ETV Bharat / state

ಮೆಟ್ರೋ ಯೋಜನೆ: ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ

author img

By

Published : Dec 8, 2022, 2:13 PM IST

ಮರಗಳನ್ನು ಕಡಿಯುವುದು ಮತ್ತು ಸ್ಥಳಾಂತರ ಮಾಡುವ ಕುರಿತಾಗಿ ವಸ್ತುಸ್ಥಿತಿ ವರದಿ ಸಲ್ಲಿಸಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್​ ಸೂಚನೆ ನೀಡಿದೆ.

hc-permits-felling-of-trees-for-metro-project
ಮೆಟ್ರೋ ಯೋಜನೆಗಾಗಿ ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ

ಬೆಂಗಳೂರು: ನಮ್ಮ ಮೆಟ್ರೋ ಯೋಜನೆಗೆ ಮರಗಳನ್ನು ಕಡಿಯುವುದನ್ನು ವಿರೋಧಿಸಲು ಸಮರ್ಥ ಕಾರಣಗಳಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ತಾಂತ್ರಿಕ ಸಲಹಾ ಸಮಿತಿ ನೀಡಿರುವ ಮಾರ್ಗಸೂಚಿಗಳಂತೆ ಯೋಜನೆಗಾಗಿ ಮರಗಳನ್ನು ಕಡಿಯುವುದು, ಸ್ಥಳಾಂತರ ಮಾಡುವುದು ಮತ್ತು ಅರಣ್ಯೀಕರಣ ಮಾಡಲು ಅನುವು ಮಾಡಿಕೊಟ್ಟಿದೆ.

ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ದತ್ತಾತ್ರೇಯ ದೇವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರ ನಿರೀಕ್ಷೆಯಂತೆ ಅರಣ್ಯೀಕರಣ ನಡೆಯದಿದ್ದರೂ, ಯೋಜನೆಯ ನಿಗದಿತ ಸಮಯಕ್ಕೆ ಪೂರ್ಣಗೊಳಿಸಬೇಕಾಗಿದ್ದು, ಟ್ರೀ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಮರಗಳನ್ನು ಕಡಿಯುವುದು, ಗಿಡಗಳನ್ನು ನೆಡುವುದು ಮತ್ತು ಸ್ಥಳಾಂತರ ಮಾಡುವ ಕಾರ್ಯವನ್ನು ಮುಂದುವರೆಸಬಹುದು ಎಂದು ತಿಳಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೆಂಪಾಪುರದಿಂದ ಶೆಟ್ಟಿಗೆರೆವರೆಗಿನ ಮೆಟ್ರೋ ಎರಡನೇ ಹಂತದಲ್ಲಿ 466 ಮರಗಳನ್ನು ಕಡಿಯುವುದು, 21 ಮರಗಳನ್ನು ಸ್ಥಳಾಂತರಿಸುವುದು ಮತ್ತು 4 ಮರಗಳನ್ನು ಉಳಿಸಿಕೊಳ್ಳುವುದಕ್ಕೆ ತಾಂತ್ರಿಕ ಸಲಹಾ ಸಮಿತಿ ಅನುಮೋದನೆ ಆಧಾರದಲ್ಲಿ ಟ್ರೀ ಅಧಿಕಾರಿ ನೀಡಿದ ಅನುಮತಿ ಕಾರ್ಯಗತಗೊಳಿಸಬಹುದು ಎಂದು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ಅನುಮತಿ ನೀಡಿದೆ.

ಅಂತೆಯೇ ಸೆಂಟ್ರಲ್ ಸಿಲ್ಕ್​ ಬೋರ್ಡ್ ಮತ್ತು ಕೋಡಿ ನಿವಾಸನಹಳ್ಳಿ ಮಾರ್ಗದಲ್ಲಿ 112 ಮರಗಳನ್ನು ಕಡಿಯುವುದು, 12 ಮರಗಳನ್ನು ಸ್ಥಳಾಂತರ ಮಾಡುವುದು ಮತ್ತು 3 ಮರಗಳನ್ನು ಉಳಿಸಿಕೊಳ್ಳುವುದಕ್ಕೆ ಅನುಮತಿ ನೀಡಿದೆ. ಅಲ್ಲದೇ, ಮರಗಳನ್ನು ಕಡಿಯುವುದು ಮತ್ತು ಸ್ಥಳಾಂತರ ಮಾಡುವ ಕುರಿತಾಗಿ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಲು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು 2023ರ ಜನವರಿ 10ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮೆಟ್ರೋ ಕಾಮಗಾರಿಗಾಗಿ ಬೃಹತ್ ಮರಗಳನ್ನು ಕಡಿಯಲಾಗುತ್ತಿದೆ. ಅರಣ್ಯೀಕರಣ ಆರ್ಯಕ್ಕೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಅಂಶ ತಳ್ಳಿಹಾಕಿದ ನ್ಯಾಯಪೀಠ ಯೋಜನೆಗಾಗಿ ಅಗತ್ಯವಿರುವ ಮರಗಳನ್ನು ಮಾರ್ಗಸೂಚಿಗಳ ಪ್ರಕಾರ ಕಡಿಯಲು ಅನುಮತಿ ನೀಡಿತು.

ಇದನ್ನೂ ಓದಿ:ನಮ್ಮ ಮೆಟ್ರೋದಲ್ಲಿ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆ ಶುರು: ಮೊದಲ ದಿನವೇ 1,669 ಮಂದಿ ಬಳಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.