ETV Bharat / state

ಲೋಕಸಭೆ ಚುನಾವಣೆ: ನಿಖಿಲ್ ಕುಮಾರಸ್ವಾಮಿ-ವಿಜಯೇಂದ್ರ ಸಹೋದರರಂತೆ ಒಟ್ಟಾಗಿ ಹೋಗುತ್ತಾರೆ; ಹೆಚ್​ಡಿಕೆ

author img

By ETV Bharat Karnataka Team

Published : Nov 26, 2023, 6:22 PM IST

Updated : Nov 26, 2023, 7:58 PM IST

ಇದೇ ಮೊದಲ ಭಾರಿಗೆ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಹೆಚ್​ಡಿಕೆ ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘ ಮಾತುಕಥೆ ನಡೆಸಿದ್ದಾರೆ.

ವಿಜಯೇಂದ್ರ, ಹೆಚ್.ಡಿ ಕುಮಾರಸ್ವಾಮಿ ಭೇಟಿ
ವಿಜಯೇಂದ್ರ, ಹೆಚ್.ಡಿ ಕುಮಾರಸ್ವಾಮಿ ಭೇಟಿ

ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಹೆಚ್​ಡಿಕೆ ಭೇಟಿ

ರಾಮನಗರ : ಬಹಳ ದಿನಗಳ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಮಾಡಬೇಕಿತ್ತು. ಹಲವಾರು ಕಾರ್ಯಕ್ರಮಗಳು ಇದ್ದ ಕಾರಣ ಆಗಿರಲಿಲ್ಲ. ಇವತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯ ಉದ್ದೇಶದಿಂದ ಭೇಟಿಯಾಗಿದ್ದೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಕೇತುಗಾನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಮಾತನಾಡಿದ ಹೆಚ್​.ಡಿ ಕುಮಾರಸ್ವಾಮಿ ಅವರು, ಮುಂದೆ ಎರಡು ಪಕ್ಷಗಳು ರಾಜ್ಯದ ಅಭಿವೃದ್ಧಿಗಾಗಿ ಮತ್ತು ಜನರ ಹಿತದೃಷ್ಟಿಯಿಂದ 2024 ರ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಅವರು ಗೆದ್ದು ಪ್ರಧಾನಿ ಆಗುವುದಕ್ಕೆ ಸಂಘಟನೆಯಲ್ಲಿ ಪಾಲ್ಗೊಳ್ಳಲು ಇಂದಿನ ಭೇಟಿಯ ಉದ್ದೇಶವಾಗಿದ್ದು, ಮೋದಿ ಮತ್ತೆ ದೇಶದ ಪ್ರಧಾನಮಂತ್ರಿ ಆಗುವ ನಿಟ್ಟಿನಲ್ಲಿ ಕೂತು ಚರ್ಚೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರ ಬಗ್ಗೆ ಯಾವುದೇ ಮಾತಾಡಿಲ್ಲ. ಆ ಬಗ್ಗೆ ಕೇಂದ್ರ ನಾಯಕರು ಕುಳಿತು ಚರ್ಚೆ ಮಾಡುತ್ತಾರೆ ಎಂದರು.

ಯುವ ರಾಜ್ಯಾಧ್ಯಕ್ಷರ ನೇಮಕದಿಂದ ಕಾರ್ಯಕರ್ತರ ಹುರುಪು ಹೆಚ್ಚಾಗಿದೆ. ಅದಕ್ಕಾಗಿ ವಿಜಯೇಂದ್ರ ಅವರ ಶ್ರಮ ಹಾಕುತ್ತಿರುವುದನ್ನು ನೋಡುತ್ತಿದ್ದೇನೆ. 2006-07 ರಲ್ಲಿ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹಾಗು ನಾನು ಸರ್ಕಾರ ನಡೆಸಿದ್ದೆವು. ಇವತ್ತು ಸಹ ಅಂತಹ ಸರ್ಕಾರ ಬರಬೇಕು ಅನ್ನೋದು ಜನರ ಅಭಿಪ್ರಾಯ ಇದೆ. ಅವತ್ತು ನಾವು ಅಭಿವೃದ್ಧಿ ಫೌಂಡೇಷನ್ ಕೊಟ್ಟಿದ್ದೆವು. ಹೀಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ವಿಜಯ ಸಾಧಿಸುತ್ತೇವೆ. ಜೆಡಿಎಸ್​ ಯುವಮುಖಂಡ ನಿಖಿಲ್ ಕುಮಾರಸ್ವಾಮಿ ಹಾಗು ವಿಜಯೇಂದ್ರ ಸಹೋದರ ಮನೋಭಾವದಲ್ಲಿ ಒಟ್ಟಾಗಿ ಹೋಗುತ್ತಾರೆ. ಇಬ್ಬರಲ್ಲೂ ಉತ್ತಮ ಬಾಂಧವ್ಯ ಜೊತೆಗೆ ಚುನಾವಣೆ ಮಾಡುತ್ತಾರೆ ಎಂದು ಹೆಚ್​ಡಿಕೆ ಹೇಳಿದರು.

ಸಿಎಂ ಸಿದ್ದರಾಮಯ್ಯ ಜನತಾ ದರ್ಶನ ವಿಚಾರವಾಗಿ ಮಾತನಾಡಿದ ಅವರು, ಜನತಾ ದರ್ಶನಕ್ಕೆ ದೊಡ್ಡ ದೊಡ್ಡ ಜಾಹೀರಾತು ಕೊಟ್ಟಿದ್ದಾರೆ. ನಾವು ಅಂದೇ ಜನತಾ ದರ್ಶನ ಯಶಸ್ವಿಯಾಗಿ ಮಾಡಿ ತೋರಿಸಿದ್ದೆವು. ಈಗ ಕೇವಲ ಪ್ರಚಾರದ ಕೆಲಸ ಅಷ್ಟೇ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ನಮ್ಮದು ದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಈ ನಿಟ್ಟಿನಲ್ಲಿ ಪಕ್ಷ ಎಂದ ಮೇಲೆ ಸಣ್ಣ ಪುಟ್ಟ ಗೊಂದಲ ಸಮಸ್ಯೆಗಳು ಇದ್ದೆ ಇರುತ್ತವೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ. ರಾಜ್ಯದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಮುಕ್ತ ಕ್ಷೇತ್ರವನ್ನಾಗಿ ಮಾಡೋದೆ ನಮ್ಮ ಗುರಿ. ನಮ್ಮ ಪಕ್ಷದ ಎಲ್ಲಾ ನಾಯಕರ ತೀರ್ಮಾನ ಒಂದೇ ಆಗಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದಕ್ಕೆ ಕೈ ಜೋಡಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : ಲೋಕಸಭಾ ಚುನಾವಣೆ: ಅನಂತಕುಮಾರ್​ ಸ್ಪರ್ಧಿಸದಿದ್ರೆ ನಾವೂ ಆಕಾಂಕ್ಷಿಗಳೇ ಎಂದ ಜೆಡಿಎಸ್ ನಾಯಕರು

Last Updated : Nov 26, 2023, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.