ. ಮುಂದಿನ ವಾರವೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Heavy rain continues for next week
ಮುಂದುವರೆಯಲಿದೆ ವರುಣನ ಆರ್ಭಟ; ಉತ್ತರಕರ್ನಾಟಕ ಭಾಗದಲ್ಲಿ ಭಾರಿ ಮಳೆ ಮುನ್ಸೂಚನೆ!

ಬೆಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆಯಲಿದ್ದು, ಮುಂದಿನ ವಾರವೂ ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಹೀಗಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.

ಈ ಕುರಿತು ಇಂದು ಮಾಹಿತಿ ನೀಡಿರುವ ಅವರು, ಪೂರ್ವ ಬಂಗಾಳ ಉಪ ಸಾಗರದಲ್ಲಿ ಅಕ್ಟೋಬರ್​​ 19ರಂದು ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ. ಇದರ ಪರಿಣಾಮ, ಕರಾವಳಿ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಅ. 19ರಂದು ಅಲ್ಲಲ್ಲಿ ಮಳೆಯಾಗಲಿದ್ದು, ಅ.21-22 ರಂದು ಬಹುತೇಕ ಎಲ್ಲಾ ಕಡೆ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 19-22ರ ವರೆಗೆ ಎಲ್ಲಾ ಸ್ಥಳಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಅ.20ರಂದು ಯೆಲ್ಲೋ ಅಲರ್ಟ್​​ ಮತ್ತು ಅ. 21-22ರಂದು ಆರೆಂಜ್​​​ ಅಲರ್ಟ್​​​ ಘೋಷಣೆ ಮಾಡಲಾಗಿದೆ ಎಂದರು.

ಮಳೆ ಕುರಿತು ಮಾಹಿತಿ ನೀಡಿದ ಹವಾಮಾನ ಇಲಾಖೆ ನಿರ್ದೇಶಕರು ​

ಉತ್ತರ ಒಳನಾಡಿನಲ್ಲಿ ಕೂಡ 21-22ರಂದು ವ್ಯಾಪಕ ಮಳೆಯಾಗುವ ಹೆಚ್ಚಿನ ಸಾಧ್ಯತೆಗಗಳಿವೆ. ಗದಗ, ಕೊಪ್ಪಳ, ಬಾಗಲಕೋಟೆ, ಯಾದಗಿರಿ, ರಾಯಚೂರು ಭಾಗಗಳಲ್ಲಿ ಅ. 19-20ರಂದು ಯೆಲ್ಲೋ ಅಲರ್ಟ್​​ ಘೋಷಣೆ ಮಾಡಲಾಗಿದೆ. ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಲಿದ್ದು, ಆರೆಂಜ್​ ಅಲರ್ಟ್​​ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್​ ಪಾಟೀಲ್​ ವಿವರಿಸಿದರು.

ಮಲೆನಾಡಿನ ಭಾಗಗಳಾದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಕೊಡಗು, ಹಾಸನ‌ದಲ್ಲಿ ಭಾರಿ ಮಳೆಯಾಗಲಿದ್ದು ಅ.20-22ರವರೆಗೆ ಯೆಲ್ಲೋ ಆಲರ್ಟ್ ಘೋಷಣೆ ಮಾಡಲಾಗಿದೆ. ಇತ್ತ ಬೆಂಗಳೂರಿನಲ್ಲಿ ಅಕ್ಟೋಬರ್ 18-19 ರಂದು ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.